
ಪತ್ರಿಕೋದ್ಯಮ ಚಿತ್ರಕಲೆಯಲ್ಲಿ ಹೆಸರು ಮಾಡಿರುವ ಹಿರಿಯ ಕಲಾವಿದ ಪ.ಸ. ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು….
ಪ.ಸ. ಕುಮಾರ್, ಕನ್ನಡ ಲೇಖಕರಿಗೆ ಪ್ರಿಯವಾದ ಹೆಸರು. ಧಾವಂತದ ಪತ್ರಿಕೋದ್ಯಮದಲ್ಲಿ ಚಿತ್ರಕಲೆಗೆ ವಿಶಿಷ್ಟ ಸ್ಥಾನವನ್ನು ತಂದಿತ್ತವರಲ್ಲಿ ಪ.ಸ.ಕುಮಾರ್ ಹೆಸರು ಮುಂಚೂಣಿಯಲ್ಲಿರುತ್ತದೆ. ಅವರು ನೂರಾರು ಧಾರಾವಾಹಿಗಳಿಗೆ ಬರೆದ ಚಿತ್ರಗಳು ಮುದ್ರಣ ಮಾಧ್ಯಮದಲ್ಲಿ ಚಿರವಾಗಿವೆ. ಮುದ್ರಣ ತಂತ್ರಜ್ಞಾನ ಅಷ್ಟಾಗಿ ಆಧುನಿಕವಾಗಿಲ್ಲದ ಕಾಲದಲ್ಲಿ ಅವರು ಅಕ್ಷರಶಃ ರಚಿಸಿದ ಸಾವಿರಾರು ಮುಖಪುಟಗಳು ಕನ್ನಡ ಪುಸ್ತಕಗಳ ಸೊಬಗನ್ನು ಹೆಚ್ಚಿಸಿವೆ.

ಪ.ಸ. ಕುಮಾರ್
ಕುಮಾರ್‌ರೊಂದಿಗೆ ಮಾತನಾಡುವುದೆಂದರೆ ನಮ್ಮ ಸಮವಯಸ್ಕರೊಂದಿಗೆ ಹರಟೆ ಹೊಡೆದಂತೆ. ಅವರಿಗೆ ಈಚೀಚೆಗೆ ಸ್ವಲ್ಪ ವಯಸ್ಸಾಗುತ್ತಿದೆ. ಆದರೆ ಅವರ ಕುಂಚಕ್ಕಲ್ಲ ! ಅದಕ್ಕೆ ಸೂಫಿ ಸಾಹಿತ್ಯದ ’ಸಾಕಿ’ಯಂತೆ ಚಿರತಾರುಣ್ಯ! ಅವರ ಕೇಶದ ಬಣ್ಣ ಬಿಳಿಯಾದಷ್ಟೂ ಕುಂಚವು ತಾರುಣ್ಯದ ಉತ್ಸಾಹದಲಿ ಕುಣಿದು ಹೊಸ ಹೊಸ ರೇಖೆಗಳನ್ನು ಮೂಡಿಸುವುದು.
ಅವರ ಮುಗ್ಧನಗು, ಒಂದಿನಿತೂ ಸ್ವಾರ್ಥವಿಲ್ಲದ ನಡವಳಿಕೆ ಮತ್ತು ನೇರ-ಸರಳ ಬದುಕು ಮುಂದಿನ ತಲೆಮಾರಿನ ಎಲ್ಲ ಬಗೆಯ ಕಲಾವಿದರಿಗೆ ಸ್ಫೂರ್ತಿಯಾಗುವಂತಿದೆ. ಕುಮಾರ್ ಅವರಿಗೆ ಸ್ನೇಹವಷ್ಟೇ ಗೊತ್ತು. ಒಳಗೆ ಕುದಿವ ಜ್ವಾಲಾಮುಖಿಯಿದ್ದರೂ, ಬದುಕನ್ನು ಅಗ್ನಿದಿವ್ಯದಲಿ ಹಾದುಬಂದರೂ ಎದುರಿಗೆ ಸಿಕ್ಕವರಿಗೆ ’ಏನ್ರಿ ಹೇಗಿದ್ದೀರಿ?’ ಎನ್ನುತ್ತ ಬೆನ್ನು ಸವರಿ ಜೋರಾಗಿ ನಿಷ್ಕಲ್ಮಶ ನಗುವನ್ನು ಹರಿಸಲು ಕುಮಾರ್ ಅವರಿಗೆ ಮಾತ್ರ ಸಾಧ್ಯ.
ಈ ಹಿರಿಯ ಕಲಾವಿದರ ಹುಟ್ಟು ಹಬ್ಬದ ದಿನ ಅವರ ನಿಸ್ಪೃಹ ಸ್ನೇಹವನ್ನು ನೆನಪಿಸಿಕೊಳ್ಳುವುದು ಅಪಾರವಾದ ಸಂತೋಷವನ್ನು ಕೊಡುತ್ತದೆ.
- ಕೇಶವ ಮಳಗಿ – ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು, ಬೆಂಗಳೂರು
