ಲೇಖಕರಾದ ರವಿ ಜೆ. ಭಜಂತ್ರಿಯವರು ಶ್ರೀ ಗಂಗಾವತಿ ಪ್ರಾಣೇಶರವರ ಹಾಸ್ಯ ಭಾಷಣಗಳಿಂದ ಪ್ರಭಾವಿತರಾದವರು. ಅವರ ರಚನೆಯ ಕೃತಿ ‘ಪ್ರಾಣೇಶ್ PUNCH ಪಕ್ವಾನ್ನ’ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಪ್ರಾಣೇಶ್ PUNCH ಪಕ್ವಾನ್ನ.
ಲೇಖಕರು : ರವಿ ಜೆ. ಭಜಂತ್ರಿ.
ಸಾವಣ್ಣ ಎಂಟರ್ ಪ್ರೈಸಸ್ ಬೆಂಗಳೂರು.
ಮುದ್ರಣದ ವರ್ಷ: ೨೦೧೯&೨೦೨೨.
ಪುಟಗಳು:೯೬.
ಬೆಲೆ: ರೂ.೧೦೦.
ಲೇಖಕರಾದ ರವಿ ಜೆ. ಭಜಂತ್ರಿಯವರು ಶ್ರೀ ಗಂಗಾವತಿ ಪ್ರಾಣೇಶರವರ ಹಾಸ್ಯ ಭಾಷಣಗಳಿಂದ ಪ್ರಭಾವಿತರಾದವರು. ಅವರ ಭಾಷಣದಲ್ಲಿಯ ಆಕರ್ಷಕ ನುಡಿ- ಸಾಲುಗಳನ್ನು ಸಂಗ್ರಹಿಸಿ ಪ್ರಾಣೇಶರವರ ಮಾತಿನ ವಿಚಾರ ಫಲವಾಗಿ ಈ ಹೊತ್ತಿಗೆಯನ್ನು ಹೊರ ತಂದಿದ್ದಾರೆ. ಪ್ರಸಿದ್ಧಿ ಪಡೆಯಲೂ ಕೆಲವು ಸಿದ್ಧಿಗಳಿವೆ. ಶ್ರಮದ ಬೆಲೆ ಇರದಿದ್ದರೆ ನಿಮಗೆ ಯಾವ ಕಲೆಯೂ ಒಲಿಯಲು ಸಾಧ್ಯವಿಲ್ಲ. ಎನ್ನುತ್ತಾ ಅವರು ಹೇಳಿದ ಹಲವು ಸಾಲುಗಳನ್ನು ಓದಿ ಕೆಲವನ್ನಿಲ್ಲಿ ದಾಖಲಿಸಿದ್ದೇನೆ.
ಒಮ್ಮೆ ಡಿ.ವಿ.ಜಿ ಯವರಿಗೆ ಆಗಿನ ಸರ್ಕಾರವು ನಿಮ್ಮ ಹೆಸರನ್ನು ಒಂದು ಬೀದಿಗೆ ಇಡಬೇಕೆಂದು ತೀರ್ಮಾನ ಮಾಡಿದ್ದೇವೆ. ಇದಕ್ಕೆ ನಿಮ್ಮ ಒಪ್ಪಿಗೆ ಬೇಕು’ ಎಂದಾಗ, ಅವರು’ ನನ್ನ ಮನೆಯಲ್ಲಿ ನಾನು ಆರಾಮವಾಗಿದ್ದೇನೆ. ದಯವಿಟ್ಟು ನನ್ನ ಹೆಸರನ್ನು ‘ಬೀದಿಗೆ ತರಬೇಡಿ’ ಎಂದು ತಪ್ಪಿಸಿ ಕೊಂಡಿದ್ದರು.

- ನಿನ್ನ ಹತ್ತಿರ ಇರೋದನ್ನು ಕದಿಯಲು ಸಾಧ್ಯವಾಗದವರು ನಿನ್ನ ನೋಡಿ ಕುದಿಯುತ್ತಾರೆ.
- ಈಗಿನವರು ಯಾರೂ ಬಿದ್ದು ಬಿದ್ದು ನಗುವುದಿಲ್ಲ. ಯಾರಾದರೂ ಬಿದ್ದಾಗ ನಗುತ್ತಾರೆ.
- ಒಳ್ಳೆಯ ಮಾತುಗಾರ ಇತರರು ಆಡಿದ್ದನ್ನು ನೆನಪಿಟ್ಟು ಕೊಳ್ಳುವವನಲ್ಲ. ಆದರೆ ತಾನು ಆಡಿದ್ದನ್ನು ಇತರರು ನೆನಪಿಟ್ಟು ಕೊಳ್ಳುವಂತೆ ಮಾಡುವವನು.
- ಪೂರ್ವಿಕರ ಸುಕೃತವಿಲ್ಲದಿದ್ದರೆ ನಮಗೇನೂ ಲಭ್ಯವಾಗುವುದಿಲ್ಲ. ನೀವು ಸುಕೃತ ಗೈಯದಿದ್ದರೆ, ನಿಮ್ಮ ಮಕ್ಕಳಿಗೆ ಏನೂ ದೊರಕುವುದಿಲ್ಲ.
- ನಗುವುದೊಂದೇ ಅಲ್ಲ. ಇನ್ನೊಬ್ಬರ ಕಷ್ಟ ಭಾವನೆಗಳನ್ನು ಕಂಡು ಕಣ್ಣೀರಾಗುವುದನ್ನು ಕೂಡ ಕಲಿಯಬೇಕು.
- ಅನುಸರಿಸಿದರೆ ಬದುಕು. ಅನುಕರಿಸಿದರೆ ಕೆಡುಕು. ಸೋತವರು ಗೆದ್ದವರನ್ನು ಕಂಡು ಸಂತಸ ಪಡಬೇಕು. ಅದು ನಿಮ್ಮ ಮುಂದಿನ ಗೆಲುವಿನ ಸೋಪಾನ.
- ಹಾಲು ಕುಡಿಯುವುದಿಲ್ಲ ಎಂದು ದೇವರಿಗೆ ಕ್ಷೀರಾಭಿಷೇಕ ಮಾಡಿಸುತ್ತಾರೆ ಆದರೆ ಆಸ್ಪತ್ರೆಯ ರೋಗಿಗಳಿಗಲ್ಲ.
- ನಿಮ್ಮ ಪ್ರಯತ್ನ ಹಾಗೂ ಅಹರ್ನಿಶಿ ದುಡಿಮೆ ಕೊಡುವ ಕೀರ್ತಿ -ಸಂಪತ್ತನ್ನು ಯಾರ ಉಪದೇಶವೂ ಕೊಡಲು ಸಾಧ್ಯವಿಲ್ಲ.
- ಒಳ್ಳೆಯ ಹವ್ಯಾಸಗಳು ಪರಮಾರ್ಥಕ್ಕೆ ಹಚ್ಚುತ್ತವೆ.
- ಜೋಕು ಹೇಳಿ ನಗಿಸುವವವರೆಲ್ಲಾ ಜೋಕರ್ ಗಳಲ್ಲ.
‘ಫ್ರೀ ಇರೋರ ಮುಖ್ಯ ಕೆಲಸ ವೆಂದರೆ, ಬ್ಯುಸಿ ಇರೋರಿಗೆ ಫೋನ್ ಮಾಡೋದು ಎಂದೆನಿಸುತ್ತದೆ. ಫೇಸ್ ಗಳನ್ನು ನೋಡಿ, ಫೇಸ್ ಬುಕ್ ಬಿಡಿ.
- ಇಚ್ಛಾಮರಣಿಗಳು ಹಿಂದೆ ಇದ್ದರಂತೆ. ಈಗಲೂ ಇದ್ದಾರೆನ್ನುತ್ತಾ ಹೀಗೆ ಹೇಳುತ್ತಾರೆ.
- ಮೊಬೈಲಲ್ಲಿ ಮಾತಾಡುತ್ತಾ ಲಾರಿ ಕೆಳಗೆ ಹೋಗುವವರು. ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಬಸ್ಸನ್ನು ಮೈ ಮೇಲೆ ಹತ್ತಿಸಿ ಕೊಳ್ಳುವವರು. ನಿಂತ ಗಾಡಿಗೆ ಗುದ್ದುವವರು. ಅಪಾಯದ ಸ್ಥಳ ಗಳಲ್ಲಿ ನಿಂತು ಸೆಲ್ಫಿ ತೆಕ್ಕೊಳ್ಳುವವರು. ಮೊಬೈಲ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿ ಕೊಳ್ಳುವವರು. ಇತ್ಯಾದಿ.
- ಸತ್ತವನಿಗಾಗಿ ಕೊರಗುವವರಿಲ್ಲ, ಇರುವವನಿಗಾಗಿ ಮರುಗುವವರಿಲ್ಲ. ಇಂಥ ಸಂಧಿಕಾಲದಲ್ಲಿ ಜನಿಸಿರುವ ನಮ್ಮ ಮುಂದಿರುವ ಪ್ರಶ್ನೆ…
ಬದುಕಿಗಾಗಿ ಅಂಜಬೇಕೆ?
ಸಾವಿಗಾಗಿ ಅಂಜಬೇಕೇ?
ಇದ್ದೂ ಸತ್ತಂತಿರಬೇಕೇ?
ನಾವು ಸಾಯದೇ ಉಳಿದಿರುವುದೇಕೆ?….

- ನಡೆಯುತ್ತದೆ ಎಂದು ತಿಳಿದರೆ, ಎರಡು ಕಾಲಿರದವನೂ ನಿಮ್ಮ ಹೆಗಲೇರಿ ಕೂಡ್ರುತ್ತಾನೆ. ಒದೆಯುತ್ತದೆ ಎಂದು ತಿಳಿದರೆ, ಕಾಲಿಲ್ಲದವನೂ ನಿಮ್ಮ ಜೊತೆ ಹೆಜ್ಜೆ ಹಾಕುತ್ತಾನೆ.
- ಶಾಪ ಕೊಡಲು ತಪಸ್ಸು ಬೇಕಿಲ್ಲ. ನೊಂದ, ಪ್ರಾಮಾಣಿಕ ಮನಸ್ಸಿನ ನಿಟ್ಟುಸಿರು ಸಾಕು.
- ನೀವು ದೊಡ್ಡವರೆಂದು ತಿಳಿದು ಕೊಳ್ಳುವವರಿಗಿಂತ ನಿಮ್ಮನ್ನು ದೊಡ್ಡವರು ಎಂದು ತಿಳಿದವರನ್ನು ಹೆಚ್ಚು ಪ್ರೀತಿಸಿ. ತನ್ಮೂಲಕ ನೀವು ದೊಡ್ಡವರಾಗಿ. ದೊಡ್ಡವರೆನಿಸಿ ಕೊಳ್ಳುವವರ ಹಿಂದೆ ಹೋಗಿ ಗೌರವ ಕಳೆದುಕೊಂಡು ದಡ್ಡರಾಗ ಬೇಡಿ.
- ಸುಕ್ಕುಗಳು ಬರೀ ಬಟ್ಟೆಯ ಮೇಲಲ್ಲ. ಬಾಳಲ್ಲೂ ಇರುತ್ತವೆ. ಬಟ್ಟೆಯ ಸುಕ್ಕನ್ನು ಇಸ್ತ್ರಿ ಪೆಟ್ಟಿಗೆ ಕಳೆವಂತೆ ಬಾಳಿನ ಸುಕ್ಕುಗಳನ್ನು ಕಾಲವು ಬಿಸಿ ಮುಟ್ಟಿಸಿ ಸರಿ ಮಾಡುತ್ತದೆ.
- ಓದುವ ಹವ್ಯಾಸವಿದ್ದವನಿಗೆ ಒಂಟಿತನ ಕಾಡುವುದಿಲ್ಲ. ಹತ್ತು ಗೆಳೆಯರಿಗಿಂತ ಒಂದು ಪುಸ್ತಕ ಮನರಂಜನೆ ನೀಡ ಬಲ್ಲದು. ಓದದೇ ಸುಮ್ಮನೆ ಪುಸ್ತಕ ಇಟ್ಟು ಕೊಂಡಾಗ ಅವು ಮೂಕನಂತೆಯೂ,ಓದಲಾರಂಭಿಸಿದ ಕೂಡಲೇ ಕುಶಲ ವಾಗ್ಮಿಯಂತೆಯೂ, ಮಾತನಾಡುವ ಸೋಜಿಗವೇ ಪುಸ್ತಕಗಳು. ಅದು ನೀವು ಪ್ರೀತಿಸಿದಷ್ಟೂ ತೆರೆದು ಕೊಳ್ಳುತ್ತಾ ನಿಮ್ಮನ್ನು ಆವರಿಸಿ ಕೊಳ್ಳುತ್ತದೆ. ಪುಸ್ತಕಗಳು ಶಿಕ್ಷಕರಂತೆ. ಅವು ನಮಗೆ ಶಿಕ್ಷಣ ಕೊಟ್ಟರೂ ಶಿಕ್ಷಿಸುವುದಿಲ್ಲ. ನಾವು ದಡ್ಡರೆಂದು ಹಾಸ್ಯ ಮಾಡುವುದಿಲ್ಲ.
- ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವವಿದೆ. ಚಪ್ಪಲಿಗೂ ಸಹ ಅದರದ್ದೇ ಆದ ಹೆಮ್ಮೆಯಿದೆ. ಮನುಷ್ಯ ಚಪ್ಪಲಿಯನ್ನು ನಾನು ಮೆಟ್ಟಿದ್ದೇನೆ ಎಂದು ಭಾವಿಸಿದರೆ, ಚಪ್ಪಲಿ ನಾನು ಇವನನ್ನು ಹೊತ್ತಿದ್ದೇನೆ ಎಂದು ಬೀಗುತ್ತದೆಯಂತೆ!.
- ಸಜ್ಜನರು ಮೌನವಾಗಿ ಕೂತಿರುವುದರ ಕಾರಣವಿಷ್ಟೇ, ಬಂಡೆಗಲ್ಲಿಗೆ ತಲೆ ಚಚ್ಚಿ ಕೊಳ್ಳಬಾರದೆಂಬ ನೀತಿ ಅನುಸರಿಸಲಷ್ಟೇ.
- ಸಣ್ಣದಕ್ಕೆ ಸಂತೋಷಿಸಿದಾಗಲೇ ದೊಡ್ಡದು ದಕ್ಕೋದು. ಕೆಲವು ಜನ ಸ್ವಭಾವದಲ್ಲಿ ಪುಸ್ತಕಗಳಂತೆಯೇ ಇರುತ್ತಾರೆ. ಕೆಲವರನ್ನು ಪೂಜಿಸಬೇಕು, ಕೆಲವರನ್ನು ಯಾವಾಗಲಾದ ರೊಮ್ಮೆ ಕಾಣುತ್ತಿರಬೇಕು. ಕೆಲವರನ್ನು ಅನುಕರಿಸ ಬೇಕು., ಕೆಲವರನ್ನು ಅಲ್ಲೇ ಮರೆತು ಬಿಡಬೇಕು.
- ಕೆಲವರನ್ನು ನಮಗೆ ಒಳ್ಳೆಯವರೇ ಪರಿಚಯಿಸುತ್ತಾರೆ. ಇಂಥವರು ಪರಿಚಯಿಸಿದ್ದಾರೆಂದು ನೀವು ಅವರಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ತಲೆಗೇರಿಸಿ ಕೊಂಡರೆ, ಒಳ್ಳೆಯ ‘ವರ’ ಮೂಲಕ ಬಂದ ಕೆಟ್ಟ’ವರ’ ಅವರಾಗಿರುತ್ತಾರೆ.
- ಹಸಿದಿರುವ ವ್ಯಕ್ತಿಗೆ ಲೋಕ ಜ್ಞಾನ ತಾನಾಗಿಯೇ ಬರುತ್ತದೆ. ಕೊನೆಯದಾಗಿ ಇನ್ನೊಂದೇ ಇಲ್ಲಿನ ಉಕ್ತಿ.
- ಹರುಷ ಹುಡುಕಿ ಕೊಳ್ಳದವನಿಗೆ ಭವಿಷ್ಯವಿಲ್ಲ. ಮೀನ -ಮೇಷ ಎಣಿಸುವವನಿಗೆ ಆಯುಷ್ಯವೇ ಇಲ್ಲ.
ಹೀಗೆ ಇಲ್ಲಿ ವಾಸ್ತವ- ವಿನೋದವೆರಡೂ ಮಿಳಿತಗೊಂಡ ಹೊಸ ವಿಚಾರಧಾರೆಯ ಹಲವು ಸಾಲುಗಳಿವೆ . ಪುಸ್ತಕವನ್ನು ನೀವೂ ಓದಿ ಆನಂದಿಸಿ.
- ಮಾಲತಿ ರಾಮಕೃಷ್ಣ ಭಟ್
