ಜಗತ್ತಿನ ಅತ್ಯುತ್ತಮ ಚೆಸ್ ಆಟಗಾರ, 16 ವರ್ಷದ ಪ್ರಜ್ಞಾನಂದ. ಆರ್ ನ ವಿರುದ್ಧ ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಸಹ ಸಾಕಷ್ಟು ಸಲ ಸೋತಿದ್ದಾರೆ.ಮುಂದೆ ಓದಿ ಈ ಪೋರನ ಬಗ್ಗೆ ವಿವೇಕಾನಂದ ಹೆಚ್ ಕೆ ಲೇಖನಿಯಲ್ಲಿ…
ಸದ್ಯದ ಜಗತ್ತಿನ ಅತ್ಯುತ್ತಮ ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರನ್ನು ಕೇವಲ 16 ವರ್ಷದ ಈ ಬಾಲ ಪ್ರತಿಭೆ ಏರ್ಥಿಂಗ್ಸ್ ಮಾಸ್ಟರ್ಸ್ ಆನ್ ಲೈನ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಸೋಲಿಸಿದ್ದಾನೆ. ಜೊತೆಗೆ ರಷ್ಯಾದ ಇನ್ನಿಬ್ಬರು ಗ್ರ್ಯಾಂಡ್ ಮಾಸ್ಟರ್ ಗಳನ್ನು ಸಹ ಈ ಹುಡುಗ ಸೋಲುಸಿದ್ದಾನೆ…….
ಕಾರ್ಲಸನ್ ಎಂತಹ ಅತ್ಯದ್ಭುತ ಚೆಸ್ ಆಟಗಾರ ಎಂದರೆ ಕಳೆದ ಹತ್ತು ಹದಿನೈದು ವರ್ಷಗಳಿಂದ ವಿಶ್ವದ ನಂಬರ್ ಒನ್ ಆಟಗಾರ. ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಸಹ ಈತನ ವಿರುದ್ಧ ಸಾಕಷ್ಟು ಸಲ ಸೋತಿದ್ದಾರೆ. ಕಾರ್ಲಸನ್ ಫಾರ್ಮನಿಂದಾಗಿಯೇ ವಿಶ್ವನಾಥನ್ ಆನಂದ್ ಅನೇಕ ಟೂರ್ನಿಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಸಾಮಾನ್ಯ ಜನರಿಗೆ ಕಾರ್ಲಸನ್ ಪ್ರತಿಭೆಯ ಬಗ್ಗೆ ಹೇಳಬೇಕೆಂದರೆ ಎಷ್ಟೋ ಗ್ರಾಂಡ್ ಮಾಸ್ಟರ್ ಗಳಿಗೆ ಕಾರ್ಲಸನ್ ಮಂಪರಿನಲ್ಲಿ ಚೆಸ್ ಆಟ ಆಡಿದರೂ ಆತನನ್ನು ಸೋಲಿಸುವುದು ಕಷ್ಟ…..

ಇಂತಹ ಪ್ರತಿಭೆಯನ್ನು ಭಾರತದ ಈ ಪುಟ್ಟ ಪೋರ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸೋಲಿಸಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ…..
ದುರಂತವೆಂದರೆ ಈ ಅತ್ಯಂತ ಸ್ಪೂರ್ತಿದಾಯಕ, ಯುವ ಕ್ರೀಡಾಪಟುಗಳಲ್ಲಿ ರೋಮಾಂಚನ ಉಂಟುಮಾಡಬಹುದಾದ ಈ ವಿಜಯವನ್ನು ಮೂರ್ಖ ಮಾಧ್ಯಮಗಳು ದೊಡ್ಡ ಮತ್ತು ನಿರಂತರ ಸುದ್ದಿ ಮಾಡಲೇ ಇಲ್ಲ…….
ಗಾಂಜಾ ಸೇವನೆಯ ಸಿನಿಮಾ ನಟನಟಿಯರ ಸುದ್ದಿ, ಅನೈತಿಕ ಸಂಬಂಧಗಳ ರೋಚಕ ದೃಶ್ಯಗಳು, ನೀಲಿ ಸೀಡಿಗಳು, ಧಾರ್ಮಿಕ ಅಮಲಿನ ಹುಚ್ಚಾಟಗಳನ್ನು ವಾರಗಟ್ಟಲೆ ಪ್ರಸಾರ ಮಾಡುವ ಇವರು ಪ್ರಜ್ಞಾನಂದನ ಸಾಧನೆಯನ್ನು ಈ ಕ್ಷಣದಲ್ಲಿ ನಿರ್ಲಕ್ಷಿಸಿರುವುದು ವಿಷಾದನೀಯ ಮತ್ತು ನಾಚಿಕೆಗೇಡು. ಮಾಧ್ಯಮಗಳು ದಾರಿ ತಪ್ಪಿದ ಮತ್ತು ಸಮಾಜದ ದಾರಿ ತಪ್ಪಿಸುತ್ತಿರುವುದಕ್ಕೆ ಸ್ಪಷ್ಟ ಹಾಗೂ ಎಚ್ಚರಿಕೆಯ ಉದಾಹರಣೆ……
ಕ್ರೀಡೆಗಳ ಬಗ್ಗೆ ಲೆಪ್ಟ್ ರೈಟ್ ಸೆಂಟರ್ ಇಲ್ಲ, ಬಿಗ್ ಬುಲೆಟಿನ್ ಇಲ್ಲ, ಬಿಗ್ ಬ್ರೇಕಿಂಗ್ ನ್ಯೂಸ್ ಇಲ್ಲ. ಕೆಟ್ಟ ಕೊಳಕ ಅಪಾಯಕಾರಿ ವಿಷಯಗಳ ಬಗ್ಗೆ ಮಾತ್ರ ಬಾಯಿ ಹರಿಯುವಂತೆ ಚರ್ಚೆಗಳು, ಮನಸ್ಸು ಅರಿಯುವ ಕಾರ್ಯಕ್ರಮಗಳು ಬಹುತೇಕ ಶೂನ್ಯ….

ಫೋಟೋ ಕೃಪೆ : hindustantimes
ಏಕೆಂದರೆ ಕಬಡ್ಡಿ, ವಾಲಿಬಾಲ್, ಕ್ರಿಕೆಟ್ , ಮನರಂಜನಾ ಉದ್ಯಮಕ್ಕೆ ಪೈಪೋಟಿ ಅಥವಾ ಸವಾಲು ಎನ್ನುವಂತೆ ಈ ಕ್ರೀಡಾ ಲೀಗ್ ಗಳ ಬೆಳವಣಿಗೆ ಮತ್ತು ಜನಪ್ರಿಯತೆ ನಿಜಕ್ಕೂ ಸಂತೋಷ ಪಡಬೇಕಾದ ವಿಷಯ. ಏಕೆಂದರೆ ಯುವ ಶಕ್ತಿಯ ನಿಜವಾದ ದೈಹಿಕ ಸಾಮರ್ಥ್ಯ ಹೊರಹೊಮ್ಮುವುದೇ ಕ್ರೀಡೆಗಳಲ್ಲಿ. ಯಾವುದೇ ಕ್ರೀಡೆ ಇರಲಿ ಅದು ನೀಡುವ ಸ್ಪೂರ್ತಿ ಆತ್ಮವಿಶ್ವಾಸ ಚೇತನಾ ಶಕ್ತಿ ಅತ್ಯಮೋಘ. ಕ್ರೀಡೆಗಳ ಅಭ್ಯಾಸವೇ ಒಂದು ಧ್ಯಾನಸ್ಥ ಸ್ಥಿತಿ.
ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು ಎಲ್ಲೋ ಒಮ್ಮೆ ಹೇಳಿದ ನೆನಪು. ” ಭಾರತದ ಯುವ ಶಕ್ತಿ ಭಗವದ್ಗೀತೆ ಓದುವುದಕ್ಕಿಂತ ಪುಟ್ಬಾಲ್ ಆಡಿದರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ” . ಇಂತಹ ಮಹತ್ವದ ವಿಷಯಗಳನ್ನು ಮುಖ್ಯವಾಹಿನಿಯ ಚರ್ಚಾ ವಿಷಯವಾಗಿ ಮುನ್ನಲೆಗೆ ತರುವ ಜವಾಬ್ದಾರಿ ನಮ್ಮೆಲ್ಲರದು. ಒಳ್ಳೆಯದನ್ನು ಪ್ರೋತ್ಸಾಹಿಸುವ ಮತ್ತು ಕೆಟ್ಟದ್ದನ್ನು ನಿರ್ಲಕ್ಷಿಸುವ ಮನೋಭಾವ ಸಾಮಾನ್ಯರಾದ ನಾವು ಕಡ್ಡಾಯವಾಗಿ ಮಾಡಲೇಬೇಕಿದೆ.
ಕ್ರೀಡಾ ಸಂಸ್ಕೃತಿ ನಮ್ಮ ಬದುಕಿನ ಭಾಗವಾಗಬೇಕು. ಆಗಲೇ ಯುವ ಸಮುದಾಯ ಹೆಚ್ಚು ಕ್ರಿಯಾತ್ಮಕವಾಗಿ ಬೆಳೆಯಲು ಸಾಧ್ಯ. ಇಲ್ಲದಿದ್ದರೆ ಅಪಾಯಕಾರಿಯಾದ ದುಶ್ಚಟಗಳ ದಾಸರಾಗುವ ಸಾಧ್ಯತೆ ಇದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
- ವಿವೇಕಾನಂದ ಹೆಚ್ ಕೆ
