‘ಪುನರ್ನವ’ ಕೃತಿ ಪರಿಚಯ – ಸುನಿತಾ ಮೂರಶಿಳ್ಳಿ

ಸಚಿನ್ ನಾಯಕ್ ಅವರ ‘ಪುನರ್ನವ’ ಕಾದಂಬರಿ, ಭೀಮಸೇನನ ಪತ್ನಿಯಾದ ಕಾಶಿಯ ರಾಜಕುಮಾರಿ ಬಲಂಧರೆಯ ಮೇಲೆ ರಚಿಸಿದ ಕಾದಂಬರಿಯೇ ಪುನರ್ನವ . ಕೃತಿ ಕುರಿತು ಸುನಿತಾ ಮೂರಶಿಳ್ಳಿ ಕೃತಿ ಪರಿಚಯ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಪುನರ್ನವ
ಲೇಖಕರು : ಸಚಿನ್ ನಾಯಕ್ 
ಪ್ರಕಾಶನ :  ಬಿಎಫ್ಸಿ ಪಬ್ಲಿಕೇಶನ್ಸ್
ಪುಟಗಳು : ೧೭೪ 
ಬೆಲೆ : ೧೯೮.00
ಖರೀದಿಗಾಗಿ : ಅಮೇಜಾನ್’ನ ಲ್ಲಿ ಲಭ್ಯ

ಮಹಾಭಾರತ ರಚನೆ ಆದಾಗಿನಿಂದ ಇಂದಿನವರೆಗೂ ಆಯಾ ಕಾಲದ ಬದುಕಿನ ಕವಲುಗಳೊಂದಿಗೆ ಮುಖಾಮುಖಿ ಆಗುತ್ತಲೇ ಇದೆ. ಕವಿ, ಪಂಡಿತರೆಲ್ಲರೂ ತಮ್ಮದೇ ಆದ ವಿನ್ಯಾಸದಲ್ಲಿ ಹೊಸತನ್ನು ಸೃಷ್ಟಿ ಸುತ್ತಲೇ ಇರುವರು. ಪಂಪನಿಂದ ಹಿಡಿದು ಇತ್ತೀಚಿನ ಭೈರಪ್ಪನವರವರೆಗೂ ಲೆಕ್ಕವಿರದಷ್ಟು ಜನ ಬರೆದರೂ ಮುಗಿಯದ ಅನಂತವಾದ ಕಡಲಿದು. ಈ ಮಹಾಕಾವ್ಯದಲ್ಲಿ ಬರುವ ಪಾತ್ರಗಳು,ಕಥೆಗಳು,ಉಪಕಥೆಗಳು ಎಲ್ಲವೂ ಅಗುಣಿತ. ಹಿರಿಯರು, ಪಂಡಿತರು, ಪಾಮರರು,ಕಲಾವಿದರು, ಸಾಹಿತಿಗಳು ಬೊಗಸೆಯಲ್ಲಿ ದಕ್ಕಿದಷ್ಟನ್ನು ಅರಿವಿಗೆ ನಿಲುಕಿದಷ್ಟು ಸಾರವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಲೇ ಬಂದಿರುವರು. ಇಂತಹ ಮಹಾಸಾಗರದ ಒಡಲಿನಲ್ಲೆಲ್ಲೋ ಅವಿತ ಮುತ್ತೊಂದನ್ನು ಹೆಕ್ಕಿ ತೆಗೆದು ಕಾಣದ ಲೋಕಕ್ಕೆ ಕಾಣಿಸುವ ಕಾರ್ಯವನ್ನು ಇಲ್ಲಿ ಸಚಿನ್ ನಾಯಕ್ ರವರು ಮಾಡಿರುವದು ಅಭಿನಂದನೀಯ. ನಾನು ಇಲ್ಲಿ ಉಲ್ಲೇಖಿಸುತ್ತಿರುವದು ಭೀಮಸೇನನ ಪತ್ನಿಯಾದ ಕಾಶಿಯ ರಾಜಕುಮಾರಿ ಬಲಂಧರೆಯ ಮೇಲೆ ರಚಿಸಿದ ಪುನರ್ನವ ಕಾದಂಬರಿ ಬಗೆಗೆ.

ಬದುಕಿನ ಕೆಲವೇ ಕೆಲವು ದಿನ ಭೀಮಸೇನನೊಂದಿಗೆ ಕಳೆದರೂ ಬದುಕೆಲ್ಲ ಆತನ ನೆನಪುಗಳಲ್ಲೇ, ಆತನ ನಿರೀಕ್ಷೆಯಲ್ಲೇ ಕಳೆದುಬಿಡುವ ನಿಷ್ಕಲ್ಮಶ, ನಿಷ್ಕಪಟಿ ಪ್ರೇಮಿ,ಮನದನ್ನೆ ಹಾಗೂ ಪತ್ನಿಯೂ ಆದ ಬಲಂಧರೆಯ ಮನದ ಭಾವಗಳನ್ನು ಒಳನೋಟವನ್ನು ಸೂಕ್ಷ್ಮ ವಾಗಿ ತೆರೆದಿಡುತ್ತ ಸಾಗುವ ಪುನರ್ನವದ ಪುಟಗಳು ಅಲ್ಲಲ್ಲಿ ಓದುಗರ ಭಾವಕ್ಕೂ ತಾಕಿ ಅವರದೇ ಭಾವ ಎಂಬಂತೆ ಹೃದ್ಯವಾಗಿಬಿಡುವದು.

ಕಾಶಿಯ ಉದ್ದಗಲಕೂ ಚಾಚಿಕೊಂಡ ಗಂಗೆ ಬಲಂಧರೆಯ ಆಪ್ತ ಸಖಿಯಾಗಿ ಅವಳ ಮನದ ತುಮುಲಗಳಿಗೆ, ಕ್ಲೇಷೆಗಳಿಗೆ ಮೂಕಸಾಕ್ಷಿಯಾಗಿ ಈ ಕಾದಂಬರಿಯುದ್ದಕ್ಕೂ ಹರಿಯುತ್ತಲೇ ಇರುವಳು.

ಎಲ್ಲಿಯೂ ಸಿದ್ಧ ಸಂಪ್ರದಾಯ, ಸವಕಲು ಮೌಢ್ಯತೆಗಳಿಗೆ ಸಿಲುಕದೆ, ವೈಚಾರಿಕ ನೆಲೆಯಲ್ಲಿ ತೆರೆದುಕೊಳ್ಳುತ್ತಾ ಹೋಗುವ ನಿರೂಪಣೆ ಕಥಾ ನಾಯಕಿಯನ್ನು ಭೂತಕಾಲದ ಪರದೆಯೊಳಗಿರಿಸದೆ ವರ್ತಮಾನದ ತಕ್ಕಡಿಯಲ್ಲಿಟ್ಟು ತೂಗಿದ್ದು ಲೇಖಕರ ಹೆಚ್ಚುಗಾರಿಕೆ . “ನನ್ನನ್ನು ಕೇಳಿದರೆ ನಮ್ಮನ್ನು ಪಾಂಡವರು ಎನ್ನುವುದೇ ತಪ್ಪು , ಪಾಂಡುರಾಜನೇನು ನಮ್ಮನ್ನು ಸ್ವಂತ ಬೀಜದಿಂದ ಹುಟ್ಟಿಸಿದನೆ , ಇಲ್ಲ ಅವನು ಅಕಾಲ ಮರಣಕ್ಕೆ ತುತ್ತಾದ ಮೇಲೆ ಪ್ರತಿಕ್ಷಣವೂ ನಮ್ಮೆಲ್ಲರನ್ನೂ ಸಾಕಿ ಸಲಹಿ ಬೆಳೆಸಿದ್ದು ನಮ್ಮಮ್ಮ ಕುಂತಿಯೇ ಅಲ್ಲವೆ ….ಹಾಗಾದರೆ ನಾವು ಪಾಂಡವರು ಹೇಗೆ ಕೌಂತೇಯರು ಎನ್ನುವದೇ ಸರಿ. ಕೀರ್ತಿ ಸಲ್ಲಬೇಕಾದಲ್ಲಿ ಸಂದರೆ ಅದಕ್ಕೊಂದು ಅರ್ಥ ಅಲ್ಲವೆ ” ಎಂದು ಭೀಮಸೇನನ ಮೂಲಕ ನುಡಿಸುವ ಲೇಖಕರ ಮಾತುಗಳು ಲೋಕದ ಮಾತೆಯರ ಸಾಮುದಾಯಿಕ ಗೌರವದ ಅಸ್ಮಿತೆಯ ಪ್ರಶ್ನೆಯಾಗಿದೆ. “ಒಂದರ್ಥದಲ್ಲಿ ಪಿತಾಮಹ ಭೀಷ್ಮ ರಿಂದ ಪ್ರತಿರೋಧವನ್ನಾಗಲಿ ನ್ಯಾಯವನ್ನಾಗಲಿ ನಿರೀಕ್ಷಿಸುವದು ತಪ್ಪೇ ಆಗುತ್ತದೆ ಏಕೆಂದರೆ ಅವರೆಷ್ಟೇ ಧರ್ಮಬೀರು, ನ್ಯಾಯಪರ ಎಂದು ಹೆಸರು ಗೌರವ ಇರಿಸಿಕೊಂಡಿದ್ದರೂ ಒಂದು ಹೆಣ್ಣಿನ ವಿಷಯ ಬಂದಾಗ ಅವರ ನ್ಯಾಯ ವಿಚಕ್ಷಣೆ ಹಾಗೂ ಧರ್ಮ ವ್ಯಾಖ್ಯಾನಗಳು ಯಾವತ್ತೂ ಧ್ವಂಧ್ವದಲ್ಲಿಯೇ ಸಿಲುಕಿಕೊಂಡಿರುವುದು ಅವರ ಜೀವನದ ಪ್ರತಿ ಘಟ್ಟದಲ್ಲಿಯೂ ಕಂಡುಬರುತ್ತದೆ.

ಸತ್ಯವತಿಯಾಗಲಿ, ಅಂಬೆಯಾಗಲಿ ,ಗಾಂಧಾರಿಯಾಗಲಿ,ಕುಂತಿಯಾಗಲಿ, ದ್ರೌಪದಿಯಾಗಲಿ ಇವರಾರಿಗೂ ಭೀಷ್ಮ ರಿಂದ ನ್ಯಾಯ ದೊರಕಲಿಲ್ಲ” ಎಂದು ಯೋಚಿಸುವ ಬಲಂಧರೆಯ ವಿಚಾರಗಳ ಮೂಲಕ ಲೇಖಕರು ಪುರುಷ ನಿರ್ಮಿತ ಲೋಕದಲ್ಲಿ ನ್ಯಾಯಬೀರುಗಳ ಪರಿಭಾಷೆಯನ್ನು ಎತ್ತಿಕೊಂಡು ಸರಿತಪ್ಪುಗಳನ್ನು ತಾರ್ಕಿಕವಾಗಿ ಚರ್ಚಿಸಿರುವದು ಎಲ್ಲ ಪ್ರಾಜ್ಞ ಮನಸುಗಳೂ ಒಪ್ಪತಕ್ಕಂಥ ವಿಚಾರಗಳೇ ಆಗಿವೆ.

“ರಾಕ್ಷಸರು ಕಾಡು ಜನರು ದಟ್ಟಡವಿಗಳಲ್ಲಿ ಕಾಡು ಪ್ರಾಣಿಗಳ ಮಧ್ಯೆ ಬದುಕಿ ಕಷ್ಟಪಟ್ಟು ಬೇಟೆಯಾಡಿ ಹೊಟ್ಟೆ ಹೊರೆದು ಜೀವನೋಪಾಯ ಕಂಡುಕೊಳ್ಳುವ ಒಂದು ಜನಾಂಗ. ಈ ಕಾಡು ಜನರೂ ನಂಬಲಸಾಧ್ಯವಾದ ಶಕ್ತಿ, ದೇಹದಾರ್ಢ್ಯವನ್ನು ಹೊಂದಿರುತ್ತಾರೆ. ರಾಕ್ಷಸರು ಎಂಬುದು ನಾಗರೀಕರು ಎನಿಸಿಕೊಂಡ ನಾವು ಅವರಿಗೆ ಕೊಟ್ಟ ಹೆಸರು ಅಷ್ಟೆ” ಎನ್ನುವ ಮಾತು ಲೇಖಕರು ಕೃತಿಯಲ್ಲಿ ಎಲ್ಲೂ ಅತಿಮಾನುಷರು, ಅತೀಂದ್ರಿಯರು ಎಂಬ ಅಸಂಗತ ವಿಷಯಗಳನ್ನು ತಾರದೆ ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಸಹಜವಾದ ನೆಲೆಯಲ್ಲಿ ಪ್ರಸ್ತುತ ಪಡಿಸಿರುವದು ಕೃತಿಗೆ ಹೆಚ್ಚಿನ ವ್ಯಾಪ್ತಿ ಒದಗಿಸಿದೆ.

“ಸಾಧು ಸಂತರು, ಅರಸರು, ಗಣ್ಯರು, ಸಾಮಾನ್ಯರು, ಎಲ್ಲರೂ ಗಂಗೆಯ ಮಡಿಲಲ್ಲಿ ಮಿಂದೇಳುವಾಗ ಸಮಾನರೆ ಆ ಸಮಾನತೆಯ ಪಾಠ ಇನ್ನೂ ಸ್ಪಷ್ಟವಾಗಿ ಸಾದೃಶ್ಯ ವಾಗುವದು ಅಲ್ಲೇ ಇನ್ನೂ ಸ್ವಲ್ಪ ಮುಂದೆ ಸಾಗಿದರೆ ಘಟ್ಟದ ಇನ್ನೊಂದು ಬದಿಯಲ್ಲೆ ಧಗಧಗನೆ ಉರಿಯುತ್ತಿರುವ ಮೂರ್ನಾಲ್ಕು ಚಿತೆಗಳ ಬೆಂಕಿಯ ಬೆಳಕಲ್ಲಿ ಮುಕ್ತಿಧಾಮ ಕಾಶಿ, ಮುಕ್ತಿದಾಯಿನಿ ಗಂಗೆ” ……ಈ ಜೀವ ಬಯಲಾದಾಗ ಕಾಯವೆಲ್ಲವೂ ಮಣ್ಣೇ….ಅಲ್ಲಿ ಯಾವ ಭಿನ್ನತೆಗಳೂ ಇಲ್ಲ ಎಂಬ ಅಂತಿಮ ಸತ್ಯವನ್ನು ಹೇಳುತ್ತ ಆ ಚಿತೆಯೂ, ದಹಿಸುವ ಬೆಂಕಿಯೂ, ಉರಿವ ಜ್ವಾಲೆಯೂ, ಬೀರುವ ಬೆಳಕೂ ಎಲ್ಲವೂ ಎಲ್ಲರಿಗೂ ಒಂದೇ ಎಂಬ ಸಾದೃಶ್ಯದ ಮೂಲಕ ಬಿಂಬಿಸುವ ಆ ಅರಿವಿನ ಕಿಡಿಯು ಮೌನವಾಗಿ ಒಳಲೋಕದಲ್ಲೂ ಪ್ರಜ್ವಲಿಸುವದು.

“ಈ ಯುದ್ಧದಲ್ಲಿ ಯಾರೂ ಗೆಲ್ಲುವದಿಲ್ಲ. ಗೆಲ್ಲುವದೊಂದೇ ಮೃತ್ಯು…..ಕೊನೆಯಲ್ಲಿ ಉಳಿಯುವವರೆಷ್ಟು ಯಾವ ಸೈನಿಕ ಹೇಗೆ ಹೋರಾಡಿ ಸತ್ತ ಕೊನೆಗೆ ಅರಿಯುವವರ್ಯಾರು , ರಥಿಕರ, ಸೇನಾನಿಗಳ ಧೈರ್ಯ, ಶೌರ್ಯಗಳು ಹಾಡಾಗಿ, ಕಥೆಯಾಗಿ ಹೇಳಲ್ಪಡುವವು. ಆದರೆ ಇವರ ಕಥೆ ….ಒಂದು ಹೃತ್ಪೂರ್ವಕ ಕೃತಜ್ಞತೆ, ಗೌರವವಾದರೂ ಸಲ್ಲಬೇಕಲ್ಲವೆ ಪ್ರತಿಯೊಬ್ಬ ಅನಾಮಧೇಯ ಯೋಧನಿಗೂ” ….ಅಬ್ಬ ! ಎಂಥ ಮಾತು ಇದು ಸರ್ವ ಕಾಲ,ದೇಶಕ್ಕೂ ಸಮ್ಮತವಾದುದು. ಯುಗಗಳು,ಆಚಾರ,ವಿಚಾರ, ಸಂಸ್ಕೃತಿ ಎಲ್ಲವೂ ಬದಲಾಗಬಹುದು ಆದರೆ ಬದಕು ಬದಲಾದೀತೆ…ಬದುಕಿನ ಸತ್ಯ ಬದಲಾದೀತೆ.. ಹೀಗೆ ದಿಟವಾದ ಮೌಲಿಕ ಮಾತುಗಳು ಲೇಖಕರ ಒಳ ಎಚ್ಚರವನ್ನು ಕಾಯ್ದಿರಿಸಿಕೊಂಡು ,ಬಹುಮುಖಿ ಆಲೋಚನೆಗಳನ್ನು ವ್ಯಕ್ತ ಪಡಿಸಿದ ರೀತಿ ಓದುಗರ ಮನೋಲೋಕವನ್ನು ಆವರಿಸುವಲ್ಲಿ ಯಶಸ್ವಿಯಾಗುವದು ನಿಸ್ಸಂದೇಹ. ಗತಕಾಲದ ಪಾತ್ರವನ್ನು ವರ್ತಮಾನದ ಬೆಳಗಿನಲ್ಲಿ ಪುನರ್ ಸೃಷ್ಟಿಸುವ ಸೊಬಗು ಒಬ್ಬ ಸೃಜನಶೀಲ ಲೇಖಕನಿಗೆ ಮಾತ್ರ ಸಾಧ್ಯ. ಪೂರಾ ಕಾದಂಬರಿಯಲ್ಲಿ ಎಲ್ಲೂ ಅನವಶ್ಯಕವಾದ ಆದರ್ಶೀಕರಣಕ್ಕೆ ಒಳಗಾಗದೆ ಹೆಣ್ಣಿನ ಭಾವಲೋಕದ ಸೂಕ್ಷ್ಮ ಎಳೆಗಳು ಗಾಢವಾದ ಒಳಲೋಕದ ಹರಿವು ಪುನರ್ನವಕೆ ಜೀವಂತಿಕೆ ತಂದು ಕೊಟ್ಟಿದೆ.

ಇಂಥ ಹಲವಾರು ಕೃತಿಗಳು ತಮ್ಮಿಂದ ಹೊರ ಹೊಮ್ಮಿ ಓದುಗ ಪ್ರಪಂಚಕ್ಕೆ ದಕ್ಕಲಿ ಎಂದು ಹೃನ್ಮನದ ಹಾರೈಕೆಗಳು.


  • ಸುನಿತಾ ಮೂರಶಿಳ್ಳಿ

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading