”ಅಯ್ಯೋ ಏನ್ರೇ ಇದು ! ದಸರಾಗಾದರೂ ನಾವು ಹೊರಗಡೆ ಸುತ್ತಾಡಬಹುದು ಅಂತ ಆಸೆ ಇಟ್ಕೊಂಡ್ರೆ ಒಂದೇ ಬಣ್ಣದಲ್ಲಿ ನಾಲ್ಕೈದು ಜನ ಇದ್ದೀವಲ್ಲ. ಈಗ ಯಜಮಾನಿ ನಮ್ಮಲ್ಲಿ ಒಬ್ಬರನ್ನ ಉಟ್ಕೊಂಡ್ರೆ ಉಳಿದವರು ಮತ್ತೆ ಕಪಾಟು ಸೇರ್ತೀವಿ” ಎಂದು ರೋಧಿಸಿತು ಸೀರೆಗಳು, ಮುಂದೇನಾಯಿತು ಶೆಲ್ಲಿ ಕೂಡ್ಲಿಗಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ……
ಮನೆಯ ಯಜಮಾನಿ ವರಾಂಡದಲ್ಲಿ ಕುಳಿತು ತನ್ನ ಗಂಡನ ಜೊತೆಗೆ ನವರಾತ್ರಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದಳು. ಆ ಮಾತುಗಳು ಕಪಾಟಿನಲ್ಲಿರುವ ಸೀರೆಗಳ ಕಿವಿಗೆ ಬಿತ್ತು. ಬಹುದಿನಗಳಿಂದಲೂ ಗಾಢವಾದ ನಿದ್ರೆಗೆ ಜಾರಿದ್ದ ಸೀರೆಗಳೆಲ್ಲಾ ದಡಕ್ಕನೆ ಎದ್ದು ಕುಳಿತವು.
ಕೆಲವು ಸೀರೆಗಳು
“ಆಹಾ ದಸರಾ ಬಂದಿತಂತೆ ನಮಗೂ ಒಂದು ಕಾಲವಂತೆ” ಎಂದು ಥಕಥೈ ಕುಣಿಯತೊಡಗಿದವು.
ಒಂದು ಮುದಿ ಸೀರೆಯಂತೂ ಕೋಪ ತಾಳಲಾರದೆ
“ಓಹೋ ಮಳ್ಳಿ ಬರ್ತಾಳೆ ಈಗ ನಮ್ಮ ಬಳಿ. ಇಷ್ಟು ದಿನ ನಾವು ಅವಳಿಗೆ ಬೇಡವಾಗಿದ್ವಿ. ಯಾವಾಗಲೂ ನಮ್ಮ ಸವತಿಯರಾದ ಚೂಡಿದಾರಗಳ ಮೇಲೆ ಅವಳಿಗೆ ಜೀವ. ಎಲ್ಲಿ ಹೋದರೂ ಅವರನ್ನೇ ಹೆಚ್ಚು ಉಟ್ಕೊಂಡು ಮೆರೆಸ್ತಾಳೆ. ರಾತ್ರಿ ಆದರೂ ಮನೆಯಲ್ಲಿ ನಮ್ಮನ್ನು ಮೂಸಿ ನೋಡ್ತಾಳ ?” ಆಗಲೂ ಅವಳಿಗೆ ನಮ್ಮ ಕಡು ಸವತಿಯರಾದ ನೈಟಿಗಳೇ ಬೇಕು” ಎಂದು ವಟಗುಟ್ಟಿತು.
ಅಷ್ಟರೊಳಗೆ ಮನೆಯ ಯಜಮಾನಿ ಬಿರ್ರನೆ ಬಂದು ಕಪಾಟಿನಲ್ಲಿದ್ದ ಸೀರೆಗಳಿಗೆಲ್ಲಾ “ಏನ್ರೇ ನನ್ನ ಬಗ್ಗೆ ಮಾತಾಡ್ತೀರಾ? ಎಷ್ಟು ಧೈರ್ಯ ನಿಮಗೆ” ಎಂದು ಜಡೆ ಹಿಡಿದು ಎಳೆದಂತೆ ಜೋಡಿಸಿಟ್ಟಿದ್ದ ಎಲ್ಲಾ ಸೀರೆಗಳನ್ನು ಸರಸರನೆ ಎಳೆದು ನೆಲದ ಮೇಲೆ ಗುಡ್ಡೆ ಹಾಕಿದಳು.

ಎಷ್ಟೊಂದು ಸೀರೆಗಳು ! ಕೆಲವು ತವರು ಮನೆಯಿಂದ ಬಂದ ಉಡುಗೊರೆಯಾದರೆ, ಮತ್ತೆ ಕೆಲವು ಹೋದ, ಬಂದ ಕಡೆ ಬಂಧು-ಮಿತ್ರರು ಕೊಟ್ಟ ಕಾಣಿಕೆಗಳು. ಇನ್ನೂ ಕೆಲವು ದುಬಾರಿ ಬೆಲೆಯ ಸೀರೆಗಳು ಯಜಮಾನಿಯ ಗಂಡ ಹುಟ್ಟುಹಬ್ಬಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ ಇಷ್ಟಪಟ್ಟು ಕೊಡಿಸಿರುವವು.
ಎಲ್ಲಾ ಸೀರೆಗಳನ್ನು ಬಣ್ಣಗಳಿಗೆ ತಕ್ಕಂತೆ ಒಂದೆಡೆ ಜೋಡಿಸಿಟ್ಟ ಯಜಮಾನಿ ನವರಾತ್ರಿಗೆ ಬೇಕಾದ ಬಿಳಿ, ಕೆಂಪು, ನೀಲಿ, ಹಳದಿ, ಹಸಿರು, ಬೂದು, ಕಿತ್ತಳೆ, ನೇರಳೆ ಗುಲಾಬಿ ಬಣ್ಣದ ಸೀರೆಗಳನ್ನು ಬಿಟ್ಟು ಮ್ಯಾಚ್ ಆಗದ ಚೂರುಪಾರು ಸೀರೆಗಳನ್ನು ಎತ್ತಿ ಕಪಾಟಿಗೆ ತುರುಕಿದಳು.
ಒಂಬತ್ತು ಬಣ್ಣಗಳ ಸೀರೆಗಳೀಗ ನೆಲದ ಮೇಲೆ ಬಿದ್ದಿದ್ದವು. ಒಂದೊಂದು ಬಣ್ಣದ ಗುಡ್ಡೆಯಲ್ಲಿ ನಾಲ್ಕೈದು ಸೀರೆಗಳಿದ್ದವು. ಪ್ರತಿಯೊಂದು ಗುಡ್ಡೆಯಲ್ಲಿದ್ದ ಸೀರೆಗಳು ವೆರೈಟಿಯಲ್ಲಿ ಸ್ವಲ್ಪ ಸ್ವಲ್ಪ ಬದಲಾಗಿದ್ದರೂ ಬಣ್ಣ ಮಾತ್ರ ಒಂದೇ ಆಗಿತ್ತು.
ಯಜಮಾನಿಗೆ ಗೆಳತಿಯೊಬ್ಬಳು ಕರೆ ಮಾಡಿದ್ದರಿಂದ ಅವಳು ವರಾಂಡಕ್ಕೆ ಹೋಗಿ ಮೊಬೈಲ್ನಲ್ಲಿ ಮುಳುಗಿ ಹೋಗಿದ್ದಳು. ಇದೇ ಸಮಯದಲ್ಲಿ ಸೀರೆಗಳು “ಅಯ್ಯೋ ಏನ್ರೇ ಇದು ! ದಸರಾಗಾದರೂ ನಾವು ಹೊರಗಡೆ ಸುತ್ತಾಡಬಹುದು ಅಂತ ಆಸೆ ಇಟ್ಕೊಂಡ್ರೆ ಒಂದೇ ಬಣ್ಣದಲ್ಲಿ ನಾಲ್ಕೈದು ಜನ ಇದ್ದೀವಲ್ಲ. ಈಗ ಯಜಮಾನಿ ನಮ್ಮಲ್ಲಿ ಒಬ್ಬರನ್ನ ಉಟ್ಕೊಂಡ್ರೆ ಉಳಿದವರು ಮತ್ತೆ ಕಪಾಟು ಸೇರ್ತೀವಿ” ಎಂದು ರೋಧಿಸತೊಡಗಿದವು.

ಹಳದಿ ಬಣ್ಣದ ಗುಡ್ಡೆಯಲ್ಲಿದ್ದ ಹಿರಿ ಸೀರೆಯೊಂದು “ಅಯ್ಯೋ ನನ್ನ ಬಣ್ಣ ಮಾಸಿ ಹೋಗಿದೆ. ಹಾಗಾಗಿ ಯಜಮಾನಿ ನನ್ನ ಮೂಸಿ ನೋಡೋಲ್ಲ. ಇತ್ತೀಚೆಗೆ ಈ ಮನೆಗೆ ಬಂದಿರೋ ಅತಿ ಕಿರಿಯಳಾದವಳನ್ನೇ ಉಟ್ಕೊಂಡು ಮೆರಿಬಹುದು” ಎಂದು ಅಳಲು ತೋಡಿಕೊಂಡಿತು. ಅದನ್ನು ಕೇಳಿದ ಹಳದಿ ಬಣ್ಣದ ಅತಿ ಕಿರಿಯ ಸೀರೆ “ಅಕ್ಕಾ, ನೀನು ಈ ಮನೆಗೆ ಮೊದಲು ಬಂದವಳು. ನಮ್ಮೆಲ್ಲರಿಗಿಂತ ಹಿರಿಯವಳು ನೀನು. ಹಾಗಾಗಿ ಯಜಮಾನಿ ನಿನ್ನನ್ನೆ ಉಟ್ಕೊಂಡು ಹಬ್ಬ ಮಾಡ್ತಾಳೆ. ಅಳಬೇಡ” ಎಂದು ಸಮಾಧಾನ ಮಾಡಿತು.
ಇತರೆ ಬಣ್ಣದ ಸೀರೆಗಳು ಸಹ “ಯಾರಿಗುಂಟು ಯಾರಿಗಿಲ್ಲ ಈ ಬಾರಿ ಹಬ್ಬ ನೋಡೋ ಭಾಗ್ಯ, ಊರು ಸುತ್ತೋ ಭಾಗ್ಯ” ಎಂದು ಶತಪತಿಸತೊಡಗಿದವು. ಕಪಾಟಿನಲ್ಲಿದ್ದ ಉಳಿದ ಬಣ್ಣದ ಚೂರು ಪಾರು ಸೀರೆಗಳು “ಅಯ್ಯೋ ನಾವು ಸತ್ವಿ ಅಷ್ಟೇ” ಎಂದು ಲಬಲಬ ಬಾಯಿ ಬಡಿದು ಕೊಳ್ಳತೊಡಗಿದವು. ಆ ವೇಳೆಗೆ ಅಲ್ಲಿಗೆ ಬಂದ ಯಜಮಾನಿ ಪ್ರತಿ ಗುಡ್ಡೆಯಲ್ಲಿದ್ದ ಸೀರೆಗಳನ್ನು ಮುಟ್ಟಿ ನೋಡಿ, ಹೆಗಲಿಗೆ ಹಾಕಿಕೊಂಡು ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಇದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಎಂದು ಗೊಣಗತೊಡಗಿದಳು.
ಒಳಗೆ ಬಂದ ಯಜಮಾನಿಯ ಗಂಡ “ಯಾಕೆ ಚಿನ್ನ ಮುಖ ಸಪ್ಪಗೆ ಮಾಡಕೊಂಡೀಯಾ ?” ಎಂದು ಕೇಳಿದ. ಯಜಮಾನಿ “ನಾಳೆಯಿಂದ ನವರಾತ್ರಿ ಶುರುವಾಗುತ್ತಲ್ಲ. ದಿನಕ್ಕೊಂದು ಬಣ್ಣದ ಸೀರೆ ಉಟ್ಕೊಂಡು, ಚೊಲೋ ಪೋಟೋ ತಕ್ಕೊಂಡು ಫೇಸ್ಬುಕ್‌ಗೆ ಹಾಕಬೇಕು. ಅದಕ್ಕೆ ಸೀರೆಗಳನ್ನೆಲ್ಲಾ ಕಪಾಟಿನಿಂದ ಹೊರಗೆ ತೆಗೆದು ನೋಡಿದೆ. ಎಲ್ಲಾ ಹಳೇವು ಆಗ್ಬಿಟ್ಟಿವೆ” ಎಂದು ಮುಖ ಮತ್ತಷ್ಟು ಸಪ್ಪೆ ಮಾಡಿಕೊಂಡಳು. ಹೆಂಡತಿಯ ಮಾತಿಗೆ ಗಂಡ “ಇಷ್ಟಕ್ಕೆಲ್ಲಾ ಬೇಜಾರು ಯಾಕಾಗ್ತೀಯಾ ಚಿನ್ನಾ ? ಬೆಳಿಗ್ಗೆ ನೀವ್ಸ್ ಪೇಪರಿನಲ್ಲಿ ನವರಾತ್ರಿಗಾಗಿ ಒಂಬತ್ತು ಬಣ್ಣದ ಸ್ಪೆಷಲ್ ಕಾಂಬೋ ಸೀರೆ ವಿಶೇಷ ರಿಯಾಯಿತಿಯೊಂದಿಗೆ. ಜೊತೆಗೆ ಒಂದು ರಾಮ್‌ರಾಜ್ ಕಾಟನ್ ಲುಂಗಿ ಉಚಿತ. ಎಂದು ಜಾಹಿರಾತು ಕೊಟ್ಟಿದ್ದು ನೋಡಿಲ್ಲವೇ ? ಸಾಯಂಕಾಲ ಬಟ್ಟೆ ಅಂಗಡಿಗೆ ಹೋಗಿ ಒಂದು ಹೊಸ ಕಾಂಬೋ ತಂದರಾಯಿತು ಬಿಡು” ಎಂದನು.
ಗಂಡನ ಮಾತು ಕೇಳಿ ಯಜಮಾನಿ ಹಿರಿಹಿರಿ ಹಿಗ್ಗಿ ಹೀರೆಕಾಯಿಯಾಗಿದ್ದಳು. “ಎಂಥಾ ಚೊಲೋ ಮನಸು ನಿಮ್ದು. ನಿಮ್ಮಂತ ಗಂಡನ ಪಡೆಯೋಕೆ ನಾನು ಪುಣ್ಯ ಮಾಡಿದ್ದೆ” ಎಂದವಳೇ ಎಲ್ಲಾ ಸೀರೆಗಳನ್ನು ಎತ್ತಿ ಕಪಾಟಿಗೆ ಎಸೆದಳು.
ಯಜಮಾನಿಯ ಗಂಡನ ಮಾತು ಕೇಳಿ ಸೀರೆಗಳೆಲ್ಲಾ ಒಬ್ಬರ ಮುಖ ಒಬ್ಬರು ನೋಡಿಕೊಂಡರೆ ಅದೇ ಕಪಾಟಿನಲ್ಲಿರುವ ಚೂಡಿದಾರ, ನೈಟಿಗಳು ಥಕಥಕ ಕುಣಿಯತೊಡಗಿದವು.
- ಶೆಲ್ಲಿ ಕೂಡ್ಲಿಗಿ –ಶಿಕ್ಷಕರು, ಲೇಖಕರು, ಕೊಡ್ಲಿಗಿ
