ವಿಶಿಷ್ಟ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಸೃಷ್ಟಿಸುತ್ತಿದ್ದ ಸ್ತ್ರೀ ಪಾತ್ರಗಳು ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತಿತ್ತು, ಅವರ ಪ್ರತಿಯೊಂದು ಸಿನಿಮಾದಲ್ಲೂ ಸ್ತ್ರೀ ಗೆ ಪ್ರಾಮುಖ್ಯತೆ ಇರುತ್ತಿತ್ತು,- ಕುಸುಮಾ ಮಂಜುನಾಥ, ಮುಂದೆ ಓದಿ…
ಕನ್ನಡ ಚಿತ್ರರಂಗ ಕಂಡ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಅವರ ಚಿತ್ರಗಳು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಸಮಾಜಕ್ಕೆ ಸಂದೇಶ ನೀಡುವಂತಹದಾಗಿತ್ತು. ಅವರ ಚಿತ್ರಗಳಲ್ಲಿ ಸ್ತ್ರೀ ಪಾತ್ರಗಳು ಬಹಳ ಚೆನ್ನಾಗಿ ಚಿತ್ರಿತವಾಗುತ್ತಿದ್ದವು. ಹೆಣ್ಣುಮಕ್ಕಳ ವಿಭಿನ್ನ ವ್ಯಕ್ತಿತ್ವಗಳನ್ನು ಭಾವನೆಗಳನ್ನು ತಲ್ಲಣಗಳನ್ನು ಮನಸ್ಸಿಗೆ ತಟ್ಟುವಂತೆ ಸೃಷ್ಟಿಸುವಲ್ಲಿ ಪುಟ್ಟಣ್ಣನವರು ಎತ್ತಿದ ಕೈ. ಇಲ್ಲಿ ಕೆಲವೊಂದು ಉದಾಹರಣೆಗಳನ್ನು ತೆಗೆದುಕೊಳ್ಳುವುದಾದರೆ ಸ್ತ್ರೀಯನ್ನು ಸ್ವಾಭಿಮಾನಿಯಾಗಿ ಚಿತ್ರಿಸಿರುವುದು ‘ಬೆಳ್ಳಿಮೋಡ’ ನಾಯಕಿ ಹಾಗೂ “ಶುಭ ಮಂಗಳ”ದ ನಾಯಕಿಯರಲ್ಲಿ…ತನ್ನ ಆಸ್ತಿಗಾಗಿ ಪ್ರೀತಿಸುವ ನಾಯಕನನ್ನು “ಬೆಳ್ಳಿಮೋಡ”ದಲ್ಲಿ ನಾಯಕಿ ತಿರಸ್ಕರಿಸುತ್ತಾಳೆ.
ತಂದೆಯ ಅಕಾಲಿಕ ಮರಣದಿಂದ ಅನಾಥಳಾಗಿ ಮಾವನ ಮಗನ ಆಶ್ರಯ ಪಡೆಯುವ “ಶುಭಮಂಗಳ”ದ ನಾಯಕಿ ತನ್ನ ಸ್ವಂತ ಸಂಪಾದನೆಯಲ್ಲಿ ಜೀವನ ನಡೆಸಬೇಕೆಂದು ಒದ್ದಾಡುತ್ತಾಳೆ.
ಸಂಗೀತ ಸಾಧನೆಗಾಗಿ ಜೀವನವನ್ನೇ ಮುಡುಪಾಗಿಡಬೇಕೆಂದು “ಉಪಾಸನೆ”ಯ ನಾಯಕಿಯ ಹೋರಾಟ.

ಸಂಸಾರ ಜೀವನಕ್ಕೆ ವಿದಾಯ ಹೇಳಿ ಸಂಗೀತವನ್ನು ಸಾಧನೆಯ ಹಾದಿಯನ್ನಾಗಿ ಆಯ್ದುಕೊಳ್ಳುವ ನಾಯಕಿಯ ಕಥೆ ಇಲ್ಲಿ ಕಾಣಬಹುದು. ಈ ಹಾದಿಯಲ್ಲಿ ಅವಳಿಗೆ ಎದುರಾಗುವ ಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲುವ ಪಾತ್ರದಲ್ಲಿ ಗಟ್ಟಿತನವಿದೆ. ರಂಗಭೂಮಿಯಲ್ಲಿ ಹುಟ್ಟು ಕಲಾವಿದೆಯಾಗಿ ಬೆಳೆಯುವ ರಂಗನಾಯಕಿಯ ನಾಯಕಿ ವಿವಾಹ ಜೀವನದಲ್ಲಿ ಬಂಧಿಯಾಗುತ್ತಾಳೆ. ವಿವಾಹದ ನಂತರ ಅವಳ ವೃತ್ತಿಜೀವನಕ್ಕೆ ಗಂಡನಿಂದ ಸಮ್ಮತಿ ದೊರೆಯುವುದಿಲ್ಲ. ಮುಂದೊಮ್ಮೆ ಗಂಡನಿಂದ ತಿರಸ್ಕೃತಗೊಂಡು ಮತ್ತೆ ಬಣ್ಣ ಹಚ್ಚಿ ಸಿನಿಮಾದ ಹೆಸರಾಂತ ನಾಯಕಿಯಾಗುತ್ತಾಳೆ. ಇದು ರಂಗನಾಯಕಿ ಪಾತ್ರ. ಇಲ್ಲಿಯೂ ತನ್ನತನವನ್ನು ಸಾಬೀತುಪಡಿಸಲು ಹೆಣ್ಣುಮಗಳೊಬ್ಬಳು ಪಡುವ ಕಷ್ಟವನ್ನು ಪುಟ್ಟಣ್ಣ ಬಹಳ ಚೆನ್ನಾಗಿ ಚಿತ್ರಸಿದ್ದಾರೆ .ತನ್ನ ಮಗನಿಂದಲೇ ಪ್ರೀತಿಸಲ್ಪಡುವ ಆರಾಧಿಸಲ್ಪಡುವ ಹೆಣ್ಣಾಗಿ ನಾಯಕಿಯ ತಲ್ಲಣ ಇಲ್ಲಿ ಅತ್ಯುತ್ತಮವಾಗಿ ಚಿತ್ರಿತವಾಗಿದೆ.

ಪುಟ್ಟಣ್ಣನವರದು ದುರಂತ ನಾಯಕಿಯರನ್ನು ಚಿತ್ರಿಸುವುದರಲ್ಲಿ ಎತ್ತಿದ ಕೈ. ನಮ್ಮ “ಗೆಜ್ಜೆಪೂಜೆ”ಯ ನಾಯಕಿ ವೇಶ್ಯೆಯೊಬ್ಬಳ ಮಗಳು. ಅವಳಿಗೆ ತನ್ನ ತಾಯಿಯ ವೃತ್ತಿ ಮುಂದುವರಿಸುವ ಆಸೆಯಿಲ್ಲ. ಇಷ್ಟಪಟ್ಟ ನಾಯಕ ಅನಿವಾರ್ಯವಾಗಿ ಅವಳನ್ನು ಮದುವೆಯಾಗಲು ನಿರಾಕರಿಸಿದಾಗ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಾಳೆ.
ಇನ್ನು “ಶರಪಂಜರದ “ನಾಯಕಿ ತನ್ನ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ನೊಂದು ಮಾನಸಿಕ ತೊಂದರೆ ಅನುಭವಿಸುತ್ತಾಳೆ. ಇತ್ತಗಂಡನ ಬೆಂಬಲವು ಸಿಗದೆ ಹುಚ್ಚಿಯ ಪಟ್ಟ ಪಡೆಯುತ್ತಾಳೆ. ಸಮಾಜ ಅವಳನ್ನು ನೋಡುವ ಪರಿ ,ಕಾಯಿಲೆಯಿಂದ ಗುಣಮುಖ ಹೊಂದಿದ ನಂತರವೂ ಅವಳು ಅನುಭವಿಸುವ ನೋವು ಇವೆಲ್ಲವನ್ನೂ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಪುಟ್ಟಣ್ಣ.

‘ನಾಗರಹಾವು’ ಚಿತ್ರದ ಅಲಮೇಲು, ಮಾರ್ಗರೇಟ್ ಇವರೆಲ್ಲರೂ ದುರಂತ ನಾಯಕಿಯರೇ. ಪುಟ್ಟಣ್ಣನವರು ವಿಶೇಷವಾಗಿ ಚಿತ್ರಿಸಿದ ಪಾತ್ರ “ಎಡಕಲ್ಲು ಗುಡ್ಡದ ಮೇಲೆ “ಚಿತ್ರದ ನಾಯಕಿಯ ಪಾತ್ರ. ಇಲ್ಲಿ ಇಬ್ಬರು ನಾಯಕಿಯರು. ತನ್ನ ಮನೋಕಾಮನೆಗಳನ್ನು ಗಂಡನಿಂದ ತೃಪ್ತಿ ಪಡಿಸಿಕೊಳ್ಳಲಾಗದೆ ವಿವಾಹೇತರ ಸಂಬಂಧವನ್ನು ಹೊಂದುವ ನಾಯಕಿ .ಅವಳ ಈ ದಾರಿಯನ್ನು ತಪ್ಪೆಂದು ಪ್ರತಿಪಾದಿಸುವ ನಾಯಕಿಯ ತಂಗಿ. ಒಂದು ಪಾತ್ರ ಆದರ್ಶವನ್ನು ಹೇಳಿದರೆ ,ಮತ್ತೊಂದು ಪಾತ್ರ ದೌರ್ಬಲ್ಯಗಳನ್ನು ಎತ್ತಿತೋರಿಸುತ್ತದೆ .ಅಶ್ಲೀಲತೆಯ ಸುಳಿವಿಲ್ಲದೆ ಬಹಳ ಸೂಕ್ಷ್ಮವಾಗಿ ಅಂದಿನ ಕಾಲಕ್ಕೆ ಪಾತ್ರಗಳನ್ನು ಸೃಷ್ಟಿಸಿ ದುದು ಪುಟ್ಟಣ್ಣನವರ ತಾಕತ್ತು.
ನಾಗರಹಾವಿನ, ಓಬವ್ವನ ಪಾತ್ರ ದೃಶ್ಯೀಕರಣ ಉತ್ಕೃಷ್ಟ. ಕಥಾ ಸಂಗಮದ ಮೂಕ ನಾಯಕಿಯ ಪಾತ್ರ ವಿಭಿನ್ನ. ಮಸಣದ ಹೂವು ಸಮಾಜದಿಂದ ತಿರಸ್ಕೃತರಾದ ವೇಶ್ಯೆಯರ ಜೀವನದ ಚಿತ್ರಣ ಇಲ್ಲಿಯೂ ಅವರ ನಿರೂಪಣೆ ಅಮೋಘ. ಹೀಗೆ ಪುಟ್ಟಣ್ಣ ಸೃಷ್ಟಿಸಿದ ಪಾತ್ರಗಳು ಅವು ನಮ್ಮ ಮನಸ್ಸನ್ನು ತಟ್ಟುತ್ತಿದ್ದ ರೀತಿ ಬಹಳ ಹೃದಯಂಗಮ .ನಮ್ಮ ನಡುವಿನ ವಿಶಿಷ್ಟ ನಿರ್ದೇಶಕ ಪುಟ್ಟಣ್ಣ…ಅಂತ ಮೇರು ನಿರ್ದೇಶಕರನ್ನು ಪಡೆದಿದ್ದು ನಮ್ಮ ಸೌಭಾಗ್ಯ.
- ಕುಸುಮಾ ಮಂಜುನಾಥ
