ಪದುಮ ಪುರುಷ : ಹೆಚ್.ಆರ್.ಸುಜಾತ

ಲೇಖಕಿ ಹೆಚ್.ಆರ್.ಸುಜಾತ ಅವರ ಪದುಮ ಪುರುಷ ಪುಸ್ತಕದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಪದುಮಪುರುಷ
ಲೇಖಕರು : ಹೆಚ್.ಆರ್.ಸುಜಾತ
ಪ್ರಕಾಶನ : ಕೌದಿ ಪ್ರಕಾಶ
ಬೆಲೆ : 140.00
ಪುಟ : 95

ಕಂಡಿದ್ದು, ಕೇಳಿದ್ದು, ಅಂತ:ಕರಣವನ್ನು ಮಿಡಿಸಿದ್ದು – ಕನಸಿದ್ದು ಈ ಎಲ್ಲ ಒಂದುಗೂಡಿ ಕಾವ್ಯಮಯ ರೂಪಕಗಳ ಮೂಲಕ ಮೈದಳೆದ ಕತೆಗಳ ಸಂಕಲನವೇ ಈ ಪದುಮ ಪುರುಷ. ಇದರಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗದಲ್ಲಿ ಬರುವ ಕತೆಗಳು ಕೆಳವರ್ಗದ ಗಂಡು ಹೆಣ್ಣಿನ ಸಂಕೀರ್ಣ ಸಂಬಂಧಗಳ ಅಭಿವ್ಯಕ್ತಿ. ಕಾಯಕ ಜೀವಿಗಳಾದ ಇವರ ಬದುಕು ಅನ್ಯಕ್ಕಾಗಿ ತುಡಿಯುತ್ತವೆ. ನೀತಿ ಅನೀತಿ ಎಂಬ ಸರಳ ಮಧ್ಯಮವರ್ಗದ ಎಲ್ಲೆಕಟ್ಟುಗಳನ್ನು ಮೀರುತ್ತವೆ. ಲೇಖಕಿ ಇಂತ‌ಹ ಸಂಬಂಧಗಳಿಗೆ ಕಿವಿಯಾಗಿ, ಕಣ್ಣಾಗುತ್ತಾರೆ. ಮಿಡಿಯುತ್ತಾರೆ. ಅಂತೆಯೇ ವಿಸ್ಮಯವೇ ಈ ಕತೆಗಳ ಸ್ಥಾಯಿ ಭಾವ. ( ಪದುಮ ಪುರುಷ) ಇಲ್ಲಿ ನೈತಿಕ ತೀರ್ಪುಗಳಿಲ್ಲ.ಏಕೆಂದರೆ ಇವು ‘ನೈಸರ್ಗಿಕ’ ಎಂಬ ಅನುಭೂತಿ ಇದೆ. ಒಂದು ರೀತಿಯಲ್ಲಿ ಮಾಸ್ತಿ ಅವರ ‘ವೆಂಕಟಿಗನ’ ಹೆಂಡತಿ ಪರಂಪರೆಗೆ ಇವನ್ನೂ ಸೇರಿಸಬಹುದು.

ಎರಡನೇ ಭಾಗದಲ್ಲಿ ಬರುವುದು. ಭಾಷಿಕ ಮಿತಿಯನ್ನು ಮೀರಿದ ಕತೆ . ಇಲ್ಲಿ ಬರುವ ಲಂಬಾಣಿ ಹೆಣ್ಣು ಮೂಕಿ .ಅವಳನ್ನು ಬಸಿರು ಮಾಡಿದವನು ಕೈಬಿಟ್ಟಾಗ , ಅವಳಿಗೆ ಆಶ್ರಯ ಕೊಟ್ಟವರು ಕೇರಳದವರು . ಅವನು ಕೊಟ್ಟ ಪದಕವನ್ನು ಅವಳ. ಮಗಳ ಮೂಲಕ ಕಾಪಾಡಿಕೊಳ್ಳುತ್ತಾಳೆ. ( ಪ್ರಾಣಪದಕ) ಮೂರನೆ ಭಾಗದಲ್ಲಿ ಬರುವ ಕಥೆಗಳನ್ನು ( ಮೂರು) ಸಮುಚ್ಚಯ ಕತೆಗಳು ಅಥವಾ ಒಂದೇ ಕತೆಯ ವಿಸ್ತರಣೆ ಎಂದು ಕೂಡ ಕರೆಯಬಹುದು.ಏಕೆಂದರೆ ಮೂರು ಕತೆಗಳಲ್ಲಿ ಬರುವ ಪಾತ್ರಗಳು ಅವವೇ.ಬೇರೆ ಬೇರೆ ಸ್ತರಗಳಲ್ಲಿ ಇವು ಮಾಗುತ್ತಾ ಸಾಗುತ್ತವೆ. ಆದ್ದರಿಂದ ಇವು ಸಾವಯವ ಸಮಗ್ರೀಕರಣದ ವಿಕಾಸದ ಪಕ್ವತೆಯ ಕಡೆಗೆ ಸಾಗುವ ಕತೆಗಳು. ಒಂದನ್ನು ಬಿಟ್ಟು ಇನ್ನೊಂದು ಅಪೂರ್ಣ.ಆದ್ದರಿಂದ ಇವನ್ನು ಒಟ್ಟಿಗೆ ಓದಬೇಕು.(ಬಿಡಿ ಇಡಿ ಕತೆಗಳು).

ನಾಲ್ಕನೇ ಭಾಗದ ಕತೆ ಅಂತರ ಧರ್ಮೀಯ ವಿವಾಹದ ವಸ್ತುವನ್ನಾಗಿ ಹೊಂದಿದೆ . ಹದಿಹರೆಯದ ಮು‌ಸ್ಲಿಂ ಹುಡುಗಿಯೊಬ್ಬಳು, ಅವನದು ಇದು ಎರಡನೇ ವಿವಾಹ ಎಂದು ಗೊತ್ತಿಲ್ಲದೆ ಮೋಸಹೋಗಿ ಮದುವೆಯಾಗಿ ,ಅವನಿಂದ ಬಸಿರಾಗಿ ಮಗುವನ್ನು ಹೆರುತ್ತಾಳೆ.ಅವನ ಮೋಸದ ಅರಿವಾದಾಗ ಮರಳಿ ತನ್ನ ಧರ್ಮಕ್ಕೆ ಹೋಗುತ್ತಾಳೆ. ಮಗುವನ್ನು ಅವನು ಎತ್ತಿಕೊಂಡು ಹೋದರು ಬಿಡದೆ ಅವನಿಂದ ಕಿತ್ತು ಕೊಂಡು ,ಕಳೆದುಕೊಂಡ ತನ್ನ ಅಸ್ಮಿತೆಯನ್ನು ಮರಳಿ ಪಡೆಯುತ್ತಾಳೆ. ಈ ಕತೆ ಮುಖ್ಯ.ಏಕೆಂದರೆ ಸುಲಭವಾಗಿ, ಕೋಮು ಗಲಭೆಗೆ ಕಾರಣವಾಗಬಹುದಾದ ಇದನ್ನು , ಹೆಣ್ಣಿನ ಅಸ್ಮಿತೆಯ ಅಭಿವ್ಯಕ್ತಿಯ ಕತೆಯನ್ನಾಗಿಸುವ ಮೂಲಕ ಲೇಖಕಿ ಸಂಯಮ ಮೆರೆದಿದ್ದಾರೆ.( ಸಮೀನಾಳ ಪ್ರತಿಜ್ಞೆ)

ಕೊನೆಯ ಕತೆ ,ವಾಸ್ತವವಾದಿ ನೆಲೆಯಿಂದ ಪುರಾಣಕ್ಕೆ ಜಿಗಿಯುವ, ಇದು ಪಂಪಭಾರತದಲ್ಲಿನ ಕರ್ಣ ಭಾನುಮತಿ ಅವರ ನಡುವಿನ ಆತ್ಮೀಯತೆಗೆ, ಒಲವಿನ ಎಳೆಯನ್ನು ಸೇರಿಸಲಾಗಿದೆ. ಆ ಮೂಲಕ ಭೂತ ವರ್ತಮಾನವನ್ನು ಬೆಸೆದು ಒಲವು ಕಾಲಾತೀತ ಎಂದು ಲೇಖಕಿಯು ತಮ್ಮ ನಂಬಿಕೆಯನ್ನು ದೃಢಪಡಿಸಿದ್ದಾರೆ.

ಮೇಲಿನ ಕತೆಗಳನ್ನು ಓದಿದಾಗ ನನಗೆ ನೆನಪಾಗಿದ್ದು’ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಎನ್ನುವ ಜಾನಪದ ಕಾವ್ಯ. .ಅದರಲ್ಲಿ ಅನ್ಯಕ್ಕಾಗಿ ತುಡಿಯುವುದು ಒಂದು ಜೈವಿಕ, ನೈಸರ್ಗಿಕ ಕ್ರಿಯೆ ಎಂಬ ಗ್ರಹೀತವಿದೆ.

ಲೇಖಕಿ ಪ್ರತಿ ಕತೆಯಲ್ಲಿ ಕೊಡುವ ನಿಸರ್ಗದ ರೂಪಕಗಳು ಅವರ ಕಥಾ ವಸ್ತುವಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಒಲವಿಗೆ ಭಾಷೆ, ಮತ, ಸೀಮೆ, ನೀತಿ ಅನೀತಿಗಳ ಹಂಗಿಲ್ಲ ಎಂದು, ಈ ಸಂಕೀರ್ಣ ಸಂಬಂಧಗಳ ಕಥನಗಳ ಮೂಲಕ ಸ್ಥಾಪಿಸಿರುವುದು, ಈ ಕಥಾಸಂಕಲನದ ಲೇಖಕಿಯ ವಿಶಿಷ್ಟ ಸಾಧನೆ.ಇಂತಹ ಅಪೂರ್ವ ಕತೆಗಳನ್ನು ಕೊಟ್ಟು ನನ್ನಿಂದ ಓದಿಸಿದ ಲೇಖಕಿಗೆ ಋಣಿ.ಅಭಿನಂದನೆ. ಕೆಲವು ಅಕ್ಷರ ಸ್ಖಾಲಿತ್ಯಗಳನ್ನು ಸರಿಪಡಿಸಬಹುದಿತ್ತು.


  • ರಘುನಾಥ್ ಕೃಷ್ಣಮಾಚಾರ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW