ಏಪ್ರಿಲ್ 7, 2022 ಇದು ನನ್ನ ಜೀವನದ ಅವಿಸ್ಮರಣೀಯ ದಿನ. ಅಂದು ನಾನು ಮಹಾನ್ ಚೇತನವನ್ನು, ಅದ್ಭುತ ವ್ಯಕ್ತಿಯನ್ನು ಮತ್ತು ಅತ್ಯದ್ಭುತ ವ್ಯಕ್ತಿತ್ವವನ್ನು ಭೇಟಿಯಾದ ದಿನ.ಅಂದು ನನ್ನ ಚಿಕ್ಕತ್ತೆ (ನನ್ನ ಪತಿಯ ಮೌಶಿ) ಮೊಮ್ಮಗನ ಉಪನಯನ ಸಮಾರಂಭಕ್ಕೆ ಕುಟುಂಬ ಸಮೇತ ಹೋಗಿದ್ದೆ. ಮುಂದೇನಾಯಿತು ಪ್ರೀತಿ ಸಂಗಮ್ ತಪ್ಪದೆ ಓದಿ..
ಉಪನಯನದ ವಿಧಿಗಳೆಲ್ಲ ಮುಗಿದ ಮೇಲೆ ಬಂದ ಅತಿಥಿಗಳೆಲ್ಲ ವಟುವಿಗೆ ಉಡುಗೊರೆ ಕೊಡೋದು, ಗ್ರೂಪ್ ಫೋಟೋ ತೆಗೆಸಿಕೊಳ್ಳುವುದು ನಡೀತಾ ಇತ್ತು. ಕುಟುಂಬದವರ ಜೊತೆ ಹರಟುತ್ತಾ ಕುಳಿತಾಗ ಒಮ್ಮೆಲೇ ಎಲ್ಲರೂ ಸ್ಥಬ್ದರಾದರು, ಎಲ್ಲರ ದೃಷ್ಟಿ ದ್ವಾರದ ಕಡೆಗೆ. ಆ ಸಮಾರಂಭಕ್ಕೆ ಒಬ್ಬ ವಿಶೇಷ ಅತಿಥಿ ಬರ್ತಾರೆ ಅಂತ ಮೊದಲೇ ಗೊತ್ತಿತ್ತು. ಬಂದವರು ಅವರೇ ಇರಬಹುದು ಅಂತ ತಿಳಿಯುವಷ್ಟರಲ್ಲಿ ಫೋಟೋ ಗೆ ಅಂತ ನಿಂತ ನನ್ನ ಚಿಕ್ಕತ್ತೆ/ಮೌಶಿ ಆ ವಿಶೇಷ ಅತಿಥಿಯನ್ನು ಸ್ವಾಗತಿಸಲು ಬಾಗಿಲ ಕಡೆಗೆ ಧಾವಿಸಿದರು.
ಇಬ್ಬರೂ ಸ್ನೇಹಿತೆಯರು ಬಿಗಿದಪ್ಪಿ ಕುಶಲೋಪರಿಯನ್ನು ವಿಚಾರಿಸಿಯಾದ ಮೇಲೆ ನನ್ನ ಚಿಕ್ಕತ್ತೆ ಬಂದ ಅತಿಥಿಯನ್ನು ಸ್ಟೇಜ್ ಹತ್ತಿರ ಕರೆದೊಯ್ದರು.
ಆ ವಿಶೇಷ ಅತಿಥಿ ಯಾರು ಅಂತೀರಾ? ಅವರು ಟೆಲ್ಕೊ ಕಂಪನಿಯ ಮೊದಲ ಮಹಿಳಾ ಇಂಜಿನಿಯರ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಆಧಾರಸ್ತಂಭ, ಪ್ರಬುದ್ಧ ಬರಹಗಾರ್ತಿ, ಸಮಾಜ ಸೇವಕಿ, ಕೊಡುಗೈ ದಾನಿ, ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಯನ್ನು ಮುಡಿಗೇರಿಸಕೊಂಡ ಅಸಾಧಾರಣ ಸಾಧಕಿ, ನಾರಿಶಕ್ತಿಯ ದೀವಿಗೆ, ಅತ್ಯಂತ ಸರಳ ಉಡುಪಿನಲ್ಲಿ ಮೇರು ವ್ಯಕ್ತಿತ್ವದ ಮಹಾಚೈತನ್ಯ, ಪ್ರಸ್ತುತ ಮಹಿಳಾ ದಿನಾಚರಣೆಯಂದೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಕನ್ನಡದ ಮಹಿಳೆ.
ಇವರಿಗೆ ಪರಿಚಯ ಬೇಕೆ ಅಥವಾ ಶ್ರೀಮತಿ ಸುಧಾ ಮೂರ್ತಿ ಎಂದರೆ ಅಷ್ಟೇ ಸಾಕೆ?

ಇವರ ಪರಿಚಯ ಯಾರಿಗಿಲ್ಲ ಹೇಳಿ. ನನ್ನ ಚಿಕ್ಕ ಮಗ ಕೂಡ ಅವರ ಬರೆದ ಕಥೆಗಳನ್ನು ಆಲಿಸಿಯಾದ ಮೇಲೆ ಅವರ ಬಗ್ಗೆ ಗೂಗಲ್ ನಲ್ಲಿ ಹುಡುಕ್ತಾ ಇರ್ತಾನೆ. ಅಷ್ಟು ಬೇಗ ಎಲ್ಲ ವಯಸ್ಸಿಗೂ ಹತ್ತಿರವಾಗುವ ವ್ಯಕ್ತಿತ್ವ ಅವರದು.
ಇಂಜಿನಿಯರಿಂಗ ಬ್ಯಾಚ್ ನಲ್ಲಿ ಮೊದಲ ಮಹಿಳಾ ವಿದ್ಯಾರ್ಥಿನಿ, ಇಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲಿಸ್ಟ್ , ಟೆಲ್ಕೊ ಕಂಪನಿಯ ಮೊದಲ ಮಹಿಳಾ ಇಂಜಿನಿಯರ್, ವಾಲ್ಚಂದ ಇಂಡಸ್ಟ್ರಿ ನಲ್ಲಿ ಸಿಸ್ಟಮ್ ಎಂಜಿನಿಯರ್, ತದನಂತರ ತಮ್ಮ ಉಳಿತಾಯ ಹಣದಿಂದ ಇನ್ಫೋಸಿಸ್ ನಂತಹ ಕಂಪನಿಯ ಸಂಸ್ಥಾಪನೆಯ ಹೆಗ್ಗಳಿಕೆ, ಇಷ್ಟೆಲ್ಲ ಸಾಧಿಸಿದರೂ ತನ್ನ ಮಕ್ಕಳನ್ನು ಪೊರೆಯುವ ವಿಷಯ ಬಂದಾಗ ಸಾಮಾನ್ಯ ಸ್ತ್ರೀ ಯಂತೆ ವಿಚಾರ ಮಾಡಿ ತನ್ನ ವೃತ್ತಿ ಜೀವನವನ್ನು ತೊರೆದು ಮಕ್ಕಳನ್ನು ನೋಡಿಕೊಳ್ಳುವ ಅತೀ ದೊಡ್ಡ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರೂ ಅವರು ಬರೀ ಸಾಮಾನ್ಯ ಗೃಹಿಣಿಯಾಗಿ ನಾಲ್ಕು ಗೋಡೆಯ ನಡುವೆ ಉಳಿಯಲಿಲ್ಲ ಎನ್ನುವುದು ಅತೀ ವಿಶೇಷ.
ಸಾಫ್ಟ್ವೇರ್ ಎಂಜಿನಿಯರ್ ವೃತ್ತಿಯಿಂದ ದೂರ ಉಳಿದರೂ ಪತಿಗೆ ಬೆನ್ನೆಲುಬಾಗಿ ನಿಂತು, ಮಕ್ಕಳನ್ನು ನೋಡಿಕೊಳ್ಳುತ್ತಾ ತಮ್ಮನ್ನು ತಾವು ಬೇರೆ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸ್ಥಾನದ ಜೊತೆ ಜೊತೆಗೆ ಸಮಾಜ ಮುಖಿಯಾಗಿ ಕೆಲಸ ಮಾಡಿದರು, ದೇಶ ಸುತ್ತಿದರು, ಕೋಶ ಓದಿದರು, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಕಥೆ ಕಾದಂಬರಿಗಳನ್ನು ಬರೆದು ಪ್ರಬುದ್ಧ ಲೇಖಕಿಯಾಗಿ ಹೆಸರು ಮಾಡಿದರು, ತಮ್ಮ ಅಮೋಘ ಕಾರ್ಯಕ್ಕೆ ಪ್ರಶಸ್ತಿಗಳನ್ನು ಬಾಚಿಕೊಂಡರು, ಅಷ್ಟೇ ಏಕೆ ಇತ್ತೀಚಿಗೆ ರಾಜ್ಯಸಭೆಗೆ ರಾಷ್ಟ್ರಪತಿಯವರಿಂದ ನಾಮನಿರ್ದೇಶನಗೊಂಡರು.
ಬಹುಶಃ ಅವರು ಇನ್ಫೊಸಿಸ್ ನಲ್ಲಿಯೇ ಉಳಿದಿದ್ದರೆ ಆ ಒತ್ತಡದ ಕೆಲಸದಲ್ಲಿ ಜನರಿಗೆ ಇಷ್ಟು ಹತ್ತಿರವಾಗಲು ಸಾಧ್ಯವಿರಲಿಲ್ಲ.
ನಿಸ್ವಾರ್ಥದಿಂದ ಯಾವುದೇ ನಿರ್ಣಯ ತೆಗೆದುಕೊಂಡಲ್ಲಿ ಆ ನಿರ್ಣಯ ನಮ್ಮ ಉನ್ನತ ಮಟ್ಟದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬುದು ಇವರ ಜೀವನಗಾಥೆಯಿಂದ ತಿಳಿಯುತ್ತದೆ.
ಇಂತಹ ಸಾಧಕಿಯಿಂದ ನಾವು ಮಹಿಳೆಯರು ಕಲಿಯಬೇಕಾದದ್ದು ತುಂಬಾನೇ ಇದೆ. ಅವರು ಎಲ್ಲ ವಯೋಮಾನದವರಿಗೂ ಸ್ಫೂರ್ತಿಯ ಸೆಲೆ.
Sky is the limit if you really wish to achieve something in life ಎಂದು ತೋರಿಸಿಕೊಟ್ಟವರಿವರು.
ಇನ್ನು, ಸುಧಾ ಮೂರ್ತಿ ಮೇಡಂ ನನ್ನ ಮೌಶಿ ಮನೆಯ ಸಮಾರಂಭಕ್ಕೆ ಬಂದದ್ದು ಹೇಗೆ ಅಂತೀರಾ?

ಅದನ್ನೂ ಹೇಳ್ತೀನಿ ಕೇಳಿ.
ಸುಧಾ ಮೂರ್ತಿ ಮೇಡಂ ಅವರು ಸ್ತ್ರೀರೋಗತಜ್ಞೆಯಾದ (Gynecologist) ನನ್ನ ಚಿಕ್ಕತ್ತೆಯ ಆಪ್ತ ಸ್ನೇಹಿತೆ ಹಾಗೂ ಸಂಬಂಧಿ ಕೂಡ. ನನ್ನ ಚಿಕ್ಕತ್ತೆಯ ಮನೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ ಸುಧಾ ಮೂರ್ತಿ ಮೇಡಂ ಅವರ ಹಾಜರಿ ಇದ್ದೇ ಇರುತ್ತದೆ. ಅಷ್ಟೊಂದು ಬಿಡುವಿಲ್ಲದ ದಿನಚರಿಯಲ್ಲಿಯೂ ಸ್ವಲ್ಪ ಸಮಯ ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದು, ಹಮ್ಮುಬಿಮ್ಮು ತೋರಿಸದೆ ನಗುಮೊಗದದಿಂದ ಎಲ್ಲರ ಜೊತೆ ಬೆರೆತು, ಜನಸಾಮಾನ್ಯರ ಜೊತೆಯೇ ಊಟ ಮಾಡಿ, ತಾಂಬೂಲ ತೆಗೆದುಕೊಂಡು,ಮತ್ತೆ ಮತ್ತೆ ಎಲ್ಲರ ಜೊತೆಗೆ ಸೆಲ್ಫಿಗೆ ಫೋಸ್ ಕೊಡುತ್ತ “ಕ್ಯಾರಿಯರ್ ಏನೂ ಕೊಡಬ್ಯಾಡಾ ಸುಲಭಾ (ನನ್ನ ಚಿಕ್ಕತ್ತೆ ಹೆಸರು ) ಮನ್ಯಾಗ ಯಾರೂ ತಿನ್ನಾವರಿಲ್ಲಾ, ಮೂರ್ತಿಯವರು ಅಷ್ಟೊಂದು ತಿನ್ನಾಂಗಿಲ್ಲ”( ನಾರಾಯಣ್ ಮೂರ್ತಿ ಯವರು ಬಂದು, ವಟುವಿಗೆ ಆಶೀರ್ವದಿಸಿ ಸಮಯದ ಅಭಾವದಿಂದ ಊಟ ಮಾಡದೇ ಹೊರಟು ಹೋದರು) ಎಂದಾಗ ಇವರ ಸರಳತನಕ್ಕೆ ಮಾರು ಹೋಗದವರಾರೂ ಇಲ್ಲ.
ಸರಿ, ವಿಷಯಕ್ಕೆ ಬರ್ತೀನಿ. ಅಂದು ಸಮಾರಂಭಕ್ಕೆ ಬಂದ ಸುಧಾ ಮೂರ್ತಿ ಮೇಡಮ್ ಅವರು ವಟುವಿಗೆ ಉಡುಗೊರೆ ಕೊಟ್ಟು, ಅವನನ್ನು ಆಶೀರ್ವದಿಸಿ, ಫೋಟೋ ಪ್ರೋಗ್ರಾಂ ಮುಗಿಸಿ ಬರುವಷ್ಟರಲ್ಲಿ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನರ ಮತ್ತೊಂದು ಉದ್ದನೆಯ ಸಾಲು ಆಗಲೇ ರೆಡಿಯಾಗಿತ್ತು.
ಆ ಸಾಲನ್ನು ನಾನೂ ಸೇರಿಕೊಳ್ಳಲು ಉತ್ಸಹವಿದ್ದರೂ ಅಷ್ಟೊಂದು ದೊಡ್ಡ ವ್ಯಕ್ತಿಯನ್ನು ಹಾಗೂ ವ್ಯಕ್ತಿತ್ವದವರನ್ನು ಏನಂತ ಮಾತನಾಡಿಸುವುದು, ನನ್ನ ಪರಿಚಯ ಏನಂತ ಮಾಡಿಕೊಳ್ಳುವುದು ಎಂದೆಲ್ಲ ಮುಜುಗರವಾಗಿ ಸುಮ್ಮನೇ ಕುಳಿತಾಗ, ಮೌಶಿ ಬಂದು “ಪ್ರೀತಿ, ಕಿರಣ್ ಇಬ್ಬರೂ ಬರ್ರಿ, ಸುಧಾಗ ನಿಮ್ಮ ಪರಿಚಯ ಮಾಡಸ್ತೀನಿ” ಎಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು.
ಅವರ ಬಳಿ ನಮ್ಮನ್ನು ಕರೆದೊಯ್ದು ” ಸುಧಾ, ಇವರು ನನ್ನ ಅಕ್ಕನ ಕೊನೆ ಮಗ, ಸೊಸಿ. ಇಕಿನೂ ಕನ್ನಡದಾಗ ಲೇಖನ ಬರೀತಾಳ” ಎಂದರು. ನಾನು ಅವರ ಪಾದ ಮುಟ್ಟಿ ನಮಸ್ಕರಿಸಿ ನಿಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದ ನನ್ನ ಮೇಲಿರಲಿ ಮೇಡಂ ಎಂದಾಗ “ಅಮೂರ ಅವರ ಸೊಸಿ ಅಂದ ಮ್ಯಾಲೆ ನೀ ಬರೀಲಿಕ್ಕೇ ಬೇಕು. ಜಿ.ಎಸ್ ಅಮೂರರಂಥ ಪ್ರಬುದ್ಧ ವಿಮರ್ಶಕರ ಆಶೀರ್ವಾದ ಇದ್ದ ಮ್ಯಾಲೆ ನಾನೇನ ನಿನಗ ಹೇಳುದು.” ಎಂದು ಏನೂ ಅಲ್ಲದ ನನ್ನನ್ನು ಕೂಡ ಅಷ್ಟು ಆತ್ಮೀಯತೆಯಿಂದ ಮಾತನಾಡಿಸಿದಾಗ ಅಚ್ಚರಿಯಾಯ್ತು.
ಅಷ್ಟೇ ಅಲ್ಲ ನನ್ನ ಒಂದು ಲೇಖನವನ್ನು ಓದಿ ಮೆಚ್ಚುಗೆ ವ್ಯಕ್ತ ಪಡಿಸಿ “My best wishes to all your sincere efforts” ಎಂದಾಗ ನನ್ನ ಜೀವನ ಸಾರ್ಥಕವೆನಿಸಿತು. ನಾನು ಏನನ್ನೂ ಸಾಧಿಸದಿದ್ದರೂ ಒಬ್ಬ ಅಸಾಮಾನ್ಯ ಸಾಧಕಿಯಿಂದ ಇಂತಹ ಶುಭಕಾಮನೆಗಳನ್ನು ಪಡೆದದ್ದೇ ಒಂದು ಸಾಧನೆ ಎಂದೆನಿಸಿತು.
ವಯಸ್ಸಿನಲ್ಲಿ ತಮಗಿಂತ ದೊಡ್ಡವರು,ಅಷ್ಟೇ ಅಲ್ಲ ತಮ್ಮ ಆಪ್ತ ಸ್ನೇಹಿತೆಯ ಅಕ್ಕ ಎಂದು ನನ್ನ ಅತ್ತೆಯವರ ಕಾಲು ಮುಟ್ಟಿ ನಮಸ್ಕರಿಸಿ, ಅವರ ಜೊತೆ ಹರಟೆ ಹೊಡೆಯುವದನ್ನು ನೋಡಿ ಮಂತ್ರಮುಗ್ಧಳಾದೆ.
ಇಷ್ಟೆಲ್ಲ ಸಾಧನೆ ಮಾಡಿದರೂ ಅವರ ಸರಳತೆಯನ್ನು ನೋಡಿ “ತುಂಬಿದ ಕೊಡ ತುಳುಕುವುದಿಲ್ಲ” ಎನ್ನುವ ಗಾದೆ ಇಂಥವರನ್ನು ನೋಡಿಯೇ ಮಾಡಿರುವುದು ಎಂದೆನಿಸಿತು. ಅವರ ಮೇಲಿನ ಗೌರವ ನೂರ್ಮಡಿಯಾಗಿ ಮತ್ತಷ್ಟು ವಿನಮ್ರದಿಂದ ನನ್ನ ತಲೆ ಮತ್ತೆ ಮತ್ತೆ ಅವರ ಮುಂದೆ ಬಾಗಿತು.
ಇನ್ನೊಂದು ವಿಷಯ ಏನೆಂದರೆ, 2011 ನಲ್ಲಿ ನಾನು ಗರ್ಭವತಿಯಾಗಿದ್ದಾಗ, ನನ್ನ ಚಿಕ್ಕತ್ತೆ ನಮ್ಮ ಮನೆಗೆ ಒಬ್ಬ ಅಡಿಗೆಯವನನ್ನು ನೇಮಕ ಮಾಡಿದರು. ಅವನು ನನ್ನ ಚಿಕ್ಕತ್ತೆ ಮನೆಗೂ ಹಾಗೂ ಸುಧಾ ಮೂರ್ತಿ ಮೇಡಂ ಅವರ ಮನೆಗೂ ಕೂಡ ಅಡಿಗೆ ಮಾಡುತ್ತಿದ್ದ. “ಬೆಳಿಗ್ಗೆ ಮೂರೂ ಮನೆಗೆ ಸಮಯ ಹೊಂದಿಸಲು ಸಾಧ್ಯವಾಗುವುದಿಲ್ಲ, ಮೇಲಾಗಿ ಜಯನಗರನಿಂದ ಅವರ ಮನೆ ತುಂಬಾ ದೂರ” ಅಂತೆಲ್ಲ ಅವನು ಹೇಳಿದಾಗ “ನಮ್ಮಿಬ್ಬರ (ಅವರ ಮತ್ತು ನನ್ನ ಚಿಕ್ಕತ್ತೆ) ಮನೆಯ ಪೈಕಿ ಒಬ್ಬರ ಮನೆಗೆ ರಾತ್ರಿನೇ ಅಡಿಗೆ ಮಾಡಿಕೊಡು, ಅವರಿಗೆ ಈಗ ತುಂಬಾ ಅವಶ್ಯ” ಎಂದು ಹೇಳಿದರಂತೆ.
(ಅದರಂತೆಯೇ ನನ್ನ ಚಿಕ್ಕತ್ತೆ ತಮ್ಮ ಮನೆಗೆ ಒಂದು ವರ್ಷದ ವರೆಗೆ ರಾತ್ರಿನೇ ಅಡಿಗೆ ಮಾಡಿಸಿಕೊಂಡು ಅದನ್ನೇ ಬೆಳಿಗ್ಗೆ ಬಿಸಿ ಮಾಡಿ ತಿನ್ನುತ್ತಿದ್ದರು. ಅವರಿಗೆ ನಾನು ಎಂದಿಗೂ ಚಿರಋಣಿ)
ಅಡಿಗೆಯವನು ಸುಧಾ ಮೂರ್ತಿ ಮೇಡಂ ಅವರ ಮನೆ ಅಡಿಗೆ ಮುಗಿಸಿಕೊಂಡು ನಮ್ಮ ಮನೆಗೆ ಬರುತ್ತಿದ್ದ. ಯಾವಾಗಲೂ ಸುಧಾ ಮೂರ್ತಿ ಮೇಡಂ ಅವರ ಸರಳತೆ, ಅವರ ದೊಡ್ಡತನದ ಬಗ್ಗೆ ಮಾತನಾಡುತ್ತಲೇ ನಮ್ಮ ಮನೇಲಿ ಅಡಿಗೆ ಮಾಡ್ತಾ ಇದ್ದ.
ಆ ಎಲ್ಲ ಮಧುರ ನೆನಪುಗಳು ಬಳಗದಲ್ಲಿ ಕೊಟ್ಟಿರುವ ಈ ಥೀಮ್ ಬರಹದಿಂದ ಇಂದು ಮತ್ತೆ ನನ್ನ ಮನಸ್ಸಿನ ಮುನ್ನೆಲೆಗೆ ಬಂದು ನಿಂತು ನಿಮ್ಮೆಲ್ಲರ ಮುಂದೆ ಪ್ರಸ್ತುತಗೊಂಡವು.
ಇದಕ್ಕೆ ಬಳಗದ ನಿರ್ವಾಹಕರಿಗೆ ಧನ್ಯವಾದಗಳು. ಪವಿತ್ರ ಮೇಡಂ ಅವರಿಗೆ ಸ್ಪೇಶಿಯಲ್ ಥ್ಯಾಂಕ್ಸ್ . ಏಕೆಂದರೆ 2 ವರ್ಷದ ಹಿಂದೆ ನನ್ನ ವಾಲ್ ನಲ್ಲಿ ಸುಧಾ ಮೂರ್ತಿ ಅವರ ಜೊತೆ ತೆಗೆದುಕೊಂಡಿದ್ದ ಫೋಟೋ ಹಾಕಿದ್ದೆ. ಇಂದು ಅದರ ಬಗ್ಗೆ ನನಗೆ ನೆನಪಿಸಿ ಇವರ ಬಗ್ಗೆ ಬರೆಯಿರಿ ಎಂದು ಸ್ಫೂರ್ತಿ ತುಂಬಿದವರೇ ಪವಿತ್ರ ಮೇಡಂ.
ಸಮಯದ ಅಭಾವದಿಂದ ಥೀಮ್ ಬರಹಗಳನ್ನು ಬರೆಯುವುದನ್ನೇ ನಿಲ್ಲಿಸಿದ್ದೆ. ಆದರೆ ಇವತ್ತು ಆ ಮಹಾನ್ ಚೈತನ್ಯವನ್ನು ನೆನೆದು ಬರೆಯಲೇಬೇಕಾಯಿತು.
ಬರೆಯಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ನಿರ್ವಾಹಕರಿಗೆ ಹಾಗೂ ಸಹೃದಯಿ ಓದುಗರಿಗೆಲ್ಲ ಮತ್ತೊಮ್ಮೆ ಹೃದಯಾಳದಿಂದ ಧನ್ಯವಾದಗಳು.
- ಸಂಪ್ರೀತಿ – (ಪ್ರೀತಿ ಸಂಗಮ್)
