ಒಂದೇ ತಂದೆ ತಾಯಿಯರ ಗುಣ, ಸ್ವಭಾವ, ಸಂಸ್ಕಾರ ಹಂಚಿಕೊಂಡು ಹುಟ್ಟಿದ್ದ ಸಂಬಂಧಗಳು, ಆಸ್ತಿ ಹಣದ ಆಸೆಗೆ ದೂರಾಗುವುದು ಅಷ್ಟು ಸುಲಭವೇ? ಅಂತಹ ಪ್ರಶ್ನೆ ಹುಟ್ಟುಹಾಕುತ್ತದೆ “ವಾರಸುದಾರ” ಕಾದಂಬರಿ. ಗೀತಾ ಬಿ ಯು ಅವರ ವಾರಸುದಾರ ಕಾದಂಬರಿಯ ಕುರಿತು ಲೇಖಕಿ ರಮ್ಯ ನಂದಾ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಶೀರ್ಷಿಕೆ: ವಾರಸುದಾರ
ಲೇಖಕರು: ಗೀತಾ ಬಿ ಯು
ಪ್ರಕಾಶಕರು: ಸುಧಾ ಪ್ರಕಾಶನ
ಪುಟಗಳ ಸಂಖ್ಯೆ : 150
ಪುಸ್ತಕದ ಬೆಲೆ: 110.00
“ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು” ಈ ಗಾದೆ ಬಹುತೇಕ ಸಂಬಂಧಗಳಲ್ಲಿ ನಿಜವೇ ಆಗುತ್ತದೆ. ಮನೆ, ಹಿರಿಯರ ಜವಾಬ್ದಾರಿ, ಆಸ್ತಿ ಹಂಚಿಕೆ ವಿಷಯ ಮುಂದಾದರೆ ಹುಟ್ಟಿನಿಂದ ಅತ್ಯಂತ ಆಪ್ತರಾಗಿ ಬೆಳೆದಿದ್ದ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಕೂಡ ‘ ನಾನು, ನನ್ನದು, ನನಗೆ ‘ ಎನ್ನುವ ಹಠ ಹಿಡಿಯುತ್ತಾರೆ. ಆದರೆ ಒಂದೇ ತಂದೆ ತಾಯಿಯರ ಗುಣ, ಸ್ವಭಾವ, ಸಂಸ್ಕಾರ ಹಂಚಿಕೊಂಡು ಹುಟ್ಟಿದ್ದ ಸಂಬಂಧಗಳು, ಆಸ್ತಿ ಹಣದ ಆಸೆಗೆ ದೂರಾಗುವುದು ಅಷ್ಟು ಸುಲಭವೇ? ಅಂತಹ ಪ್ರಶ್ನೆ ಹುಟ್ಟುಹಾಕುತ್ತದೆ “ವಾರಸುದಾರ” ಕಾದಂಬರಿ.

ವೃತ್ತಿಯಲ್ಲಿ ವಕೀಲರಾಗಿದ್ದ ಹಯವದನ ರಾವ್ ನಿಸ್ವಾರ್ಥ ಸಮಾಜ ಸೇವೆಯ ಮನೋಭಾವ ಹೊಂದಿರುತ್ತಾರೆ. ತಮ್ಮ ದುಡಿಮೆಯ ಬಹುಪಾಲು ಹಣವನ್ನು ಸಮಾಜ ಸುಧಾರಣೆಗೆ, ಅಶಕ್ತರ ಅವಶ್ಯಕತೆ ಪೂರೈಸಲು ವಿನಿಯೋಗಿಸುತ್ತಿರುತ್ತಾರೆ. ಯಾರಿಗೆ ಸಹಾಯ ಮಾಡಿದರು ಅದನ್ನು ಎಲ್ಲಿಯೂ ತೋರಿಸಿಕೊಳ್ಳದೆ ಸರಳವಾದ ಜೀವನ ನಡೆಸುತ್ತಿರುತ್ತಾರೆ. ವೃತ್ತಿ ಮಾತ್ರವಲ್ಲದೆ ರಾಜಕೀಯವಾಗಿ ಸಕ್ರಿಯರಾಗಿದ್ದು, ಆಡಳಿತ ವರ್ಗದ ಜೊತೆಗೂಡಿ ರಾಜ್ಯವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಸಲು ಪ್ರಮುಖ ಪಾತ್ರ ವಹಿಸಿರುತ್ತಾರೆ.
ಅವರ ಪತ್ನಿ ಅನ್ನಪೂರ್ಣ ಪತಿಯ ಸ್ವಭಾವಕ್ಕೆ ವಿರುದ್ಧ ನಡೆಯವರು. ಆಡಂಬರದ ಜೀವನ ಅಪೇಕ್ಷಿಯಾಗಿ ಪತಿಯ ನಡೆಯನ್ನು ವಿರೋಧಿಸುತ್ತಾ, ಸಂಸಾರದಲ್ಲಿ ಸಾಮರಸ್ಯ ತೋರದೆ, ಪತಿ ನಡೆಯ ವಿರುದ್ಧ ದಿಕ್ಕಿಗೆ ಮುಖ ಮಾಡಿರುತ್ತಾರೆ. ಅವರಿಬ್ಬರ ಮಕ್ಕಳು ಶ್ರೀಕಾಂತ ಮತ್ತು ಕೃಷ್ಣಕಾಂತ. ಚಿಕ್ಕಂದಿನಿಂದ ಮಕ್ಕಳನ್ನು ಶಿಸ್ತು , ಸರಳತೆ ಮೈಗೂಡಿಸಿಕೊಂಡು ಬೆಳೆಯುವಂತೆ ತಂದೆ ಆಶಿಸಿದರೆ, ತಾಯಿ ಅದನ್ನು ವಿರೋಧಿಸುತ್ತಾ ಮಕ್ಕಳ ಮನಸ್ಸಿನಲ್ಲಿ ತಂದೆಯ ಬಗ್ಗೆ ಅಸಹನೆ ಮೂಡಿಸಿರುತ್ತಾರೆ. ತಂದೆ ತಾಯಿಯರ ಧೋರಣೆಯಲ್ಲಿ ನರಳುವ ಮಕ್ಕಳು ತಮ್ಮದೇ ರೀತಿಯಲ್ಲಿ ಬದುಕುವುದನ್ನು ರೂಢಿಸಿಕೊಂಡಿರುತ್ತಾರೆ. ಅನ್ನಪೂರ್ಣ ಅಕಾಲಿಕ ಮರಣದ ನಂತರ ಹಯವದನ ರಾವ್ ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುತ್ತಿರುತ್ತಾರೆ.
ಶ್ರೀಕಾಂತ ವೈದ್ಯಕೀಯ ಶಿಕ್ಷಣ ಮುಗಿಸಿ, ಮೂಳೆ ತಜ್ಞನಾಗಿ ಪರಿಣಿತಿ ಪಡೆದು ಮೈಸೂರಿನ ಪ್ರಸಿದ್ಧ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿರುತ್ತಾನೆ. ತಮ್ಮ ಒಪ್ಪಿಗೆ ಇಲ್ಲದಿದ್ದರೂ ಮಗ ಉಷಾಳನ್ನು ಪ್ರೀತಿಸಿ ಮದುವೆಯಾದ ಎನ್ನುವ ಕಾರಣಕ್ಕೆ ತಂದೆ ಶ್ರೀಕಾಂತನನ್ನು ದೂರವಿರಿಸಿರುತ್ತಾರೆ. ಸರಿಯಾಗಿ ವಿದ್ಯಾಭ್ಯಾಸ ಪಡೆಯದ ಕೃಷ್ಣಾಕಾಂತ ಕೆಟ್ಟ ಅಭ್ಯಾಸಗಳು ದಾಸನಾಗಿರುತ್ತಾನೆ. ಆಗಾಗ ಸಾಲ ಮಾಡಿಕೊಂಡು ತಂದೆಯ ಜೊತೆ ಹಣಕ್ಕಾಗಿ ಜಗಳ, ಜಟಾಪಟಿ ನಡೆಸುವ ಅವನಿಗೂ ಹಯವದನ ರಾವ್ ಅಥವಾ ಶ್ರಿಕಾಂತನಿಗೂ ಹೊಂದಾಣಿಕೆ ಆಗುವುದೇ ಇಲ್ಲ. ಅವನನ್ನು ಇಬ್ಬರು ದೂರ ಇರಿಸಿರುತ್ತಾರೆ. ಕೃಷ್ಣ ವಯಸ್ಸಿನಲ್ಲಿ ತನಗಿಂತ ಹಿರಿಯ ನಟಿಯೊಬ್ಬಳ ಜೊತೆ ಲೀವ್ ಇನ್ ರಿಲೇಶನ್ ಇರಿಸಿಕೊಂಡು ಹಾಸನದಲ್ಲಿ ವಾಸವಿರುತ್ತಾನೆ.

ಎಂಬತ್ತರ ಇಳಿ ವಯಸ್ಸಿನಲ್ಲಿ ವೃತ್ತಿ ಮತ್ತು ರಾಜಕೀಯವಾಗಿ ನಿವೃತ್ತಿ ಪಡೆದು ಒಂಟಿಯಾಗಿದ್ದ ತಂದೆ, ಒಂದು ದಿನ ಗುರುತಿಸಿ, ನಿರ್ದಿಷ್ಟ ಸಮಯಕ್ಕೆ ತಮ್ಮ ಭೇಟಿಗೆ ಬರುವಂತೆ ಮಕ್ಕಳಿಗೆ ಟೆಲಿಗ್ರಾಂ ಕಳುಹಿಸುತ್ತಾರೆ. ಹೇಳಿದ ಸಮಯಕ್ಕೆ ಸರಿಯಾಗಿ ಶ್ರೀಕಾಂತ ತಂದೆಯ ಭೇಟಿಗೆ ಬಂದಾಗ, ಕುಳಿತಂತೆ ಅವರು ಮರಣ ಹೊಂದಿರುತ್ತಾರೆ. ಅವನು ವೈದ್ಯನಾಗಿದ್ದರಿಂದ ಹೃದಯಸ್ತಂಭನದಿಂದ ಸಾವಿಗೀಡಾಗಿದ್ದಾರೆ ಎನ್ನುವುದು ತಿಳಿಯುತ್ತದೆ. ಅವರ ಮುಂದಿದ್ದ ಪತ್ರದಲ್ಲಿ, “ಹಳೆಯ ವಿಲ್ ಬದಲಿಸಿ, ತಮ್ಮ ನಾಲ್ಕು ಕೋಟಿ ಬೆಲೆಬಾಳುವ ಆಸ್ತಿಯನ್ನು ಮಾರಿ, ಬಂದ ಹಣದ ಎಪ್ಪತ್ತು ಶೇಕಡಾ ಹಣದಲ್ಲಿ ಟ್ರಸ್ಟ್ ಸ್ಥಾಪಿಸಿ, ಅದನ್ನು ಸಮಾಜ ಸೇವೆಗೆ ವಿನಿಯೋಗಿಸಬೇಕು, ಇನ್ನುಳಿದ ಮೂವತ್ತು ಶೇಕಡಾ ಹಣವನ್ನು ಮಕ್ಕಳಿಬ್ಬರಿಗೂ ಸಮವಾಗಿ ಹಂಚಬೇಕು” ಎಂದು ಬರೆದಿರುತ್ತಾರೆ.
ಅದನ್ನು ನೋಡಿ ಕುಪಿತನಾದ ಶ್ರೀಕಾಂತ ಪತ್ರವನ್ನು ಹರಿದು ನಾಶಮಾಡುತ್ತಾನೆ. ಹೊಸ ವಿಲ್ ನೋಂದಣಿ ಆಗಿರಲಿಲ್ಲ ಮತ್ತು ಅದನ್ನು ಬೇರೆಯವರು ಓದುವ ಮುನ್ನವೇ ನಾಶಪಡಿಸಿದ್ದರಿಂದ, ಹಳೆಯ ವಿಲ್ ಪ್ರಕಾರ ಅವರ ಆಸ್ತಿ ಇಬ್ಬರು ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕಿರುತ್ತದೆ. ಅದನ್ನು ನೆನೆದು ನಿರಾಳನಾದ ಶ್ರೀಕಾಂತ್ ಅವರ ಕೋಣೆಯನ್ನು ಪರಿಶೀಲಿಸಿದಾಗ ಬಚ್ಚಿಟ್ಟಿದ್ದ ಎರಡು ಕೋಟಿ ನಗದು ಸಿಗುತ್ತದೆ. ತಂದೆಯ ಸ್ವಭಾವ ತಿಳಿದಿದ್ದ ಶ್ರೀಕಾಂತನಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವ ಅನುಮಾನ ಮೂಡುತ್ತದೆ. ತಾನು ಕೆಲಸ ಮಾಡುತ್ತಿದ್ದ ನರ್ಸಿಂಗ್ ಹೋಮ್ ನಲ್ಲಿ ಪಾಲುದಾರಿಕೆ ಪಡೆಯಲು ಎರಡು ಕೋಟಿ ಹಣದ ಅವಶ್ಯಕತೆ ಇದ್ದಿದ್ದರಿಂದ ಸಿಕ್ಕ ಹಣವನ್ನು ಪೂರ್ತಿಯಾಗಿ ತನ್ನದಾಗಿಸಿಕೊಳ್ಳಲು ನಿರ್ಧರಿಸಿ, ಪುಸ್ತಕಗಳ ಕಪಾಟಿನಲ್ಲಿ ಹಣವನ್ನು ಬಚ್ಚಿಟ್ಟು , ಅದರ ಬೀಗದ ಕೀಲಿಯನ್ನು ತನ್ನ ಬಳಿ ಇಟ್ಟುಕೊಳ್ಳುತ್ತಾನೆ.
ಕೃಷ್ಣಕಾಂತ ಬಂದಾಗ ತಾನು ಕೂಡ ಆಗಷ್ಟೇ ಬಂದಂತೆ ತೋರಿಸಿಕೊಂಡು, ಅವರ ಕೊಠಡಿಯಲ್ಲಿ ಸಿಗಬಹುದಾದ ಮುಖ್ಯ ವಸ್ತುಗಳನ್ನು ಹುಡುಕಾಡಿದಂತೆ ಮಾಡಿ, ನಂತರ ಸಾವಿನ ಸುದ್ದಿಯನ್ನು ಬಹಿರಂಗಪಡಿಸುತ್ತಾರೆ. ಹಯವದನ ರಾವ್ ಅವರ ಆಪ್ತ ಗೆಳೆಯ ವೆಂಕಟರಾಮನ್, ಗೆಳೆಯನ ಸಾವಿನ ಬಗ್ಗೆ ಕೃಷ್ಣಕಾಂತನ ಮೇಲೆ ಸಂಶಯ ಪಡುತ್ತಾರೆ. ಅವರ ಸಂಶಯ ನಿಜವೇ? ಎರಡು ಕೋಟಿ ನಗದು ಹಣ ಹಯವತನ ರಾವ್ ಮನೆಯಲ್ಲಿ ಹೇಗೆ ಬಂತು? ಬಚ್ಚಿಟ್ಟುಕೊಂಡ ಹಣವನ್ನು ಶ್ರೀಕಾಂತ್ ತನ್ನದಾಗಿಸಿಕೊಳ್ಳುವನೇ? ಅವರ ಆಸ್ತಿಯನ್ನು ತಂದೆ ಆಸೆ ಪಟ್ಟಂತೆ ಸಮಾಜ ಸೇವೆಗೆ ವಿನಯೋಗಿಸುವನೇ? ವೆಂಕಟರಾಮನ್ ಅನುಮಾನ ಪಟ್ಟಂತೆ ಹಯವದನ ರಾವ್ ಅವರ ಸಾವಿಗೂ ಕೃಷ್ಣಕಾಂತನಿಗೂ ಸಂಬಂಧವಿದೆಯೇ? ಸಂಬಂಧಗಳ ನಿರ್ವಹಣೆ ಮತ್ತು ದ್ವೇಷ ಅಸೂಯೆಗಳ ನಡುವಿನ ಕದನದಲ್ಲಿ ಗೆಲುವು ಯಾರಿಗೆ? ಪ್ರಶ್ನೆಗಳಿಗೆ ಉತ್ತರ ಕಾದಂಬರಿ ಓದಿದ ನಂತರ ಸಿಗುತ್ತದೆ.
ಸರಳವಾದ ನಿರೂಪಣೆಯಲ್ಲಿ, ಕೌತುಕಭರಿತ ಕಾದಂಬರಿ ನನಗಂತೂ ತುಂಬಾ ಇಷ್ಟವಾಯಿತು.
- ರಮ್ಯ ನಂದಾ
