ಹಸಿದವನಿಗೆ ಬೇಕಿರುವುದು ಒಂದೇ ಒಂದು ತುತ್ತು ಪ್ರೀತಿಯ ಕೈತುತ್ತನ್ನು ಎಂದಾದರೂ ಮರೆಯುವುದುಂಟೆ…ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಏನೆಂದರೆ ಏನೂ ಬೇಕಿರಲಿಲ್ಲ
ನನಗೆ ಈ ಕ್ಷಣ ನಿನ್ನಿಂದ
ಒಂದೇ ಒಂದು ಮಾತನ್ನು
ಆಡಿದರೆ ಸಾಕಿತ್ತು ಪ್ರೀತಿಯಿಂದ
ನನ್ನೊಳಗೆ ನಾನು ಕುಣಿದು
ಕುಪ್ಪಳಿಸುತ್ತಿದ್ದೆ ಖುಷಿಯಿಂದ
ನನ್ನೊಳಗಿನ ನೋವುಗಳನ್ನೆಲ್ಲ
ಕಳಚಿ ಬದಿಗಿಟ್ಟು
ಸುಮ್ಮನೆ ಹಿಂತಿರುಗಿ ನೋಡದೆ
ಸಾಗುತ್ತಿದ್ದೆ ನೆಮ್ಮದಿಯಿಂದ
ದೂರದಿಂದಲೇ ಕೈ ಬೀಸಿ ಪ್ರೀತಿಯಿಂದ ಬೀಳ್ಕೊಟ್ಟರಷ್ಟೇ ಸಾಕಿತ್ತು
ನೊಂದು ಬೆಂದು ಹೋಗಿದ್ದ ಈ
ಬಡಜೀವಕ್ಕೆ ಬೇರೇನು ಬೇಕಿತ್ತು
ಪ್ರೀತಿ ಆತ್ಮೀಯತೆಯ ಒಂದೆರಡು
ಮಾತುಗಳಷ್ಟೇ ಸಾಕಿತ್ತು
ಹಸಿದವನಿಗೆ ಬೇಕಿರುವುದು
ಒಂದೇ ಒಂದು ತುತ್ತು
ಪ್ರೀತಿಯ ಕೈತುತ್ತನ್ನು ಎಂದಾದರೂ ಮರೆಯುವುದುಂಟೆ
ಎದುರಲ್ಲಿ ಹತ್ತಾರು ಪ್ಲೇಟು
ಊಟವನಿಟ್ಟರೆ ಉಣ್ಣುವುದುಂಟೆ
ನೊಂದ ಕಣ್ಣೀರನ್ನು ಒಮ್ಮೆ
ಒರೆಸಿ ನೋಡು
ಪ್ರೀತಿಯ ಹಂಚುತ್ತ ಹಂಚುತ್ತ
ಬಾಳಿ ನೋಡು
ಯಾವ ಅಷ್ಟೈಶ್ವರ್ಯವೂ
ಕೊಡದು ನಿನಗೆ ನೆಮ್ಮದಿಯ
ಪ್ರೀತಿಯ ಒಲವಗೂಡಲ್ಲಿ ಪಡೆಯುವೆ
ನೀ ಶಾಂತಿ ಸಮೃದ್ಧಿಯ
ಎಲ್ಲರ ಬದುಕಲ್ಲಿಯೂ ಇದ್ದೇ
ಇದೆ ಒಂದಿಷ್ಟು ಬೇವು
ತೆಗೆಯಬೇಕು ನಾವು ಪ್ರೀತಿಯಿಂದ
ಎಲ್ಲರ ಮನಸಿನ ನೋವು
- ನಾಗರಾಜ ಜಿ. ಎನ್. ಬಾಡ – ವಾಣಿಜ್ಯ ತೆರಿಗೆ ನಿರೀಕ್ಷಕರು, ವಾಣಿಜ್ಯ ತೆರಿಗೆ ಅಧಿಕಾರಿಗಳ ಕಛೇರಿ, ಜಾರಿ-೨, ಕುಮಟ, ಉತ್ತರ ಕನ್ನಡ.
