ಮಾನವನ ಸ್ವಾರ್ಥ ಬದುಕಿಗಾಗಿ ಗಿಡಿಮರಗಳು ನಾಶವಾಗಿ ಕಟ್ಟಡಗಳು ತಲೆಯೆತ್ತಿ ನಿಂತವು. ಪ್ರಕೃತಿ ನೀಡಿದ ಉತ್ತರಕ್ಕೆ ಮಾನವ ನಡುಗಿ ಹೋದ. ಪ್ರಕೃತಿ ವಿಕೃತಿ ಕವನದಲ್ಲಿ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಸುಂದರವಾಗಿ ವರ್ಣಿಸಿದ್ದಾರೆ, ಮುಂದೆ ಓದಿ..
ಪ್ರಕೃತಿಯೊಡಲಲಿ ದುಃಖದ ಮಡುವಿದೆ
ಕಡಲನು ಮೀರಿಸೊ ಕಣ್ಣೀರಿದೆ
ವಿಕೃತಿ ಮಾಡಿದ ಮನುಜನಿಗಂತಲೆ
ಬಿಡದಲೆ ಸುರಿಮಳೆ ಬೆನ್ನೇರಿದೆ
ಕೈಗಾರಿಕೆಗಳು ಬಿಡುತಿಹ ಹೊಗೆಯಲಿ
ದಿನದಿನ ತಾಪವು ಏರುತ್ತಿದೆ
ದೈತ್ಯಾಕಾರದ ಕಾರ್ಖಾನೆಯಲ್ಲಿ
ನೀರಿನ ಕಲುಷಿತ ಹೆಚ್ಚುತ್ತಿದೆ
ಮೇಲ್ಮೈನೆಲದಲಿ ಕಾಂಕ್ರೀಟ್ ಲೇಪಿಸಿ
ನೀರಿಂಗದೆಯೆ ಕೆರೆಯಾಗಿದೆ
ಗಿಡಿಮರ ಕಡಿಯುತ ಕಟ್ಟಡ ಕಟ್ಟುತ
ನಗರದ ಜೀವನ ಹೊರೆಯಾಗಿದೆ
ನಿಸರ್ಗದೊಡಲಿಗೆ ಕೊಡಲಿಯ ಪೆಟ್ಟಿದೆ
ಭಕ್ಷಿಸೊ ರಣಮಳೆ ಸುರಿಯುತ್ತಿದೆ
ಪರಿಸರ ಸರಸರ ರಕ್ಷಣೆ ಮರೆತರೆ
ಸಾವಿನ ಸೂಚನೆ ನೀಡುತ್ತಿದೆ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
