“ಫುಲವಂತಿ” ಒಬ್ಬ ಪ್ರಸಿದ್ಧ ನೃತ್ಯಗಾರ್ತಿಯ ಕತೆಯಾಗಿದ್ದು, ಬಾಬಾಸಾಹೇಬ್ ಪುರಂದರೆ ಅವರು ಬರೆದ ಕಾದಂಬರಿ ಆಧಾರಿತ ಚಿತ್ರವಾಗಿದೆ. ಈ ಚಿತ್ರದ ಕುರಿತು ಮಮತಾ ತೋಟೇಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಪ್ರತಿಮ್… ಮರಾಠಿಯಲ್ಲಿ ಬಳಸುವ ಶಬ್ದ. ದಿ ಬೆಸ್ಟ್ ಅನ್ನೋದಕ್ಕೆ ಈ ಪದವನ್ನ ಬಳಸುತ್ತಾರೆ. ಇಂತಹದೊಂದು ಪದ ನಿನ್ನೆ ನನ್ನ ಬಾಯಲ್ಲಿ ಬಂತು. ಹೌದು ಒಂದು ಅತ್ಯುತ್ತಮ ಚಲನಚಿತ್ರ ನೋಡಿದಾಗ ಹಾಗೆ ಅನಿಸಿದ್ದು. ನನ್ನ ಜೀವದ ಗೆಳತಿ ಸ್ಮಿತಾ ಅಮ್ಮ ಊರಿಂದ ಬಂದಿದ್ದಾರೆ. ಅವರು ನಮ್ಮಿಬ್ಬರನ್ನ ಒಂದು ಮರಾಠಿ ಸಿನಿಮಾ ನೋಡಲು ಕರ್ಕೊಂಡು ಹೋಗಿದ್ದು. ಮರಾಠಿ ಭಾಷೆ ಅಂದ್ರೆ ಅರ್ಥ ಆಗದೆ ತಡಪಡಿಸ್ತ ಇದ್ದ ನಾನು ಥೀಯೇಟರ್ ಗೆ ಹೋಗಿ ಮರಾಠಿ ಸಿನಿಮಾ ನೋಡೋದನ್ನ ಕಲ್ತಿದೀನಿ. ಮರಾಠಿ ಭಾಷೆ ಮಾತಾಡೋಕೆ ಬರೋಲ್ಲ. ಎಲ್ಲಿ ತಪ್ಪಾಗುತ್ತೋ ಅನ್ನೋ ಭಯ, ಹಾಗೆ ನಮ್ಮ ಅಸೆಂಟ್ ಕೂಡಾ ಬೇರೆ ತರವೇ ಕೇಳುತ್ತೆ. ಆದ್ರೆ ಮರಾಠಿ ಸಂಪೂರ್ಣ ಅರ್ಥ ಆಗುತ್ತೆ. ಮೊದಲು ಅರ್ಥ ಆಗದೆ ಇಷ್ಟ ಆಗ್ತಾ ಇರ್ಲಿಲ್ಲ. ಈಗ ಇಷ್ಟವೂ ಆಗಿದೆ. ಅರ್ಥ ಕೂಡಾ ಆಗ್ತಾ ಇದೆ.

ಹೌದು ಇಷ್ಟೆಲ್ಲ ಹೇಳೋಕೆ ಒಂದು ಕಾರಣ “ಫುಲವಂತಿ”ಅನ್ನೋ ಅತ್ಯದ್ಭುತ ಸಿನಿಮಾ. ಹೆಸರು ಕೇಳಿದಾಗ ಇದೆಂತ ಹೆಸರು, ಯಾವತ್ತೂ ಕೇಳಿಲ್ಲ, ಸಿನಿಮಾ ಹ್ಯಾಗಿದಿಯೋ ಏನೋ ಅನ್ನೋ ಕುತೂಹಲ. ನನ್ನ ಗೆಳತಿ ಇದು ಮೂರನೇ ಬಾರಿ ನೋಡ್ತಾ ಇರೋದು. ನನಗಾಗಿ ನಿನ್ನೆ ಮತ್ತೊಮ್ಮೆ ನನ್ನ ಜೊತೆ ಬಂದಿದ್ದು. ನನಗೂ ಮತ್ತೊಮ್ಮೆ ನೋಡಬೇಕು ಅನ್ನೋ ಆಸೆ ಹುಟ್ಟಿದೆ. ಕೆಲವೊಂದು ಅತ್ಯುತ್ತಮ ಸಿನಿಮಾ, ಹೆಸರು ಮಾಡೋದೇ ಇಲ್ಲ. ಪ್ರೇಕ್ಷಕರನ್ನ ತಲುಪೋದೆ ಇಲ್ಲ ಅನ್ನೋ ಪಟ್ಟಿಗೆ ಈ ಫುಲವಂತಿ ಸಿನಿಮಾ ಕೂಡಾ.
“ಫುಲವಂತಿ” ಒಬ್ಬ ಪ್ರಸಿದ್ಧ ನೃತ್ಯಗಾರ್ತಿಯ ಕಥೆ. ಇದು ಬಾಬಾಸಾಹೇಬ್ ಪುರಂದರೆ ಅವರು ಬರೆದ ಕಾದಂಬರಿ ಆಧಾರಿತ ಚಿತ್ರ. ಸಿನಿಮಾ ಶುರು ಆಗುವಾಗ ಕಾದಂಬರಿ ಆಧಾರಿತ ಚಿತ್ರ ಅನ್ನೋವಾಗಲೇ ಒಂತರಾ ಕುತೂಹಲ. ಮರಾಠಿ ಭಾಷೆ, ಭಾಷೆಯಲ್ಲಿ ಬಳೆಸುವ ಶಬ್ದಗಳು ತುಂಬಾ ಚಂದ. ಅದೆಷ್ಟು ತೂಕ ಆ ಶಬ್ದಗಳಿಗೆ. ಫುಲವಂತಿಯನ್ನ ವರ್ಣಿಸೋ ರೀತಿ ಆಹಾ, ಕೇಳೋಕೆ ಚಂದ. ಜಿಂಕೆಯಂತ ನಡೆ, ನಕ್ಷತ್ರಗಳ ಹಾಗೆ ಹೊಳೆಯೋ ಕಣ್ಣುಗಳು. ರಂಬೆ, ಊರ್ವಶಿ, ಮೇನಕೆಯರಂತಹ ಸೌಂದರ್ಯ, ಇಡೀ ದೇಶವೇ ಅವಳ ಸೌಂದರ್ಯ ಮತ್ತು ಅವಳ ನೃತ್ಯಕ್ಕೆ ಮಾರು ಹೋಗಿತ್ತು. ಅಂದಿನ ರಾಜರು ಅವಳ ನೃತ್ಯ ನೋಡಲು ಕಾತುರದಿಂದ ಕಾಯ್ತಾ ಇದ್ರು. ಸಿನಿಮಾದಲ್ಲಿ ಅವಳ ಎಂಟ್ರಿ ಸಕತ್.

ಪ್ರಜಾಕ್ತಾ ಮಾಳೆ ಅನ್ನೋ ಹೆಸರಿನ ಹುಡುಗಿ ಫುಲವಂತಿ ಪಾತ್ರ ಮಾಡಿರೋದು. ಅದೆಷ್ಟು ಚಂದದ ಅಭಿನಯ. ಅವಳ ನೃತ್ಯ, ಅವಳ ಹಾವ, ಭಾವ.. ಅಬ್ಬಾ ಅದ್ಭುತ. ಅವಳ ನೃತ್ಯ ನೋಡೋದೇ ಕಣ್ಣಿಗೆ ಹಬ್ಬ. ಮೊಗಲ್ ರಾಜ ಅವಳಿಗೆ ಬಿರುದು ಕೊಟ್ಟು, 5 ಹಳ್ಳಿಗಳನ್ನ ಉಡುಗೊರೆಯಾಗಿ ಕೊಟ್ಟು, ತನ್ನ ಅಸ್ಥಾನದಲ್ಲೇ ಇರಬೇಕೆಂದು ಹೇಳಿದಾಗ, ಅದನ್ನು ತಿರಸ್ಕರಿಸಿ, ಕಲಾಕಾರರಿಗೆ ಯಾವುದೇ ನಿಯಮಿತ ಪರಧಿ ಇರೋಲ್ಲ ಅಂತ ದಿಟ್ಟ ಉತ್ತರ ನೀಡ್ತಾಳೆ. ಅವಳ ಆ ಧೈರ್ಯ ಮೆಚ್ಚಿ, ಅವಳಿಗೆ ಭಾರತದಲ್ಲಿ ಎಲ್ಲಿ ಆದ್ರೂ ಹೋಗಿ ನೃತ್ಯ ಮಾಡಬಹುದು ಅಂತ ಅನುಮತಿ ನೀಡ್ತಾರೆ. ನಿಜವಾದ ಕಥೆ ಶುರು ಆಗೋದೇ ಫುಲವಂತಿ ಪೇಶವೆ ಸಾಮ್ರಾಜ್ಯ ಪುಣೆಗೆ ಬಂದಾಗ. ತುಂಬಾ ಉತ್ತಮ ಕಥೆಯ ಹಂದರ. ಹಾಡು, ನೃತ್ಯ, ಅಭಿನಯ, ಕಥೆ, ಸಿನಿಮಾ ಸೆಟ್ ಎಲ್ಲವೂ ಚಂದ. ಥೀಯೇಟರ್ ನಲ್ಲಿ ಇನ್ನೂ ನಡೀತಾ ಇದೆ ಸಿನಿಮಾ. ನೆಟ್ಫ್ಲಿಕ್ಸ್ ನಲ್ಲೂ ಇದೆ ಈ ಸಿನಿಮಾ ನೋಡಬಹುದು..ವಿಥ್ ಸಬ್ ಟೈಟಲ್ಸ್ ಇದೆ. ಸಿನಿಮಾ ನೋಡ್ತಾ ಇಷ್ಟು ಕಳೆದು ಹೋಗಿದ್ದೆ ಅಂದ್ರೆ, ಬಂದು ಅದರ ಬಗ್ಗೆ ಬರೆಯಬೇಕು ಅನ್ನಿಸ್ತು. ಹಾಗಂತ ಕನ್ನಡದ ಸಿನಿಮಾ ನೋಡೋಲ್ಲ, ಅದರ ಬಗ್ಗೆ ಬರೆಯೋಲ್ಲ ಅಂತ ಅಲ್ಲ. ಇಲ್ಲಿ ಕನ್ನಡದ ಸಿನಿಮಾ ಬರೋದು ತುಂಬಾ ಕಡಿಮೆ. ಬಂದಾಗ ಖಂಡಿತ ಮಿಸ್ ಮಾಡೋಲ್ಲ.
- ಮಮತಾ ತೋಟೇಶ್
