ಭಾರತ ಸರ್ಕಾರ ಕೊಡ ಮಾಡುವ ಮೂರನೇಯ ಅತ್ಯುನ್ನತ ಗೌರವ ಪ್ರಶಸ್ತಿಯೇ ಪದ್ಮಭೂಷಣ. ಅದು ಖ್ಯಾತ ನಟ ಅನಂತನಾಗ್ ಅವರಿಗೆ ಸಿಕ್ಕಿದ್ದು ಕನ್ನಡಿಗರಿಗೆಲ್ಲ ಹೆಮ್ಮೆ ಪಡುವ ವಿಷಯ, ಲೇಖಕ ನಿತಿನ್ ಅಂಕೋಲಾ ಅವರು ಅನಂತ ನಾಗ್ ಅವರ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಅನಂತ್ ನಾಗ್ ಅವರ ಐದು ದಶಕಗಳ ಜೀವಮಾನ ಸಾಧನೆಗೆ ಸಲ್ಲಲೇಬೇಕಾದ ಕೇಂದ್ರ ಸರ್ಕಾರದ ಅತ್ಯುನ್ನತ ಗೌರವವು ಸಂದಿದೆ.ಕೆಲವು ಜನಪ್ರಿಯ ಚಲನಚಿತ್ರ ನಟರು,ತಂತ್ರಜ್ಞರು, ಅಭಿಮಾನಿಗಳು ಸೇರಿ ಕಳೆದ ಮೂರು ವರ್ಷಗಳಿಂದ ಅನಂತ್ ನಾಗ್ ಅವರಿಗೆ ಪದ್ಮಶ್ರೀ ದೊರೆಯಬೇಕು ಎಂದು ಧ್ವನಿ ಎತ್ತಿದ್ದರು. ಅಭಿಯಾನ ಹೂಡಿದ್ದರು. ಸಾಮಾಜಿಕ ಜಾಲತಾಣಗಳೆಲ್ಲೆಡೆ ಅಭಿಮಾನದ ಹ್ಯಾಶ್ ಟ್ಯಾಗ್ ಪೋಸ್ಟ್ಗಳು ರಾರಾಜಿಸಿದ್ದವು. ಈ ವಿಷಯವನ್ನು ಸ್ವತಃ ಅನಂತನಾಗ್ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಅನಂತ್ ನಾಗ್ ಅವರು ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಡಾ.ರಾಜಕುಮಾರ್ ಅವರು ಇಂಡಸ್ಟ್ರಿನೇ ಆಗಿದ್ದರು ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಆಗಷ್ಟೇ ಶ್ರೀನಾಥ್ ರವರು ಕೆಲವೊಂದು ಸಿನಿಮಾಗಳಲ್ಲಿ ಅಭಿನಯಿಸಿದ್ರು. ವಿಷ್ಣುವರ್ಧನ್ ಕೂಡ ಬಂದಿದ್ದರು. ಇವರೆಲ್ಲರ ಮಧ್ಯ ನಿಂತುಕೊಳ್ಳಲೇ ಬೇಕಾದಂತಹ ದೊಡ್ಡ ಸವಾಲು ಪರಿಸ್ಥಿತಿ ತಂದೊಡ್ಡಿತ್ತು. ಅದನ್ನು ಯಾವ ರೀತಿಯಾಗಿ ತಮ್ಮ ಪ್ರತಿಭೆಯಿಂದ ತಮ್ಮ ವಿಶಿಷ್ಟ ಚಾಕಚಕ್ಯತೆಯಿಂದ ನಿಭಾಯಿಸಿದರು ಎಂಬುದೆ ಅನಂತ್ ನಾಗ್ ಅವರ ಚಿತ್ರ ಜೀವನದ ಸಾಧನೆಯಾಗಿದೆ. ಬಿಡುಗಡೆಯ ಬೇಡಿ, ಚಂದನದ ಗೊಂಬೆ, ಬೆಂಕಿಯ ಬಲೆ ಬಯಲುದಾರಿ, ಬಾಡದ ಹೂವು, ಮುದುಡಿದ ತಾವರೆ ಅರಳಿತು.. ಇತ್ಯಾದಿ ಅಂತಹ ಕಾದಂಬರಿ ಆಧಾರಿತ ಚಲನಚಿತ್ರಗಳು, ಮುಳ್ಳಿನ ಗುಲಾಬಿ, ಅನುಪಮಾ, ನನ್ನ ದೇವರು.. ಇತ್ಯಾದಿ ಪ್ರೇಮ ಕಥಾವುಳ್ಳ ಚಲನಚಿತ್ರಗಳು ಅದು ಕನ್ನಡ ಚಲನಚಿತ್ರ ಅನನ್ಯ ಚಿತ್ರಗಳು ಎಲ್ಲೂ ಅಶ್ಲೀಲತೆಯಿಂದ ಕೂಡಿದ ಸಂಭಾಷಣೆ ಇಲ್ಲ,ಓವರ್ ಆಕ್ಟಿಂಗ್ ಇಲ್ಲವೇ ಇಲ್ಲ. ಸಾಹಸ ದೃಶ್ಯವಂತೂ ಕಡಿಮೆನೇ,ನೃತ್ಯವಂತು ಹೇಳಿಕೊಳ್ಳೋದಷ್ಟೇನಲ್ಲ ಅದು ತುಸು ಕಡಿಮೇನೆ.ಒಬ್ಬ ಸುಂದರನಾದ ಪುರುಷ ಈ ರೀತಿಯಾಗಿ ಸಹಜ ಹಾಸ್ಯಾಭಿನಯದಿಂದಲೂ ಜನಮನ ರಂಜಿಸಬಹುದು ಎಂದು ತೋರಿಸಿಕೊಟ್ಟವರು. ಹಾಸ್ಯರತ್ನ ರಾಮಕೃಷ್ಣ, ನಾರದ ವಿಜಯ, ಗೋಲ್ ಮಾಲ್ ರಾಧಾಕೃಷ್ಣ ಭಾಗ ಒಂದು ಭಾಗ ಎರಡು, ಹೆಂಡ್ತಿಗ್ಹೇಳ್ಬೇಡಿ, ಉಂಡು ಹೋದ ಕೊಂಡು ಹೋದ, ಗಣೇಶನ ಮದುವೆ, ಗೌರಿ ಗಣೇಶ, ಗಣೇಶ ಸುಬ್ರಮಣ್ಯ…ಇತ್ಯಾದಿ ಚಲನಚಿತ್ರಗಳನ್ನು ವೀಕ್ಷಿಸಿದಾಗ ಇವರ ನಟನೆಯ ಇನ್ನೊಂದು ಮುಖದ ಅನಾವರಣಗೊಂಡಿದೆ.

ಕನ್ನಡ ಚಲನಚಿತ್ರರಂಗದಲ್ಲಿ ಡಾ.ರಾಜಕುಮಾರ್ ಮತ್ತು ಬಿ.ಸರೋಜಾದೇವಿಯವರ ಬಳಿಕ ತೃತೀಯರಾಗಿ ಸೂಕ್ತ ಸಮಯಕ್ಕೆ ಭಾರತ ಸರ್ಕಾರ ಕೊಡ ಮಾಡುವ ಮೂರನೇಯ ಅತ್ಯುನ್ನತ ಗೌರವವಾದ ಪದ್ಮಭೂಷಣ ದೊರೆತಿದ್ದು ಕನ್ನಡ ನಾಡು ಹೆಮ್ಮೆಪಡುವ ಅದರಲ್ಲಿಯು ಬಹುಮುಖ್ಯವಾಗಿ ನಮ್ಮ ಅಖಂಡ ಉತ್ತರಕನ್ನಡ ಜಿಲ್ಲೆ ಖುಷಿಪಡುವಂತಹ ಗರ್ವಪಡುವಂತಹ ಸುವಿಚಾರವಾಗಿದೆ.ಇದು ನಮ್ಮ ಉತ್ತರ ಕನ್ನಡ ಜಿಲ್ಲೆಗೆ ದೊರೆತ ಎರಡನೇ ಪದ್ಮಭೂಷಣ.ಇ ವತ್ತಿನ ದಿವಸಕ್ಕು ಸಹ ತಮ್ಮ ಹುಟ್ಟೂರಿಗೆ ನಿಕಟ ಸಂಪರ್ಕವನ್ನು ಇಟ್ಟಿಕೊಂಡಿರುವ ವ್ಯಕ್ತಿ, ಎಲ್ಲಿ ಹೋದರು ತಮ್ಮತನವನ್ನು ಬಿಟ್ಟು ಕೊಡದಿರುವ ಅನಂತ ನಾಗ್ ಅವರ ಬಗ್ಗೆ ಹೇಳಬೇಕಿಲ್ಲ ಬರೆಯಬೇಕಿಲ್ಲ ಎಲ್ಲಾನು ಜನರಿಗೆ ಗೊತ್ತು..ಕಳೆದ ಐದು ದಶಕಗಳಿಂದ ಅವರನ್ನ ಪ್ರೀತಿಸಿ ಬೆಳೆಸಿದ್ದಾರೆ.
ಜಿ.ವಿ.ಅಯ್ಯರ್ ನಿರ್ದೇಶನದ ಹಂಸಗೀತೆ ಚಿತ್ರವನ್ನು ವೀಕ್ಷಿಸಿದ ಕೆಲವರು ಹೇಳೋದಿಷ್ಟೇ ಅವರಿಗೆ ಎಂದೋ ಪದ್ಮಶ್ರೀ ಪ್ರಶಸ್ತಿ ಬರಬೇಕಿತ್ತು ಅವರಿಗೆ ಎಂದೋ ಡಾಕ್ಟರೇಟ್ ಬರಬೇಕಿತ್ತು.. ಅವರು ಮನಸ್ಸು ಮಾಡಿದ್ರೆ ಯಾವ ರೀತಿಯಾಗಿಯೂ ತಮ್ಮ ಹೆಸರನ್ನು ಬಳಸಿಕೊಂಡು ಪ್ರಶಸ್ತಿ ಸರಮಾಲೆಯನ್ನೇ ಮುಡಿಗೇರಿಸಿಕೊಳ್ಳಬಹುದಿತ್ತು ಆದರೆ ಅವರು ಎಂದೆಂದಿಗೂ ಪ್ರಶಸ್ತಿಯನ್ನು ಅರಸಿ ಹೋದವರಲ್ಲ. ಬದಲಿಗೆ ಪ್ರಶಸ್ತಿಗಳೇ ಇವರ ಮನೆ ವಿಳಾಸ ಅರಸಿ ಬಂದಿದೆ. ಕೊನೆಗೆ ಎಲ್ಲ ಕಲಾಭಿಮಾನಿಗಳ ಆಸೆ ನೆರವೇರಿದೆ. ಖ್ಯಾತ ನಟ ಅನಂತನಾಗ್ ಅವರಿಗೆ ಆತ್ಮೀಯ ಶುಭಾಶಯಗಳು.
- ನಿತಿನ್ ಅಂಕೋಲಾ
