ಆ ಪಾಳುಬಿದ್ದ ಮನೆಯ ಮುಂದೆ ಏನನ್ನೋ ನೋಡಿ ರಾಮ ಹೆದರಿ ಓಡಿಬರುವಾಗ ಎಡವಿಬಿದ್ದು ಮುಖ, ಕೈಕಾಲು ತರಚಿಕೊಂಡು ಜ್ವರಬಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ ಎಂದು ಹೇಳಿದ. ಯಾರು ರಾಮ? ಅವನಿಗೇನಾಯಿತು? ಅನಾಮಿಕ ಅನಾಮಿಕ ಹೆಸರಿನಲ್ಲಿ ಅನಾಮಿಕನ ಕತೆಯಿದು, ತಪ್ಪದೆ ಮುಂದೆ ಓದಿ…
ಊರಿನಾಚೆಯ ಪಾಳುಬಿದ್ದ ಮನೆಯೊಂದರ ಅರೆತೆರೆದ ಬಾಗಿಲಿನ ಒಳಗಿಂದ ಹಾಗಾಗ ಸುಮಾರು 12 ಗಂಟೆಯ ಹೊತ್ತಿನಲ್ಲಿ ಬೆಳಕು ಕಾಣಿಸಿಕೊಂಡು ಯಾವುದೋ ಅಳುವ ಹೆಂಗಸಿನ ಧ್ವನಿ ಕೇಳಿಸುತ್ತದೆಂದು ಊರೆಲ್ಲಾ ಪುಕಾರು ಎದ್ದು ರಾತ್ರಿ ಸಮಯದಲ್ಲಿ ಆ ಕಡೆ ಹೋಗುವುದಿರಲಿ ಅತ್ತ ಮುಖಮಾಡಿ ಮಲಗುವುದಕ್ಕೂ ಜನ ಹೆದರುತ್ತಿದ್ದರು. ಈ ವಿಚಾರ ನನ್ನ ಕಿವಿಗೆ ಬಿದ್ದಾಗ ನಾನು ಅದನ್ನು ಹೇಳಿದವರ ಮುಖವನ್ನು ನೋಡಿ ಜೋರಾಗಿ ನಕ್ಕೆ. ಇಪ್ಪತ್ತೊಂದನೇ ಶತಮಾನದಲ್ಲಿರುವ ಈ ಜನರ ಮೌಢ್ಯತೆ, ಅಂಜಿಕೆಗಳನ್ನು ಕಂಡು ನಾನು ಬೇರೇನು ಮಾತನಾಡಲು ಮನಸ್ಸು ಮಾಡಲಿಲ್ಲ. ಯಾಕಂದರೆ ಮಾತನಾಡಿದರೆ ಅದು ಉರುಳಿಲ್ಲದ ವಾದಕ್ಕೆ ಕಾರಣವಾಗುತ್ತಿತ್ತು.
ಇದೆಲ್ಲಾ ಜನರ ಭಯ-ಭಕ್ತಿಯನ್ನು ಅವರ ಬಲಹೀನತೆಯಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ಕುತಂತ್ರವೆಂದು ನನಗೆ ಚೆನ್ನಾಗಿ ತಿಳಿದಿತ್ತು. ನನಗೆ ದೇವರ ಮೇಲಿದ್ದ ಕೋಪವೋ, ದೆವ್ವಗಳ ಬಗ್ಗೆ ಇದ್ದ ಮೂಢನಂಬಿಕೆಗಳ ತಾತ್ಸಾರದ ಭಾವನೆಯೋ ನನ್ನನ್ನು ಈ ದೇವರು-ದೆವ್ವಗಳೆಂಬ ವಿಚಾರದಲ್ಲಿ ತೀರಾ ಅಸಡ್ಡೆಯಾಗಿ ಮಾಡಿತ್ತು. ಹೀಗಾಗಿಯೇ ನಾನು ಜನರ ಈ ತೆರನಾದ ಮಾತುಗಳಿಗೆ ಕಿವಿಗೊಡುತ್ತಿರಲಿಲ್ಲ.
ಒಂದು ದಿನ ಟೀ ಅಂಗಡಿಯಲ್ಲಿ ಕುಳಿತಿದ್ದ ನನಗೆ ಅವಸರ ಅವಸರವಾಗಿ ಆಸ್ಪತ್ರೆಯ ಕಡೆಗೆ ಜೋರಾಗಿ ಹೆಜ್ಜೆಯಿಡುತ್ತಿದ್ದ ನನ್ನ ಸ್ನೇಹಿತ ಕಣ್ಣಿಗೆ ಬಿದ್ದ. ಆತನನ್ನು ವಿಚಾರಿಸಿದಾಗ ಆತನ ಹೆಂಡತಿಯ ತಮ್ಮ ರಾಮ ಆ ಪಾಳುಬಿದ್ದ ಮನೆಯ ಮುಂದೆ ಏನನ್ನೋ ನೋಡಿ ಹೆದರಿ ಓಡಿಬರುವಾಗ ಎಡವಿಬಿದ್ದು ಮುಖ, ಕೈಕಾಲು ತರಚಿಕೊಂಡು ಜ್ವರಬಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ ಎಂದು ಹೇಳಿದ. ನಾನೂ ಆತನೊಟ್ಟಿಗೆ ಆಸ್ಪತ್ರೆಯ ಕಡೆಗೆ ಹೊರಟೆ. ಮುಖ, ಕೈಕಾಲಿಗೆ ಬ್ಯಾಂಡೇಜ್ ಹಾಕಿಸಿಕೊಂಡು ನಡುಗುತ್ತಾ ಆಸ್ಪತ್ರೆಯ ಮೂಲೆಯೊಂದರ ಬೆಡ್ ನಲ್ಲಿ ರಾಮ ಮಲಗಿದ್ದ. ನಮ್ಮನ್ನು ನೋಡಿ ಆತನಿಗೆ ಸ್ವಲ್ಪ ಬಲಬಂದಂತಾಗಿ ಮೇಲೆದ್ದು ಕುಳಿತ. ಮುದುಡಿಕೊಂಡಿದ್ದ ಆತನ ಕೈಕಾಲು, ರಾತ್ರಿಯಲ್ಲಿ ಹೆದರಿ ಬೆಚ್ಚಿ ಬೆರಗಾಗಿ ಕಂಗಾಲಾಗಿದ್ದ ಆತನ ಮುಖ ಈಗಲೂ ಹಾಗೆಯೇ ಗೋಚರವಾಗುತ್ತಿತ್ತು.
ನಾನು ಆತನ ಪಕ್ಕದಲ್ಲೇ ಬೆಡ್ ಮೇಲೆ ಕುಳಿತು ಆತನ ಹೆಗಲ ಮೇಲೆ ಕೈ ಹಾಕಿ ನಿನ್ನೆಯ ರಾತ್ರಿ ನಡೆದ ವಿಷಯದ ಬಗ್ಗೆ ವಿಚಾರಿಸಿದೆ. ಎಂದಿನಂತೆ ಕೆಲಸಕ್ಕೆ ಹೋಗಿದ್ದ ಆತ ಬರುವಾಗ ಸ್ನೇಹಿತರೊಡನೆ ತಡರಾತ್ರಿಯ ವರೆಗೆ ಕುಡಿದು ಊರಿನ ಕಡೆ ಹೊರಟಿದ್ದಾನೆ. ಊರು ಸಮೀಪವಾಗುತ್ತಿದ್ದಂತೆ ಆ ಪಾಳು ಮನೆಯ ಮುಂದೆ ಇರುವ ಮರದ ಕೆಳಗೆ ಯಾರೋ ಹೆಂಗಸು ಕುಳಿತಿರುವುದನ್ನು ನೋಡಿ ಕುಡಿದ ಮತ್ತಿನಲ್ಲಿದ್ದ ಆತ ಬೈಕ್ ನಿಲ್ಲಿಸಿ ಅತ್ತ ಹೋಗುತ್ತಿದ್ದಂತೆ ಆ ಆಕೃತಿ ಮಾಯವಾಗಿದೆ, ಮರದ ಸುತ್ತಾ ನೋಡಿ ಹಿಂದೆ ತಿರುಗುತ್ತಿದ್ದಂತೆ ತಕ್ಷಣ ಆತನ ಮುಖದ ಮುಂದೆಯೇ ವಿಚಿತ್ರಾಕೃತಿಯ ವಿಕಾರ ಮೋಹಿನಿಯ ಮುಖ ಗೋಚರವಾಗಿ ಆತ ಜೋರಾಗಿ ಚೀರುತ್ತಾ ಊರಿನ ಕಡೆ ಓಡಿದ್ದಾನೆ. ಓಡುವ ರಭಸಕ್ಕೆ ಎಡವಿಬಿದ್ದು ಕೈಕಾಲುಗಳಲ್ಲಿ ರಕ್ತ ಸೋರುತ್ತಾ ನಡುಗುತ್ತಾ ತನ್ನ ಮನೆ ಸೇರಿದ್ದಾನೆ. ಇದನ್ನು ಕೇಳಿದ ನಾನು ಆತನ ಮುಂದೆ ನಕ್ಕು ನೀನು ಕುಡಿದ ಮತ್ತಿನಲ್ಲಿ ಏನನ್ನೋ ನೋಡಿ ಹೆದರಿದ್ದೀಯ, ಅಲ್ಲಿ ಆ ರೀತಿಯಾಗಿ ಏನೂ ಇಲ್ಲ. ಜನರು ಆ ಮನೆಯ ಬಗ್ಗೆ ಹಬ್ಬಿಸಿರುವ ಭಯ ನಿನ್ನಲ್ಲಿ ಮೊದಲಿಂದಲೂ ಇದ್ದುರಿಂದಲೇ ನಿನಗೆ ಕುಡಿದ ಮತ್ತಿನಲ್ಲಿ ಹೀಗೆಲ್ಲಾ ಅನ್ನಿಸಿದೆ ಎಂದು ಹೇಳಿ ಆತನಿಗೆ ಸಮಾಧಾನ ಮಾಡಿ ಅಲ್ಲಿಂದ ಹೊರಟೆ.

ಫೋಟೋ ಕೃಪೆ : ಅಂತರ್ಜಾಲ
ಇದನ್ನೆಲ್ಲಾ ಗಮನಿಸಿದ ನಾನು ಜನರ ಊಹಾಪೋಹಗಳು, ರಾಮ ನೋಡಿದ ಮೋಹಿನಿಯ ಆಕೃತಿ ಎಲ್ಲವೂ ನಿಶ್ಚಯವಾಗಿ ಯಾರೋ ಸೃಷ್ಟಿಸಿದ ಭಯದ ಫಲಗಳೇ ಎಂದು ಯೋಚಿಸುತ್ತಾ ಅದನ್ನು ಜನರಿಗೂ ಧೃಡಪಡಿಸಲು ತೀರ್ಮಾನಿಸಿಕೊಂಡು ಇಂದೇ ತಡರಾತ್ರಿ ಆ ಮನೆಯನ್ನು ಯಾರಿಗೂ ತಿಳಿಯದಂತೆ ಮರೆಯಲ್ಲಿ ಅವಿತು ಕುಳಿತು ಗಮನಿಸಲು ನಿರ್ಧರಿಸಿಕೊಂಡೆ. ರಾತ್ರಿ ಊಟ ಮಾಡಿ ಕೈಯಲ್ಲೊಂದು ಟಾರ್ಚ್ ಹಿಡಿದು ಯಾರಿಗೂ ತಿಳಿಯದಂತೆ ಆ ಪಾಳುಬಿದ್ದ ಮನೆಯ ಬಾಗಿಲು ನಾನು ಟಾರ್ಚ್ ಹತ್ತಿಸಿದ ಕೂಡಲೇ ಸ್ಪಷ್ಟವಾಗಿ ಕಾಣಿಸುವಂತೆ ಸ್ವಲ್ಪ ದೂರದ ಗಿಡದ ಪೊದೆಯೊಂದರಲ್ಲಿ ಅಡಗಿ ಕುಳಿತೆ.
ಗಂಟೆ ಹನ್ನೆರಡಾಗುತ್ತಾ ಬಂತು. ಸಮಯ ಕಳೆದಂತೆ ಭಯವಿಲ್ಲದಿದ್ದರೂ ದೆವ್ವಗಳ ಬಗೆಗಿನ ಆಲೋಚನೆಗಳು, ಯಾರಾರಿಂದಲೋ ಕಿವಿಗೆ ಬಿದ್ದಿದ್ದ ಘಟನೆಗಳು ನೆನಪಿಗೆ ಬರತೊಡಗಿ ಮುಖ ಸ್ವಲ್ಪ ಬೆವರಿತು. ಈ ದೆವ್ವಗಳ ವಿಚಾರವಾಗಿ ನಾನು ಇತರರೊಡನೆ ವಾದ ಮಾಡುವಾಗ ವೃದ್ಧರೊಬ್ಬರು ನಿನಗೆ ವೈಯಕ್ತಿಕವಾಗಿ ಅನುಭವ ಆಗುವಾಗ ನಿನ್ನ ಸದ್ದೆಲ್ಲಾ ಅಡಗಿ ಅಸಹಾಯಕನಾಗಿ ಹೆದರಿ ಕೂಗಿಕೊಳ್ಳೋ ಪರಿಸ್ಥಿತಿ ಬರುತ್ತೆ, ಅವಾಗ ಮಾತ್ರ ನಿನಗೆ ಅರ್ಥ ಆಗುತ್ತೆ ಎಂದು ಸಿಟ್ಟಿನಲ್ಲಿ ನನ್ನನ್ನು ಬೈದಿದ್ದು ನೆನಪಿಗೆ ಬಂದು ಮೈರೋಮಗಳು ಎದ್ದುನಿಂತವು. ಒಂದು ವೇಳೆ ದೆವ್ವಗಳ ಇರುವಿಕೆ ದೃಢವಾಗಿ, ಕಾಯುತ್ತಾ ಕುಳಿತಿರುವ ಈ ಸಂದರ್ಭದಲ್ಲಿ ಬಂದೊದಗಬಹುದಾದಂತ ಸಮಸ್ಯೆಗಳು, ಅದರಿಂದ ಎದುರಿಸಬೇಕಾದ ಪರಿಣಾಮಗಳು, ದೆವ್ವಗಳನ್ನೇ ನಂಬದವನು ಈಗ ಕಣ್ಣಾರೆ ನೋಡಿ ವೈಯಕ್ತಿಕವಾಗಿ ಅನುಭವಿಸಿ ಜನರ ಭಯವೆಂಬ ತೆಕ್ಕೆಗೆ ನಾನೂ ಸಿಕ್ಕಿಹಾಕಿಕೊಳ್ಳುವ ಸ್ಥಿತಿಯನ್ನು ನೆನೆಸಿಕೊಂಡು ಮನಸ್ಸಿನಲ್ಲಿ ಬೇಸರ ಆವರಿಸಿತು.
ಆಗಾಗ ಕಿವಿಗೆ ಬೀಳುತ್ತಿದ್ದ ನಾಯಿಗಳು ಬೊಗಳುವ, ಗೋಳಿಡುವ ಶಬ್ದ, ಅಲ್ಲಲ್ಲಿ ಮರಗಳಿಂದ ಬೀಳುತ್ತಿದ್ದ ಎಲೆಗಳ ಸದ್ದು, ಪರಪರನೆ ತರಗೆಲೆಗಳನ್ನ ಸದ್ದು ಮಾಡಿಕೊಂಡು ಓಡಾಡುತ್ತಿದ್ದ ಇಲಿಗಳ ಶಬ್ದಕ್ಕೆ ಆಗಾಗ ಸ್ವಲ್ಪ ಬೆಚ್ಚಿದವನಂತೆ ಸುತ್ತಮುತ್ತ ಕಣ್ಣಾಡಿಸುತ್ತ ಆ ಮನೆಯ ಕಡೆಯೇ ದೃಷ್ಟಿಯಿಟ್ಟು ಕಾಯುತ್ತಾ ಕುಳಿತೆ. ಮನೆಯ ಒಳಗಿಂದ ಯಾವುದೇ ಶಬ್ದವಿಲ್ಲ, ಹೊರಗೂ ಯಾರ ಸುಳಿವಿಲ್ಲ. ಗಂಟೆ ಎರಡಾಯಿತು, ಮೂರುಗಂಟೆಯ ಸುಮಾರಿನವರೆಗೂ ಒಂದೇ ಭಂಗಿಯಲ್ಲಿ ಸದ್ದು ಮಾಡದೆ ಕುಳಿತು ಜೋಮು ಹಿಡಿದ ಕಾಲುಗಳನ್ನು ಆಗಾಗ ಬದಲಿಸುತ್ತಾ ಸಮಯ ಕಳೆದೆ. ಇನ್ನು ಕಾಯುವುದು ವ್ಯರ್ಥವೆಂದು ತಿಳಿದು ಎದ್ದು ಜೋಮು ಹಿಡಿದ ಕಾಲುಗಳನ್ನು ಎಳೆದುಕೊಂಡು ಅಲ್ಲಿಂದ ಮನೆಕಡೆ ಹೊರಟೆ.
ಕೆಲವು ದಿನಗಳವರೆಗೂ ಇದೇ ವಿಚಾರದಲ್ಲಿ ಯೋಚನೆಯಲ್ಲಿದ್ದ ನನಗೆ ಯಾರಿಗೂ ಕಾಣದಂತೆ ಕೇವಲ ದೂರದಲ್ಲಿ ಕುಳಿತು ಗಮನಿಸಿ ಅಲ್ಲಿ ದೆವ್ವದ ಇರುವಿಕೆ ಸುಳ್ಳು ಎಂದು ಇತರರೊಡನೆ ವಾದಿಸುವುದು ತಪ್ಪೆಂದು ತೋಚಿತು. ಆಗಿದ್ದು ಆಗಿಯೇ ಹೋಗಲಿ ಆ ಮನೆಯ ಒಳಗೆ ಪ್ರವೇಶಿಸಿ ಅಲ್ಲಿ ದೆವ್ವವಾಗಲೀ ಅದರ ಕಾಟವಾಗಲೀ ಇಲ್ಲವೆಂದೂ, ಇದು ಭಯಪಡಿಸುವವರ ಕುತಂತ್ರವೆಂದು ಸಾಭೀತುಪಡಿಸಿ ಊರಿನ ಜನರನ್ನು ಈ ಭಯದ ವಿಚಾರದಿಂದ ಹೊರತರಬೇಕೆಂದು ತೀರ್ಮಾನಿಸಿಕೊಂಡೆ. ಮತ್ತೆ ಇನ್ನೊಂದು ಸಾಹಸಕ್ಕೆ ಕೈ ಹಾಕಿದೆ.
ಈ ರಾತ್ರಿ ಮತ್ತೆ ನಿರ್ಧಾರ ಮಾಡಿಕೊಂಡೆ.
ಈ ಸಲ ಮರೆಯಲ್ಲಿ ಕುಳಿತು ನೋಡದೆ ಆ ಮನೆಯೊಳಗೆ ನುಗ್ಗುವುದಕ್ಕೆ ತೀರ್ಮಾನಿಸಿಕೊಂಡೆ. ಗಂಟೆ ಹನ್ನೆರಡು ದಾಟಿತು. ಊರು ಸಂಪೂರ್ಣ ನಿದ್ದೆಗೆ ಜಾರಿತ್ತು. ನಾಯಿಗಳೂ ಕೂಡ ಅಸಾಮಾನ್ಯವಾಗಿ ಮೌನವಾಗಿದ್ದವು. ಅದು ಇನ್ನಷ್ಟು ಅಸ್ವಸ್ಥತೆಯನ್ನುಂಟುಮಾಡುವ ಮೌನ. ಟಾರ್ಚ್ ಕೈಯಲ್ಲಿ ಹಿಡಿದು ನಿಧಾನವಾಗಿ ಮನೆಯ ಹತ್ತಿರ ಬಂದೆ. ಬಾಗಿಲು ಅರೆತೆರೆದೇ ಇತ್ತು. ಗಾಳಿಗೆ ಅದು ಸದ್ದು ಮಾಡುತ್ತಾ ಮುಚ್ಚಿ-ತೆರೆಯುತ್ತಿದ್ದುದನ್ನು ನೋಡಿ “ಇದೇ ಜನರ ಭಯದ ಮೂಲ” ಎಂದುಕೊಂಡೆ. ಒಳಗೆ ಕಾಲಿಟ್ಟ ಕ್ಷಣಕ್ಕೆ ತಣ್ಣನೆಯ ಗಾಳಿ ಮುಖಕ್ಕೆ ಬಡಿದಂತಾಯಿತು. ಅದು ಗಾಳಿಯೋ ಅಥವಾ ನನ್ನ ಕಲ್ಪನೆಯೋ ತಿಳಿಯಲಿಲ್ಲ.
ನೆಲದ ಮೇಲೆ ಹಳೆಯ ಕಾಲಿನ ಗುರುತುಗಳು. ಅವು ಇತ್ತೀಚಿನಂತೆಯೇ ಕಂಡವು. ಅಲ್ಲೇ ನನ್ನ ತರ್ಕ ಮೊದಲ ಬಾರಿಗೆ ಕುಸಿಯತೊಡಗಿತು. ಟಾರ್ಚ್ ಬೆಳಕಿನಲ್ಲಿ ಗೋಡೆಯನ್ನೆಲ್ಲಾ ಪರಿಶೀಲಿಸುತ್ತಾ ಒಳಗೆ ಹೋದಾಗ, ಒಳಗಿನ ಕೋಣೆಯೊಂದರಲ್ಲಿ ಹಳೆಯ ಕನ್ನಡಿ ನೇತುಕೊಂಡಿತ್ತು. ಒಡೆದುಹೋಗಿದ್ದರೂ ಮಧ್ಯಭಾಗ ಮಾತ್ರ ಅಚ್ಚುಕಟ್ಟಾಗಿತ್ತು. ಅನಾಯಾಸವಾಗಿ ಅದರಲ್ಲಿ ನನ್ನ ಮುಖ ಮೂಡಿತು. ಆ ಕ್ಷಣ ನನ್ನ ಮುಖದ ಹಿಂದೆ, ನನ್ನದೇ ಅಲ್ಲದ ಮತ್ತೊಂದು ಆಕೃತಿ ಕ್ಷಣಮಾತ್ರಕ್ಕೆ ಆ ಕನ್ನಡಿಯಲ್ಲಿ ಮಿಂಚಿನಂತೆ ಗೋಚರಿಸಿ ಮಾಯವಾಯಿತು.
ಹೃದಯ ತಟ್ಟನೆ ನಿಂತಂತೆ ಆಯ್ತು.
ಟಾರ್ಚ್ ಕೈಯಿಂದ ಜಾರಿ ನೆಲಕ್ಕೆ ಬಿತ್ತು. ಮತ್ತೆ ತಕ್ಷಣ ಎತ್ತಿಕೊಂಡು ಹಿಂದೆ ತಿರುಗಿ ನೋಡಿದೆ ಯಾರೂ ಇಲ್ಲ. ಆ ಕ್ಷಣ ನನಗೆ ಮೊದಲ ಬಾರಿಗೆ ಸ್ಪಷ್ಟವಾಗಿ ಅನ್ನಿಸಿತು:
“ಭಯ ಯಾವಾಗಲೂ ಸುಳ್ಳಿನಿಂದ ಹುಟ್ಟೋದಿಲ್ಲ. ಕೆಲವೊಮ್ಮೆ ಅದು ನಮಗೆ ಇನ್ನೂ ಅರ್ಥವಾಗದ ಸತ್ಯದಿಂದ ಹುಟ್ಟಿರುತ್ತೆ.” ಆ ಮನೆಯೊಳಗೆ ನಿಂತುಬಿಟ್ಟಿದ್ದ ನನಗೆ ಕಾಲವೇ ನಿಂತಂತಾಯಿತು. ಹೊರಗಿನಿಂದ ಊರಿನ ದೀಪಗಳ ಮಂಕಾದ ಬೆಳಕು ಕಿಟಕಿಯ ಬಿರುಕುಗಳೊಳಗೆ ನುಗ್ಗಿ ಗೋಡೆಯ ಮೇಲೆ ಅಸಹಜ ಆಕಾರಗಳನ್ನ ಮೂಡಿಸುತ್ತಿತ್ತು
ನನ್ನ ಹಿಂದೆ ನೆಲದ ಮೇಲೆ ಹೊಸ ಕಾಲಿನ ಗುರುತುಗಳು. ಅವು ನನ್ನ ಕಡೆಗೆ ಬಂದಿದ್ದವು.
ಆ ಕ್ಷಣ ನನಗೆ ಸ್ಪಷ್ಟವಾಗಿ ಅರ್ಥವಾಯಿತು: ಇಷ್ಟು ದಿನ ನಾನು ನಗುತ್ತಿದ್ದದ್ದು ಜನರ ಭಯದ ಮೇಲೆ ಅಲ್ಲ ನನಗೆ ಅರ್ಥವಾಗದ ಅಜ್ಞಾತದ ಮೇಲೆ. ಈ ಮನೆಯೊಳಗೆ ಏನೋ ಇದೆ.
ಅದು ದೆವ್ವವೇ ಆಗಿರಬಹುದು. ಅಥವಾ ಈ ಊರಿನ ಜನ ಮರೆಮಾಚಿಕೊಂಡಿರುವ ಯಾವುದೋ ಭಯಾನಕ ಸತ್ಯವಾಗಿರಬಹುದು. ಆದರೆ ಈಗ ಹಿಂದಿರುಗುವ ದಾರಿ ಅದು ಸುಲಭವಿರಲಿಲ್ಲ.
ಗೋಡೆಯಲ್ಲಿ ಅಲ್ಲಲ್ಲಿ ರಕ್ತದ ಕಲೆಗಳಿದ್ದವು, ಮೊದಲಿಗೆ ವದ್ದೆಯಾದ ನೆಲದ ಮಣ್ಣಿನ ಕಲೆ ಇರಬಹುದೆಂದು ಊಹಿಸಿದ ನನಗೆ ಹತ್ತಿರ ಹೋಗಿ ಟಾರ್ಚ್ ಹಿಡಿದು ನೋಡಿದಾಗಲೇ ಅದು ರಕ್ತದ ಕಲೆಗಳೆಂದು ಸ್ಪಷ್ಟವಾಯಿತು. ಹಾಗಾಗ ಯಾರೋ ಮನೆಯೆಲ್ಲಾ ಓಡಾಡಿದಂತೆ ಶಬ್ದವಾಗುತ್ತಿತ್ತು. ಮುಂದೆ ನಡೆದಂತೆಲ್ಲಾ ಆಗತಾನೇ ನನ್ನ ಮುಂದೆ ಯಾರೋ ನಡೆದುಹೋದಂತೆ ಆ ತೇವವಾದ ಮಣ್ಣಿನಲ್ಲಿ ಹೆಜ್ಜೆಗಳು ಮೂಡಿದ್ದವು. ರೂಮಿನ ಬಾಗಿಲೊಂದು ತಾನಾಗಿಯೇ ತೆರೆದುಕೊಂಡಿದ್ದನ್ನು ನೋಡಿ ಗಾಬರಿಯಿಂದಲೇ ಅದರೊಳಗೆ ಟಾರ್ಚ್ ಹಿಡಿದು ಪ್ರವೇಶಿಸಿದೆ. ನನ್ನ ಕಿವಿಯ ಹತ್ತಿರವೇ ಯಾರೋ ನಿಧಾನವಾಗಿ ಉಸಿರಾಡಿದಂತೆ ಅನುಭವವಾಯಿತು. ಮೆಲ್ಲಗೆ “ಇಲ್ಲಿಂದ ಹೋಗು” ಎಂಬ ಶಬ್ದ ಕೇಳಿಸಿತು.
ನಾನು ತಿರುಗಿ ನೋಡಿದೆ ಯಾರೂ ಇಲ್ಲ. ಟಾರ್ಚ್ ಬೆಳಕು ಕಂಪಿಸುತ್ತಿತ್ತು. ಕೈ ನಡುಗುತ್ತಿತ್ತು. ಒಮ್ಮೆಲೆ ಮನೆಯ ಒಳಗಿಂದ ಬಾಗಿಲು ಬಡಿದ ಶಬ್ದ. ಬೇರೆ ಕೊಠಡಿಯಿಂದ. ನಾನು ಅತ್ತ ತಿರುಗಿ ನೋಡುವಷ್ಟರಲ್ಲಿ ಮತ್ತೊಂದು ಕಡೆ ಏನೋ ನೆಲಕ್ಕೆ ಬಿದ್ದ ಶಬ್ದ.
ಎಲ್ಲಿ ನೋಡಬೇಕು, ಎಲ್ಲಿ ಹೋಗಬೇಕೆಂಬ ಗಾಬರಿ ಗೊಂದಲಗಳಿಂದ ಆ ರೂಮಿನಿಂದ ಹೊರಗೆ ಓಡಿದೆ. ಓಡಿದ ಬಿರುಸಿಗೆ ರೂಮಿನ ಬಾಗಿಲಿಗೆ ತಲೆಯು ತಾಗಿ ಗಾಯವಾಗಿ ರಕ್ತ ನನ್ನ ಶರ್ಟ್ ನ ಜೇಬಿನ ಮೇಲೆ ಹರಿಯಿತು, ಯಾವುದನ್ನೂ ಲೆಕ್ಕಿಸದೆ ಯಾರೋ ನನ್ನ ಮುಂದೆಯೇ ಓಡಿ ಬಾಗಿಲಿನತ್ತ ಹೋಗುತ್ತಿರುವಂತೆ ಭಾಸವಾಗಿ ಆ ಶಬ್ದವನ್ನೇ ಹಿಂಬಾಲಿಸುತ್ತ ಓಡಿದೆ. ಹೊರಗೆ ಬಾಗಿಲಿನ ಬಳಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಶಬ್ದ, ಚಲನವಲನಗಳೆಲ್ಲಾ ಮೌನವಾಗಿದ್ದವು. ತಲೆಯಲ್ಲಿನ ಪೆಟ್ಟು ನೆನಪಾಗಿ ಕೈಯಿಂದ ಮುಟ್ಟಿದಾಗ ಕೈಯಲ್ಲಾ ರಕ್ತವಾಗಿ ಬಾಗಿಲ ಬಳಿ ನಿಂತು ಕೈ ನೋಡುತ್ತಿದ್ದಂತೆಯೇ ನನ್ನ ಕಣ್ಣುಗಳು ಮಂಜಾಗತೊಡಗಿದವು. ತಲೆ ತಿರುಗಿದಂತಾಗಿ ಕೆಳಗೆ ಬೀಳುವವರೆಗೂ ಎಲ್ಲವನ್ನು ಗಮನಿಸುತ್ತಲೇ ಇದ್ದೆ. ನಂತರದ್ದು ಯಾವುದೂ ನನ್ನ ಅರಿವಿಗೆ ಬರಲಿಲ್ಲ.
ನಿದ್ರೆಯಿಂದ ಎಚ್ಚರವಾಗಿ ಈ ರೀತಿಯೂ ಕೆಟ್ಟ ಕನಸುಗಳು ಬೀಳಬಲ್ಲವು ಎಂದು ಮನಸ್ಸಿನಲ್ಲಿ ನೆನೆಸಿಕೊಂಡು ನಗುತ್ತಾ ಮಗ್ಗಲು ಬದಲಿಸಿ ದೇವರ ಫೋಟೋ ನೋಡುವ ಅಭ್ಯಾಸ ಇಲ್ಲದ್ದರಿಂದ ಬೇರೆಲ್ಲೋ ನೋಡುತ್ತಾ ಮೇಲೆ ಎದ್ದವನಿಗೆ ಯಾಕೋ ತಲೆಭಾರ ಎಂದೆನಿಸಿ ಕನ್ನಡಿಯ ಹತ್ತಿರ ಹೊರಟೆ. ಮುಖ ತುಂಬಾ ಆಯಾಸವಾದವನಂತೆ ಕಾಣಿಸಿತು, ತಲೆಯ ಮುಂಭಾಗದ ಎಡಗಡೆಯಲ್ಲಿ ರಕ್ತ ಹೆಪ್ಪುಗಟ್ಟಿದ ಗಾಯದ ಗುರುತಿತ್ತು, ಹಾಗೇ ಕನ್ನಡಿಯಲ್ಲಿಯೇ ದೃಷ್ಟಿಹಾಯಿಸಿದ ನನಗೆ ನನ್ನ ಶರ್ಟ್ ನ ಜೇಬಿನ ಮೇಲೆಲ್ಲಾ ರಕ್ತದ ಹನಿಗಳು ಒಣಗಿ ಬಿಗಿಯಾಗಿ ಬಟ್ಟೆಗೆ ಅಂಟಿಕೊಂಡಿದ್ದವು. ಕಾಲಿನಲ್ಲಿ ಒಣಗಿದ ಮಣ್ಣಿನ ಗುರುತುಗಳಿತ್ತು. ಎಲ್ಲವೂ ಕನಸಿನಂತೆಯೂ, ನಿಜವಾಗಿ ವೈಯಕ್ತಿಕವಾಗಿ ಅನುಭವಿಸಿದಂತೆಯೂ ಇತ್ತು. ಗೊಂದಲಕ್ಕೊಳಗಾಗಿ ಆ ವಿಚಾರವಾಗಿ ಯಾರೊಟ್ಟಿಗೂ ಮಾತನಾಡದೆ, ದೆವ್ವಭೂತಗಳ ಬಗ್ಗೆ ವಾದ ತರ್ಕಗಳನ್ನು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಗಮನಹರಿಸಿದೆ.
- ಅನಾಮಿಕ ಅನಾಮಿಕ