ಗಾಂಧಿ ಬಗ್ಗೆ ನೀವೇನು ಓದಿದ್ದೀರಿ ?

ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರ ‘ಮೋ ಕ ಗಾಂಧೀ ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ’ ಕೃತಿಯ ಕುರಿತು ಅರುಣ್ ಪ್ರಸಾದ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಐದನೆ ತರಗತಿಯಲ್ಲಿದ್ದಾಗ ನಮ್ಮ ತಂದೆ ತಂದು ಕೊಟ್ಟ ಗೊರೂರು ರಾಮಸ್ವಾಮಿ ಅಯ್ಯಂಗಾರರು ಭಾವಾನುವಾದ ಮಾಡಿದ್ದ ‘ಮೋ ಕ ಗಾಂಧೀ ಆತ್ಮಕತೆ ಅಥವಾ ನನ್ನ ಸತ್ಯಾನ್ವೇಷಣೆ’ ಓದಿದ ಮೇಲೆ ನನಗೆ ಗಾಂಧೀಜಿ ಗೊತ್ತಾಗಿದ್ದು, ಅಲ್ಲಿವರೆಗೆ ಗಾಂಧೀಜಿ ಅಂದರೆ ಶಾಲೆಯ ಗೋಡೆ ಮೇಲಿನ ಫೋಟೋದಿಂದ ಮಾತ್ರ ಗೊತ್ತಿದ್ದರು, ಗಾಂಧಿ ಜಯಂತಿಯ೦ದು ಆಗಿನ ಆನಂದಪುರಂನ ಐಕಾನ್ ಆಗಿದ್ದ ದೈಹಿಕ ಶಿಕ್ಷಕರಾಗಿದ್ದ  ಕೃಷ್ಣಪ್ಪ (SRK) ದಲಿತರ ಕೇರಿಗಳಲ್ಲಿ ನಡೆಸುತ್ತಿದ್ದ ಶ್ರಮದಾನ ಗಾಂಧಿ ನೆನಪು ಪುನರಾವರ್ತನೆ ಆಗುತ್ತಿತ್ತು.

ಕೆಲ ತರಗತಿಯಲ್ಲಿ ಗಾಂಧಿ ಜೀವನದ ತುಣುಕು ಅದರಲ್ಲಿ ವಿಶೇಷವಾಗಿ ತಂದೆಯ ಜೇಬಿಂದ ಹಣ ಕದಿಯುವುದು ನಂತರ ತಮ್ಮ ಅರಿವಾಗಿ ತಂದೆಯಲ್ಲಿ ಕ್ಷಮೆ ಕೇಳಿದ ಘಟನೆ ಅಚ್ಚಳಿಯದೇ ಉಳಿದಿತ್ತು. ಆಗೆಲ್ಲ ಗಾಂಧೀ ವಿರೋದಿಗಳು ಈಗಿನಂತೆ ವಿಜೃಂಬಿಸುತ್ತಿರಲಿಲ್ಲ, ಶಾಲಾ ದಿನದಲ್ಲಿ ಪೋಲಿ ಪುಂಡನೆಂಬ ಹೆಸರು ಪಡೆದಿದ್ದ ಗೆಳೆಯ ಗಾಂಧಿ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದ, ಗಾಂದಿಯಿಂದ ದೇಶ ಹಾಳಾಯಿತು ಅಂತಿದ್ದ ಇದು ಹೆಡ್ ಮಾಸ್ತರ್ ನಾಗಭೂಷಣರಾವ್ ಕಿವಿಗೆ ತಲುಪಿತು.

ಅವತ್ತು ಅವರೇ ನಮ್ಮ ತರಗತಿಗೆ ಬಂದು ವಿಚಾರಣೆ ನಡೆಸಿದರು, ನಮಗೆ ಅನ್ನಿಸಿದ್ದು ಹೆಡ್ ಮಾಸ್ತರ್ ಲಾಠಿ ಶಿಕ್ಷೆ ನೀಡುತ್ತಾರಂತ ಆದರೆ ಆರೋಪ ಮಾಡುತ್ತಿದ್ದ ವಿದ್ಯಾರ್ಥಿ ತನ್ನ ಪೋಷಕರು ಹೇಳುತ್ತಿದ್ದದ್ದನ್ನು ಇಲ್ಲಿ ಹೇಳಿದ್ದಾಗಿ ಅವರ ತಂದೆ ಅದಕ್ಕೆಲ್ಲ ಸಾಕ್ಷಿಯಾಗಿ ಒಂದು ಪುಸ್ತಕ ತೋರಿಸುವುದು ಇತ್ಯಾದಿ ಹೇಳಿದ. ಪಿನ್ ಡ್ರಾಪ್ ಸೈಲೆನ್ಸ್ ಆದ ಆ ತರಗತಿಯಲ್ಲಿ ಸಣ್ಣದಾಗಿ ಹೆಡ್ ಮಾಸ್ತರರ ಕಣ್ಣೀರಿನಿಂದ ಪ್ರಾರಂಭ ಆದ ಅಳು ದೊಡ್ಡ ಬಿಕ್ಕಳಿಕೆ ಆಯಿತು ಇದನ್ನು ನೋಡಿ ಗಾಂಧೀಜಿಗೆ ಬೈಯುವ ಗೆಳೆಯನೂ ಸೇರಿ ಇಡೀ ತರಗತಿ ಅಳುತ್ತಿತ್ತು ಸಮೂಹ ಸನ್ನಿಯಲ್ಲಿ.

ಗಾಂಧೀಜಿ ಬ್ಯಾರಿಸ್ಟರ್ ಆಗಿದ್ದು ಆಫ್ರಿಕಾದಲ್ಲಿ ವಕಾಲತ್ತು ಪ್ರಾರಂಭಿಸಿದ್ದು, ಅಲ್ಲಿ ಬ್ರಿಟಿಷರ ವರ್ಣಬೇಧ ಪ್ರತಿಭಟಿಸಿದ್ದು ಭಾರತಕ್ಕೆ ಬಂದಾಗ ಇಲ್ಲಿನ ಸ್ವಾತಂತ್ರ ಹೋರಾಟಗಾರರು ಗಾಂಧೀಜಿಗೆ ಹೋರಾಟದ ನೇತೃತ್ವ ವಹಿಸಲು ವಿನಂತಿಸುವುದು, ಗಾಂಧಿ ಇಡೀ ದೇಶ ರೈಲಿನಲ್ಲಿ 3 ನೇ ದರ್ಜೆ (ಈಗಿಲ್ಲ) ಬೋಗಿಯಲ್ಲಿ ಪ್ರಯಾಣಿಸಿ ದೇಶ ಅವಲೋಕಿಸಿ ನಂತರ ಈ ದೇಶ ಸ್ವಾತಂತ್ರ ಹೋರಾಟದ ಚುಕ್ಕಾಣಿ ಸ್ವಾತಂತ್ರ ಪಡೆಯುವ ತನಕ ಮುನ್ನಡೆಸುವುದು.

ಈ ಅಹಿಂಸಾತ್ಮಕವಾದ ಹೋರಾಟಕ್ಕೆ ಇಡೀ ದೇಶದ ಜನತೆ ಹಿಂಬಾಲಿಸುವುದು, ಅಹಿಂಸೆ- ಸತ್ಯ – ದೇವರು – ಜಾತ್ಯಾತೀತತೆ- ಸರಳ ಜೀವನ – ಆಹಾರ – ದೇಶಿ ವೈದ್ಯ – ಶಿಕ್ಷಣ – ಸ್ತ್ರಿ ಸಮಾನತೆ ಬಗ್ಗೆ ಗಾಂಧಿಜೀ ಬೋದನೆ ಆಚರಣೆ ಮತ್ತು ಬರವಣಿಗೆ ನಂತರ ಅವರೇ ಈ ದೇಶದ ಅಧಿಕಾರದ ಚುಕ್ಕಾಣೆ ಹಿಡಿಯಬಹುದಾಗಿತ್ತಾದರೂ ಅವರು ಅದರಿಂದ ದೂರ ಸರಿಯುವುದು.

ಅವರ ಕುಟುಂಬದವರಾರಿಗೂ ಹಣ ಅಧಿಕಾರ ನೀಡದ ಅವರ ಪರೋಪಕಾರಿ ಜೀವನ ನಂತರ ದೇಶ ವಿಭಜನೆ ಆಗಿದ್ದು ಆಗ ಗಾಂಧಿಯನ್ನು ಗುಂಡಿಕ್ಕಿ ಕೊಂದದ್ದರ ವರೆಗೆ ಅವರು ಹೇಳಿದ ಸಂಪೂರ್ಣವಾದ ಸಂಕ್ಷಿಪ್ತ ಕಥೆ ಮತ್ತೊಮ್ಮೇ ಇಡೀ ತರಗತಿಯಲ್ಲಿ ಕಣ್ಣೀರ ದಾರೆ ಸುರಿಸಿತು. ಆಗ ಹೆಡ್ ಮಾಸ್ತರ್ ಎದ್ದು ಹೊರಟವರು ತಿರುಗಿ ನಿಂತು ಗಾಂದಿ ನಿಂದಿಸುವ ವಿದ್ಯಾರ್ಥಿಗೆ ಕೇಳಿದರು “ನೀನು ಬೈಯುತ್ತಿದ್ದ ಗಾಂದಿ ಇವರೇನಾ?”…. ಅಂದಾಗ ಅತ್ತು ಅತ್ತು ಕಣ್ಣೀರಾಗಿದ್ದ ಆತ “ಇಲ್ಲಾ ಸಾರ್ ನಾನು ಹೇಳಿದ್ದು ಬೇರೆ ಗಾಂದಿ” ಅಂದಾಗ ನಮಗೇ ಆಶ್ಚಯ೯ ಮತ್ತು ಬೇರೆ ಗಾಂದೀ ಯಾರು? ಅಂತ.

ಆಗ ಅವರು ಹೇಳಿದ್ದು “ಬೇರೆ ಗಾಂಧೀಜಿ ಇಲ್ಲ ಅವರು ಒಬ್ಬರೇ ಮಹಾತ್ಮ ಗಾಂಧೀಜಿ ಅವರ ಬಗ್ಗೆ ತಿಳಿಯದವರು ಓದದವರು ಸ್ವಾತಂತ್ರ ಹೋರಾಟದ ಅರಿವೇ ಇಲ್ಲದವರು ಈ ರೀತಿ ಗಾಂಧೀಜಿ ವಿರುದ್ದ ಮಾತಾಡುತ್ತಾರೆ” … ಅಂದಿದ್ದು ಪ್ರತಿವಷ೯ ಗಾಂಧೀ ಜಯಂತಿಯಂದು ನೆನಪು ಆಗುತ್ತದೆ. ಗಾಂಧೀಜಿ ದ್ವೇಷಿಸಲು ಬೇರಾವ ಕಾರಣವೂ ಸಿಗದಂತ ಅವರ ಜೀವನ ಮಾರ್ಗ, ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿದ್ದಾರೆ, ಅವರನ್ನೆ ದ್ವೇಷಿಸುವ ಮತ್ತು ಟೀಕೆ ಮಾಡುವವರಿಗೂ ಪ್ರಜಾಪ್ರಭುತ್ವದ ಹಕ್ಕಿನ ಸಮಾನತೆಯ ಸ್ವಾತಂತ್ರ್ಯ ಕೊಡಿಸಿದ್ದಾರೆಂಬುದು ನಾವ್ಯಾರು ಮರೆಯಬಾರದು.


  • ಅರುಣ್ ಪ್ರಸಾದ್

One thought on “ಗಾಂಧಿ ಬಗ್ಗೆ ನೀವೇನು ಓದಿದ್ದೀರಿ ?”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading