ರಾಮನ ಮನಗೆದ್ದ ಸೀತೆ… – ಗಾಯತ್ರಿ ಆರ್. ಅಪರಂಜಿ

ಮಹಾ ಪತಿವ್ರತೆಯಾದ ಸೀತೆ ಅನೇಕ ವಿಚಾರಗಳ್ಲಿ ಉನ್ನತವಾಗಿ ಕಾಣುತ್ತಾಳೆ. ಮನ ಮನಸ್ಸನ್ನು ಅರಿತು ಆತನಿಗೆ ವಿಧೇಯಳಾಗಿ ಧೈರ್ಯ, ತಾಳ್ಮೆಯಿಂದ, ಆಕೆ ಬದುಕಿದ ರೀತಿಯಿಂದ ರಾಮನಂತೆ ಶ್ರೇಷ್ಠ ಎನಿಸಿಕೊಳ್ಳುತ್ತಾಳೆ. ಗಾಯತ್ರಿ ಆರ್. ಅಪರಂಜಿ ಅವರ ರಾಮನ ಮನಗೆದ್ದ ಸೀತೆ ಲೇಖನವನ್ನು ತಪ್ಪದೆ ಮುಂದೆ ಓದಿ…

‘‘ರಾಮಾಯಣ’ ಇದು ಕೇವಲ ಒಂದು ಮಹಾಕಾವ್ಯವಲ್ಲ. ನಮ್ಮ ದಿನನಿತ್ಯದ ಜೀವನಕ್ಕೆ ತುಂಬಾ ಹತ್ತಿರವಾದಂತಹ ಮತ್ತು ನಮ್ಮ ಬದುಕಿಗೆ ಕನ್ನಡಿ ಹಿಡಿದಂತಿದೆ. ಇದು ಕಥೆ ಜೊತೆಗೆ ಪತಿ-ಪತ್ನಿ, ಕುಟುಂಬ, ಭಕ್ತ, ರಾಜನಂತೆ ಹಿಂದೂಗಳ ಆದರ್ಶ ನಡುವಳಿಕೆಯನ್ನು ವಿವರಿಸುವ ತಾತ್ವಿಕ ಕೃತಿಯಾಗಿದೆ. ರಾಮಾಯಣ ಕೇವಲ ರಾಮನಿಗಷ್ಟೇ ಸೀಮಿತವಾಗಿಲ್ಲ. ಆತನಿಗೆ ಸರಿಸಮನಾಗಿ ಸೀತೆಯ ಪಾತ್ರ ಎಲ್ಲರನ್ನು ಮನಸೂರೆಗೊಳ್ಳುವಂತಿದೆ. ಇಲ್ಲಿ ಸೀತೆ ಕೇವಲ, ರಾಮನ ಹೆಂಡತಿಯಾಗಿಲ್ಲ. ಧೈರ್ಯ, ಶುದ್ಧತೆ, ಸಮರ್ಪಣೆ, ನಿಷ್ಠೆ ಗುಣಗಳನ್ನು ಹೊಂದಿದಂತ ಮಗಳಾಗಿ, ತಾಯಿಯಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ಭಕ್ತಿಯ ಧ್ಯೋತಕಳಾಗಿದ್ದಾಳೆ.

ಸೀತೆಯನ್ನು ರಾಮಾಯಣದಲ್ಲಿ ಸ್ತ್ರೀತ್ವ ಮತ್ತು ಆದರ್ಶ ಪತ್ನಿಯನ್ನಾಗಿ ಪೂಜಿಸಲಾಗುತ್ತದೆ. ಜನಕರಾಜನ ದತ್ತು ಪುತ್ರಿಯಾದ ಜಾನಕಿ ಚಿಕ್ಕ ವಯಸ್ಸಿನಲ್ಲೇ ದಿಟ್ಟತನವನ್ನು ಮೈಗೂಡಿಸಿಕೊಂಡಂತಹವಳು. ಓರ್ವ ಋಷಿಗಳು ಚಿಕ್ಕ ವಯಸ್ಸಿನಲ್ಲಿ ಸೀತೆ ಶಿವಧನಸ್ಸಿನೊಂದಿಗೆ ಆಟವಾಡುವದನ್ನು ನೋಡಿ ಆಶ್ಚರ್ಯವಾಗಿ ಜನಕರಾಜನಿಗೆ ಹೇಳಿದರಂತೆ ಈಕೆ ಯಾರು ಎತ್ತಲು ಸಾಧ್ಯವಾಗದಂತಹ ಶಿವಧನಸ್ಸನ್ನು ಹಿಡಿದು ಆಟವಾಡುತ್ತಿದ್ದಾಳೆ, ಇಂತಹ ಗಟ್ಟಿಗಿತ್ತಿಗೆ ಆ ಧನಸ್ಸನ್ನು ಮುರಿಯುವಂತ ಗಟ್ಟಿತನವಿರುವ ವರನೊಂದಿಗೆ ವಿವಾಹ ಮಾಡಿಸು ಎಂದಿದ್ದರಂತೆ.

ಮಗಳು ಬೆಳೆದು ನಿಂತಾಗ ವಿವಾಹ ಮಾಡಿಸಬೇಕೆಂದು ಸ್ವಯಂವರವನ್ನು ಜನಕರಾಜನು ಏರ್ಪಡಿಸುತ್ತಾನೆ. ಸೀತೆ ಅತೀವ ಸೌಂದರ್ಯವತಿ. ರಾಮನು ಕೂಡಾ ರೂಪವಂತ. ಒಂದೆ ನೋಟದಲ್ಲಿ ಮನ ಸೆಳೆದ ರಾಮನು ಶಿವ ಧನಸ್ಸನ್ನು ಮುರಿಯುವುದರ ಮೂಲಕ ಸೀತೆಯನ್ನು ವರಿಸುತ್ತಾನೆ. ತಂದೆ-ತಾಯಿಯ ಮುದ್ದಿನ ಮಗಳಾದ ಜಾನಕಿ, ರಾಮನ ಸೀತೆಯಾಗಿ ಅಯೋಧ್ಯೆಯನ್ನು ಪ್ರವೇಶಿಸುತ್ತಾಳೆ. ದಶರಥ ಮತ್ತು ಕೌಸಲ್ಯೆ, ಕೈಕೇಯಿ, ಸೌಮಿತ್ರೆಯ ಸೊಸೆಯಾಗಿ ಮನಃಪೂರ್ವಕವಾಗಿ ಅವರ ಸೇವೆ ಮಾಡುತ್ತಾಳೆ. ಲಕ್ಷ್ಮಣ, ಭರತ, ಶತೃಘ್ನರ ಅತ್ತಿಗೆಯಾಗಿ ಅವರೊಂದಿಗೆ ಮಮಕಾರದಿಂದ ಇರುತ್ತಾಳೆ. ಮರಳಿ ಮತ್ತೆ ತವರು ಮನೆಗೆ ಸೀತೆ ಹೋಗಲೇ ಇಲ್ಲ. ಯಾವಾಗ ರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಲು ಸಿದ್ಧನಾದ. ಆಗ ಜನಕರಾಜ ವನವಾಸ ಮುಗಿಯುವ ತನಕ ಸೀತೆಗೆ ತನ್ನೊಂದಿಗೆ ಬಾ ಅಂದರು. ಆದರೂ ಆಕೆ ತವರು ಮನೆಗೆ ಹೋಗಲಿಲ್ಲ. ದಶರಥ ಮತ್ತು ಕೈಕೇಯಿಯನ್ನು ನಿಂದಿಸದೆ, ದುಃಖಿಸದೆ ಪತಿಯ ಕಷ್ಟ, ಸುಖದಲ್ಲಿ ಆಕೆಯೂ ಸಹಧರ್ಮಿಣಿಯಾಗಿ ವನವಾಸಕ್ಕೆ ಹೋಗುತ್ತಾಳೆ.

ರಾಮ, ಲಕ್ಷ್ಮಣ ಎಷ್ಟು ಕಷ್ಟ, ನೋವು ಅನುಭವಿಸಿದರೋ ಸೀತೆಯೂ ಕೂಡಾ ಅಷ್ಟೇ ಕಷ್ಟ, ನೋವು ಅನುಭವಿಸಿತ್ತಾಳೆ. ಆದರೆ ಎಂದಿಗೂ ಆಕೆ ದುಃಖಿಸಲಿಲ್ಲ. ಯಾರನ್ನು ದೂರಲಿಲ್ಲ. ಕೊರಗುತ್ತ ಕೂಡಲಿಲ್ಲ. ರಾವಣ ಅಪಹರಿಸಿದಾಗಲೂ ಸೀತೆ ಧೃತಿಗೆಡಲಿಲ್ಲ. ರಾಮನ ಮೇಲಿನ ಅತೀವ ಪ್ರೀತಿ, ನಂಬಿಕೆ ಆಕೆಯನ್ನು ಲಂಕೆಯಲ್ಲಿ ರಾಮನಿಗಾಗಿ ಕಾಯುತ್ತಾ ಕುಳಿತುಕೊಳ್ಳುವಂತೆ ಮಾಡಿತು. ಒಂದು ವರ್ಷದಲ್ಲಿ ರಾಮ ತನ್ನನ್ನು ಕರೆದುಕೊಂಡು ಹೋಗದಿದ್ದರೆ ಪ್ರಾಣವನ್ನೇ ಬಿಟ್ಟುಬಿಡುತ್ತೇನೆ ಎನ್ನುವ ಶಪಥವನ್ನು ಮಾಡಿಬಿಟ್ಟಿರುತ್ತಾಳೆ. ಸೀತೆ ಎಂದರೆ ಮತ್ತೊಂದು ಅರ್ಥ ಪರಿಶುದ್ಧತೆ ಪಾವಿತ್ರ್ಯತೆ. ಯಾವಾಗ ರಾವಣನು ಅಶೋಕ ವನದಲ್ಲಿ ಸೀತೆಯನ್ನು ಕೂಡಿ ಹಾಕಿದ್ದನೋ ಆಗ ‘ನೀನು ನಿಜವಾದ ಲಂಕಾಧೀಶನಾಗಿದ್ದರೆ ಇಲ್ಲಿರುವ ಹುಲ್ಲಿನ ಕಡ್ಡಿಯನ್ನು ದಾಟಿ ನನ್ನನ್ನು ಮುಟ್ಟು’ ಎಂದು ಗದರಿದ್ದಳಂತೆ. ರಾಮನಿಗಾಗಿ ಹಗಲಿರುಳು ತನುಮನದಿಂದ ತನ್ನೆಲ್ಲ ಕಷ್ಟಗಳಲ್ಲಿ ರಾಮನನ್ನು ಕಾಣುತ್ತಾ, ದಾರಿ ಕಾಯುತ್ತಾ ಕುಳಿತಿದ್ದ ಸೀತೆಗೆ ಹನುಮಂತನ ಭೇಟಿಯಿಂದ ರಾಮನ ಬರುವಿಕೆಯ ಸುಳಿವು ಸಿಕ್ಕಾಗ ಮೊದಲು ಆಕೆ ಪ್ರಶ್ನಿಸಿದ್ದು ಲಕ್ಷ್ಮಣ ದೇವರು ಹೇಗಿದ್ದಾರೆಂದು. ಇದರ ಅರ್ಥ ರಾಮನ ಸಹೋದರ ಚೆನ್ನಾಗಿದ್ದರೆ ಆತ ಚೆನ್ನಾಗಿದ್ದಾನೆಂದೇ ಅರ್ಥ ಎನ್ನುವ ಭಾವ ಆಕೆಯದ್ದಾಗಿತ್ತು.

ನಂತರ ಲಂಕಾ ದಹನ, ರಾಮ-ರಾವಣರ ಯುದ್ಧದಲ್ಲಿ ರಾವಣ ಹತನಾದ. ಸೀತೆಗೆ ರಾಮನ ಜತೆಗೂಡುವ ಭಾಗ್ಯ ಲಭಿಸಿತು. ನಂತರ ಆಕೆ ಪಾವಿತ್ರತೆ ನಿರೂಪಿಸಲು ಅಗ್ನಿಕುಂಡ ಪ್ರವೇಶಿಸಿದರೂ ಪರಿಶುದ್ಧತೆಯಿಂದ ಪುಟಕ್ಕಿಟ್ಟ ಚಿನ್ನದಂತೆ ಹೊರಬರುತ್ತಾಳೆ. ಅಗ್ನಿ ಪ್ರವೇಶಿಸುವಾಗಲೂ ಕೂಡಾ ಆಕೆ ಮುಖದಲ್ಲಿ ಯಾವುದೇ ಅಂಜಿಕೆ, ಅಳಕು ಇರೋದಿಲ್ಲ. ಮುಂದೆ ಆಕೆ ಗರ್ಭಿಣಿಯಾದಾಗಲೂ ಕೂಡಾ ಪತಿಯನ್ನು ಪರಿತ್ಯಜಿಸಿ, ವಾಲ್ಮೀಕಿ ಆಶ್ರಮಕ್ಕೆ ಹೋಗುತ್ತಾಳೆ. ಈ ವೇಳೆ ಜನ್ಮ ನೀಡಿದ ಲವ-ಕುಶರಿಗೆ ಉತ್ತಮ ಸಂಸ್ಕಾರ ನೀಡುವುದಲ್ಲದೇ ಸ್ವಾವಲಂಬನೆಯ ಜೀವನ ನಡೆಸುತ್ತಾಳೆ.

ಮಹಾ ಪತಿವ್ರತೆಯಾದ ಸೀತೆ ಅನೇಕ ವಿಚಾರಗಳ್ಲಿ ಉನ್ನತವಾಗಿ ಕಾಣುತ್ತಾಳೆ. ರಾಮನ ಮನಸ್ಸನ್ನು ಅರಿತು ಆತನಿಗೆ ವಿಧೇಯಳಾಗಿ ಧೈರ್ಯ, ತಾಳ್ಮೆಯಿಂದ, ಆಕೆ ಬದುಕಿದ ರೀತಿಯಿಂದ ರಾಮನಂತೆ ಶ್ರೇಷ್ಠ ಎನಿಸಿಕೊಳ್ಳುತ್ತಾಳೆ. ಈಗಿನ ಕಾಲದ ಮಹಿಳೆಯರು ಸೀತೆಯಿಂದ ಸ್ಫೂರ್ತಿ ಪಡೆಯಲೇಬೇಕು. ಪತಿಯ ಸುಖ, ದುಃಖದಲ್ಲಿ ಪತ್ನಿಯಾದವಳು ಜತೆಯಿರಬೇಕು. ಎಂತಹ ಸನ್ನಿವೇಶದಲ್ಲೂ ಧೃತಿಗೆಡದೆ ಧೈರ್ಯದಿಂದ ಇರಬೇಕು. ಸ್ವಾವಲಂಬನೆಯಿಂದ ಬದುಕಬೇಕು. ಪ್ರೀತಿಯಿಂದ ಎಲ್ಲವನ್ನು, ಎಲ್ಲರನ್ನು ಗೆಲ್ಲಬಹುದು. ತಾಳ್ಮೆ, ನಂಬಿಕೆಯಿದ್ದರೆ ಏನನ್ನು ಸಾಧಿಸಬಹುದು ಸೀತೆಯ ಜೀವನ ನೋಡಿದಾಗ ತಿಳಿಯುತ್ತದೆ. ಧರ್ಮ ಮಾರ್ಗದಲ್ಲಿ ನಡೆಯುವುದು ಮತ್ತು ಸಮರ್ಪಣಾ ಭಾವನೆ ಎಂತಾ ವ್ಯಕ್ತಿಗಳಲ್ಲೂ ಸಾತ್ವಿಕತೆ ಮೂಡಿಸಬಲ್ಲದು ಎಂದು ಸೀತೆ ತೋರಿಸಿದ್ದಾಳೆ. ಒಟ್ಟಿನಲ್ಲಿ ರಾಮನ ಚರಿತ್ರೆಗೆ ಎಲ್ಲಿಯೂ ಚ್ಯುತಿ ಬರದಂತೆ ತನ್ನ ಜೀವನವನ್ನು ಮಾದರಿಯಾಗಿ ನಡೆದು ತೋರಿಸಿ ಜಾನಕಿ ರಾಮಳಾಗಿ ವಿಶ್ವ ವಿಖ್ಯಾತಳಾದಳು. ಈಗ ಅಯೋಧ್ಯೆಯಲ್ಲಿ ರಾಮಲಲ್ಲಾನ ಮರು ಪ್ರತಿಷ್ಠಾಪನೆ ಸಂಸರ್ಭದಲ್ಲಿ ಜನಕಪುರದಿಂದ ಹರಿದು ಬಂದ ಆಭರಣ ಮತ್ತು ಕೊಡುಗೆಗಳನ್ನು ನೋಡಿದರೆ ಸೀತೆ ಮತ್ತೆ ಅದೇ ಆದರ ಮತ್ತು ಪ್ರೀತಿಯಿಂದ ಮರಳಿದ್ದಾಳೆ ಎನಿಸುತ್ತದೆ. ಬನ್ನಿ ಈಗಿನ ರಾಮನಿರುವ ಅಯೋಧ್ಯೆಗೆ ಸೀತೆಯ ಇರುವಿಕೆಯನ್ನು ಎಲ್ಲರೂ ಸೇರಿ ಸಂಭ್ರಮಿಸೋಣ.


  • ಗಾಯತ್ರಿ ಆರ್. ಅಪರಂಜಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW