ಒಂದು ಸಿಗರ್ ತೆಗೆದು ಬಾಯಿಗಿಟ್ಟುಕೊಂಡೆ. ಸುರುಳಿ ಸುರುಳಿಯಾಗಿ ಹೊಗೆ ಬಿಟ್ಟರೂ ಎದೆಯೊಳಗಿನ ಧಗೆ ಕಡಿಮೆ ಆಗುತ್ತದೆಯೆ?. ಸತ್ತ ಹುಡಗಿಯ ಬಗ್ಗೆ ತಿಳಿಯಬೇಕು ಎಂದು ಕೊಂಡೆ, ಇಲ್ಲ..ಪೊಲೀಸ್ ಕೈಲ್ಲಿ ಸಿಕ್ಕಿ ಹಾಕಿಕೊಂಡರೆ ಎನ್ನುವ ಆತಂಕ ನನ್ನಲ್ಲಿ ಮನೆ ಮಾಡಿತು…ಮುಂದೆ ಓದಿ, ಆಕೆ ಅಂದರೆ ಯಾರು? ಏನಿದು ಪೊಲೀಸ್ ಕೇಸ್? ಒಂದು ಕುತೂಹಲ ಕಥನ ಕತೆಗಾರ್ತಿ ಭಾಗ್ಯ.ಕೆ.ಯು ಅವರು ಬರೆದಿರುವ ಪಶ್ಚಾತ್ತಾಪ.ತಪ್ಪದೆ ಓದಿ…
ರಸ್ತೆಯ ಒಂದು ಬದಿಯಲ್ಲಿ ಒಂದು ಹುಡುಗಿ ನಿಂತಿದ್ದಳು. ಅವಳನ್ನು ಎಲ್ಲೊ ನೋಡಿದ ನೆನಪು ಎನಿಸಿತು. ಸನಿಹ ಸಾರಿದೆ. ಈಗ ಎದೆ ಎದುರುಸಿರು ಬಿಡಲಾರಂಭಿಸಿತು. ಕನಸಿನಲ್ಲಿ ಕಂಡವಳು!, ಅದಕ್ಕೂ ಮುಂಚೆ ನನ್ನ ಸ್ಕೂಟಿಗೆ ಸಿಲುಕಿದ್ದವಳು!!. ಕೈ ಕಾಲು ನಡುಗಲಾರಂಭಿಸಿ ಕಾಲುಗಳನ್ನು ಹಿಂದಕ್ಕೆ ಎಳೆದುಕೊಳ್ಳುವ ಧೈರ್ಯ ಮಾಡಿದೆ. ಏಕೋ ಕಾಲುಗಳು ಹೋಗಲೊಲ್ಲವು.
“ಏಯ್ ಹುಡುಗಿ ನಡು ರಸ್ತೆಯಲ್ಲಿ ನಿಂತು ಸಾಯಲು ಬಂದೆಯಾ?, ಸಾಯುವುದ್ದರೆ ಬೇರೆಲ್ಲಾದರೂ ಹೋಗಿ ಸಾಯಿ. ನನ್ನ ಗಾಡಿಯೆ ಸಿಗಬೇಕಿತ್ತಾ ನಿನಗೆ?” ಎನ್ನುತ್ತಾ ಓರ್ವ ಬೈಯ್ಯುತ್ತಿದ್ದಾನದು ಕೇಳಿಸಿತು. ಸುತ್ತಲೂ ನೋಡಿದರೆ ರಸ್ತೆ ಮಧ್ಯೆ ನಿಂತಿದ್ದೇನೆ. ವಾಹನಗಳು ಬರುತ್ತಲು ಹೋಗುತ್ತಲೂ ಇವೆ. ಇದು ಟೂವೇ.. ಎದೆ ಧಗ್ ಎಂದಿತ್ತು ನಾನು ಅವಳ ಬಳಿ ಸಾರಿದ್ದು ಹಾಗಿದ್ದರೆ?, ಅವಳೆಲ್ಲಿ? ಕಣ್ಣುಗಳು ಹುಡುಕಲ್ಹತ್ತಿದ್ದವು. ಅವಳು ಕಾಣಲಿಲ್ಲ. ರೋಡನ್ನು ಬಿಟ್ಟು ಬದಿಗೆ ಬಂದೆ.

ಫೋಟೋ ಕೃಪೆ : pond5
“ಎಳನೀರು ಕುಡಿತಿಯೇನಮ್ಮ?” ಎಳನೀರು ಮಾರುವ ಅಜ್ಜಿ ಕೇಳಿತು. ಬೇಡವೆಂದು ತಲೆಯಾಡಿಸಿ ಬಸ್ ಸ್ಟ್ಯಾಂಡಿಗೆ ಬಂದುಕುಳಿತೆ. ಇನ್ನೂ ಎದೆಯುಸಿರ ಏರುಪೇರು ಹೆಚ್ಚುತ್ತಲೆ ಇತ್ತು. ಕೊಲೆ ಅಪರಾಧ, ಮಹಾ ಅಪರಾಧ. ಅದೇ ತಿಳಿಯದೆ ಅಥವಾ ಅಚಾತುರ್ಯದಲ್ಲಿ ಆದ ಆಕ್ಸಿಡೆಂಟ್ ಕೊಲೆ ಹೇಗೆ ಆಗುತ್ತದೆ?!. ಆದರೂ ಅದು ಕೊಲೆಯೆ. ಕೊಂದು ಓಡಿಹೋದ ನನಗೆ ಸತ್ತವರ ಮೇಲೆ ಯೋಚನೆಯಾದರೂ ಬಂದಿತ್ತೆ?? ಇಲ್ಲ.
ಒಂದು ಸಿಗರ್ ತೆಗೆದು ಬಾಯಿಗಿಟ್ಟುಕೊಂಡೆ. ಸುರುಳಿ ಸುರುಳಿಯಾಗಿ ಹೊಗೆ ಬಿಟ್ಟರೂ ಎದೆಯೊಳಗಿನ ಧಗೆ ಕಡಿಮೆ ಆಗುತ್ತದೆಯೆ?. ಸತ್ತ ಹುಡಗಿಯ ಬಗ್ಗೆ ತಿಳಿಯಬೇಕೆನಿಸಿದ್ದೆ ಈಗ. ತಿಳಿಯಲು ಹೊರಟರೆ ನನ್ನ ಸಾವಿಗೆ ನಾನೆ ತಲೆಯೊಡ್ಡಿದ ಹಾಗೆ. ಬೇಡವೆಂದು ತಲೆಕೊಡವಿಕೊಂಡು ಮಾಡಿದ್ದು ಬೇಕಂತಲಲ್ಲವಲ್ಲ ಎಂದು ಸಮಾಧಾನಿಸಿಕೊಂಡು ಮನೆಗೆ ಹೊರಡಲು ಸಿದ್ಧಳಾದೆ.
“ಆಂಟಿ ಸಿಗರೇಟು ಹೆಣ್ಣುಮಕ್ಕಳು ಸೇದುತ್ತಾರಾ?, ನಮ್ಮ ಅಪ್ಪ ಇದನ್ನು ಕುಡಿದೇ ಸತ್ತುಹೋದ. ಅಮ್ಮ ಅವನಿಂದ ಇದರ ವಾಸನೆ ಸೇವಿಸಿಯೆ ಸತ್ತುಹೋದಳಂತೆ. ನೀವು ಯಾಕೆ ಕುಡಿಯುತ್ತೀರ?” ಯಾವುದೋ ಮಗು ಪ್ರಶ್ನಿಸಿತು. ತಿರುಗಿ ನೋಡಿ ನಕ್ಕು, ಹೌದಾ? ಸರಿ ನಾನು ಸೇದುವುದಿಲ್ಲ ಎಂದು ಹೇಳಿ ಮಗುವಿನ ಕೈಯಿಗೆ ಐವತ್ತು ರೂಪಾಯಿ ಕೊಟ್ಟು ಹೊರಟುಬಂದೆ.
“ಹೇ ಹುಡುಗಿ ಇವತ್ತು ಮನೆಗೆ ಬರ್ತಿದ್ದೇನೆ. ನೈಟ್ ಡ್ಯೂಟಿ ಇಲ್ಲ ತಾನೆ?” ನನ್ನವನು ಕೇಳಿದಾಗ ಬರಬೇಡ ಎಂದು ಇಟ್ಟುಬಿಟ್ಟೆ. ಮನೆಯಲ್ಲಿ ನಾನೊಬ್ಬಳೆ ಇರುವುದು ಅಭ್ಯಾಸ ಆಗಿಹೋಗಿದೆ. ಆದರೆ ಇಂದು ಯಾರೋ ಮನೆಯಲ್ಲಿ ನನ್ನ ಜೊತೆಗೆ ಇದ್ದಾರೆಂಬ ಅನುಭವ. ಬಾಗಿಲು ತೆರೆದು ಒಳಬಂದಾಗ ಹಿಂದೆ ಯಾವುದೊ ಹೆಜ್ಜೆ ಕಂಡಂತಾಯಿತು. ಟಿವಿ ಆನ್ ಮಾಡಿ ಸೋಫಾದಲ್ಲಿ ಕುಳಿತಾಗ ಯಾರೋ ಪಕ್ಕದಲ್ಲಿ ಬಂದುಹೋದ ಹಾಗಾಯಿತು. ಇದು ಭ್ರಮೆ ಅನಿಸಿದರೂ ಆ ಹುಡುಗಿಯನ್ನು ಕಾಣಬೇಕಿತ್ತೆನಿಸಿತು. ಬೆಳಗ್ಗೆ ಏನಾದರಾಗಲಿ ಹುಡುಗಿಯ ವಿಳಾಸವನ್ನು ಹುಡುಕಿ ಹೋಗಲೆಬೇಕೆಂದು ನಿರ್ಧರಿಸಿ ಮಲಗಿದೆ.
***
ಮನೆಯಲ್ಲಿ ಯಾರಿದ್ದಾರೆ?, ಯಾರೂ ಇದ್ದಂತಿರಲಿಲ್ಲ ಎನಿಸಿ ವಾಪಸ್ ಆಗುವ ವೇಳೆಗೆ ಅದೇ ಮಗು.
“ಆಂಟಿ..” ಎಂದೆನ್ನುವಾಗ “ಎಳನೀರಿಗೆ ಇಲ್ಲಿಯವರೆಗೆ ಬಂದೆಯಾ?” ಎಂದು ಇನ್ನೊಂದು ಕೊರಳು.
“ಮನೆ ಯಾರದು?, ಆ ರೋಡಿನಲ್ಲಿ ಆ ದಿನ ಆದ ಆಕ್ಸಿಡೆಂಟ್ ನಲ್ಲಿ ಸತ್ತ ಹುಡುಗಿಯ ಮನೆ ಇದೆ ಅಲ್ಲವಾ?” ಎಂದ ನನಗೆ ಅಜ್ಜಿಯ ದೊಡ್ಡ ಮೊಮ್ಮಗಳೆ ಸತ್ತ ಹುಡುಗಿ, ತನ್ನಿಂದ ಕೊಲೆಯಾದ ಹುಡುಗಿ ಎಂಬುದು ತಿಳಿಯಿತು. ಹುಡುಗಿಯ ಪಟವನ್ನು ನೋಡಿದೆ, ಆಕ್ಸಿಡೆಂಟ್ ಮಾಡಿ ಒಂದು ಕ್ಷಣವೂ ನಿಲ್ಲದೆ ಗಾಡಿ ಓಡಿಸಿಕೊಂಡು ಬಂದಿದ್ದ ನನಗೆ ಈಗಲೆ ಸರಿಯಾಗಿ ಹುಡುಗಿಯನ್ನು ನೋಡಲು ಸಾಧ್ಯವಾಗಿದ್ದು. ಮತ್ತೆ ಹೇಗೆ ಅದೇ ಹುಡುಗಿ ಅಂತನ್ನಿಸಿದ್ದು!? , ಎಲ್ಲೋ ನೋಡಿದ ನೆನಪಾದುದು ಹೇಗೆ?! ಅರ್ಥವಾಗಲಿಲ್ಲ.
ಪೋಲೀಸು ಕೇಸು ಓಡಾಡಲು ಆಗದ ನಿರ್ಗತಿ ಇದ್ದುದರಿಂದಲೆ ಅಜ್ಜಿ ತನ್ನ ಮೊಮ್ಮಗಳ ಕೇಸನ್ನು ಮುಂದೆಹೋಗಗೊಡಲಿಲ್ಲ ಎಂಬುದು ತಿಳಿಯಿತು. ಹಾಗೆ ಕೇಳಿದೆ ಆಕ್ಸಿಡೆಂಟ್ ಮಾಡಿದವರನ್ನು ಯಾಕೆ ಹಿಡಿಯಲಿಲ್ಲ?, ಅವರ ಮೇಲೆ ಕೋಪವಿಲ್ಲವೆ ನಿಮಗೆ ಅಂತ. ಅದಕ್ಕಜ್ಜಿ “ಬೇಕಂತಲೆ ಯಾರು ಮಾಡುವುದಿಲ್ಲ, ಅಚಾತುರ್ಯದಲ್ಲಿ ಆದುದಕ್ಕೆ ಮಾಡಿದವರನ್ನು ಯಾಕೆ ಕೊಲ್ಲಲಿ? ಅವರ ಬದುಕನ್ನು ಯಾಕೆ ನಾಶಮಾಡಲಿ” ಎಂದಿತು. ಅಲ್ಲಿಯೆ ಕಾಲಿಗೆರಗಿ ನಾನೇ ಅದು ಎಂದು ಹೇಳಬೇಕೆನಿಸಿತು ಆದರದಾಗಲಿಲ್ಲ, ಕಾಲಿಗೆ ಬಿದ್ದು ಬಂದೆ.. ಇನ್ನೊಂದು ಮಗುವಿನ ಭವಿಷ್ಯ ನೆನೆದು ಬಂದೆ. ಭವಿಷ್ಯದಲ್ಲಿ ಅದರ ಭವಿಷ್ಯ ರೂಪಿಸುವ ಹೊಣೆಹೊತ್ತು ಬಂದೆ..
- ಭಾಗ್ಯ.ಕೆ.ಯು – ಗೃಹಿಣಿ, ಹವ್ಯಾಸಿ ಬರಹಗಾರ್ತಿ, ಬೆಂಗಳೂರು
