‘ಜೀವನ ನಿಂತನೀರಲ್ಲ ಹರಿದು ತಿಳಿಗಟ್ಟುವುದ್ಹೇಗೆ ಮಿಡಿದೆಯಲ್ಲಾ’…ಕವಿ ಪೀರಸಾಬ ನದಾಫ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕನಲಿಕೆ ನಮ್ಮ ಮಧ್ಯ ಇನ್ನೂ ಪ್ರೀತಿಯ ಹುಡುಕಾಟವಿದೆ
ಕತ್ತು ಕೊಂಕಿಸದೇ ಇಣುಕಿ ನೋಡುವ ಹಳೆಯ ಚಟವಿದೆ
ಮಾತು ಮುತ್ತಾದಾಗ ನನ್ನೊಳಗೆ ಇಲ್ಲವಾಗುವ ಪರಿಗೆ ಸೊಜಿಗ
ಮಾತಿಲ್ಲ ದಿಲ್ತುಂಬಾ ನಿನ್ನದೇ ಪ್ರತಿಬಿಂಬದ ಕಲೆಯ ಮಾಟವಿದೆ
ಚಿತೆಯ ಚಿಂತೆ ಸತಾಯಿಸಿದರೂ ಹನಿ ಖುಷಿಗೆ ಫಿದಾ ಆಗಿರುವೆ
ಚಿರಯೌವ್ವನ ಬೇಲಿದಾಟದಂತೆ ಕಾವ ಮಾಲಿಯ ನೋಟವಿದೆ
ಜೀವನ ನಿಂತನೀರಲ್ಲ ಹರಿದು ತಿಳಿಗಟ್ಟುವುದ್ಹೇಗೆ ಮಿಡಿದೆಯಲ್ಲಾ
ಜೀವೋನ್ಮಾದ ಜೀವರಾಶಿಗೆ ವರವಾಗೋ ಕರೆಯ ತುಡಿತವಿದೆ
ಬರುಬರುತಾ ನಿನ್ನ ಬಿಂಬ ಬರಿದಾದ ಅನುಭವ ತೆರೆದು ನಿಂತಿದೆ
ಬಂಧುರ ಪ್ರೇಮ ಒಲವಧಾರೆಯ ಓಘದ ಪರಿಯ ಸಂತಸವಿದೆ
ಸರಿಸುಮಾರು ಸಾರಿಸಿ ನಿಂತಿರುವೆ ಒಳಹೊರಗೆಲ್ಲ ಪೂಜಿಗೆ ಅಣಿ
ಸಕಲ ಪುಷ್ಪ ಪತ್ರಿ ನಾ ನೈವೇಧ್ಯ ನೀನಾದ ಮೇರೆಯ ಕೂಟವಿದೆ
ಓ ಪ್ರೇಮಾ ಅದೆಂತಾ ಹೃದಯ ನಿನ್ನದು ಮತ್ತೇ ಕರೆವೆ ಸುಮನಕೆ
ಓಲಾಡಿ ಒಂದಾಗಿ ಕುಣಿವ ಅನುನಯ ಪ್ರೇಮಿಯ ಆನಂದವಿದೆ
- ಪೀರಸಾಬ ನದಾಫ
