ಓಂ ನಮಃ ಶಿವಾಯ ಮತ್ತು ವಿಜ್ಞಾನ

“ಓಂ ನಮಃ ಶಿವಾಯ ಮತ್ತು ವಿಜ್ಞಾನ” ಎಂಬ ವಿಷಯವು ಕೇವಲ ಧಾರ್ಮಿಕ ಚಿಂತನೆಯಲ್ಲ ಅದು ಮಾನವನ ಒಳ ಮತ್ತು ಹೊರ ಜಗತ್ತಿನ ಸಮಗ್ರ ಅರಿವಿಗೆ ದಾರಿ ತೋರಿಸುವ ಮಹತ್ವದ ವಿಚಾರವಾಗಿದೆ. ಶಿವರಾತ್ರಿ ಹಬ್ಬದ ವಿಶೇಷತೆಯ ಕುರಿತು ಕೊಡಗಿನ ಲೇಖಕಿ ಗೀತಾಂಜಲಿ ಎನ್ ಎಮ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

“ಓಂ” ಎನ್ನುವ ನಾದದಲ್ಲಿದೆ
ಬ್ರಹ್ಮಾಂಡದ ಮೊದಲ ಸ್ಪಂದನ
“ನಮಃ ಶಿವಾಯ” ಎನ್ನುವ
ಜಪದಲ್ಲಿದೆ ಆತ್ಮದ ಪರಿಪೂರ್ಣ
ಚೇತನ.!

ಓಂ ನಮಃ ಶಿವಾಯ…
ನಾದ ನಿತ್ಯವೂ ಮಿಡಿಯಲಿ
ಹೃದಯದಲಿ!
ಶಿವಕೃಪೆಯ ಬೆಳಕು
ಸದಾ ತುಂಬಿರಲಿ
ಜೀವನದಲಿ!

ಮಾನವನು ಬಹಳ ಹಿಂದಿನಿಂದಲೂ ಸೃಷ್ಟಿಯ ರಹಸ್ಯವನ್ನು ಅರಿಯಲು ಎರಡು ಮಾರ್ಗಗಳನ್ನು ಅನುಸರಿಸಿದ್ದಾನೆ ಒಂದು ಆಧ್ಯಾತ್ಮ ಮತ್ತೊಂದು ವಿಜ್ಞಾನ. ಆಧ್ಯಾತ್ಮಿಕತೆ ಒಳಜಗತ್ತಿನ ಅನುಭವವನ್ನು ಹೇಳಿದರೆ, ವಿಜ್ಞಾನ ಹೊರಜಗತ್ತಿನ ಕಾರ್ಯವಿಧಾನಗಳನ್ನು ವಿವರಿಸುತ್ತದೆ. ಆದರೆ ಈ ಎರಡೂ ವಿಭಿನ್ನವೆಂದು ಕಾಣಿಸಿದರೂ ಅವುಗಳ ಮೂಲ ಉದ್ದೇಶ ಒಂದೇ ಅದುವೇ ಸತ್ಯದ ಹುಡುಕಾಟ. ಹಾಗಾಗಿ “ಓಂ ನಮಃ ಶಿವಾಯ ಮತ್ತು ವಿಜ್ಞಾನ” ಎಂಬ ವಿಷಯವು ಕೇವಲ ಧಾರ್ಮಿಕ ಚಿಂತನೆಯಲ್ಲ ಅದು ಮಾನವನ ಒಳ ಮತ್ತು ಹೊರ ಜಗತ್ತಿನ ಸಮಗ್ರ ಅರಿವಿಗೆ ದಾರಿ ತೋರಿಸುವ ಮಹತ್ವದ ವಿಚಾರವಾಗಿದೆ. ಹಾಗಾಗಿ ಈ ದಿವ್ಯ ಮಂತ್ರದ ಆಧ್ಯಾತ್ಮಿಕ ಮಹಿಮೆ ಮತ್ತು ಅದರ ವೈಜ್ಞಾನಿಕ ಅರ್ಥವನ್ನು ಅರಿಯೋಣ.

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮಂತ್ರಗಳು ಕೇವಲ ಧಾರ್ಮಿಕ ನಂಬಿಕೆಗಳಲ್ಲ ಅವು ಮನಸ್ಸು ದೇಹ ಮತ್ತು ಪ್ರಕೃತಿಯ ನಡುವಿನ ಸೂಕ್ಷ್ಮ ಸಂಬಂಧವನ್ನು ತಿಳಿಸುವ ಸಾಧನಗಳಾಗಿವೆ. “ಓಂ ನಮಃ ಶಿವಾಯ” ಎಂಬ ಶಿವಪಂಚಾಕ್ಷರಿ ಮಂತ್ರವು ಆಧ್ಯಾತ್ಮಿಕತೆಯೊಂದಿಗೆ ವೈಜ್ಞಾನಿಕ ದೃಷ್ಟಿಯಿಂದಲೂ ಗಮನಾರ್ಹವಾದ ಮಹತ್ವವನ್ನು ಹೊಂದಿದೆ.

“ಓಂ” ಎಂಬ ನಾದವನ್ನು ಬ್ರಹ್ಮಾಂಡದ ಮೂಲಧ್ವನಿಯಂತೆ ಪರಿಗಣಿಸಲಾಗುತ್ತದೆ. ಧ್ವನಿಯು ಒಂದು ಕಂಪನಶಕ್ತಿ. ಹಾಗಾಗಿ ನಾವು ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ವಿಜ್ಞಾನವೂ ಧ್ವನಿಯ ಕಂಪನಗಳು ಮನಸ್ಸಿನ ಸ್ಥಿತಿಯನ್ನು ಬದಲಾಯಿಸಬಲ್ಲವು ಎಂದು ಹೇಳುತ್ತದೆ. ನಿಧಾನವಾಗಿ ಲಯಬದ್ಧವಾಗಿ “ಓಂ” ಉಚ್ಚರಿಸಿದಾಗ ಉಸಿರಾಟ ಸಮವಾಗುತ್ತದೆ ಹೃದಯದ ಮಿಡಿತ ನಿಧಾನಗೊಳ್ಳುತ್ತದೆ ಮತ್ತು ಮೆದುಳಿನ ಅಲೆಗಳು ಶಾಂತ ಸ್ಥಿತಿಗೆ ತಲುಪಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ ಜೊತೆಗೆ “ಓಂ ನಮಃ ಶಿವಾಯ”
ಎಂಬ ಪದಗಳ ಜಪವು ಧ್ಯಾನ ಸ್ಥಿತಿಯನ್ನು ಉಂಟುಮಾಡುತ್ತದೆ. ಧ್ಯಾನದ ವೇಳೆ ನರಮಂಡಲದಲ್ಲಿ ಶಾಂತಿಯನ್ನು ಉಂಟುಮಾಡುವ ರಾಸಾಯನಿಕಗಳು ಸ್ರವಿಸುತ್ತವೆ ಎಂದು ಇದರ ಪರಿಣಾಮವಾಗಿ ಆತಂಕ,ಭಯ ಮತ್ತು ಚಿಂತೆಗಳು ಕಡಿಮೆಯಾಗಿ ಏಕಾಗ್ರತೆ ಮತ್ತು ಮನಶಾಂತಿ ಹೆಚ್ಚುತ್ತದೆ ಎಂದು ಆಧುನಿಕ ಸಂಶೋಧನೆಗಳು ದೃಢಪಡಿಸಿವೆ !

ಹಾಗಾಗಿ ಈ ಮಂತ್ರಜಪವು ಉಸಿರಾಟವನ್ನು ನಿಯಂತ್ರಿಸುವ ಒಂದು ವಿಧಾನವೂ ಆಗಿದೆ. ಉಸಿರಾಟ ಸಮವಾದಾಗ ದೇಹಕ್ಕೆ ಹೆಚ್ಚಿನ ಆಮ್ಲಜನಕ ದೊರೆಯುತ್ತದೆ. ರಕ್ತಸಂಚಾರ ಸುಧಾರಿಸುತ್ತದೆ ಮತ್ತು ದೇಹದ ಕಾರ್ಯಗಳು ಸಮತೋಲನದಲ್ಲಿ ನಡೆಯುತ್ತವೆ. ಹೀಗಾಗಿ “ಓಂ ನಮಃ ಶಿವಾಯ” ಜಪವು ಯೋಗ ಮತ್ತು ಧ್ಯಾನದ ಜೊತೆಗೆ ವೈಜ್ಞಾನಿಕ ಪ್ರಯೋಜನಗಳನ್ನೂ ನೀಡುತ್ತದೆ.

ಆಧ್ಯಾತ್ಮಿಕತೆಯು ಒಳಗಿನ ಶಾಂತಿಯನ್ನು ನೀಡಿದರೆ ವಿಜ್ಞಾನವು ಅದರ ಪರಿಣಾಮಗಳನ್ನು ವಿವರಿಸುತ್ತದೆ. ಹಾಗಾಗಿ ಈ ಎರಡೂ ಪರಸ್ಪರ ಪೂರಕಗಳು. “ಓಂ ನಮಃ ಶಿವಾಯ” ಎಂಬ ಮಂತ್ರವು ಈ ಎರಡು ಲೋಕಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ.

ಈಗಿನ ವೇಗದ ಒತ್ತಡಭರಿತ ಜೀವನದಲ್ಲಿ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಸರಳವಾಗಿ ಜಪಿಸಬಹುದಾದ “ಓಂ ನಮಃ ಶಿವಾಯ”ಮಂತ್ರವು ಆಧ್ಯಾತ್ಮಿಕ ಶಾಂತಿಯನ್ನು ನೀಡುವುದರ ಜೊತೆಗೆ ವೈಜ್ಞಾನಿಕವಾಗಿ ಸಹ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಸಹಾಯಕವಾಗಿದೆ. ಈ ಮಂತ್ರದ ಜಪವನ್ನು ನಿಯಮಿತವಾಗಿ ಮಾಡುವಾಗ ಮಾನವನೊಳಗಿನ ಜಾಗೃತಿ ಮತ್ತು ಆತ್ಮಪರಿಶೀಲನೆ ಹೆಚ್ಚಾಗುತ್ತದೆ. ಮನಸ್ಸು ಚಂಚಲತೆಯಿಂದ ಹೊರಬಂದು ವರ್ತಮಾನ ಕ್ಷಣದಲ್ಲಿ ನೆಲೆಯಾಗುತ್ತದೆ. ಮನೋವಿಜ್ಞಾನವೂ ಹೇಳುವಂತೆ, ಇಂತಹ ಲಯಬದ್ಧ ಧ್ಯಾನ ವಿಧಾನಗಳು ಮನಸ್ಸಿನ ಅಲೆಗಳನ್ನು ಸಮತೋಲನಗೊಳಿಸಿ ನಿರ್ಧಾರದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಹೀಗಾಗಿ ಈ ಮಂತ್ರಜಪವು ಕೇವಲ ಭಕ್ತಿಯ ಅಭಿವ್ಯಕ್ತಿ ಮಾತ್ರವಲ್ಲ ಅದು ಮಾನಸಿಕ ಆರೋಗ್ಯದ ಸಹಜ ಚಿಕಿತ್ಸೆಯಂತೆಯೂ ಕೆಲಸ ಮಾಡುತ್ತದೆ!

ಯೋಗಶಾಸ್ತ್ರ ಧ್ವನಿಯ ಕಂಪನಗಳು ದೇಹದೊಳಗಿನ ನಾಡಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳುತ್ತದೆ ಹಾಗೆಯೇ ಆಧುನಿಕ ವಿಜ್ಞಾನದಲ್ಲಿ “ವೈಬ್ರೇಶನ್ ಥೆರಪಿ” ಅಥವಾ ಧ್ವನಿ ಚಿಕಿತ್ಸೆಯ ಕುರಿತ ಅಧ್ಯಯನಗಳು ನಡೆಯುತ್ತಿದ್ದು ಅವುಗಳು ಸಹ ಇದನ್ನೇ ಹೇಳುತ್ತಿವೆ ಎಂಬುದು ಗಮನಾರ್ಹ. ಮೃದುವಾದ, ಲಯಬದ್ಧ ಮಂತ್ರೋಚ್ಚಾರಣೆ ದೇಹದ ಒತ್ತಡವನ್ನು ಕಡಿಮೆ ಮಾಡಿ ವಿಶ್ರಾಂತಿಯ ಸ್ಥಿತಿಯನ್ನು ಉಂಟುಮಾಡುತ್ತದೆ ಇದರಿಂದ ನಿದ್ರೆ ಗುಣಮಟ್ಟ ಸುಧಾರಿಸುತ್ತದೆ ರೋಗನಿರೋಧಕ ಶಕ್ತಿ ಬಲವಾಗುತ್ತದೆ ಎಂಬುದನ್ನು ಕೆಲವು ಅಧ್ಯಯನಗಳು ಹೇಳಿವೆ

ಇಲ್ಲಿ ಇನ್ನೊಂದು ಅತ್ಯಂತ ಮಹತ್ವವಾದ ಅಂಶವೆಂದರೆ ಈ ಮಂತ್ರಜಪವು ವ್ಯಕ್ತಿಯನ್ನು ಒಳಗಿನ ಮೌಲ್ಯಗಳ ಕಡೆಗೆ ಕರೆದೊಯ್ಯುತ್ತದೆ ಶಾಂತಿ, ಸಹನೆ, ಕರುಣೆ, ಸಮತೆ ಇಂತಹ ಗುಣಗಳು ನಿಧಾನವಾಗಿ ಬೆಳೆಯುತ್ತವೆ. ಸಮಾಜದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದ ಹೆಚ್ಚಲು ಇಂತಹ ಆಂತರಿಕ ಪರಿವರ್ತನೆಗಳು ಅತ್ಯಗತ್ಯ. ಆದ್ದರಿಂದ “ಓಂ ನಮಃ ಶಿವಾಯ” ಎಂಬ ಮಂತ್ರವು ವೈಯಕ್ತಿಕ ಶಾಂತಿಯ ಜೊತೆಗೆ ಸಾಮಾಜಿಕ ಸಮತೋಲನಕ್ಕೂ ಸಹಕಾರಿಯಾಗಿದೆ.

ಆಧ್ಯಾತ್ಮಿಕ ಅನುಭವ ಮತ್ತು ವೈಜ್ಞಾನಿಕ ಅರಿವು ಒಂದೇ ಸತ್ಯದ ಎರಡು ಮುಖಗಳಂತೆ. ಧ್ವನಿ, ಉಸಿರಾಟ ಮನಸ್ಸಿನ ಏಕಾಗ್ರತೆ ಇವುಗಳ ಸಮನ್ವಯವೇ “ಓಂ ನಮಃ ಶಿವಾಯ” ಮಂತ್ರದ ಸಾರ ಭಕ್ತಿಯೊಂದಿಗೆ ಅರಿವಿನಿಂದ ಜಪಿಸಿದಾಗ ಈ ಮಂತ್ರವು ಮಾನವನ ಬದುಕಿನಲ್ಲಿ ಶಾಂತಿ ಆರೋಗ್ಯ ಮತ್ತು ಆಂತರಿಕ ಜ್ಞಾನವನ್ನು ಮೂಡಿಸುತ್ತದೆ.!


  • ಗೀತಾಂಜಲಿ ಎನ್ ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW