‘ಪರಸ್ಪರ ಮತ್ತಿತರ ಕಥೆಗಳು’ಪುಸ್ತಕ ಪರಿಚಯ

‘ಕನಸು ಮಾರುವ ಹುಡುಗ’ ಕತೆಯಲ್ಲಿ ಈ ಕಲರ್ ಕಲರ್ ಕನಸುಗಳನ್ನು ಮಾಲುಕಟ್ಟೆಯಲ್ಲಿ ಮಾರುವಂತಿದ್ದರೆ ? ಅದನ್ನು ಜನರು ಕೊಳ್ಳುವಂತಿದ್ದರೆ ? ಇಂತಹ ಒಂದು ಕಲ್ಪನೆಯನ್ನು ಓದುಗನ ಎದುರು ತಂದು ನಿಲ್ಲಿಸಿದ್ದಾರೆ ಕತೆಗಾರ್ತಿ ಮುರ್ತುಜಾಬೇಗಂ ಕೊಡಗಲಿ, ಅವರ ಕಥಾಸಂಕಲನದ ಕುರಿತು ಶೆಲ್ಲಿ ಕೂಡ್ಲಿಗಿ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ:- ಪರಸ್ಪರ ಮತ್ತಿತರ ಕಥೆಗಳು
ಲೇಖಕರು:- ಮುರ್ತುಜಾಬೇಗಂ ಕೊಡಗಲಿ
ಬೆಲೆ:- ₹150
ಪ್ರಕಾಶಕರು:- ವೀರಲೋಕ ಪಬ್ಲಿಕೇಷನ್

ವೀರಲೋಕದ ಮಹತ್ವಾಕಾಂಕ್ಷಿ ಯೋಜನೆ “ಉತ್ತರಪರ್ವ”ದ ಮೂಲಕ ನನಗೆ ಪರಿಚಿತರಾದ ಲೇಖಕರಲ್ಲಿ ಶ್ರೀಮತಿ ಮುರ್ತುಜಾಬೇಗಂ ಕೊಡಗಲಿ ಮೇಡಂ ಸಹ ಒಬ್ಬರು. ಬಾಗಲಕೋಟೆ ಜಿಲ್ಲೆಯ ಇಲಕಲ್ಲಿನವರಾದ ಇವರು ಪ್ರಸ್ತುತ ಆಂಗ್ಲ ಭಾಷಾ ಶಿಕ್ಷಕಿಯಾಗಿ ಹೀರೆಬಾದವಾಡಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇದುವರೆಗೆ ‘ಭಾವಬದುಕು’, ‘ಮೊನ್ನೆ ಬಂದ ಮಳೆಗೆ’, ‘ಮುಖವಾಡ ಧರಿಸುತ್ತೇನೆ ನಾನೂ’, ‘ಗಿಲಿಗಿಂಚಿ’, ‘ರಾಬಿಯಾ-ಬಿರುಗಾಳಿಯ ಹಾಡು’ ಎಂಬ 5 ಕೃತಿಗಳನ್ನು ಹೊರತಂದಿದ್ದು ಪ್ರಸ್ತುತ ವೀರಲೋಕದಿಂದ ಮುದ್ರಣಗೊಂಡಿರುವ “ಪರಸ್ಪರ ಮತ್ತು ಇತರೆ ಕಥೆಗಳು” ಎಂಬ ಕಥಾಸಂಕಲನ ಇವರ ಆರನೇ ಕೃತಿಯಾಗಿದೆ.

“ವೃತ್ತಿಗಾಗಿ ಒಪ್ಪಿಕೊಂಡದ್ದು ಆಂಗ್ಲ ಭಾಷೆಯನ್ನಾದರೂ ಓದು-ಬರಹಕ್ಕೆ ಅಪ್ಪಿಕೊಂಡಿದ್ದು ಹೃದಯದ ಭಾಷೆಯಾದ ಕನ್ನಡವನ್ನು” ಎಂಬ ಲೇಖಕಿಯ ಮಾತು ಈ ಕಥಾಸಂಕಲನ ಓದಿ ಮುಗಿಸಿದ ನಂತರ ಓದುಗರ ಹೃದಯಕ್ಕೆ ಖಂಡಿತ ತಾಕುತ್ತದೆ. ಬಾಗಲಕೋಟೆಯ ಜವಾರಿ ಭಾಷೆಯನ್ನು ಸಮರ್ಥಕವಾಗಿ ಬಳಸಿಕೊಂಡಿರುವ ಲೇಖಕಿ ಓದುಗರಿಗೆ ವಿಭಿನ್ನ ಕಥೆಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಮುಸ್ಲಿಂ ಸಮುದಾಯದ ಬರಹಗಾರ್ತಿಯರೆಂದರೆ ನಮಗೆ ತಕ್ಷಣ ನೆನಪಾಗುವುದು ಕಳೆದ ವರ್ಷ ನಮ್ಮನ್ನೆಲ್ಲ ಅಗಲಿದ ಮಹಿಳಾ ಸಂವೇದನಾಶೀಲ ಬರಹಗಾರ್ತಿ ಶ್ರೀಮತಿ ಸಾರಾ ಅಬೂಬಕ್ಕರ್‌ರವರು. ಸಂಪ್ರದಾಯವಾದಿಗಳನ್ನು ಎದುರು ಹಾಕಿಕೊಂಡು ಮುಸ್ಲಿಂ ಮಹಿಳೆಯರ ತಲ್ಲಣಗಳನ್ನು ಬರಹಗಳ ಮೂಲಕ ನಮಗೆ ಕಟ್ಟಿಕೊಟ್ಟು ಪುರುಷ ಸಾಮ್ರಾಜ್ಯದ ವಿರುದ್ಧ ಗುಡುಗಿದವರು. ಸಾರಾ ಅವರಂತೆ ಮುರ್ತುಜಾಬೇಗಂರವರು ಸಹ ಸಮಾಜದಲ್ಲಿ ತಾಂಡವಾಡುತ್ತಿರುವ ಅನ್ಯಾಯ, ಅಸಹನೆ, ಲೈಂಗಿಕ ದೌರ್ಜನ್ಯ, ಬಡತನ ಮುಂತಾದವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಕ್ಕೆ ಕಣ್ಣಾಗಲಿ, ಕಿವಿಯಾಗಲಿ ಇಲ್ಲ. ಅದಕ್ಕೆ ಹಸಿವಾದರೆ ಕಲ್ಲುಬಂಡೆಯಾದರೂ ಸರಿ ಹುರಿದು ಮುಕ್ಕಲೇ ಬೇಕೆಂದು ಆರ್ಭಟಕ್ಕೆ ಇಳಿಯುತ್ತದೆ. ಇದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟ ಕಥೆ ‘ಲಚ್ಚಿ’. ಒಬ್ಬ ಬುದ್ಧಿಮಾಂದ್ಯಳನ್ನು ಸಹ ಬಿಡದೆ ತನ್ನ ತೆವಲಿಗೆ ಬಳಸಿಕೊಂಡವರ ವಿರುದ್ಧ ಲೇಖಕಿ ತಮ್ಮ ಲೇಖನಿ ಎಂಬ ಶಾಯ್ಮೊಳೆಯಿಂದ ತಿವಿದಿದ್ದಾರೆ. ಜೊತೆಗೆ ಲಚ್ಚಿಯ ಸಾವು ಲೇಖಕಿಯಲ್ಲಿ ಮೂಡಿಸುವ ವಿಷಾದವೂ ನೋವಿನ ಅಲೆಯಾಗಿ ಓದುಗನ ಹೃದಯಕ್ಕೆ ಅಪ್ಪಳಿಸುತ್ತದೆ.

ತಮ್ಮ ಅಸ್ತಿತ್ವಕ್ಕಾಗಿ ನಡೆಯುವ ಧರ್ಮ ದಂಗಲನ್ನು ನಾಜೂಕಾಗಿ ಕಟ್ಟಿಕೊಟ್ಟ ಕಥೆ ‘ರಂಗೋಲಿಯ ಚಿತ್ತಾರ’. ಈ ಭರತಭೂಮಿಯಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದ ಹಿಂದೂ-ಮುಸ್ಲೀಮರು ಕೋಮುಪ್ರಚೋದನೆಗೆ ಒಳಗಾಗಿ ಕಿತ್ತಾಡುವ ಪ್ರಸಂಗಗಳನ್ನು ಲೇಖಕಿ ಪುಟ್ಟ ಬಾಲಕಿ ಶಬನಮ್‌ಳ ಕೈಯಿಂದ ರಂಗೋಲಿ ಬಿಡಿಸುವುದರ ಮೂಲಕ ಈ ಭೂಮಿ ಇರೋವರೆಗೂ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಿರಲಿ ಎಂದು ಆಶಿಸಿರುವುದು ಜಾತ್ಯಾತೀತ ಮನಸ್ಸುಗಳನ್ನು ಅರಳಿಸುತ್ತದೆ.

ಕತ್ತಲ ಜಗತ್ತಿನಲ್ಲಿ ಬಣ್ಣದ ಬದುಕೆಂಬುದು ನಾವಂದುಕೊಂಡಷ್ಟು ಸುಲಭವಲ್ಲ. ಅದೆಷ್ಟೋ ಜನರ ಬಾಳು ಮಗ್ಗಲು ಬದಲಿಸಿದರೆ ಒಂದು ಕಡೆಗೆ ಹೂ ಮತ್ತೊಂದು ಕಡೆಗೆ ಮುಳ್ಳು ಎಂಬಂತಿರುತ್ತದೆ. ಮೇಲ್ನೋಟಕ್ಕೆ ಅದೆಷ್ಟೋ ಜನ ನಗುನಗುತ್ತಲೇ ಇರುತ್ತಾರೆ. ಆದರೆ ಒಳಗಡೆ ನೋವುಗಳು ಅವರನ್ನು ಸುಟ್ಟು ಕರಕಲು ಮಾಡಿರುತ್ತವೆ. ಇದನ್ನು ಈ ಕಥಾಸಂಕಲನ‌ದ ‘ದುರಂತ ನಾಯಕಿ’ ಕಥೆ ಯಾವ ಅಬ್ಬರವೂ ಇಲ್ಲದೆ ಓದುಗನಿಗೆ ಮೆತ್ತಗೆ ಕಟ್ಟಿಕೊಟ್ಟಿದೆ.

ಇವತ್ತಿನ ಸಾಹಿತ್ಯ ವಲಯ ಅದೆಷ್ಟು ಕೆಟ್ಟು ಹೋಗಿದೆ. ಮಾರುಕಟ್ಟೆಯಲ್ಲಿ ಕಡ್ಲೆಪುರಿ ಮಾರಾಟವಾಗುವಂತೆ ರಂಗುರಂಗಿನ ಹೆಸರಿನಲ್ಲಿ ಪ್ರಶಸ್ತಿಗಳು ಬಿಕರಿಯಾಗುತ್ತಿರುವುದು. ಅದೂ ಸಹ ಪರಸ್ಪರ ರಾಜಿಯೊಂದಿಗೆ ಎಂಬುದನ್ನು ಈ ಕಥಾಸಂಕಲನ‌ದ ‘ಪರಸ್ಪರ’ ಕಥೆ ಓದುಗರಿಗೆ ತಿಳಿಸಿಕೊಡುತ್ತದೆ. ಸದ್ಯ ಈ ಪ್ರಶಸ್ತಿಗಳ ಮಾರಾಟ ಎನ್ನುವುದು ರಾಜಾರೋಷವಾಗಿ ನಡೆಯುತ್ತಿದ್ದರೂ ಅದನ್ನು ವಿರೋಧಿಸುವ ನೈತಿಕತೆ ಕಳೆದುಕೊಂಡಿರುವ ಬರಹಗಾರರು ಎಂಬ ಪಟ್ಟ ಕಟ್ಟಿಕೊಂಡ ಅದೆಷ್ಟೋ ಜನ ಲೇಖಕರು ಹಾರ,ತುರಾಯಿ, ಫಲಕಗಳಿಗೆ ತಮ್ಮತನ ಮಾರಿಕೊಳ್ಳುತ್ತಿರುವುದು ಹೇಸಿಗೆ ಹುಟ್ಟಿಸುವ ವಿಚಾರ. ಈ ಕಥೆ ಓದಿ ಮುಗಿಸಿದಾಗ ಪ್ರಸ್ತುತ ಕಾಲಘಟ್ಟಕ್ಕೆ ಇಂತಹ ಕಣ್ತೆರೆಸುವ ಕಥೆಯ ಅವಶ್ಯಕತೆ ಇದೆ ಎನಿಸಿತು.

ಗುರುಶಿಷ್ಯರ ಪರಂಪರೆಯ‌ನ್ನು ಈ ಪ್ರಪಂಚಕ್ಕೆ ತೋರಿಸಿಕೊಟ್ಟ ನೆಲವಿದು. ಇಂತಹ ನೆಲದಲ್ಲಿ ಅನಾದಿಕಾಲದಿಂದಲೂ ಗುರು ವೃತ್ತಿ ಎಂಬುದು ಇತರೆ ವೃತ್ತಿಗಳಿಗಿಂತ ಶ್ರೇಷ್ಠ ವೃತ್ತಿಯಾಗಿ ಪರಿಗಣಿಸಲ್ಪಟ್ಟಿದೆ. ಪ್ರಪಂಚದ ಬಗ್ಗೆ ಏನೂ ಅರಿಯದ ಮಗುವೊಂದು ಗುರುವಿನ ಬಳಿ ಬಂದಾಗ ಆ ಮಗುವಿಗೆ ಜ್ಞಾನ ಧಾರೆ ಎರೆದು ಅದರ ದೃಷ್ಟಿಯಲ್ಲಿ ಗುರು ಕಣ್ಣಿಗೆ ಕಾಣುವ ದೇವರಾಗುತ್ತಾನೆ. ಆದರೆ ಇಂದು ನಿತ್ಯವೂ ಬೆಳಿಗ್ಗೆ ಎದ್ದಾಗ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಕೊಲೆ ವಿಚಾರಗಳು ಕಿವಿಯೊಳಗೆ ಕಾದ ಸೀಸವನ್ನು ಸುರಿಯುತ್ತಿವೆ. ಸ್ವತಃ ವೃತ್ತಿಯಲ್ಲಿ ಒಬ್ಬ ಶಿಕ್ಷಕನಾಗಿರುವ ನನಗೆ ಇಂತಹ ಹೇಯ ಕೃತ್ಯಗಳಲ್ಲಿ ನಮ್ಮ ಶಿಕ್ಷಕರೂ ಶಾಮೀಲಾಗಿದ್ದಾರೆ ಎಂಬ ಸುದ್ದಿ ಕೇಳಿದರಂತೂ ಸಾಕು ರಕ್ತ ಕೊತಕೊತನೇ ಕುದಿಯುತ್ತದೆ. ಮೊನ್ನೆ ಮೊನ್ನೆ ವಾರ್ತಾಪತ್ರಿಕೆಯಲ್ಲಿ ಓದಿದ್ದು ಅದ್ಯಾರೋ ವಸತಿ ಶಾಲೆಯ ಶಿಕ್ಷಕ ತನ್ನ ಮೊಬೈಲ್ನಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಐನೂರು ವೀಡಿಯೋಗಳನ್ನು ಇಟ್ಟುಕೊಂಡಿದ್ದನೆಂಬುದು, ಮತ್ತೊಂದೆಡೆ ಎಲ್‌ಕೆಜಿ ಓದುವ ಮಕ್ಕಳನ್ನು ಸಹ ತಮ್ಮ ತೀಟೆಗೆ ಬಳಸಿಕೊಂಡ ಶಿಕ್ಷಕ, ಮನೆಗೆ ಟ್ಯೂಷನ್ ಹೇಳಿಸಿಕೊಳ್ಳಲು ಬಂದ ಬಾಲಕಿಯ ಮೇಲೆ ಅತ್ಯಾಚಾರ‌ವೆಸಗಿ ಬರ್ಬರ ಹತ್ಯೆಗೈದ ಶಿಕ್ಷಕ. ಇದಕ್ಕೆಲ್ಲಾ ಕೊನೆಯೇ ಇಲ್ಲ. ಇಂತಹದ್ದೆ ಒಂದು ಕೆಟ್ಟ ಘಟನೆಯ ಮೇಲೆ ಬರೆಯಲ್ಪಟ್ಟ ಕಥೆ ‘ಗುರುಬ್ರಹ್ಮ, ಗುರು’. ಈ ಕಥೆಯಲ್ಲಿ ಲೇಖಕಿ ಕಿರಾತಕ ಶಿವಪ್ಪ ಮೇಷ್ಟ್ರುವಿನ ತೀಟೆಗೆ ಬಲಿಯಾದ ನತದೃಷ್ಟೆ ಗಾಯಿಯ ಧ್ವನಿಯಾಗಿ ಸೌಮ್ಯವಾಗಿ ಪ್ರತಿಭಟಿಸಿದ್ದಾರೆ. ಬಹುಶಃ ಈ ನೆಲದ ಕಾನೂನುಗಳು ಇಂಥವರನ್ನು ಏನೂ ಮಾಡುವುದಿಲ್ಲವೆಂಬ ಅರಿವು ಲೇಖಕಿಯ ಆಕ್ರೋಶಕ್ಕೆ ಕಡಿವಾಣ ಹಾಕಿರಬಹುದೆಂದು ಓದುಗನಿಗೆ ಕಥೆಯ ಅಂತ್ಯ ತಿಳಿಸುತ್ತದೆ.

ಕನಸುಗಳು ಪುಟ್ಟ ಮಗುವಿನಿಂದ ಹಿಡಿದು ಮುದುಕರವರೆಗೆ ಯಾರನ್ನೂ ಬಿಡುವುದಿಲ್ಲ. ಎಲ್ಲರ ನಿದ್ರೆಯಲ್ಲೂ ಬಂದು ಹೋಗುತ್ತಿರುತ್ತವೆ. ಕೆಲವು ಕನಸುಗಳು ಭೀಕರವಾದರೆ, ಕೆಲವು ಕನಸುಗಳು ಅದೆಷ್ಟು ಸುಂದರ ! ಆದರೆ ಈ ಕಲರ್ ಕಲರ್ ಕನಸುಗಳನ್ನು ಮಾಲುಕಟ್ಟೆಯಲ್ಲಿ ಮಾರುವಂತಿದ್ದರೆ ? ಅದನ್ನು ಜನರು ಕೊಳ್ಳುವಂತಿದ್ದರೆ ? ಇಂತಹ ಒಂದು ಕಲ್ಪನೆಯನ್ನು ಓದುಗನ ಎದುರು ತಂದು ನಿಲ್ಲಿಸುವ ಕಥೆ ‘ಕನಸು ಮಾರುವ ಹುಡುಗ’.ಕನಸೂರಿನಿಂದ ಬಂದವನು ಕಲರ್ ಕಲರ್ ಕನಸು ಹೊತ್ತು ತಂದವನು ಎಂದು ಕಥೆ ಹೇಳುತ್ತಾ ಹೋಗುವ ಲೇಖಕಿ ಕಥೆಯ ಅಂತ್ಯದಲ್ಲಿ ಆಧ್ಯಾತ್ಮದ ದಿವ್ಯಾನುಭೂತಿ ಮೂಡಿಸುವಲ್ಲಿ ಸಫಲತೆ ಕಂಡಿದ್ದಾರೆ.

ಗೆಳೆತನಕ್ಕೆ ವಯಸ್ಸು, ಜಾತಿ, ಅಂತಸ್ತು, ಉದ್ಯೋಗಕ್ಕಿಂತಲೂ ಸಮಾನ ಮನಸ್ಸು, ಸಮಾನ ವಿಚಾರ ಧಾರೆಗಳು ಮುಖ್ಯ ಎಂಬುದನ್ನು ಸಾರಿ ಹೇಳುವ ಕಥೆ ‘ಆ ಮೂವರು ಗೆಳೆಯರು’. ಲೇಖಕಿ ಒಂದು ಪುಟ್ಟ ಎಳೆಯ ಮೇಲೆ ಈ ಕಥೆ ರಚಿಸಿದ್ದರೂ ಹಂತಹಂತವಾಗಿ ಅದನ್ನು ಕಟ್ಟಿಕೊಟ್ಟ ರೀತಿ ಸರಾಗವಾಗಿ ಓದಿಸುಕೊಂಡು ಹೋಗುವಂತೆ ಮಾಡಿದೆ.

ಸತ್ತ ನಂತರ ಹೆಣವೊಂದು ಮಾತನಾಡುವ ಅವಕಾಶವಿದ್ದಿದ್ದರೆ ಸಾವಿನ ಮನೆಯಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತಿದ್ದವು ಎಂಬ ಕಲ್ಪನೆ ‘ಗೌಡ್ರ ಹೆಣದ ಸ್ವಗತ’ ಕಥೆಯಲ್ಲಿ ಸ್ವಾರಸ್ಯಕರ‌ವಾಗಿ ಮೂಡಿಬಂದಿದೆ. ಇಲ್ಲಿನ ಗ್ರ್ಯಾಮ್ಯ ಸಂಭಾಷಣೆಗಳು ಮನಸ್ಸಿಗೆ ಕಚಗುಳಿ ಇಡುತ್ತವೆ. ಕೆಲವು ಕ್ಷಣ ಗೌಡ್ರ ಹೆಣ ನಮ್ಮ ಕಣ್ಣೆದೆರು ನಿಂತು ಮಾತಾಡುತ್ತಿದೆಯೇನೋ ಎಂಬ ಭ್ರಮೆಯಲ್ಲಿ ಓದುಗ ತೇಲಾಡಿಬಿಡುತ್ತಾನೆ. ತಮ್ಮ ಬಾಗಲಕೋಟೆಯ ಜವಾರಿ ಭಾಷೆಯನ್ನು ಲೇಖಕಿ ಈ ಕಥೆಯಲ್ಲಿ ತುಂಬಾ ಹೃದ್ಯವಾಗಿ ಬಳಸಿಕೊಂಡಿದ್ದಾರೆ. ಇದನ್ನೇನಾದರೂ ನಾಟಕ ರೂಪಕ್ಕಿಳಿಸಿದರೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುವುದಂತೂ ಸತ್ಯ.

ಅವಿಭಕ್ತ ಕುಟುಂಬದ ಮಹತ್ವದ ಕುರಿತು ಸಾರುವ ‘ಪೂರ್ಣಿ ಮತ್ತು ಕುಟುಂಬ’, ಹೆಣ್ಣಿಗೆ ತಾಳ್ಮೆ ಮುಖ್ಯ ಎಂಬುದನ್ನು ನಿರೂಪಿಸುವ ‘ಕರುಣಾಳು ಬಾ ಬೆಳಕೇ’ ಎಂಬ ಕಥೆಗಳು ಸಹ ಆಪ್ತ ಭಾವ ಮೂಡಿಸುತ್ತವೆ. ಆದರೆ ಈ ಕಥಾಸಂಕಲನದಲ್ಲಿ ನನ್ನನ್ನು ತುಂಬಾ ಕಾಡಿದ ಕಥೆಯೆಂದರೆ ‘ಹೆದ್ದಾರಿಯ ಹೆಣಗಳು’. ಸಾಮಾನ್ಯವಾಗಿ ಕಥೆಗಳಲ್ಲಿ ವ್ಯಕ್ತಿಗಳು ಪಾತ್ರಗಳಾಗುವುದು ಸಹಜ. ಕುವೆಂಪುರವರ ಕಾದಂಬರಿಗಳಲ್ಲಿ ಪ್ರಕೃತಿಯೂ ಸಹ ಒಂದು ಪಾತ್ರವಾಗಿರುವುದು ನಾವೆಲ್ಲ ಓದಿ ಗ್ರಹಿಸಿರುವಂತದ್ದು. ಅದರಂತೆಯೇ ‘ಹೆದ್ದಾರಿಯ ಹೆಣಗಳು’ ಕಥೆಯಲ್ಲಿ ಜೀವವಿಲ್ಲದ ನಿರ್ಜೀವ ಹೆದ್ದಾರಿಯೊಂದು ಮಾತಿಗಿಳಿಯುತ್ತದೆ. ತನ್ನ ಸುಖ, ದುಃಖ ತೋಡಿಕೊಳ್ಳುವುದರ ಜೊತೆಗೆ ತನ್ನ ಮೇಲೆ ರಕ್ತಕಾರಿ ಪ್ರಾಣತೆತ್ತವರ ಜೊತೆಗೆ ಸಂಭಾಷಣೆಗೆ ಇಳಿಯುತ್ತದೆ. ಇದೊಂದು ರೀತಿ ಫೆಂಟೆಸಿ ಕಥೆಯಂತೆ ತೋರಿದರೂ ಅಂತ್ಯದಲ್ಲಿ ಮನುಷ್ಯನಿಗೋಸ್ಕರ ತಮ್ಮ ಆಯಸ್ಸು ಸವೆಸಿಕೊಳ್ಳುವ ರಸ್ತೆಗಳ ಬಗ್ಗೆ ಓದುಗನಲ್ಲಿ ಅನುಕಂಪ ಮೂಡುತ್ತದೆ. ಒಟ್ಟಾರೆ ಈ ಕಥೆ ಎರಡ್ಮೂರು ಬಾರಿ ಓದಿದರೂ ಮತ್ತೆ ಓದುವ ಆಸೆ ಹುಟ್ಟಿಸಿದ್ದಂತೂ ಸುಳ್ಳಲ್ಲ.

ಲೇಖಕಿ ಈ ಕಥಾಸಂಕಲನದ ಪ್ರತಿ ಕಥೆಗಳಲ್ಲೂ ಸಮಾಜಕ್ಕೊಂದು ಸುಂದರ ಸಂದೇಶ ರವಾನಿಸುವುದರ ಜೊತೆಗೆ ಕಥೆ ಕಟ್ಟುವ ರೀತಿ, ಮೊನಚಾದ ನಿರೂಪಣೆ, ಗ್ರಾಮ್ಯಭಾಷೆ, ಮನೋಜ್ಞ ಸಂಭಾಷಣೆಗಳ ಮೂಲಕ ಓದುಗರ ಹೃದಯ ಗೆದ್ದಿದ್ದಾರೆ. ಇವು ಈ ಕಥಾಸಂಕಲನ‌ದ ಧನಾತ್ಮಕ ಅಂಶಗಳಾದರೆ ಕೆಲವು ಕಡೆಗೆ (ವಿರಳವಾಗಿ) ಅಕ್ಷರ ಲೋಪಗಳು, ಹಾಗೂ ಒಂದೆರಡು ಕಥೆಗಳು ವಸ್ತು ವಿಷಯ ನವೀನವೆನಿಸದೇ ಇರುವುದು ಋಣಾತ್ಮಕ ಅಂಶಗಳಂತೆ ತೋರುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಕಥಾಸಂಕಲನ ಓದುಗರ ಮನದೊಳಗೆ ಇಳಕಲ್ಲಿನ ಸೀರೆಯಂತೆ ಚಿತ್ತಾರ ಮೂಡಿಸುತ್ತದೆ. ಲೇಖಕಿ ಬಾಗಲಕೋಟೆಯ ಜವಾರಿ ಭಾಷೆ ಬಳಸಿಕೊಂಡು ಮತ್ತಷ್ಟು ಮೌಲ್ಯಯುತವಾದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಲಿ. ಸಾರಾ ಅಬೂಬಕ್ಕರ್ ಅವರಂತೆ ಸಾಹಿತ್ಯ ಲೋಕದಲ್ಲಿ ಮಿಂಚಲಿ ಎಂಬ ಆಶಯದೊಂದಿಗೆ ಮನದುಂಬಿ ಶುಭಹಾರೈಸುವೆ.


  • ಶೆಲ್ಲಿ ಕೂಡ್ಲಿಗಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading