ಪ್ರೀತಿ , ಕಾಮದ ಯುದ್ದದಲ್ಲಿ ಅವಳನ್ನು ಸೋಲಿಸಿದೆ ಎಂಬುದು ಮೂರ್ಖತನದ ಮಾತು… ಅವಳು ಸೋಲುವದಕ್ಕಲ್ಲ ಸದಾ ಕಳೆದು ಹೋಗಲು ಬಯಸುವಳು…ಕವಿಯತ್ರಿ ಜ್ಯೋತಿ , ಡಿ.ಬೊಮ್ಮಾ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬೆಳಗೆದ್ದು ಗಂಡನ ಪಾದ ಸ್ಪರ್ಶಮಾಡಿ
ಕೆದರಿದ ತಲೆ , ಜಾರಿದ ಸೆರಗು
ಸರಿಪಡಿಸಿ , ರಾತ್ರಿಯ ಕ್ರೀಯೆಯಲ್ಲಿ
ರಕ್ತ ಪರಿಚಲನೆ ವೇಗಗೊಳಿಸಿದ
ಆ ಅದೃಶ್ಯ ಬಿಂಬ ಯಾವದು..
ಎಂದು ತಬ್ಬಿಬ್ಬುಗೊಳ್ಳುತ್ತಾಳೆ.
ತಲೆಗೆ ನೀರೆರೆದು
ಮಲ್ಲಿಗೆ ಮುಡಿದು
ಸಿಂಧೂರದ ತಿಲಕವಿಟ್ಟು
ಕನ್ನಡಿಯಲ್ಲಿ ಇಣುಕಿದಾಗ
ಕಣ್ಣಿನ ಬಿಂಬದೊಳಗೆ ಅದೇಷ್ಟು ಆರಾಧಕರು.
ವಿಚಲಿತವಾಗುವದು ಮನ.
ಕೆನ್ನೆಯ ಅರಶಿನ, ಕಣ್ಣಿನ ಕಾಡಿಗೆ
ಕೆನ್ನೆಯ ಕೆಂಪು , ಕಣ್ಣಿನ ಹೊಳಪು
ಅದೇಷ್ಟು ಬಣ್ಣರಹಿತ ಮನಗಳಿಗೆ
ಮುದಗೊಳಿಸಿರಬಹುದು..
ನಾನು ಬರಿ ಒಬ್ಬನ ಸ್ವತ್ತು..!
ಕಾಲ್ಗೆಜ್ಜೆಯ ಸದ್ದು ,
ಹೆಜ್ಜೆಯ ಲಯ
ಲಜ್ಜೆಯ ಭಯ
ಸತ್ತ ಅದೇಷ್ಟೋ ಹೃದಯಗಳಿಗೆ
ಮರು ಜೀವ ನೀಡಿರಬಹುದು.
ಪತಿವೃತೆ ಹಾಗೆಲ್ಲ ಯೋಚಿಸಬಾರದು..!
ಸರ್ವಾಧಿಕಾರದ ಹಿಡಿತ ದೇಹಕ್ಕೆ.
ಮನಕ್ಕಲ್ಲ.
ಅಲ್ಲಿ ಎಷ್ಟೋಂದು ಹೂಗಳು
ಎಷ್ಟೊಂದು ಬಣ್ಣಗಳು
ಗುನುಗುವ ದುಂಬಿಗಳು
ಹಾರುವ ಚಿಟ್ಟೆಗಳು.
ಇಲ್ಲ..ನೀನು ಬಂಧಿ..!
ಪ್ರೀತಿ , ಕಾಮದ ಯುದ್ದದಲ್ಲಿ
ಅವಳನ್ನು ಸೋಲಿಸಿದೆ ಎಂಬುದು
ಮೂರ್ಖತನದ ಮಾತು..
ಅವಳು ಸೋಲುವದಕ್ಕಲ್ಲ
ಸದಾ ಕಳೆದು ಹೋಗಲು ಬಯಸುವಳು.
ಅದಕ್ಕೆ ಅವಳಿಗೆ
ಬಂಧನದ ಸೋಲು..!
ಧರ್ಮ ಪತ್ನಿಯರನ್ನೆಲ್ಲ
ಧರ್ಮ ಪರಿಪಾಲಕರನ್ನಾಗಿಸಿದ್ದಕ್ಕೆ
ಪ್ರೇಮ ,ಕಾಮಗಳಿಗೆ
ಹೋಸ ಹುಡುಕಾಟ ಶುರುವಾದದ್ದು.
ಪರಮ ಪತಿವೃತೆ ಅನಿಸಿಕೊಂಡವರೆಲ್ಲ
ದೇವರಾಗಿ ಪೂಜಿಸಿಕೊಂಡರು.
ಅವರ ಅಂತರಂಗ ಮಾತ್ರ ಇಂದಿಗೂ
ಲೋಕಕ್ಕೆ ಅಪರಿಚಿತ.
- ಜ್ಯೋತಿ , ಡಿ.ಬೊಮ್ಮಾ
