ಸಮಾಜಮುಖಿ ಚಿಂತನೆಯ ಗಜಲ್ ಸಾಲುಗಳು- ಭಾವ ತರಂಗ

ಶರಣಗೌಡ ಪಾಟೀಲ ಜೈನಾಪೂರ ಹಲವು ಪ್ರಕಾರದ ಸಾಹಿತ್ಯವನ್ನು ಬರೆದ ಇವರು ಪಾಶ್ಚಿಮಾತ್ಯ ಕಾವ್ಯ ಗಜಲ್‌ ಬರೆಯುವುದನ್ನು ರೂಢಿಸಿಕೊಂಡು “ಭಾವ ತರಂಗ” ಎಂಬ ಗಜಲ್‌ ಕೃತಿಯನ್ನು ಬರೆದು ಲೋಕಾರ್ಪಣೆ ಮಾಡಿದ್ದಾರೆ. ಈ ಕೃತಿಯ ಕುರಿತು ವಕೀಲರು ಮತ್ತು ಕವಿಗಳಾದ ನಾರಾಯಣಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕಲ್ಬುರ್ಗಿ ಜಿಲ್ಲೆಯು ಸಾಹಿತ್ಯ ನೆಲದ ಸೊಗಡಿನ ಬೀಡು, ಇಲ್ಲಿ ಸಾಹಿತ್ಯ ಸಾಂಸ್ಕೃತಿಕ, ಜಾನಪದ ಮುಂತಾದ ಬರಹಗಾರರಿಗೂ, ಹಾಡುಗಾರರು ತಮ್ಮ ನೆಲದ ಗ್ರಾಮ್ಯ ಭಾಷೆಯ ಸೊಗಡಿನ ಮೂಲಕ ಓದುಗರನ್ನು, ಕೇಳುಗರನ್ನು ಆರ್ಕಷಿಸಿದ್ದಾರೆ. ಸಾಹಿತ್ಯದ ವಿವಿದ ಪ್ರಕಾರಗಳ ಸಾಹಿತ್ಯವನ್ನು ಬರೆಯುವಂತಹ ಬಹಳಷ್ಟು ಲೇಖಕರಿದ್ದಾರೆ. ಕಾವ್ಯ, ಗಜಲ್, ಕಥೆ, ಚುಟುಕು, ವಚನ, ಲೇಖನ, ಕೃತಿ ವಿಮರ್ಶೆ ಬರೆಯುತ್ತಾ ಸುಮಾರು ಎಳು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿ, ಕನ್ನಡದ ಸಾಹಿತ್ಯ ಲೋಕದಲ್ಲಿ ‌ಗುರುತಿಸಿಕೊಂಡವರು ಶ್ರೀ ಶರಣಗೌಡ ಪಾಟೀಲ ಜೈನಾಪೂರ ಹಲವು ಪ್ರಕಾರದ ಸಾಹಿತ್ಯವನ್ನು ಬರೆದ ಇವರು ಪಾಶ್ಚಿಮಾತ್ಯ ಕಾವ್ಯ ಗಜಲ್‌ ಬರೆಯುವುದನ್ನು ರೂಢಿಸಿಕೊಂಡು “ಭಾವ ತರಂಗ” ಎಂಬ ಗಜಲ್‌ ಕೃತಿಯನ್ನು ಬರೆದು ಲೋಕಾರ್ಪಣೆ ಮಾಡಿದ್ದಾರೆ. ಈ ಕೃತಿಯ ಗಜಲ್ ಷೇರ್ ಗಳಲ್ಲಿ ಪ್ರೇಮ, ಪ್ರಣಯ, ಪ್ರೀತಿ, ವಿರಹದ ಭಾವಗಳ ಜೊತೆಯಲ್ಲಿಯೇ ಮನುಷ್ಯನ ಅಂತರಂಗದ ನೋವು, ಜಾತಿ ಮತದ ಮನಸ್ಥಿತಿ, ಬಡತನ ರೈತರ ಶೋಷಣೆ, ರಾಜಕೀಯ, ರಾಜಕೀಯ ನಾಯಕರ ಆಶ್ವಾಸನೆಗಳು ಮುಂತಾದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿ ಅರ್ಥಪೂರ್ಣ ಸಾಲುಗಳ ರಚನೆ ಮಾಡಿದ್ದಾರೆ.

ಈ ”ಭಾವ ತರಂಗ” ಎಂಬ ಗಜಲ್‌ ಕೃತಿಗೆ ನಾಡಿನ ಖ್ಯಾತ ಬರಹಗಾರರಾದಂತಹ ಸಿದ್ದರಾಮ ಹೊನ್ಕಲ್ ರವರ ಅರ್ಥಪೂರ್ಣ ಮುನ್ನಡಿ, ಬಹು ಭಾಷಾ ಲೇಖಕರು, ಹಿರಿಯರು‌ ಆದಂತಹ ಕಾಶಿನಾಥ ಅಂಬಲಗಿ ರವರ ಬೆನ್ನುಡಿ ಇದೆ. ಇವರ ಪ್ರಕಾರ ಶರಣಗೌಡ ಪಾಟೀಲ ಜೈನಾಪೂರ ರವರ ಗಜಲ್ ಸಾಲುಗಳು ಹೊಸ ಚಿಂತನೆ, ಹೊಸ ಅಭಿವ್ಯಕ್ತಿ ಗೆ ಎಡೆಮಾಡಿಕೊಟ್ಟಿದೆ ಎಂದು ಹೇಳುತ್ತಾರೆ.

ಭಾವ ತರಂಗ ಕೃತಿಯ ಒಳನೋಟದೆಡೆಗೆ ಸಾಗಿದ ಅದರೊಳಗೆ ಆರ್ಕಷಣಿಯ ಷೇರ್ ಗಳಿವೆ. ಗಜಲ್ ಪ್ರೇಮಿಗಳ ಮನಸ್ಸು ಸೆಳೆಯುತ್ತವೆ. ಇಲ್ಲಿನ ಕೆಲವೊಂದು ಸಾಲುಗಳನ್ನು ನೋಡುವುದಾದರೆ…

ಹುಣ್ಣುಮೆ ಬೆಳದಿಂಗಳಲಿ ನೆರಳಿನ ಸ್ನೇಹ ಮಾಡಬೇಕು ಅಮಾವಾಸ್ಯೆ ಕತ್ತಲು ಮರೆತು ಬದುಕಬೇಕಾಗಿದೆ ನಾವೆಲ್ಲರೂ ಈಗ ಮನುಷ್ಯ ಸ್ನೇಹ ಜೀವಿ ತನ್ನ ಸುತ್ತಲಿನ ಸಮಾಜವನ್ನು ಪ್ರೀತಿಸುತ್ತಾನೆ. ತನ್ನೊಂದಿಗೆ ಜನರೊಂದಿಗೆ ಸ್ನೇಹ ಜೀವಿಯಾಗಿರುತ್ತಾನೆ. ಇಲ್ಲಿ ಗಜಲ್ ಕಾರನ ಪ್ರಕಾರ ಮನುಷ್ಯ ಇಡೀ ಭೂಮಿಯನ್ನು ತನ್ನ ತಂಪಾದ ಬೆಳಕಿನಿಂದ ಸಂಭವಿಸುವ ಹುಣ್ಣುಮೆಯ ಬೆಳದಿಂಗಳ ನೆರಳಿನಲ್ಲಿ ಮೂಡುವಂತಹ ರೀತಿಯಲ್ಲಿ ಮನುಷ್ಯ ತನ್ನ ಸ್ನೇಹ ಮಾಡಬೇಕು. ಅದರೆ ಅವನ ಬದುಕು ಅಮಾವಾಸ್ಯೆ ಬಂದು ಕತ್ತಲು ಆವರಿಸುತ್ತದೆ. ಆ ಕತ್ತಲನ್ನು ಮರೆತು ಜೀವಿಸ ಬೇಕಾಗಿದೆ ಎಂದು ತಿಳಿಸುತ್ತಾರೆ.

ಅಪ್ಪನ ಕಾಲದಾಗ ಮೆಟ್ಟಿಲ್ಲಾಂದ್ರು ಚಿಂತೆ ಮಾಡ್ತಾ ಇಲ್ವಲ್ಲೊ ತಮ್ಮ ಮೊಬೈಲ್ನಾಗ ನೆಟ್ಟಿಲ್ಲಂದ್ರ ಊಟ ಆಟ ಪಾಠ ಬಿಡ್ತಿಯಲ್ಲೊ‌ ತಮ್ಮ ಈ ಗಜಲ್ ಷೇರ್ ನಲ್ಲಿ ಇತ್ತೀಚಿನ ದಿನಗಳಲ್ಲಿ ‌ಮನುಷ್ಯ ಈ‌ ಮೊಬೈಲ್‌ ಎಂಬ ಜಂಗಮವಾಣಿಗೆ ಹೇಗೆ ಆರ್ಕಷಿತನಾಗಿ ಮಾರು ಹೋಗಿದ್ದಾನೆ ಎಂಬುದನ್ನು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಮೊಬೈಲ್‌ ಎಂಬ ಸಾಧನ ಇರಲಿಲ್ಲ ಮನುಷ್ಯ ಬಹಳಷ್ಟು ಖುಷಿಯಾಗಿದ್ದ ಅದರೆ ಇಂದು ಮನುಷ್ಯನ ಮೊಬೈಲ್ ಇಲ್ಲದೆ ಬದುಕುವುದು ಅಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಬಹುತೇಕ ಜನರು ಕಾಲಿಗೆ ಚಪ್ಪಲಿಯನ್ನೆ ಹಾಕುತ್ತಿರಲಿಲ್ಲ. ಆ ಕಾಲದಲ್ಲಿ ಕಾಇಗೆ ಚಪ್ಪಲಿ ಇಲ್ಲ ಅಂದರೂ ಚಿಂತೆಯನ್ನು ಮಾಡುತ್ತಿರಲಿಲ್ಲ. ಅದರೆ ಪ್ರಸ್ತುತ ದಿನ ಮಾಪನಗಳಲ್ಲಿ ಅಂತರ್ಜಾಲದ ಸಂಪರ್ಕ ಇಲ್ಲದೆ ಹೋದರೆ ಮನುಷ್ಯ ಜೀವಂತ ಶವದಂತೆ ನರಳುತ್ತಾನೆ. ಈ ಮಾಯಜಾಲದ ಮೊಹಕ್ಕೆ ಮನುಜ ಹೇಗೆ ಅಂಟಿಕೊಂಡಿದ್ದಾನೆ ಅಂದರೆ ತಾನು ಬದುಕಲು ಅವಶ್ಯಕತೆಯಾಗಿರುವ ಆಹಾರವನ್ನೆ ತ್ಯಜಿಸಿಸಲು ತಯಾರಿದ್ದಾನೆ. ಇಂದಿನ ವಿದ್ಯಾರ್ಥಿಗಳು ತಮ್ಮ ಆಟ ಪಾಠಗಳನ್ನು ಮರೆತು ಮೊಬೈಲ್ ನ ದಾಸರಾಗಿದ್ದಾರೆ ಎಂದು ಮಾರ್ಮಿಕವಾಗಿ ಜನಪದ ಶೈಲಿಯಲ್ಲಿ ಈ ಸಾಲುಗಳನ್ನು ರಚಿಸಿದ್ದಾರೆ.

ಪರದೇಶಿಯ ನಾಯಿಯ ಜೊತೆಯಲ್ಲಿ ಮಲಗಿಕೊಳ್ಳುವುದೆ ನಾಗರಿಕತೆಯಾಗಿದೆ ಮುಪ್ಪಿನ ತಾಯಿಯನು ಈಗ ಆಶ್ರಮಗಟ್ಟುವುದೆ ನಾಗರೀಕತೆಯಾಗಿದೆ ಈ ಭಾವ ತರಂಗ ಎಂಬ ಸಂಕಲನದಲ್ಲಿ ಗಜಲ್ ಕಾರ ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ಮಾನವೀಯ ಸಂಭಂಧಗಳು ಹೇಗೆ? ನಶಿಸಿ ಹೋಗುತಿವೆ ಎಂಬುದರ ಬಗ್ಗೆ ನಿಜಾಂಶಗಳನ್ನು ಹೊರಹಾಕಿದ್ದಾರೆ. ಮತ್ತು ಈ ಸಾಲುಗಳು ನೂರಕ್ಕೆ ನೂರು ವಾಸ್ತವಿಕ ಸತ್ಯದ ಸಂದೇಶಗಳಾಗಿವೆ. ಮೊದಲು ನಗರ ಪ್ರದೇಶಗಳಲ್ಲಿ ಮಾತ್ರ ವಿದೇಶಿ ತಳಿಯ ನಾಯಿಗಳನ್ನು ಲಕ್ಷಾಂತರ ಹಣ ಕೊಟ್ಟು ತಂದು ಸಾಗುತ್ತಿದ್ದರು. ಮತ್ತು ಅದರ ಜೊತೆಯಲ್ಲಿಯೇ ಮಲಗುತ್ತಿದ್ದರು. ಈಗ ವಿದೇಶೀ ತಳಿಯ ನಾಯಿಗಳನ್ನು ತಂದು ಹಳ್ಳಿಯ ಜನರು ಸಾಕುತ್ತಿದ್ದಾರೆ ಇದು ಬದಲಾವಣೆ ಅಂದರೆ ನವ್ಯ ನಾಗರಿಕತೆಯಾಗಿದೆ. ಮುಪ್ಪಿನ ವಯಸ್ಸಿನಲ್ಲಿ ಇರುವ ತಂದೆತಾಯಿಗಳ ಆರೋಗ್ಯ, ಅವರ ಉಟೋಪಚಾರ, ಅವರ ಹಾರೈಕೆಯನ್ನು ಮಾಡದ ಮಕ್ಕಳು ವಯಸ್ಸಾದ ತಂದೆತಾಯಿಯರನ್ನು ಇಳಿ ವಯಸ್ಸಿನಲ್ಲಿ ವೃದ್ದಾಶ್ರಮಗಳಲ್ಲಿ ಬಿಟ್ಟು, ವಿದೇಶೀ ತಳಿಯ ನಾಯಿಗೆ ಬಗೆ ಬಗೆಯ ತಿನಿಸುಗಳನ್ನು ಕೊಟ್ಟು ಸ್ವಚ್ಛವಾದ ನೀರಿನಿಂದ ಸ್ನಾನ ಮಾಡಿಸಿ ವಾಕಿಂಗ್ ಮಾಡಿಸುತ್ತಾ ಅದನ್ನು ಜನರು ಓಡಾಡುವ ದಾರಿಯಲ್ಲೊ, ಉದ್ಯಾನವನದಲ್ಲೊ, ಕಕ್ಕಸು ಮಾಡಿಸಿ ನಾವು ಬದಲಾದ ಹೊಸ ಯುವ ಜನರು ನಾಗರಿಕತೆಯ ಕುರುಹುಗಳೆಂದು ತೋರಿಸುತ್ತಿದ್ದಾರೆ ಎಂದು ಸಂಬಂಧಗಳನ್ನು ಕಳೆದುಕೊಂಡು ಮೃಗಿಯ ಮನುಷ್ಯತ್ವನ್ನು ಬೆಳೆಸಿಕೊಂಡಿರುವ ಮನುಜನ ಮನಸ್ಥಿತಿಯನ್ನು ಹೊರಹಾಕುವಲ್ಲಿ ಗಜಲ್ ಕಾರ ಯಶಸ್ವಿಯಾಗಿದ್ಸಾರೆ.

ಶಾಂತಿಯ ನಾಡಿನಲಿ ಕ್ರಾಂತಿಯ ಗೀತೆ ಹಾಡಬೇಕಿದೆ ಈಗ ಬುದ್ದ ಬಸವ ಅಲ್ಲಮರ ತತ್ವಗಳನು ಪಾಲಿಸಬೇಕಿದೆ ಈಗ ಈ ಗಜಲ್ ಸಂಕಲನದಲ್ಲಿ ನನಗೆ ಬಹಳಷ್ಟು ಕಾಡಿದ ಷೇರ್ ಇದು. ಬುದ್ದನ ಅಹಿಂಸೆಯ ವಿಶ್ವಶಾಂತಿಯನು ಬಯಸಿ ಬಯಸಿದ ಈ ನೆಲವು ಶಾಂತಿಯ ತವರು ಮನೆಯಾಗಿದೆ, ಭಾರತದ ಸ್ವಾತಂತ್ರ್ಯ ಕ್ಕಾಗಿ ಅಹಿಂಸಾ ಮಾರ್ಗವನು ಹುಡುಕಿ ಹೋರಾಡಿದ ಗಾಂಧಿಯ ಈ ದೇಶದಲ್ಲಿ ಈ ಹಿಂಸಾತ್ಮಕ ಮನಸ್ಥಿಗಳು ಬೆಳೆಯುತಿವೆ. ಬಡವರ ಶೋಷಣೆ, ಅತ್ಯಾಚಾರ, ಕೊಲೆ ಸುಲಿಗೆ, ಜಾತಿಮತಗಳ, ಅಸಮಾನತೆ, ಧರ್ಮಗಳು ದಳ್ಳುರಿಯಲ್ಲಿ ಬೇಯುತ್ತಿವೆ. ಅಧಿಕಾರ ರಾಜಕೀಯ ಶಕ್ತಿ ಕೆಲವೇ ಜನರ ಬಳಿ ಕೇಂದಿಕೃತವಾಗಿದ್ದು ಬಡವರು ತಮ್ಮ ಹಕ್ಕುಗಳಿಗಾಗಿ ಮತ್ತು ಬದುಕಿಗಾಗಿ ಕ್ರಾಂತಿಯ ಮೂಲಕ ಹೋರಾಟವನ್ನು ಮಾಡಬೇಕಾಗಿದೆ ಈ ಶಾಂತಿಯ ನಾಡಿನಲ್ಲಿ. ಬಹುತ್ವ ಭಾರತದಲ್ಲಿ ದಾರ್ಶನಿಕರಾಗಿ ಉದಯಿಸಿದ ಸಮಾಜಕ್ಕೆ ತಮ್ಮ ಬದುಕು ಸಂದೇಶಗಳಿಂದ‌ ಮನುಜ‌ನಲ್ಲಿ‌ ಆಡಗಿದ್ದ ಮೂಢನಂಬಿಕೆ, ಅನಿಷ್ಟವಾದ ಆಚರಣೆಗಳು ತೊಲಗಿಸಿ ಮನುಜರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಅದ್ದರಿಂದ ನಾವು ಈ ಪ್ರಸ್ತುತ ದಿನಗಳಲ್ಲಿ ನಾವು ಬುದ್ದನು ಸಾರಿದ ಸಂದೇಶಗಳನ್ನು ಬಸವೇಶ್ವರ ರೂಪಿಸಿ ಭೋಧಿಸಿದಂತಹ ಕ್ರಾಂತಿಕಾರಕ ಬದಲಾವಣೆಗಳನ್ನು ಅಲ್ಲಮದ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾನತೆ ಸೋದರತ್ವದಿಂದ ಜೀವಿಸಬೇಕಾಗಿದೆ ಎಂಬ ಅದ್ಭುತವಾದ ಸಂದೇಶಗಳನ್ನು ಈ ಸಾಲುಗಳಲ್ಲಿ ಹೇಳಿದ್ದಾರೆ.

ಸ್ವಾತಂತ್ರ್ಯ ವೆಂದು ಭಾವಿಸಿ ಸ್ವೇಚ್ಛಚಾರವನ್ನು ಒಪ್ಪಿಕೊಂಡಿದ್ದೇವೆ. ಸ್ವಾರ್ಥತೆಗೆ ಬುದ್ದ ಬಸವ ಅಂಬೇಡ್ಕರ್ ರನ್ನು ಒಪ್ಪಿಕೊಂಡಿದ್ದೇವೆ. ಮನುಷ್ಯ ನನಗೆ ಸ್ವಾತಂತ್ರ್ಯ ವಿದೆಯೆಂದು ಭಾವಿಸಿ ಹದ್ದುಬಸ್ತು ಇಲ್ಲದ ಜೀವನವನ್ನು ಬಯಸುತ್ತಿದ್ದಾನೆ. ಸ್ವೇಚ್ಛೆಚಾರ ನನಗೆ ಸಿಕ್ಕ ಕೊಡುಗೆಯೆಂದು ಬದುಕಿಗೆ ಲಂಗು ಲಗಾಮು ಹಾಕಿಕೊಳ್ಳದೆ ಅತಿಯಾದ ಮೋಜು ಮಸ್ತಿನಲ್ಲಿ ತೇಲಾಡುವ ಮನುಷ್ಯ ಅದು ನನಗೆ ಸಿಕ್ಕ ಸ್ವಾತಂತ್ರ್ಯ ವೆಂದು ಒಪ್ಪಿಕೊಂಡು ಬದುಕುತ್ತಿದ್ದಾನೆ. ಇಂದು ತಮ್ಮ ಸ್ವಾರ್ಥ ಸಾಧನೆಗಾಗಿ, ತನ್ನ ಉದರದ ಪೋಷಣೆಗಾಗಿ ಬುದ್ದ ಬಸವ ಅಂಬೇಡ್ಕರ್ ರವರ ಹೆಸರಿನಲ್ಲಿ ಸಂಘಟನೆಗಳನ್ನು ‌ಕಟ್ಟಿಕೊಂಡು‌ ಅಧಿಕಾರ ವರ್ಗದ ಮೇಲೆ ದಬ್ಬಾಳಿಕೆಯ ‌ನಡೆಸುತ್ತಾ, ಬಡವರನ್ನು ಶೋಷಣೆ ಮಾಡುತ್ತಾ ನಿಮಗೆ ಸರ್ಕಾರದ ಸವಲತ್ತುಗಳನ್ನು ಕೊಡಿಸುತ್ತೇವೆ. ನಿಮ್ಮ ಶೋಷಣೆಯನ್ನು ತಡೆಯುತ್ತವೆ ಎಂದು ತಮ್ಮ ಸ್ವಾರ್ಥ ಸಾಧನೆಗಾಗಿ‌ ಇಂತಹ‌ ಮಹಾನ್ ವ್ಯಕ್ತಿಗಳ ಹೆಸರು ಬಳಸಿಕೊಳ್ಳುತ್ತಿದ್ದೆ ಎಂದು ಇಂದಿನ ದಿನಗಳಲ್ಲಿ ಜನರು ಯಾವ ರೀತಿಯಲ್ಲಿ ತಮ್ಮ ಬಳಸಿಕೊಳ್ಳುತ್ತಾರೆ ಎಂಬುದನ್ನು ಮನೋಜ್ಞವಾಗಿ ಕಟ್ಟಿದ್ದಾರೆ.

ಒಂದೊಂದು ಬಣ್ಣಕ್ಕೂ ಜಾತಿ ಧರ್ಮ ಲೇಪ ಅಂಟಿಕೊಂಡಿದೆ. ಖಾದಿ ಖಾಕಿ ಕಾವಿ ಬಣ್ಣಗಳೆಲ್ಲಾ ಸೇರಿ ಸಣ್ಣತನವ ಬಯಸಿವೆ. ಮನುಷ್ಯ ‌ಹುಟ್ಟಿನಿಂದ ಎಲ್ಲಾರೂ ಸಮಾನರು, ಅವನು ಸೇವಿಸುವ ಆಹಾರ, ಹುಡಿಯುವ ನೀರು, ಎಲ್ಲಾ ಒಂಧೆ ಮನುಜ ಜಾತಿಯಲ್ಲಿ ಹರಿಯುವ ರಕ್ತವು ಕೂಡ ಒಂದೇ ಆಗಿರುವಾಗ ಇಂದಿನ ಸಮಾಜದಲ್ಲಿ ಕಪ್ಪು ಕೆಂಪು ಬಿಳಿ ಜನರನ್ನಾಗಿ ವಿಗಂಡಿಸಿ ಅವರಿಗೆ ಧರ್ಮದ ಜಾತಿಯ ಲೇಪನವನ್ನು ಹಚ್ಚುತ್ತಿದ್ದಾರೆ ಬಣ್ಣದಿಂದ ಅವನ ಜಾತಿಯನ್ನು ಆಳೆಯುತ್ತಾರೆ. ಸಮಾಜದಲ್ಲಿ ಯಾದಿಯನ್ನು ತೊಟ್ಟಂತಹ ರಾಜಕೀಯ ನಾಯಕರು ಬಡವರ ಶೋಷಣೆ ಮಾಡುತ್ತಾ ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸದೇ ತಮ್ಮ ಕುಟುಂಬ ತಮ್ಮ ಮಕ್ಕಳ ಉದ್ದಾರಕಾಗಿ ಹಗಲಿರುಳು ಶ್ರಮಿಸುತ್ತಾರೆ. ಇನ್ನು ಬಾಕಿಯನ್ನು ತೊಟ್ಟ ವರ್ಗ ಲಂಚಗುಳಿತ ಮೋಸ‌ ಅನ್ಯಾಯಗಳನ್ನು ಮಾಡುತ್ತಾ ಬದುಕುತ್ತಿದ್ದಾರೆ. ಕಾವಿಯನ್ನು ತೊಟ್ಟ ಮನುಜರನ್ನು ದೇಶದಲ್ಲಿ ದೇವರಂತೆ‌‌ ಪೂಜಿಸುತ್ತಿದ್ದರು. ಅನಾಥರಿಗೆ ‌ನಿರ್ಗತಿಕರಿಗೆ ಕಾವಿ ತೊಟ್ಟ ಜನ ಆಶ್ರಯದಾತರಾಗಿದ್ದರು. ಅದರೆ ಇಂದು‌ ಕಾವಿ ತೊಟ್ಟ ಸ್ವಾಮಿಗಳು ಕಾಮದ ಪ್ರತಿರೂಪಗಳಾಗಿ‌ ಮಾರ್ಪಾಡಾಗಿ ಅನ್ಯಾಯ ಅತ್ಯಾಚಾರಗಳಲ್ಲಿ ತೊಡಗಿ ಸಣ್ಣತನವನ್ನು ತೋರಿಸುತ್ತಿದ್ದಾರೆ.

ನೊಂದ ಭಾವನೆಗಳು ಬೆಂದಿರಲು ಮಧುಶಾಲೆಯದು ಕರೆಯುತಿದೆ. ನೋವು ಮರೆಯಲು ಮದಿರೆಯದು ಮದ್ದೆನಿಸಿದೆ ನಿನ್ನ ನೆನಪಾದಾಗ ಈ ಗಜಲ್ ಕೃತಿಯೊಳಗೆ ಬರೀ ಸಮಾಜಮುಖಿ ಚಿಂತನೆಗಳು‌ ಜಾತಿಮತದ ಅಂಧಾಭಿಮಾನದ ಸಾಲುಗಳು ಮಾತ್ರ ಇವೇ ಎಂದು ಭಾವಿಸಿದರೆ ತಪ್ಪಾಗುತ್ತದೆ. ಇವರ ಷೇರ್ ಗಳಲ್ಲಿ ಪ್ರೀತಿಯು ಇದೆ ವಿರಹದ ವೇದನೆಯು ಇದೆ ಈ‌ ಮೇಲಿನ ಷೇರ್ ನ್ನು ಗಮನಿಸಿದಾಗ ಪ್ರೀತಿಸಿದ ಹೃದಯವೊಂದು ಪ್ರಿಯತಮೆಯನ್ನು ಆಗಲಿ ಇರಲಾರದೆ ವೇದನೆಯಲ್ಲಿ‌ ನಲುಗುತಿದೆ. ಹೃದಯದ ವೇದನೆಯನ್ನು ಮರೆಯಲು ಮಧುಶಾಲೆಯು ತನ್ನೊಳಗೆ ಕರೆಯುತಿದೆ. ಆ ಎದೆಯಾಳದ ನೋವುಗಳನ್ನ, ನಿನ್ನ ನೆನಪುಗಳನ್ನು ಮರೆಯಲು ಮಧುಪಾನ ಮದ್ದಾಗಿದೆ ನನಗೆ ಮದಿರೆಯ ಮತ್ತಿನಿಂದ ನಿನ್ನ ನೆನಪುಗಳನ್ನು ಮರೆಯಬಹುದು ಎಂದು ವಿರಹದ ವೇದನೆಯಿಂದ ಬರೆಯುವ ಸಾಲುಗಳು ಗಜಲ್ ಕಾವ್ಯದ ಸೊಬಗನ್ನು ಹೆಚ್ಚಿಸುತ್ತದೆ.

ಶ್ರೀ ಶರಣಗೌಡ ಪಾಟೀಲ ಜೈನಾಪೂರ ರವರು ಮತ್ತಷ್ಟು ಗಜಲ್‌ ‌ಕಾವ್ಯವನ್ನು ಅದ್ಯಯನ ಮಾಡಬೇಕಾಗಿದೆ ಒಂದಷ್ಟು ಗಜಲ್ ನಿಯಮಗಳನ್ನು ಪಾಲಿಸಬೇಕಾಗಿದೆ. ಗಜಲ್ ಕಾವ್ಯವನ್ನು ಕವಿತೆಯಂತೆ ಬರೆಯಲು ಸಾಧ್ಯವಿಲ್ಲ ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಅಂದರೆ ಈ ಕೃತಿಯಲ್ಲಿನ ಕೆಲವು ಗಜಲ್ ಗಳಲ್ಲಿ ನಾಲ್ಕು ಮತ್ತು ಎಂಟು ಷೇರ್ ಗಳಲ್ಲಿ ಗಜಲ್ ರಚನೆ ಮಾಡಿದ್ದಾರೆ. ಗಜಲ್ ಐದು ಇಲ್ಲ ಎಳು ಷೇರ್ ಗಳನ್ನು ಹೊಂದಿರಬೇಕು. ಗಜಲ್ ನಿಯಮಗಳನ್ನು ಪಾಲಿಸಿ ಇವರ ಸೊಗಸಾದ ಭಾವನೆಗಳನ್ನು ಕೂಡಿಸಿ ಬರೆದಾಗ ಅದ್ಬುತವಾದ ಗಜಲ್ ಗಳ ರಚನೆಯನ್ನು ಮಾಡಬಹುದು. ಇವರು ಇನ್ನಷ್ಟು ‌ಕೃತಿಗಳನ್ನು ಹೊರತರಲಿ ಸಮಾಜದಲ್ಲಿ ಗೌರವ ಪುರಸ್ಕಾರಗಳು ಪ್ರಾಪ್ತಿಯಾಗಿ ಎಂದು ಪತ್ರಿಕೆಯ‌ ಪರವಾಗಿ ಮತ್ತು ವೈಯಕ್ತಿಕವಾಗಿ ಹಾರೈಸುತ್ತೇನೆ.


  • ನಾರಾಯಣಸ್ವಾಮಿ (ನಾನಿ) – ವಕೀಲರು ಮತ್ತು ಲೇಖಕರು,  ಮಾಲೂರು, ಕೋಲಾರ ಜಿಲ್ಲೆ.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW