ಹಳೆಯ ಗೋಬರ್ ಗ್ಯಾಸ್ ಬಾವಿಯನ್ನು ಇಂಗು ಗುಂಡಿಯಾಗಿ ಪರಿವರ್ತಿಸಿದ ಕಥೆಯಿದು. ನಮ್ಮ ಇಂಗು ಗುಂಡಿ 10 ಅಡಿ ಆಳ ವ್ಯಾಸ 10 ಅಡಿ ಇದೆ. ಹದಿಮೂರು ವರ್ಷದ ಹಿಂದೆ ಉಳಿದಿದ್ದ ಕಟ್ಟಡ ನಿರ್ಮಾಣದ ಸಾಮಗ್ರಿ ಬಳಕೆ ಮಾಡಿದ್ದಾರೆ ಅರುಣ್ ಪ್ರಸಾದ್ ಅವರು. ತಪ್ಪದೆ ಮುಂದೆ ಓದಿ…
ಜಲ್ಲಿಗಳು 40ಮಿಲಿ ಮೀಟರ್ 20ಮಿಲಿ ಮೀಟರ್ ಮರಳು ಸಾಣಿಸಿದಾಗ ತೆಗೆದು ಹಾಕಿದ ಮರಳಿನ ಊರುಳು ಕಲ್ಲುಗಳು ಜಲ್ಲಿ 6 ಮಿಲಿ ಮೀಟರ್. ಹಂತ ಹಂತವಾಗಿ ಹಾಕಿ. ಅದರ ಮೇಲೆ ಮರಳು ಇದಕ್ಕೆ ಇಡೀ ಅವರಣದ ಮಳೆ ನೀರು ಹರಿದು ಬಂದು ಸಂಗ್ರಹವಾಗಿ ಇಂಗುತ್ತದೆ.
ನನ್ನ ಮನೆ ಮತ್ತು ಸಂಸ್ಥೆಯ ಅವರಣದ ಮಳೆ ನೀರು ನಾನು ಸಂಪೂರ್ಣ ಮರುಪೂರಣ ಮಾಡುತ್ತೇನೆ. ನಮ್ಮಲ್ಲಿ ಒಂದು ಬೋರ್ ವೆಲ್ ಒಂದೂವರೆ ಇಂಚು ನೀರು ನೀಡುತ್ತದೆ ಮತ್ತು ಎರೆಡು ತೆರೆದ ಬಾವಿಗಳು ಇದೆ. ಬೋರ್ ವೆಲ್ ಪಕ್ಕದಲ್ಲೇ 10 ಅಡಿ ದೂರದಲ್ಲಿ 1988-89ರಲ್ಲಿ ನಿರ್ಮಿಸಿದ್ದ ಗೋಬರ್ ಗ್ಯಾಸ್ ಸ್ಥಾವರ ಕಾರ್ಯನಿರ್ವಹಿಸದೆ ನಿಂತಿತ್ತು. ಅದರ 10 ಅಡಿ ಆಳದ ಮತ್ತು 10 ಅಡಿ ವ್ಯಾಸದ ಬಾವಿಯನ್ನ ಶಿಲೆ ಕಲ್ಲಿನಿಂದ ಕಟ್ಟಿಸಿದ್ದರು ನಮ್ಮ ತಂದೆ.

ಈ ಸ್ಥಾವರ ಉಪಯೋಗಿಸದೇ ಇದ್ದಿದ್ದರಿಂದ ನಾನು ಅದಕ್ಕೆ ಕಟ್ಟಿದ್ದ ಸೈಜು ಕಲ್ಲು ತೆಗೆಸಿದೆ, ಆ ಗುಂಡಿ ನೆಲದಿಂದ 8 ಅಡಿ ಆಳದವರೆಗೆ ಗಟ್ಟಿ ಮ್ಯಾಂಗನೀಸ್ ಅಂಶದ ಜಂಬಿಟ್ಟಿಗೆ ಕಲ್ಲಿನ ಪದರ ಕೊರೆದು ತೆಗೆದು ಮಾಡಿದ ಗುಂಡಿ ಆಗಿತ್ತು. ನಾನು ಈ ಗಟ್ಟಿಮುಟ್ಟಾಗಿದ್ದ ಬಾವಿಯನ್ನು ನಮ್ಮ ಮನೆ ಮತ್ತು ಸಂಸ್ಥೆಯ ಮಳೆ ನೀರನ್ನು ಇಂಗಿಸುವ ಗುಂಡಿ ಆಗಿ ಪರಿವರ್ತಿಸಲು ನನ್ನದೇ ಜುಗಾಡ್ ತಂತ್ರಜ್ಞಾನ ಮಾಡಿದೆ.
ನಮ್ಮ ಕಟ್ಟಡಗಳಿಗೆ ತಂದಿದ್ದ ಕಟ್ಟಡ ಸಾಮಾಗ್ರಿಗಳಲ್ಲಿ ಉಳಿದಿದ್ದ ಬೋಲ್ಡರ್ಸ್ – ಸೋಲಿಂಗ್ – 40ಮಿಲಿ ಮೀಟರ್ ಜಲ್ಲಿ -20 ಮಿಲಿ ಮೀಟರ್ ಜಲ್ಲಿ – 6 ಮಿಲಿ ಮೀಟರ್ ಜಲ್ಲಿ – ಮರಳು ಸಾಣಿಸಿದಾಗ ಬಂದ ಗೊಣೆಕಲ್ಲುಗಳು – ಮರಳು ಬಳಸಿಕೊಂಡೆ.
ಬಾವಿ ಬುಡದಲ್ಲಿ ಬೋಲ್ಡರ್ಸ್ ಗಳ ಒಂದು ಪದರ – ಅದರ ಮೇಲೆ ಸೋಲಿಂಗ್ ನ ಒಂದು ಪದರ ಹಾಕಿ – ನಂತರ 40 ಮಿಲಿ ಮೀಟರ್ ಜಲ್ಲಿಯ ಒಂದು ಪದರ – ಅದರ ಮೇಲೆ 20 ಮಿಲಿ ಮೀಟರ್ ಜಲ್ಲಿಯ ಒಂದು ಪದರ ಹಾಕಿ- ಅದರ ಮೇಲೆ ಮರಳು ಸಾಣಿಸಿ ಉಳಿದ ಊರುಟು ಮರಳು ಕಲ್ಲು(ಗೊಣೆಕಲ್ಲು) ಪದರ ಹಾಕಿದೆ-ಅದರ ಮೇಲೆ 6 ಮಿಲಿ ಮೀಟರ್ ಜಲ್ಲಿಯ ಪದರ ಮಾಡಿ ಇದೆಲ್ಲದರ ಮೇಲೆ ಮರಳನ್ನು ಹಾಕಿ ಸುತ್ತಲೂ ಕಲ್ಲಿನ ಎತ್ತರದ ಕಟ್ಟೆ ಕಟ್ಟಿದೆ.
ನಮ್ಮ ಜಾಗದ ಮಳೆ ನೀರು ಪೂರ್ತಿ ಹರಿದು ಈ ಇಂಗು ಗುಂಡಿಗೆ ಬಂದು ಬೀಳುವಂತೆ ಮಣ್ಣಿನಲ್ಲಿ ಕಾಲುವೆ ಮಾಡಿದೆ. ಈ ಇಂಗು ಗುಂಡಿಗೆ ಬಂದು ಸಂಗ್ರಹ ಆಗುವ ಮಳೆ ನೀರು ಇಂಗುವಂತೆ ಮಾಡಿದ್ದೇನೆ.

ಭೂಮಿ ತನ್ನ ಸಾಮರ್ಥ್ಯದ ಇಂಗುವಿಕೆ ದಾರಣ ಶಕ್ತಿ ಮುಗಿದ ಮೇಲೆ ಉಹೂಂ … ಒಂದು ಹನಿಯನ್ನು ಒಳತೆಗೆದು ಕೊಳ್ಳುವುದಿಲ್ಲ… ಆಗ ಇಂಗದ ಹೆಚ್ಚುವರಿ ನೀರು ತನ್ನಿಂದ ತಾನೇ ಹೊರ ಹೋಗುವಂತೆ ಮಾಡಿದ್ದೇನೆ ಇದು ಕಳೆದ 13ವರ್ಷದಿಂದ ನಡೆಯುತ್ತಿದೆ.
ನಮ್ಮ ಎರಡು ತೆರೆದ ಬಾವಿಗಳು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆಯ ಕೊನೆಯಲ್ಲಿ ನೀರು ನೀಡಲು ಸಾಧ್ಯವೇ ಆಗುತ್ತಿರಲಿಲ್ಲ ಆದರೆ ಈ ಇಂಗು ಗುಂಡಿ ನಿರ್ಮಿಸಿದ 10 ವರ್ಷದ ನಂತರ ಬಿರು ಬೇಸಿಗೆಯಲ್ಲಿ ಆಶ್ಚರ್ಯ ಉಂಟು ಮಾಡುವಂತೆ ನಮ್ಮ ತೆರೆದ ಎರೆಡು ಬಾವಿಗಳು ಬೋರ್ ವೆಲ್ ಗೆ ಸರಿಸಮನಾಗಿ ಪೈಪೋಟಿಯಿಂದ ನೀರು ನೀಡುತ್ತಿದೆ.
ಭೂಮಿ ಒಳಗಿನ ನಮ್ಮ ಎರಡು ತೆರೆದ ಬಾವಿಗಳು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆಯ ಕೊನೆಯಲ್ಲಿ ನೀರು ನೀಡಲು ಸಾಧ್ಯವೇ ಆಗುತ್ತಿರಲಿಲ್ಲ ಆದರೆ ಈ ಇಂಗು ಗುಂಡಿ ನಿರ್ಮಿಸಿದ 10 ವರ್ಷದ ನಂತರ ಬಿರು ಬೇಸಿಗೆಯಲ್ಲಿ ಆಶ್ಚರ್ಯ ಉಂಟು ಮಾಡುವಂತೆ ನಮ್ಮ ತೆರೆದ ಎರೆಡು ಬಾವಿಗಳು ಬೋರ್ ವೆಲ್ ಗೆ ಸರಿಸಮನಾಗಿ ಪೈಪೋಟಿಯಿಂದ ನೀರು ನೀಡುತ್ತಿದೆ.

ನನಗೆ ಅರ್ಥವಾಗುತ್ತಿಲ್ಲ, ಕಡಿಮೆ ಮಳೆ ಮತ್ತು ವಿಪರೀತ ತಾಪ ಮಾನದ ವರ್ಷದಲ್ಲಿ ನಮ್ಮ ತೆರೆದ ಬಾವಿಗಳು ಕೈ ಕೊಡುತ್ತದೆಂದು ಬಾವಿಸಿದ್ದು ಹುಸಿ ಆಯಿತು. ನಿರಂತರ ನೀರು ಇಂಗುವಿಕೆ ಇಂತ ಆಪತ್ಕಾಲದಲ್ಲಿ ತನ್ನ ಚಮತ್ಕಾರ ತೋರಿಸಿತು. ಇಂಗು ಗುಂಡಿ ನಿರ್ಮಾಣ ಮಾಡಿದ ವರ್ಷವೇ ಅದರ ಫಲ ಸಿಗುವುದಿಲ್ಲ ಎಂಬುದು ಸಾಬೀತಾಯಿತು.
- ಅರುಣ್ ಪ್ರಸಾದ್ – ಉದ್ಯಮಿ, ಲೇಖಕರು.
