‘ಪದ್ದಣ ಮನೋರಮೆ’ ಕೃತಿ ಪರಿಚಯ

ಪದ್ದಣ ಮನೋರಮೆ ಕಥಾ ಸಂಕಲನವನ್ನು ಓದುತ್ತಿದ್ದರೆ ಶಾಲಿನಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಒಬ್ಬ ಉತ್ತಮ ಹಾಸ್ಯ ಲೇಖಕಿಯಾಗಿ ಬೆಳೆಯುವ ಭರವಸೆಯನ್ನು ಕಾಣಬಹುದು. ಕೆ ಎ ಎಸ್ ಅಧಿಕಾರಿ, ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಪದ್ದಣ ಮನೋರಮೆ
ಪ್ರಕಾರ : ಲಘು ಪ್ರಸಂಗ ಕತೆಗಳು
ಲೇಖಕಿ: ಶಾಲಿನಿ ಹೂಲಿ ಪ್ರದೀಪ್
ಪ್ರಕಾಶನ : ಆಕೃತಿ ಕನ್ನಡ ಪ್ರಕಾಶನ
ಬೆಲೆ : ರೂ 150.
ಖರೀದಿಗಾಗಿ : 9880424461 /
ಆನ್ಲೈನ್ ನಲ್ಲಿ  : www.totalkannada.com

ಆಕೃತಿ ವೆಬ್ ಮ್ಯಾಗಜಿನ್ ಮೂಲಕ ಅನೇಕ ಹಿರಿ ಕಿರಿಯ ಬರಹಗಾರರರಿಗೆ ವೇದಿಕೆ ಒದಗಿಸುವ ಮೂಲಕ ವೈವಿಧ್ಯಮಯ ಸಾಹಿತ್ಯ ಹೊರ ಬರಲು ಕಾರಣರಾಗಿರುವ ಶಾಲಿನಿ ಹೂಲಿ ಪ್ರದೀಪ ಅವರು ಸ್ವತಃ ಬರಹಗಾರರು. ತಮ್ಮ ಮ್ಯಾಗಜಿನ್ , ಫೇಸ್ ಬುಕ್ ಮತ್ತು ಇತರ ಕಡೆ ಬರೆಯುವ ಅವರ ಬರವಣಿಗೆ ಶೈಲಿ ಕಥೆ ಮತ್ತು ಪ್ರಬಂಧಗಳ ಲಕ್ಷಣಗಳನ್ನು ಹೊಂದಿ ಓದುಗರಲ್ಲಿ ಒಂದು ಕುತೂಹಲ ಹುಟ್ಟಿಸಿ ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿವೆ. ಕತೆಯೊಂದು ಅಪೇಕ್ಷಿಸುವ ಗಂಭೀರ ವಸ್ತುವನ್ನು ತೆಗೆದುಕೊಂಡರೂ ಅದನ್ನು ಪ್ರಬಂಧ ಮಾದರಿಯಲ್ಲಿ ಬರೆಯುತ್ತ ಗಂಭೀರತೆಯಿಂದ ಲಘುವಿನತ್ತ ಹೊರಳಿ ಕತೆಯಲ್ಲಿ ವಿನೋದವನ್ನು ಉಕ್ಕಿಸುವ ಶಾಲಿನಿಯವರ ಬರಹದ ಶೈಲಿಯೇ ವಿಶಿಷ್ಟ. ಪದ್ದಣ- ಮನೋರಮೆ ಎರಡ್ಮೂರು ಪುಟಗಳ ಚಿಕ್ಕ ಚಿಕ್ಕ ಸುಮಾರು ೨೪ ಲಘುಪ್ರಸಂಗಗಳ ಸಂಕಲನ.

ಗಂಭೀರ ವಸ್ತುವಿನ ವೈನೋದಿಕ ಗುಣವನ್ನು ಹೊಂದಿರುವ ಪ್ರಸಂಗಗಳಿವು. ಇದಕ್ಕೆ ಸಾಕಷ್ಟು ಉದಾಹರಣೆಯನ್ನು ಓದುಗ ಕಾಣಬಹುದು.ಕೃತಿಯ ಆರಂಭದ ಗೆಳೆಯನ ಹೆಂಡತಿ ರೈಟ್ ಹೇಳಿದಾಗ ಕತೆಯು ಈ ಮಾದರಿಯದು. ಸಾವಿನಂತಹ ಗಂಭೀರ ವಿಷಯ ಹೊಂದಿದ್ದರೂ ಪದ್ದಣ ಮನೋರಮೆಯರ ಸಿಟ್ಟು ,ಸೆಡವು, ವಿನೋದತೆಯ ಸಂಭಾಷಣೆಯಿಂದ ಅದು ಓದುಗರಲ್ಲಿ ಕಚಗುಳಿ ಇಡುತ್ತದೆ. ಪದ್ದಣನ ಸ್ನೇಹಿತ ಆದರ್ಶನ ಹೆಂಡತಿ ಎರಡು ಮಕ್ಕಳನ್ನು ಬಿಟ್ಟು ಹೋದಳೆಂದಾಗ ಅದನ್ನು ಲೇಖಕಿ ಬೇರೆ ರೀತಿಯಲ್ಲಿ ಪರಿಭಾವಿಸುವ ಮೂಲಕ ಸಾವಿನಂತಹ ವಿಷಯದ ಬರಹವೂ ಲೇಖಕಿಯ ಹಾಸ್ಯ ಪ್ರಜ್ಞೆಯಿಂದ ವಾಚಕರಲ್ಲಿ ನಗೆ ಉಕ್ಕಿಸುವಂತೆ ಮಾಡುತ್ತದೆ. ಹೆಣವನ್ನು ಸಿಂಗಾರ ಮಾಡಿದಂತಹ ಸನ್ನಿವೇಶ, ಅವಳ ಸಾವಿಗೆ ದಪ್ಪ ಇದ್ದಳೆಂಬ ಗಂಡನ ಉದಾಸೀನತೆ ಕಾರಣವೆಂಬುವುದನ್ನು ಅಲ್ಲಿದ್ದರವರು ಮಾತನಾಡಿದ್ದನ್ನು ಪದ್ದಣನಿಗೆ ಹೇಳಿದಾಗ ಕೊನೆಗೆ ಕೋಪಗೊಂಡ ಪದ್ದಣ ಲೇಖಕಿಯನ್ನು ಗಾಡಿಯಿಂದ ಕೆಳಗಿಳಿಸಿ ಹೋಗುವ ಪ್ರಮೇಯವೂ ಉದ್ಭವವಾಗುತ್ತದೆ.

ಅಬ್ಬಾ ಆ ದಿನ ಪ್ರಸಂಗದಲ್ಲಿ ಬಹಳ ದಿನದ ನಂತರ ಪ್ರಶಾಂತ್ – ಸ್ಪೂರ್ತಿಯರಿಗೆ ಜನಿಸಿದ ಅದ್ವಿತ್ ನ ಐದನೆ ವರ್ಷದ ಹುಟ್ಟುಹಬ್ಬ ಆಚರಣೆ, ನಂತರ ನಡೆಯುವ ಘಟನೆಯನ್ನು ಹೊಂದಿದ ಕತೆ . ಮೊಮ್ಮಗನ ಬರ್ತಡೆ ಗೆ ಬಂದಿದ್ದ ಪ್ರಶಾಂತನ ತಂದೆ ತಾಯಿಯರು ಬರ್ತಡೆ ನಂತರ ಕೆಲ ವಾರ ಇದ್ದಾಗ, ಒಂದು ದಿನ ಪ್ರಶಾಂತ ತಂದೆಯ ನಿದ್ರೆ ಮಾತ್ರೆಯನ್ನು ತಿಳಿಯದೆ ತಿಂದು ಆಸ್ಪತ್ರೆಗೆ ಸೇರುವ ಅದ್ವಿತ್ ಹೃದಯ ಕಲಕುವ ವಸ್ತು ಇರುವಂತಹದ್ದು. ಕೊನೆಗೂ ತಿಳಿಯದೆ ಆದ ಘಟನೆಯನ್ನು ಹೆಚ್ಚಿಗೆ ಬೆಳೆಸದೆ ಸ್ಪೂರ್ತಿಯೂ ಮಾವನಿಗೆ ಸಮಾಧಾನ ಹೇಳುವುದು ಸೊಸೆಯಂದಿರಲ್ಲೂ ಇನ್ನೂ ಒಳ್ಳೆಯತನ ಉಳಿದಿರುವುದನ್ನು ಸಾಬೀತು ಪಡಿಸುವ ಕತೆಯಾಗಿ ಸೆಳೆಯುತ್ತದೆ.

ಹಾರ್ಟ್ ಡಂ ಅಂದ್ರೆ , ಹಾರ್ಟ್ ಬಾಯಿಗೆ ಬಂದಾಗ ಎಂಬೆರಡು ಪ್ರಸಂಗಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಾರ್ಟ್ ಅಟ್ಯಾಕ್ ಕುರಿತಾದ ಲಘುಬಗೆಯ ಲೇಖನಗಳು. ಪದ್ದಣ ಕಚೇರಿಯಲ್ಲಿನ ವ್ಯಕ್ತಿಯೊಬ್ಬ ಹೃದಯಾಘಾತದಿಂದ ತೀರಿಕೊಂಡದ್ದು, ಆತನ ಕುಳ್ಳ ಗೆಳೆಯನೊಬ್ಬ ಎದೆನೋವೆಂದು ಆಸ್ಪತ್ರೆಗೆ ಸೇರಿದ್ದು, ಹೆಂಡತಿಯರು ಸ್ಟ್ರೇಸ್ ಕೊಡುವದರಿಂದಲೇ ಈ ಹೃದಯಾಘಾತಗಳು ಎಂಬ ಪದ್ದಣನ ವಿಚಾರಕ್ಕೆ ಸರಿಯಾದ ಟಕ್ಕರ್ ಕೊಡುವ ಮನೋರಮೆಯ ಪೋನ್ ಪ್ರಸಂಗವು ಓದುಗನಿಗೆ ಖುಷಿ ಕೊಡುತ್ತದೆ.

ಫೇಸ್ಬುಕ್ ದಲ್ಲಿ ಯಾರಾರನ್ನೋ ಫ್ರೆಂಡ್ಸ ಮಾಡಿಕೊಂಡು , ನಂತರ ಅವನಿಂದ ಕಿರಿಕಿರಿಗೊಂಡು ಅವನಿಂದ ತಪ್ಪಿಸಿಕೊಳ್ಳಲು ಪದ್ದಣನಿಗೆ ದುಂಬಾಲು ಬೀಳುವ ಸ್ವಾರಸ್ಯಕರ ಪ್ರಸಂಗವೇ ಪೇಸ್ಬುಕ್ ಪ್ರಪಂಚ.

ಲಿಂಗ ತಾರತಮ್ಯ ಕೇವಲ ಮನುಷ್ಯ ಜಾತಿಯಲ್ಲಿ ಮಾತ್ರವಲ್ಲ ಶ್ವಾನಗಳಲ್ಲೂ ಗಂಡಿಗೆ ಇರುವ ಮಾನ್ಯತೆ ಹೆಣ್ಣು ನಾಯಿಗಳಿಗಿಲ್ಲ ಎಂಬ ಚರ್ಚಾಸ್ಪದ ವಿಷಯದ ನಾಯಿ ಹೆಣ್ಣಾದ್ರೆ ತಪ್ಪಾ ಎಂಬ ಲೇಖನದಲ್ಲಿದೆ. ಲಿಂಗ ತಾರತಮ್ಯದಂತಹ ಬಹು ಚರ್ಚಿತ ವಸ್ತುವನ್ನು ತಮಾಷೆಯ ಘಟನೆಯೊಂದಿಗೆ ಅದರ ಗಂಭೀರತೆಯನ್ನು ಓದುಗನ ಮನ ಮುಟ್ಟಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಗಂಡುಗಳಿಗೆ ಕನ್ಯಾಮಣಿಗಳು ಸಿಗದಿರುವ ಬಗ್ಗೆ ಪತ್ರಿಕೆಗಳಲ್ಲಿ ಅನೇಕ ವರದಿಗಳನ್ನು ಓದುತ್ತಿದ್ದೇವೆ. ಅಂಥ ಗಂಭೀರ ಸಮಸ್ಯೆಯನ್ನು ಅದೆಷ್ಟು ಸ್ವಾರಸ್ಯಪೂರ್ಣವಾಗಿ ಬರೆಯಬಹುದು ಎಂಬುವುದನ್ನು ನಮ್ಮ ಸೇಫ್ಟಿ ನಮ್ಮದು ಬರಹದಲ್ಲಿದೆ.ಅದರಲ್ಲಿ ಬರುವ ‘ ಯಾರ್ ಮುಂದೇನು child marriage ಅಂತ ಹೇಳಬೇಡಾ. Expired date ಆಗಿದ್ದು ತಂದು ನಂಗೆ ಕಟ್ಟಿದ್ದಾರೆ” ಅನ್ನುವ ಪದ್ದಣನ ಮಾತು ನಗೆಯುಕ್ಕಿಸುವುದಲ್ಲದೆ ಸ್ವ ಲೇವಡಿ ಮಾಡಿಕೊಳ್ಳುವ ಲೇಖಕಿಯ ಗುಣ ಮೆಚ್ಚುವಂತಹದ್ದು.

ಮೆಸೆಂಜರ್ ಪ್ರೀತಿ ಪ್ರಣಯದಲ್ಲಿ ಮೊಬೈಲಿನಲ್ಲಿ ಬರುವ ಮೆಸೆಜ್ಗಳಿಂದ ಹೊಟ್ಟೆ ತುಂಬಲಾರದೆಂದು ಕೆಲವು ಘಟನೆಗಳ ಮೂಲಕ ಪದ್ದಣ ಕಲಿಸುವ ಪಾಠಗಳು ಖಂಡಿತ ಮನಸಿಗೆ ಹಿತ ನೀಡುತ್ತವೆ. ಕೇವಲ ಕೈ ಕೈ ಹಿಡಿದುಕೊಂಡು ಗಂಡ ಹೆಂಡತಿ ನಡೆದರೆ ಬದುಕು ಸಾಗಲಾರದು, ಅದಕ್ಕಿಂತ ಮನಸಾರೆ ಪ್ರೀತಿಯಿರಬೇಕೆಂಬ ಎಂಬ ಸಂದೇಶದ ಸೆಲೆಬ್ರೆಟಿ ಗಂಡಾಗುಂಡಿ ಕೈ ಕೈ ದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಶಾಲೆಯಲ್ಲಿ ಜಾಣರೆಣಿಸಿಕೊಂಡವರು ಬದುಕಿನಲ್ಲಿ ತೆಗೆದುಕೊಂಡ ಕೆಟ್ಟ ತೀರ್ಮಾನಗಳಿಂದ ಬಾಳನ್ನು ಯಾವ ರೀತಿ ಮಾಡಿಕೊಳ್ಳುವರೆಂಬ ಗಮನಾರ್ಹ ವಸ್ತುವಿನ ಕತೆಯೇ ಕಾಗದದ ದೋಣಿ.

ಯುವತಿಯರನ್ನು ವಿನಾ ಕಾರಣ ಕಾಡುವ, ಅವರೊಂದಿಗೆ ತುಂಬಾ ಕೆಟ್ಟದಾಗಿ ವರ್ತಿಸುವ ದಾರಿ ಬಿಟ್ಟ ಯುವಕರ ಕತೆ ಬೀದಿ ಕಾಮಣ್ಣರು. ಹಳ್ಳಿಯ ಹೆಣ್ಮಗಳು ಶಾಪಿಂಗ್ ಮಾಲ್ ನಂತಹ ದೊಡ್ಡ ಅಂಗಡಿಗೆ ಬಂದಾಗ ಅಲ್ಲಿ ಲೇಖಕಿಯೊಂದಿಗೆ ನಡೆದ ಸ್ವಾರಸ್ಯಕರ ಪ್ರಸಂಗ ಕತೆಯಾಗಿ ವಿಂಡೋ ಶಾಪಿಂಗ್ ಕತೆ ಸೆಳೆಯುತ್ತದೆ. ಚಲ್ತಿಕಾ ನಾಮ್ ದುನಿಯಾ ಕತೆಯು ಡಿಪ್ರೆಶನ್ ಹೋದಂತಹ ಸ್ನೇಹಿತೆಗೆ ಸಾಂತ್ವನ ನೀಡುವಂಥ ಕತೆಯಾಗಿದ್ದು, ಅವಳ ಆ ಸ್ಥಿತಿಗೆ ಕಾರಣವನ್ನು ಕತೆಯನ್ನು ಓದಿಯೇ ತಿಳಿದುಕೊಳ್ಳಬೇಕು.

ಪ್ರಸ್ತುತ ಕಾಲಘಟ್ಟದಲ್ಲಿ ಅತಿ ಅವಶ್ಯವೆನ್ನಬಹುದಾದ ಮೊಬೈಲ್ ಬಳಕೆಯ ವೇಳೆ ಒಮ್ಮೊಮ್ಮೆ ಅಚಾನಕ್ ಆಗಿ ಯಾವುದೋ ಬಟನ್ ಒತ್ತಿ ಎಂತದೋ ಫೋಟೊಗಳು, ಚಿತ್ರಗಳು ಪರದೆಯ ಮೇಲೆ ಎಲ್ಲರ ಮುಂದೆ ಫಜೀತಿಗೆ ಈಡು ಮಾಡುವ ಪ್ರಸಂಗಕ್ಕೆ ಕಾರಣ ಕತೆ ಮೊಬೈಲ್ ಅವಾಂತರ. ‘ಇಂದಿನ ಟ್ರೆಂಡ್’ ವು ಈಗಿನ ಯುವಕರು ಮೊಬೈಲ್ ಸಂಭಾಷಣೆ ಮೂಲಕ ಗೃಹಿಣಿರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುವುದನ್ನು ಸಾದಂತ್ಯವಾಗಿ ಹೇಳುವಂಥ ಕತೆ.

ಕಪ್ಪು ಎನ್ನುವ ಕಾರಣದಿಂದ ಬೆಳ್ಳಗಾಗಲು ಏನೆಲ್ಲಾ ಮಾಡುವರೆಂಬವುದನ್ನು ನಾವು ಸಾಕಷ್ಟು ನೋಡುತ್ತೇವೆ. ಹಾಗೆಯೇ ಇಲ್ಲಿ ಲೇಖಕಿಯು ಬೆಳ್ಳಗಾಗಲು ಏನೆಲ್ಲಾ ಪ್ರಯೋಗಿಸಿ , ಹೇಗೆಲ್ಲ ಫಜೀತಿಕ್ಕೀಡಾಗುವರೆಂಬುವುದು ಫ್ರೀ ಬ್ಯೂಟಿ ಟಿಪ್ಸ್ ದಲ್ಲಿ ತುಂಬಾ ಹಾಸ್ಯಮಯವಾಗಿ ಹೇಳಿದ್ದಾರೆ.

ಕಂಡವರ ಮನೆ ಕಥೆಯಲ್ಲಿ ಗಂಡನಿಂದ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ದಾಖಲಾದ ಮಹಿಳೆಯೊಬ್ಬಳಿಗೆ ಸಾಂತ್ವನ ನೀಡಿ, ಬದುಕುವ ಭರವಸೆ ತುಂಬುವ ಮಹಿಳೆಯಾಗಿ ಲೇಖಕಿ ಮೆಚ್ಚುಗೆ ಪಡೆಯುತ್ತಾರೆ.

ಇದು ರೀಲ್ಸ್ ಗಳ ಯುಗ. ಎಲ್ಲಿ ನೋಡಿದ್ದಲ್ಲಿ ಅವುಗಳದೆ ಹಾವಳಿ. ಈ ರೀಲ್ಸ್ ಗಳು ಮದುವೆಯಾದ ಮಹಿಳೆಯರ ಮೇಲೆ, ಅವರ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆ ಎಂಬುವುದನ್ನು ಭಯಮಿಶ್ರಿತದಿಂದಲೇ ನೋಡುವ ಪದ್ದಣನ ಚಡಪಡಿಕೆಯನ್ನು ತುಂಬಾ ಸ್ವಾರಸ್ಯಪೂರ್ಣವಾಗಿ ಹೇಳುವ ಕತೆ.

ರಾಯರು ಬಂದರು ಅಜ್ಜಿಯ ಮನೆಗೆ ಕತೆಯಲ್ಲಿ ಹೊಸದಾಗಿ ಮದುವೆಯಾದ ಪದ್ದಣ – ಮನೋರಮೆಯರು ಉತ್ತರ ಕರ್ನಾಟಕದ ಲೇಖಕಿಯ ಹೋದಾಗ ಅಲ್ಲಿಯ ಸಂಸ್ಕೃತಿ, ಭಾಷೆ, ಆಹಾರದಲ್ಲಿನ ಭಿನ್ನತೆ, ಕಡಕ್ ಊಟ ಮಾಡಿ ಫಜೀತಿಯಾಗುವ ಪದ್ದಣ, ಬಯಲ ಶೌಚಾಲಯ ಪ್ರಸಂಗಗಳಿಂದ ಕತೆ ಓದುಗರಲ್ಲಿ ನಗೆಯ ಹೊನಲಿನಲ್ಲಿ ತೇಲಿಸುತ್ತದೆ. ಇಲ್ಲಿನ ಕತೆಗಳು ಸ್ವಾನುಭವದ ಕತೆಗಳಾಗಿದ್ದು, ಲೇಖಕಿಯು ಬಹುತೇಕ ಕತೆಗಳಿಗೂ ಹಾಸ್ಯ ಲೇಪನ ಮಾಡಿರುವುದರಿಂದ ಪ್ರತಿಯೊಂದು ಕತೆ/ಪ್ರಬಂಧವೂ ಓದಿಸಿಕೊಂಡು ಹೋಗುತ್ತವೆ. ಗಂಭೀರ ವಿಷಯವನ್ನು ತೆಳು ಹಾಸ್ಯದಿಂದ ವಾಚಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಎದ್ದು ಕಾಣುತ್ತದೆ. ಈ ಸಂಕಲನದ ಕತೆಗಳನ್ನು ಓದುತ್ತಿದ್ದರೆ ಶಾಲಿನಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಒಬ್ಬ ಉತ್ತಮ ಹಾಸ್ಯ ಲೇಖಕಿಯಾಗಿ ಬೆಳೆಯುವ ಭರವಸೆಯನ್ನು ಕಾಣಬಹುದು. ತಮ್ಮ ಮೊದಲ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ ಎನ್ನುವುದೆ ಶಾಲಿನಿಯವರ ಹೆಚ್ಚುಗಾರಿಕೆ. ಅವರಿಂದ ಇನ್ನಷ್ಟು ಹೆಚ್ಚಿನ ಕೃತಿಗಳು ಬರಲಿ ಎಂಬುವುದೆ ಈ ಹೊತ್ತಿನ ಆಶಯ.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :


  • ಮಲ್ಲಿಕಾರ್ಜುನ ಶೆಲ್ಲಿಕೇರಿ – ಕೆ ಎ ಎಸ್ ಅಧಿಕಾರಿ, ಲೇಖಕರು, ಕವಿಗಳು, ಬಾಗಲಕೋಟೆ.

2 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW