ಪೊಲೀಸ್ ಅಂದ್ರೆ ಭಯವಲ್ಲ ಭರವಸೆ ಗೆಳತಿ… ಶ್ರೀಕಾಂತ ಹಡಪದ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಿನ್ನ ನಗೆ ಅರಳಿದ ಮೊಗವ ಕಂಡ ಕ್ಷಣವೇ
ಹೃದಯದಲ್ಲಿ ಶುರುವಾಯಿತು ಪ್ರಥಮ ವರ್ತಮಾನ
ತಡ ಮಾಡದೆ ಚಡಪಡಿಸಿ ದಾಖಲಿಸಿದೆ ಗೆಳತಿ
ಮನದ ಠಾಣೆ, ಮೊ. ಸಂ
01/24 ಕಲಂ 143 ಪ್ರೇಮದ ಕಾಯ್ದೆ
ಒಲವೆಂಬುದು ಚಿಗುರೊಡೆದ ಸ್ಥಳ ಮಹಜರಿಗೆ
ಸೌಂದರ್ಯದರಸಿಯ ಕಂಡ ಈ ಕಣ್ಗಳೇ ಪಂಚರು
ಈ ಮನದ ಮಿಡಿತವೇ ತನಿಖಾಧಿಕಾರಿ
ಎಲ್ಲ ಸಮಯವೂ ನಿನ್ನದೇ
ದಶ ದಿಕ್ಕುಗಳಿಗೂ ನಿನ್ನದೇ ಚೆಕ್ಕುಬಂದಿ
ಪ್ರಿಯೆ ನೀನರಿಯೇ ನಾ ನಿನ್ನಂತರಂಗದ ಕೈದಿ
ಯಾರನ್ ಹೇಳಲೇ ಸಾಕ್ಷಿ
ಯಾರಿಗೆ ನೀಡಲೇ ನೋಟಿಸ್
ಹೇಗೆ ದಾಖಲಿಸಲೇ ಹೇಳಿಕೆ
ಇದು ನನ್ನೊಲವ ಬಳಲಿಕೆ
ಪೂರಕ ಸಾಕ್ಷಿಯದು ನಿನ್ನೊಲವ ಗುರುತು
ಇತರ ಸಾಕ್ಷಿಯದು ನಿನ್ನ ಪಾದದ ಗುರುತು
ಬಂದಪಂಚರೆಲ್ಲ ಹಾರಿಕೆಯ ಸಾಕ್ಷಿ
ಕಾರಣವದು ನಿನ್ನ ನೀಲ ಅಕ್ಷಿ
ಭೌತಿಕ ಸಾಕ್ಷವಾವುದು ಇಲ್ಲ,
ಬರೀ ಭವಿತವ್ಯದ ಕನಸೇ,
ಆರೋಪಿಯು ನಾನೇ ದೂರುದಾರನು ನಾನೇ,
24 ಗಂಟೆಯೊಳಗೆ
ಪ್ರೇಮದಾಸ್ಪತ್ರೆಗೆ ಕಳಿಸೇ,
ಕಣ್ಣಂಚಲೇ ಕೊಲ್ವ ನಿನ ಮುಂಗುರುಳ ಕಂಡ
ಎದೆ ಬಡಿತ ಮಿಡಿದಿತ್ತು
ನೂರು ದಾಟಿ
ಪ್ರಿಯೆ ಕನಸಲ್ಲೇ ನಿಂಗಿತ್ತ
ಮುತ್ತುಗಳು ನೂರುಕೋಟಿ
ಏನ ಸಂಗ್ರಹಿಸುವೆ ಸಾಕ್ಷಿ
ಬರಿ ಒಲವೇ ಗೆಳತಿಯೇ
ನಿನಗಿತ್ತ ಮುತ್ತುಗಳ
FSL ಗೆ ಕಳಿಸುವೆಯೇ
ನಿನಗೆ ಮಾಡಿದ ಪ್ರತಿ
ಕರೆಯು ಮುದ್ದತ್ತು
ಮಿಸ್ ಕಾಲ್ ಗಳೆಲ್ಲವೂ
ವಾರೆಂಟ್
ವಾಟ್ಸಪ್ ನ ವೇದನೆಗಳೆಲ್ಲವು
ಪ್ರೊಕ್ಲೇಮೇಷನ್
ಎದುರಿಗಿದ್ದರು ಮಾಡಬೇಡ
ನೀ- ಎಲ್ ಪಿ ಆರ್
ನಮ್ಮೊಲವ ಪ್ರಕರಣದ ಚಾರ್ಜ್ಶೀಟ್ ಗೆ ಒಪ್ಪಿಗೆಯ ನೀಡುವೆಯಾ
ಪರಿಶೀಲಿಸಲು ನಮ್ಮತ್ತೆಯೇ
ಡಿ ಎಸ್ ಪಿ
ವಾದ ಮಾಡಲು ನಿಮ್ಮಪ್ಪನೇ ಎಸ್ ಪಿ ಪಿ
ನಾ ವಿಚಾರಣೆ ಬಯಸಿದ ಕೋರ್ಟ ದು ನಿನ್ನದೇ
ನ್ಯಾಯ ಬಯಸಿದ ಕಕ್ಷಿದಾರನು ನಾನೇ
ಒಲವ ಕಾಯ್ದೆ ಅಡಿ ತೀರ್ಪು ನೀಡುವ ನ್ಯಾಯಾಧೀಶಳು ನೀನೆ
ಪ್ರೇಮದ ಕಾಯಿದೆಯಲಿ ಅತಿ ಕಠಿಣ ಶಿಕ್ಷೆಯ ನೀಡು
ಪ್ರತಿನಿತ್ಯ ಅಪ್ಪುಗೆಯ ನೂರು ಮುತ್ತುಗಳ ಶಿಕ್ಷೆ ಯ ಕೊಡು
ಇನ್ನೊಮ್ಮೆ ಯೋಚಿಸು ಇವನು ಕನ್ನಡದ ಖಾಕಿ
ಒಲವಿನೊಡತಿ ಪ್ರತಿನಿತ್ಯ ನಿನ್ನದೇ ಬಹುಪರಾಕಿ
“ಪೊಲೀಸ್ ಅಂದ್ರೆ ಭಯವಲ್ಲ ಭರವಸೆ”
- ಶ್ರೀಕಾಂತ ಹಡಪದ
