‘ಚೌಚೌ ಬಾತ್’ ಅಂಕಣ (ಭಾಗ – ೪೨)

ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ನಾವು ಕುಟುಂಬ ಸಮೇತ ಪ್ರವಾಸ ಹೋಗಿದ್ದಾಗ ನಡೆದ ಹಾಸ್ಯ ಸನ್ನಿವೇಶವಿದು, ಬಿಸ್ಲೇರಿ ಬಾಟಲಿನಲ್ಲಿದ್ದ ನೀರು ಇದ್ದಕ್ಕಿದಂತೆ ಕಾಣೆ ಆಗಿತ್ತು, ಆ ಬಾಟಲಿ ಎಲ್ಲಿ ಹೋಯಿತು ಗೊತ್ತಾ, ಸರ್ವಮಂಗಳ ಜಯರಾಮ್ ಅವರ  ‘ಚೌಚೌ ಬಾತ್’ ಅಂಕಣದಲ್ಲಿ ‘ಪವಿತ್ರ ಜಲಕ್ಕೆ ಬಂದ ಕುತ್ತು’ ತಪ್ಪದೆ ಮುಂದೆ ಓದಿ…

ಮೊನ್ನೆ ನಾನು ಫೇಸ್ಬುಕ್ ನೋಡುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಚಿತ್ರ ಕಣ್ಣಿಗೆ ಬಿತ್ತು. ಆ ಚಿತ್ರ ನೋಡಿದ ಕೂಡಲೇ ಹಿಂದೆ ನಡೆದ ಒಂದು ಘಟನೆ ನೆನಪಾಯಿತು. ಹಾಗೂ ತುಂಬಾ ನಗು ಬಂತು. ಆ ಚಿತ್ರ ಯಾವುದಪ್ಪ ಅಂದರೆ ರಸ್ತೆ ಬದಿಯಲ್ಲಿ ಒಬ್ಬ ಸುಂದರ ನೀರೆ, ಟಾಯ್ಲೆಟ್ ಗೆ ಹೋಗಿ ಬಂದ ತನ್ನ ನಾಲ್ಕೈದು ವರ್ಷದ ಮಗನಿಗೆ ಬಿಸ್ಲೇರಿ ಬಾಟಲಿಯ ನೀರಿನಿಂದ ತೊಳೆಯುತ್ತಿರುವ ಚಿತ್ರ. ಸೇಮ್ ಅಂತಹುದೇ ಸನ್ನಿವೇಶ, ಘಟನೆ ನಡೆದಿದ್ದು ಕಣ್ಣ ಮುಂದೆ ಬಂತು.

ಸರಿ ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ನಾವು ಕುಟುಂಬ ಸಮೇತ ಪ್ರವಾಸ ಹೋಗಿದ್ದೆವು. ನಮ್ಮ ಜೊತೆ ನಮ್ಮ ಅಕ್ಕ ಕೂಡ ಬಂದಿದ್ದರು. ಆಗ ನಾವು ಮಧುರೈ, ಕನ್ಯಾಕುಮಾರಿ, ರಾಮೇಶ್ವರಂ ಮುಂತಾದ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೆವು. ರಾಮೇಶ್ವರಂ ನಲ್ಲಿ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಇಪ್ಪತ್ತೊಂದು ಬಾವಿಗಳ ನೀರಿನಿಂದ ಪವಿತ್ರ ಸ್ನಾನ ಮಾಡಿ ನಂತರ ದೇವರ ದರ್ಶನಕ್ಕೆ ಹೋಗಬೇಕು. ಆದರೆ ಈಗ ನಾಲ್ಕು ಬಾವಿಗಳು ಒಣಗಿ ಹೋಗಿ ಈಗ ಕೇವಲ ಹದಿನೇಳು ಬಾವಿಗಳು ಮಾತ್ರ ಇವೆಯಂತೆ.
ಅಲ್ಲಿ ದೇವಸ್ಥಾನದ ಆವರಣದಲ್ಲಿ ಒಂದೊಂದು ಬಾವಿಯ ಬಳಿಯೂ ಒಬ್ಬ ವ್ಯಕ್ತಿ ನಿಂತಿರುತ್ತಾನೆ. ಅಲ್ಲಿ ಹೋಗಿ ನಾವು ಮೊದಲೇ ತೆಗೆದುಕೊಂಡ ಟಿಕೆಟ್ ಕೊಟ್ಟರೆ ಒಂದು ಸಣ್ಣ ಚೊಂಬಿನಷ್ಟು ನೀರು ಹಿಡಿಸುವ ಪುಟ್ಟ ಬಕೆಟ್ನಲ್ಲಿ ನೀರನ್ನು ತಲೆಯ ಮೇಲೆ ಸುರಿಯುತ್ತಾರೆ. ಹಾಗೆ ನಾವೆಲ್ಲ ಸ್ನಾನ ಮಾಡಿದೆವು. ಬಾವಿಯ ನೀರು ಐಸ್ ನಂತೆ ತಣ್ಣಗೆ ಕೊರೆಯುತ್ತಿದ್ದವು. ಆದರೆ ಆಗ ಬೇಸಿಗೆಕಾಲ ಆದ್ದರಿಂದ ತಣ್ಣೀರು ಸ್ನಾನ ಹಿತಕರವಾಗಿಯೇ ಇತ್ತು. ನಮ್ಮ ಅಕ್ಕ ಆ ಹದಿನೇಳು ಬಾವಿಗಳಿಂದ ಸ್ವಲ್ಪ ಸ್ವಲ್ಪ ನೀರನ್ನು ಪವಿತ್ರ ಜಲವೆಂದು ಸಂಗ್ರಹಿಸಿಕೊಂಡು ತಂದು ಬಸ್ನಲ್ಲಿ ಲಗೇಜ್ ಇಡುವ ಕಡೆ ಇಟ್ಟಿದ್ದಾರೆ. ಅದು ನಮಗೆ ಯಾರಿಗೂ ಗೊತ್ತಿಲ್ಲ.

ಸರಿ…..ದೇವರ ದರ್ಶನ ಸುಗಮವಾಗಿ ಆಯ್ತು. ಮುಂದಿನ ಪ್ರವಾಸಿ ಸ್ಥಳಕ್ಕೆ ತೆರಳಲು ಬಸ್ ಹೊರಟಿತು. ಮುಂದೆ ಎರಡು ಮೂರು ಸ್ಥಳಗಳನ್ನು ನೋಡಿಕೊಂಡು ವಾಪಸ್ ನಮ್ಮ ಊರಿಗೆ ರಾತ್ರಿ ಹೊರಟೆವು. ಆಗ ರಾತ್ರಿ ಸುಮಾರು ಹತ್ತು ಗಂಟೆ ಆಗಿರಬಹುದು. ಮಾರ್ಗ ಮಧ್ಯದಲ್ಲಿ ನನ್ನ ಮಗ, ಆಗ ಇನ್ನೂ ಚಿಕ್ಕವನು ಟಾಯ್ಲೆಟ್ ಗೆ ಹೋಗಬೇಕೆಂದು ಹಠ ಮಾಡಿದ. ಡ್ರೈವರ್ ಸಾಹೇಬರಿಗೆ ಹೇಳಿ ಬಸ್ ನಿಲ್ಲಿಸಿದ್ದಾಯ್ತು. ಕೆಳಗಿಳಿದು ಅಲ್ಲೇ ರಸ್ತೆ ಪಕ್ಕದಲ್ಲಿ ತನ್ನ ಕಾರ್ಯ ಪೂರೈಸಿದ. ವಾಷ್ ಮಾಡಲು ನೀರು ಬೇಕಲ್ಲ, ಬಸ್ ಹತ್ತಿ ಅವನೇ ಹೋಗಿ ಲಗೇಜ್ ಸಮೀಪವೆ ಇದ್ದ ಬಿಸ್ಲೆರಿ ಬಾಟಲಿಯಲ್ಲಿದ್ದ ನೀರು ತಂದ. ನಾನು ಅವನಿಗೆ ವಾಷ್ ಮಾಡಿ ಕರೆದುಕೊಂಡು ಬಂದೆ. ಬಸ್ನಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ನಮ್ಮ ಅಕ್ಕ ಕೂಡ ನಿದ್ರೆ ಮಾಡುತ್ತಿದ್ದಳು. ಬಸ್ ಬೆಳಗ್ಗಿನ ಜಾವ ನಮ್ಮ ಊರು ತಲುಪಿತು. ಎಲ್ಲಾ ಲಗೇಜ್ ಇಳಿಸಿಕೊಳ್ಳುವಾಗ ನಮ್ಮ ಅಕ್ಕ ಬಿಸ್ಲೇರಿ ಬಾಟಲಿ ಎಲ್ಲಿ ಎಂದು ಹುಡುಕುತ್ತಿದ್ದರು. ಆಗ ನನ್ನ ಮಗ ಏನು ಹುಡುಕುತ್ತಾ ಇದ್ದೀಯ ದೊಡ್ಡಮ್ಮ ಎಂದು ಕೇಳಿದ.

ಬಿಸ್ಲೇರಿ ಬಾಟಲಿ ಕಣೋ…..ಅದರಲ್ಲಿ ಎಲ್ಲಾ ಬಾವಿಗಳ ತೀರ್ಥ ತಂದಿದ್ದೆ, ಎಲ್ಲೋಯ್ತೋ ಕಾಣುತ್ತಿಲ್ಲ…. ಎಂದಾಗ ಬಿಸ್ಲೇರಿ ಬಾಟಲೀನ, ಬಾಟಲಿಯಲ್ಲಿ ಇದ್ದ ನೀರನ್ನು ನಾನು ಟಾಯ್ಲೆಟ್ ಗೆ ಬಳಸಿದೆ ಅಂದಾಗ ಎಲ್ಲರೂ ಜೋರಾಗಿ ನಕ್ಕರು. ಪವಿತ್ರ ತೀರ್ಥ ಚೆನ್ನಾಗಿ ಬಳಕೆ ಆಯ್ತು ಬಿಡು ಎಂದು ಎಲ್ಲರೂ ನಕ್ಕಿದ್ದೆ ನಕ್ಕಿದ್ದು. ನನಗೂ ನಗು ಬಂತು. ಆದರೆ ನಮ್ಮ ಅಕ್ಕ ಪಾಪ ಪೆಚ್ಚು ಮೋರೆ ಹಾಕಿಕೊಂಡರು. ಹೀಗೆ ಪವಿತ್ರ ಜಲ ಸದ್ಬಳಕೆಯಾಗಿತ್ತು.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಮ್ – ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading