ಮಹಾಬಲಿ ಎಂಬ ರಾಕ್ಷಸ ರಾಜ ತನ್ನ ಸಾಮ್ರಾಜ್ಯದ ಪ್ರತೀ ಒಬ್ಬ ಪ್ರಜೆಯನ್ನು ಮನುಷ್ಯನನ್ನಾಗಿ ಕಾಣುತ್ತಿದ್ದ. ಸರ್ವರನ್ನೊಳಗೊಂಡ ಮಾನವೀಯ ಮೌಲ್ಯದ ಆಳ್ವಿಕೆ ಬಹಳ ವಿಖ್ಯಾತಿಯಾಗಿತ್ತು. ದೊಡ್ಡ ಹೊಟ್ಟೆಯ, ನೋಡಲು ಕರ್ರಗೆ ಇರುವ ಮಹಾಬಲಿಯನ್ನು ಕೇರಳದ ಜನ ಚಿಕ್ಕದಾಗಿ ಚೊಕ್ಕವಾಗಿ “ಮಾವೇಲಿ” ಎಂದು ಕರೆಯುವುದು ವಾಡಿಕೆ. ಓಣಂ ಹಬ್ಬದ ಪ್ರಯುಕ್ತ ರೂಪೇಶ್ ಪುತ್ತೂರು ಅವರು ಬರೆದ ಸುಂದರ ಲೇಖನ. ಮುಂದೆ ಓದಿ…

(ಲೇಖಕರ ಮನೆಯಲ್ಲಿ ಓಣಂ ಹಬ್ಬದ ಆಚರಣೆ)
“#ಮಾವೇಲಿ” ಯನ್ನೂ ಕೇರಳದವರು ಟ್ರೋಲ್ ಮಾಡುವುದರಲ್ಲಿ ಬಿಡುವುದಿಲ್ಲ. ಕೇರಳದ ದುಃಖ, ಕೆಟ್ಟ ಸಂಪ್ರದಾಯವನ್ನು…. ಮಾವೇಲಿಯ ವೇಷಧಾರಿ ವಿಮರ್ಷಿಸುತ್ತಾರೆ. ಅಂದೆಲ್ಲಾ ” ದೇ ಮಾವೇಲಿ ಕೊಂಬತ್ತ್” ( “ನೋಡು ಮಾವೇಲಿ ಕೊಂಬಿನಲ್ಲಿ” ) ಎಂಬ ಆಡಿಯೋ ಕ್ಯಾಸೆಟ್ಟುಗಳು ಇಳಿದಿದ್ದವು. ಇಂದು ಅಂತಹಾ ಸಹಸ್ರ ಆಡಿಯೋ- ವೀಡಿಯೋ ಕ್ಯಾಸೆಟ್ ಜೊತೆ , ಕೇರಳದ ಪ್ರಮುಖ ಮಾಧ್ಯಮದಲ್ಲಿ ಮಾವೇಲಿಯ ವೇಷಧಾರಿ ಕೇರಳದ ಇಂದಿನ ಮಲೆಯಾಳಿಯ ಕುಂದು ಕೊರತೆ ಸ್ಥಿತಿಗತಿಯನ್ನು ತೀಕ್ಷ್ಣವಾಗಿ ಪರಾಮರ್ಶಿಸುವುದು ಕಾಣಬಹುದು.
“ಮಾವೇಲಿ ರಾಜ್ಯವಾಳುತ್ತಿದ್ದ ಕಾಲದಲ್ಲಿ
ಮಾನವರೆಲ್ಲರೂ ಒಂದು.
ಕಳ್ಳತನ-ವಂಚನೆ-ಮೋಸ ಅರಿಯದಿದ್ದ
ರಾಜ್ಯವಾಗಿತ್ತು ಮಾವೇಲಿಯದು.
ಹಸಿವಿಲ್ಲದಿರುವ ಆರೋಗ್ಯ
ಸುಳ್ಳಿನ ವಿರುದ್ದ ಜಯ
ಅನ್ಯಾಯದ ವಿರುದ್ದ ಧ್ವನಿ ಎತ್ತುವವನೇ ವೀರ”.
ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವವನೇ ಸತ್ಪ್ರಜೆ….” ಹೀಗಿರುವ ಹಾಡುಗಳು…ಅಲ್ಲಿನ ಜನಜನಿತ ಹಾಡುಗಳು (ಮಾವೇಲಿ ನಾಡು ವಾಣೀಡುಂಕಾಲಂ…..)

ಕೊಟ್ಟ ಮಾತು ತಪ್ಪದೆ ಇರುವುದೇ ಮಾವೇಲಿಯ ಜೀವನಕ್ಕೆ ಮಾರಕವಾಯಿತು. ಒಬ್ಬ ವಾಮನ ಬಂದು ತನ್ನ ಜೀವ ಕೇಳಿದಾಗ ಅದನ್ನೇ ಕೊಟ್ಟವನು ಈ ಮಾವೇಲಿ. ವಾಮನ ಮಾವೇಲಿಯ ತಲೆ ತುಳಿದು ಭೂಮಿಯೊಳಗೆ ಸೇರಿಸುವ ಮೊದಲು…
ವಾಮನ: “… ನಿನ್ನ ಅಂತಿಮ ಆಸೆ ಏನು?”
ಮಾವೇಲಿ : ” ನಾನು ನನ್ನ ಪ್ರಜೆಗಳನ್ನು ಬಿಟ್ಟು ಈ ಭೂಮಿಯನ್ನು ಬಿಟ್ಟು ಹೋಗುವ ಈ ದಿನ “ಓಣಂ”. ಎಲ್ಲಿಯವರೆಗೆ ಈ ಪ್ರಜೆಗಳಿಗೆ ನನಗಿಂತ ಒಳ್ಳೆಯ ರಾಜ ಸಿಗುವನೋ ಅಲ್ಲಿಯವರೆಗೆ ಈ ಓಣಂ ದಿನ ನನ್ನ ಪ್ರಜೆಗಳು ನನ್ನ ನೆನಪಿಸುವ ದಿನವಾಗಿ ಆಚರಿಸಲಿ. ಯಾವತ್ತು ನನಗಿಂತ ಸತ್ ಮನಸ್ಸಿನ , ಪ್ರಜೆಗಳೊಂದಿಗೆ ಸದಾ ಸ್ಪಂದಿಸುವ ರಾಜ ಬರುತ್ತಾನೋ ಅಂದು ಈ #ಓಣಂ ಆಚರಿಸಬೇಕೆಂದಿಲ್ಲ. ನಾ ಬರುವೆ ನನ್ನ ಪ್ರಜೆಗಳೇ….”
ಕೇರಳಿಗರು ಸಸ್ಯಾಹಾರಿ- ಮಾಂಸಾಹಾರಿ …. ತಮ್ಮ ಚೌಕಟ್ಟಿನೊಳಗೆ ಆಗುವ ರೀತಿಯಲ್ಲಿ ಆಹಾರ ತಯ್ಯಾರಿ ಮಾಡುವುದಲ್ಲದೆ ಮಹಾಬಲಿಯ ನೆನಪಿಗೆ ಈ ದಿನ ಮನೆಮುಂದೆ ಹೂವಿನ ರಂಗೋಲಿ ಹಾಕಿ ಕಾಯುತ್ತಾರೆ. ತಮಗೆ ಹಸಿವಾದಕೂಡಲೇ “ಮಾವೇಲಿ ಬಂದಾಗ ಆಮೇಲೆ ನೋಡೋಣ, ಆಹಾರ ಕೊಡೋಣ'” ಎಂದುಕೊಂಡು, ತಾವು ಮಾಡಿದ ವಿಭವ – ಆಹಾರಗಳನ್ನು ತಾವೇ ತಿನ್ನುತ್ತಾರೆ. ಆ ಸಮಯ / ದಿನ ಮನೆಗೆ ಬರುವ ಅತಿಥಿಗಳಲ್ಲಿ ಮಹಾಬಲಿ / ಮಾವೇಲಿಯನ್ನು ಕಾಣುತ್ತಾರೆ. ಅವರಿಗೆ ತಾವು ಮಾಡಿದ ತಿನುಸುಗಳನ್ನು ಕೊಡುತ್ತಾರೆ.

(ಲೇಖಕರ ಮಗಳು ಓಣಂಗಾಗಿ ಸಿಂಗರಿಸಿದ ಓಣಂ ಹೂ-ರಂಗೋಲಿ)
ಮಾವೇಲಿ ರಾಜ ಬರುತ್ತಾನೆಂಬ ಐತಿಹ್ಯದಲ್ಲಿ
ಈ ಹಬ್ಬ ಕೇರಳದ ಎಲ್ಲಾ ಜಾತಿ – ಮತ – ಧರ್ಮ – ಭಾಷೆಯವರು ಜೊತೆಯಾಗಿ ಆಚರಿಸುವ ಒಂದು ಏಕತೆಯ ಪ್ರತೀಕ. ಕೇರಳದಲ್ಲಿ ಹುಟ್ಟಿ ಬೆಳೆದ ಹಿಂದೂ ಆಚರಿಸುತ್ತಾನೆ, ಮುಸಲ್ಮಾನನೂ ಆಚರಿಸುತ್ತಾನೆ, ಕ್ರೈಸ್ತನೂ ಆಚರಿಸುತ್ತಾನೆ,ಆಂಗ್ಲೋ ಇಂಡಿಯನ್ ನನೂ, ಕೊಂಕಣಿಗನೂ, ಟಿಪ್ಪುವಿನೊಂದಿಗೆ ಯುದ್ದಕ್ಕೆ ಬಂದು ಹಿಂದುರುಗಿ ಹೋಗದ ಕನ್ನಡಿಗನೂ , ಅಬ್ಬಕ್ಕನ ರಾಯಭಾರಿಯಾಗಿ ಬಂದ ತುಳುವನೂ, ಭಾರತದ ಯಾವುದೇ ಮೂಲೆಯಿಂದ ಬಂದು ಕೇರಳದಲ್ಲಿ ನೆಲೆಯೂರಿದ, ಕೇರಳದಿಂದ ದೂರ ಹೋಗಿ ಹೊಟ್ಟೆಪಾಡಿಗೆ ಜೀವಿಸುವವರು. ಮಾವೇಲಿಯನ್ನು ಅರಿತ ಮಾನವರೆಲ್ಲರೂ ಆಚರಿಸುತ್ತಾರೆ.
ಕೆಲವು ಕೇರಳಿಗರು ಇದನ್ನು ಒಳ್ಳೆಯ ರೀತಿಯಲ್ಲೂ ಇನ್ನು ಕೆಲವರು ತುಂಬಾ ಕೆಟ್ಟ ರೀತಿಯಲ್ಲೂ ಆಚರಿಸುವುದು ನಾವು ಕಾಣಬಹುದು. ಕೆಟ್ಟದಾಗಿ
” ಓಣಂ” ಆಚರಿಸುವವರಿಗೆ ಈ ಹಬ್ಬದ ಮಹತ್ವದ ಅರಿವಿನ ಕೊರತೆ ಕಾರಣವಾಗಿರಬಹುದು ಅವರನ್ನು ಕಾಲವೇ ಕ್ಷಮಿಸಲಿ ಅಲ್ಲವೇ?.
ಇಂದೂ ” ಓಣಂ” ಸಡಗರದಿಂದ ಜಾತಿ ಮತ ಬೇಧವಿಲ್ಲದೆ ಆಚರಿಸುವ ಹಬ್ಬವಾಗಿ ಉಳಿದಿರುವುದು ಒಂದು ಅದ್ಭುತವೇ ಸರಿ.
ನಿಮ್ಮವ ನಲ್ಲ
*ರೂಪು*
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು) ಬೆಂಗಳೂರು.
