ಅಂತರಾಷ್ಟ್ರೀಯ ಕಾಫ಼ೀ ದಿನದಂದು ಬೆಳ್ಳಂಬೆಳಿಗ್ಗೆಯೇ ನಾನೇ ತಯಾರಿಸಿಕೊಂಡ ಘಮಘಮವಾದ ಸ್ವಾದಭರಿತ ಕಾಫ಼ೀ ಜೊತೆ ಜೊತೆಗೇ ನಮ್ಮ ಚಿತ್ರದುರ್ಗದವರೇ ಆದ ನಳಿನಿ ಭೀಮಪ್ಪನವರ “ಒಂದು ಕಪ್ ಕಾಫ಼ೀ” ಕೂಡಾ ಸವಿದಿದ್ದು ಡಬಲ್ ಧಮಾಕಾ ಸವಿಯಂತೆ ಇತ್ತು ! ‘ಒಂದು ಕಪ್ ಕಾಫ಼ೀ’ ಪುಸ್ತಕದ ಕುರಿತು ಹಿರಿಯೂರು ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಒಂದು ಕಪ್ ಕಾಫ಼ೀ
ಲೇಖಕರು : ನಳಿನಿ ಭೀಮಪ್ಪ
ಪ್ರಕಾರ : ಪ್ರಬಂಧಗಳ ಸಂಕಲನ
ಪ್ರಕಾಶನ : ಭಾವಸಿಂಚನಾ ಪ್ರಕಾಶನ
ಬರೋಬ್ಬರಿ 32 ಗುಟುಕುಗಳುಳ್ಳ ಈ ರುಚಿಕರವಾದ ಕಾಫ಼ೀಯನ್ನು ಚಪ್ಪರಿಸುವುದೇ ಒಂದು ಆಹ್ಲಾದಕರ ಅನುಭವ. ಒಂದೊಂದು ಗುಟುಕೂ ಸಹ ಅದರದ್ದೇ ಆದ ಸ್ವಾದವನ್ನುಂಟುಮಾಡುತ್ತಾ ನಿಮ್ಮ ಮನಸನ್ನು ಪ್ರಫುಲ್ಲವಾಗಿಸುವುದರ ಜೊತೆಗೆ ಮೂಡನ್ನೂ ಪುಳಕಿತಗೊಳಿಸಬಲ್ಲದು. ಬೆಳಗಿನ ಒಂದು ಕಪ್ ಕಾಫ಼ೀ ಹೇಗೆ ನಿಮ್ಮಇಡೀ ದಿನವನ್ನು ಉಲ್ಲಸಿತವಾಗಿಡ ಬಲ್ಲದೋ ಹಾಗೆಯೇ ಹರಟೆಗಳ ಗುಟುಕಿನ ಅಡಿ ಬರಹದಲ್ಲಿ ರೂಪುಗೊಂಡಿರುವ ಒಂದು ಕಪ್ ಕಾಫ಼ೀ ನಿಮ್ಮನ್ನು ಲವಲವಿಕೆಯಿಂದ ಖುಷಿಖುಷಿಯಾಗಿ ಓದಿಸಿಕೊಂಡು ಹೋಗಬಲ್ಲ ಸವಿಸವಿ ಪಯಣ.
ಅಂದಹಾಗೆ ಹೇಗಿದೆ ಈ ಒಂದು ಕಪ್ ಕಾಫ಼ೀ ..?

ಕೋಟೆನಾಡು ಚಿತ್ರದುರ್ಗದ ನೆಲದಲ್ಲಿ ಜನಿಸಿ ಪೇಢಾನಾಡು ಧಾರವಾಡದಲ್ಲಿ ಬದುಕು ಕಟ್ಟಿಕೊಂಡು ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ತಾರೆಯಾಗಿ, ಮುಖಪುಸ್ತಕದ ಸೆಲೆಬ್ರಿಟಿಯಾಗಿ ಮಿರಮಿರ ಮಿಂಚುತ್ತಿರುವ ನಳಿನಿ ಭೀಮಪ್ಪನವರ ಹರಟೆಗಳ ಗುಟುಕುಗಳಂತಿರುವ ಪ್ರಬಂಧಗಳ ಸಂಕಲನವೇ ಈ ಪುಸ್ತಕ. ಒಂದೇ ಸಾಲಿನಲ್ಲಿ ಹೇಳುವುದಾದರೆ, ಮನಸ್ಸಿಗೆ ಆಯಾಸವಾದಾಗ , ತಲೆ ಭಾರವೆನಿಸಿದಾಗ , ಒಂದು ಕಪ್ ಫ಼ಿಲ್ಟರ್ ಕಾಫ಼ೀ ಹೇಗೆ ನಮ್ಮ ಮೂಡ್ ಅನ್ನು ಫ಼್ರೆಷ್ ಆಗಿಸುತ್ತದೆಯೋ ಅದೇ ರೀತಿಯಲ್ಲಿ ಹಲವು ಲೇಖನಗಳ ಗುಚ್ಛವಾದ ಈ ಕೃತಿಯನ್ನೊಮ್ಮೆ ಹಿಡಿದಲ್ಲಿ, ಅದು ಕಾಫ಼ೀ ಮಗ್ ಹಿಡಿದು ಎಂಜಾಯ್ ಮಾಡಿದಂತಹ ಅನುಭೂತಿಗೆ ಒಡ್ಡಿ ಮನಸ್ಸನ್ನು ಪುಳಕಿತಗೊಳಿಸುವತ್ತ ನಿಮ್ಮನ್ನು ಸರಾಗವಾಗಿ ಎಳೆದೊಯ್ಯುತ್ತದೆಯೆಂದರೆ ಅತಿಶಯವೆನಿಸದು.
ಈ ಬರಹಗಳಲ್ಲಿನ ವಸ್ತು- ವಿಷಯಗಳು ನಮ್ಮ ನಿಮ್ಮೆಲ್ಲರ ನಿತ್ಯ ಬದುಕಿನ ಪ್ರಾಕ್ಟಿಕಲ್ ಅನುಭವಗಳೇ ಆಗಿದ್ದು ಅದನ್ನು ಲೇಖಕಿ ನಳಿನಿಯವರು ತಮ್ಮ ಸರಳವಾದ ಆದರೆ ಶಕ್ತಯುತ ಶೈಲಿಯಿಂದಾಗಿ ಸುಲಲಿತವಾಗಿ ಓದಿಸಿಕೊಂಡು ಹೋಗುವಂತೆ ಕಟ್ಟಿಕೊಟ್ಟಿದ್ದಾರೆ. ಇವರ ಬರಹಗಳಲ್ಲಿ ನವಿರಾದ ಹಾಸ್ಯವಿದೆ, ಸವಿಯಾದ ಪ್ರಸಂಗಗಳಿವೆ, ಗಂಭೀರವಾದ ವಿಚಾರಗಳಿವೆ, ತಮ್ಮನ್ನು ತಾವು ಹಾಸ್ಯ ಮಾಡಿಕೊಳ್ಳುವ ಪ್ರಾಮಾಣಿಕತೆಯಿದೆ, ನಾಲ್ಕೈದು ದಶಕಗಳ ಹಿಂದಿನ ಜೀವನಪದ್ದತಿಯ ಸೊಗಸಾದ ಅನಾವರಣವಿದೆ, ದುರ್ಗದ ಬಯಲುಸೀಮೆ ಭಾಷೆಯ ಸೀದಾ ಸಾದಾ ಸೊಗಡಿನೊಂದಿಗೆ ಧಾರವಾಡದ ಭಾಷೆಯ ಉತ್ತರಕರ್ನಾಟಕ ಶೈಲಿಯ ಲಾಲಿತ್ಯವೂ ಸೇರಿಕೊಂಡಿದೆ, ಇವೆಲ್ಲದಕ್ಕೂ ಕಳಸವಿಟ್ಟಂತೆ ನಳಿನಿಯವರ ಸರಳವಾದ, ಶಬ್ದಾಡಂಬರಗಳ ದೊಂಬಿಗಳಿಲ್ಲದ ಬರಹ ಹಾಗೂ ವಿಶೇಷ ಶೈಲಿ, ಓದುಗರನ್ನು ಅನಾಮತ್ತು ಸೆಳೆಯುವಲ್ಲಿ ಯಶಸ್ವಿಯಾಗಿ, ಲಲಿತಪ್ರಬಂಧ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಭರವಸೆಯನ್ನು ತುಂಬಿದೆ. ಕೈಯಲ್ಲಿ ಒಂದು ಕಪ್ ಸ್ವಾದಭರಿತ ಬಿಸಿಬಿಸಿ ಕಾಫ಼ೀ ಹಿಡಿದರೆ ಹೇಗೆ ಕುಡಿಸಿಕೊಂಡು ಹೋಗುವುದೋ ಹಾಗೆಯೇ ಈ ಪುಸ್ತಕ ಹಿಡಿದಲ್ಲಿ ಪೂರಾ ಮುಗಿಯುವವರೆಗೂ ಓದುಗರನ್ನು ಬಿಡದು.
ಇದು ಹರಟೆಗಳ ಗುಟುಕು ಅಂತಿದ್ದರೂ, ಪ್ರತೀ ಅಧ್ಯಾಯದಲ್ಲೂ ವಾಸ್ತವಿಕ ಘಟನೆಗಳ ಆಧಾರದಲ್ಲಿ, ಅಲ್ಲಲ್ಲಿ ಅನೇಕ ಅಪಸವ್ಯಗಳ ಅನಾವರಣ ಮಾಡಿಸಿ ಆ ಮೂಲಕ ಹಾಸ್ಯಲೇಪಿತ ನುಡಿಗಳಿಂದಲೇ ಜಾಗೃತಿಯನ್ನುಂಟು ಮಾಡುವ ಸಮಾಜಮುಖಿ ಕಾಳಜಿಯೂ ಲೇಖಕಿಯವರಿಗಿದೆ ಎಂಬುದು ವಿಶೇಷ.
ಇಂದಿನ ಹೊಸ ಕಾರು ಕೊಳ್ಳುವ ಸಡಗರದಿಂದ ಹಿಡಿದು, ಹಿಂದಿನ ಕಾಲದಲ್ಲಿ ಸಿನಿಮಾ ನೋಡಲಿಕ್ಕಾಗಿ ಇರುತ್ತಿದ್ದ ಸಿರಿ ಸಂಭ್ರಮದವರೆಗೂ ಮುವ್ವತ್ತೆರಡು ಭಿನ್ನ ಹರಟೆಗಳಲ್ಲಿ ಹರಡಿಕೊಂಡಿರುವ ನಳಿನಿಯವರ ಈ ಕಾಫ಼ಿಯ ಪರಿಮಳದಲ್ಲಿ ಓದುಗರು ನಿರಾಯಾಸವಾಗಿ ತೇಲಿಕೊಂಡು ಹೋಗುತ್ತಾರೆ. ಒಬ್ಬ ಲೇಖಕಿಯಾಗಿ ಇವರು ಆಯ್ಕೆ ಮಾಡಿಕೊಂಡಿರುವ ನಿತ್ಯಾನುಭವಗಳ ವಿಷಯ ವಸ್ತುಗಳನ್ನು ಗಮನಿಸಿದರೆ ಇವರಲ್ಲಿನ ಸೂಕ್ಷ್ಮ ಒಳನೋಟದ ಪರಿಚಯ, ಸಮಾಜಮುಖಿ ಆಲೋಚನೆ ಹಾಗೂ ಎಲ್ಲದರಲ್ಲೂ ಹಾಸ್ಯ ಬೆರೆಸಿ ಹೇಳುವ ಜಾಣತನಗಳು ಎದ್ದು ಕಾಣುತ್ತವೆ.
ನಾರಿಗೂ ಸೀರೆಗೂ ಇರುವ ಬಾಂಡೇಜು, ರಂಗು ರಂಗು ರವಿಕೆಗಳ ರಂಗೋಲಿ, ಕೂದಲು ಕಾಪಾಡಿಕೊಳ್ಳಲು ಪಡುವ ಪಡಿಪಾಟಲು, ಹಿಂದಿನ ಕಾಲದಲ್ಲಿದ್ದ ಬಾಣಂತಿ ಕೋಣೆ ಮತ್ತು ಅಜ್ಜಿಯಂದಿರ ಆಡಳಿತ, ಮಾತೆಯರ ಮಾತುಗಳ ವೈಭವಗಳ ಜೊತೆಗೆ ದಿನಪತ್ರಿಕೆ ಎಂಬ ನಿತ್ಯ ಸಂಗಾತಿ, ಮೊಬೈಲ್ ನ ಐಲು ಐಲು, ಆಕಾಶವಾಣಿಯ ಮಹತ್ವ, ಕಲ್ಯಾಣಮಂಟಪದ ಅಳಲುಗಳಂತಹ ವಿಷಯಗಳ ಸುತ್ತ ಆನಂದಮಯವಾಗಿ ವಿಹರಿಸುವಂತೆ ವಿವರಿಸಿದ್ದಾರೆ. ಇದಲ್ಲದೇ ಹೋಳಿಗೆಗಳ ವಿಧಗಳು, ಮೆಣಸಿನಕಾಯಿ, ಉಪ್ಪಿನಕಾಯಿ, ಕಾಫ಼ೀ… ಇತ್ಯಾದಿಗಳ ಸ್ವಾದಗಳ ಬಗ್ಗೆ ರಸವತ್ತಾದ ಅನುಭವಗಳ ಖಜಾನೆಯನ್ನೇ ತೆರೆದಿಟ್ಟಿದ್ದಾರೆ. ಇವರ ವಿಷಯ ವಸ್ತುಗಳಲ್ಲಿ ಮನೆಯೊಳಗಿನ ಬಾತ್ ರೂಂ ಗಳು, ಸೊಳ್ಳೆ, ಜಿರಲೆ, ತಿಗಣೆ ಮುಂತಾದ ಒಲ್ಲದ ನಿತ್ಯ ಪಯಣಿಗರೊಂದಿಗಿನ ಪರದಾಟದ ಪ್ರಸಂಗಗಳೂ ಸಹಾ ಸೇರಿಕೊಂಡು ಪ್ರತೀ ಗುಟುಕನ್ನೂ ಸವಿಸವಿಯಾಗಿಸಿವೆ. ಹಾಗೆಯೇ ಧಾರವಾಡದ ಸೌಂದರ್ಯ, ಅಲ್ಲಿನವರ ಭಾಷೆ, ನಿತ್ಯಜೀವನ ಹಾಗೆಯೇ ಮಿತಿಗಳನ್ನು ತೆರೆದಿಟ್ಟ ಹಾಗೆ ಟಾಯ್ಲೆಟ್ ಸೌಲಭ್ಯವಿಲ್ಲದ ತಾಯಿಯ ಹಳ್ಳಿಗೆ ಹೋದಾಗ ಅನುಭವಿಸಿದ ಯಾತನೆಗಳನ್ನು ಕಚಗುಳಿಯಿಡುವಂತೆ ಅಕ್ಷರೀಕರಿಸಿದ್ದಾರೆ.
ಒಂದೆರಡು ಗುಟುಕುಗಳಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ‘ಗುಟಕಾ’ದ ಕಹಿ ಫ಼ೀಲಿಂಗ್ ಅನುಭವಿಸಿದಂತಾದರೂ, ಒಟ್ಟಾರೆ 144 ಪುಟಗಳ ಮಗ್ ನಲ್ಲಿ ತುಂಬಿಕೊಂಡಿರುವ 32 ಗುಟುಕುಗಳ ಒಂದು ಕಪ್ ಕಾಫ಼ೀಯನ್ನು ಒಮ್ಮೆ ಕೈಯಲ್ಲಿ ಹಿಡಿದು ಕೂತಲ್ಲಿ ಪ್ರತೀ ಗುಟುಕನ್ನೂ ಚಪ್ಪರಿಸುತ್ತಲೇ ಆಸ್ವಾದಿಸಬಹುದೆಂಬ ಭರವಸೆಯನ್ನು ಕೊಡಬಲ್ಲೆ.
ನೀವೂ ಒಮ್ಮೆ ಈ ಕಾಫ಼ೀಯನ್ನು ತಪ್ಪದೇ ಟ್ರೈ ಮಾಡಿ..!

* ಮರೆಯುವ ಮುನ್ನ *
ಯಾವುದೇ ಒಂದು ಸಾಹಿತ್ಯ, ಅದು ಕತೆ, ಕವನ, ಕಾವ್ಯ ಕಾದಂಬರಿ, ನಾಟಕ, ಪ್ರಬಂಧ …ಇತ್ಯಾದಿ ಯಾವುದೇ ಪ್ರಕಾರದ್ದಾಗಿರಲಿ, ಅದರಲ್ಲಿ ಯಶಸ್ಸು ಗಳಿಸುವುದು ಅವುಗಳ ಸತ್ವಯುತ ವಸ್ತು- ವಿಷಯ, ನಿರೂಪಣೆ , ಬರಹದ ಶೈಲಿ ಹಾಗೂ ಓದಿಸಿಕೊಂಡು ಹೋಗಬಲ್ಲ ಸಾಮರ್ಥ್ಯವಿರುವ ಗುಣಾತ್ಮಕ ಅಂಶಗಳಿಂದ ಮಾತ್ರ. ಕಥೆ ಕಾದಂಬರಿಗಳಿಗೆ ಹೋಲಿಸಿದಲ್ಲಿ ಕನ್ನಡದಲ್ಲಿ ಲಲಿತ ಪ್ರಬಂಧಗಳಿಂದಲೇ ಜನಪ್ರಿಯರಾಗಿರುವ ಬರಹಗಾರರು ವಿರಳ. ಆದರೆ ಲಲಿತ ಪ್ರಬಂಧಗಳಿಗೂ ಓದುಗರನ್ನು ನಿರಾಯಾಸವಾಗಿ ಹಿಡಿದಿಡಬಲ್ಲ, ಆಕರ್ಷಿಸಬಲ್ಲ ತಾಕತ್ತು ಇದೆ ಎಂಬುದು ನಳಿನಿ ಭೀಮಪ್ಪನವರ ಬರಹಗಳ ಶೈಲಿಯಿಂದ ಸಾಬೀತಾಗಿದೆ.

ವಾಸ್ತವತೆ, ತುಂಬಾ ಪ್ರಾಕ್ಟಿಕಲ್ ಆಗಿ ಯೋಚಿಸುವ ರೀತಿ, ಎಂತಹ ಗಂಭೀರ ವಿಷಯವಾದರೂ ಅದಕ್ಕೆ ನವಿರಾದ ಹಾಸ್ಯ ಲೇಪಿಸಿ ವಿಷಯ ಮಂಡನೆ ಮಾಡುವ ವಿಶೇಷ ಶೈಲಿ, ಸರಳವಾಗಿ ಕಥೆ ಹೇಳುವ ಪರಿ, ತಮ್ಮವೇ ಆದ ವೈಯಕ್ತಿಕ ಅನುಭವಗಳ ಕಥನ ಹಾಗೂ ಮುಖ್ಯವಾಗಿ ಯಾವ ಹಂತದಲ್ಲೂ ಬೋರ್ ಎನಿಸದೇ ಓದಿಸಿಕೊಂಡು ಹೋಗುವ ವಾಕ್ಯ ರಚನೆ… ಇತ್ಯಾದಿಗಳು ನಳಿನಿಯವರನ್ನು ಒಬ್ಬ ಭರವಸೆಯ ಲೇಖಕಿಯನ್ನಾಗಿ ಎದುರು ನೋಡುವಂತೆ ಮಾಡಿವೆ. ಬಹುಶಃ ಈ ಮಾತಿಗೆ ಸಮರ್ಥನೆಯಾಗಿ ಪ್ರತಿನಿತ್ಯವೂ ಒಂದಲ್ಲ ಒಂದು ಪತ್ರಿಕೆ ಅಥವಾ ಮ್ಯಾಗಝ್ಹೀನ್ ಗಳಲ್ಲಿ ನಳಿನಿಯವರ ಲೇಖನಕ್ಕೆ ಅಗ್ರಸ್ಥಾನವಿರುವುದನ್ನು ಗಮನಿಸಬಹುದು.
“ಒಂದು ಕಪ್ ಕಾಫ಼ೀ” ನಿಜಕ್ಕೂ ಕನ್ನಡ ಸಾಹಿತ್ಯಲೋಕದಲ್ಲಿ ನಳಿನಿಯವರ ವಿಶಿಷ್ಟ ಬರಹಗಳಿಂದಾಗಿ ಪ್ರಬಂಧ-ಲಲಿತಪ್ರಬಂಧ ಸಾಹಿತ್ಯದ ನವತಾರೆಯಾಗಿ ಗುರುತಿಸಿಕೊಳ್ಳಬಲ್ಲಂತೆ ಮಾಡಬಲ್ಲ ಕೃತಿಯಾಗಿ ಗಮನ ಸೆಳೆದಿದೆ.
ಅವರಿಂದ ಮತ್ತಷ್ಟು ಸಮೃದ್ಧ ಸಾಹಿತ್ಯದ ಕೊಡುಗೆಗಳು ಕನ್ನಡ ಸಾಹಿತ್ಯಲೋಕಕ್ಕೆ ಸಿಗಲಿವೆ ಎಂಬ ಭರವಸೆಯನ್ನು ಅವರ” ಒಂದು ಕಪ್ ಕಾಫ಼ೀ ” ಕುಡಿದು ಮುಗಿಸಿದ ನಂತರ ಅನಿಸದೇ ಇರದು..
ಪ್ರೀತಿಯಿಂದ…..
- ಹಿರಿಯೂರು ಪ್ರಕಾಶ್
