ತೊಂಬತ್ತರ ದಶಕದಲ್ಲಿ ಈ ರೆನಾಲ್ಡ್ಸ್ ಪೆನ್ ನನ್ನ ಬದುಕಿನೊಂದಿಗೆ ಗಾಢವಾಗಿ ತಳುಕು ಹಾಕಿಕೊಂಡು ಬಿಟ್ಟಿತ್ತು. ಆ ಕಾಲಕ್ಕೆ ಮೂರು ರೂಪಾಯಿಗೆ ಒಂದರಂತೆ ಸಿಗುತ್ತಿತ್ತು. ರೆನಾಲ್ಡ್ಸ್ ಪೆನ್ ನೊಂದಿಗೆ ಒಂದು ಭಾವನಾತ್ಮಕ ಅನುಬಂಧವನ್ನು ಡಾ ಕೆ ಬಿ ರಂಗಸ್ವಾಮಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇವತ್ತು ಮುಂಜಾನೆ ನನ್ನ ಸ್ನಾತಕೋತ್ತರ ವಿದ್ಯಾರ್ಥಿನಿಯೋರ್ವಳು ಕೆಲವು ಕೇಸ್ ಶೀಟ್ ಗಳಿಗೆ ಸಹಿ ಪಡೆಯಲೆಂದು ತನ್ನ ಕೈಯಲ್ಲಿದ್ದ ರೆನಾಲ್ಡ್ಸ್ ಪೆನ್ನನ್ನು ನನ್ನ ಮುಂದಿರಿಸಿದಳು. ಅದನ್ನು ನೋಡುತ್ತಿದ್ದಂತೆ ನನ್ನ ಮನ ಗರಿಗೆದರಿದಂತಾದುದಷ್ಟೇ ಅಲ್ಲದೆ ನೆನಪುಗಳು ತೊಂಬತ್ತರ ದಶಕಕ್ಕೆ ಲಗ್ಗೆ ಹಾಕಿಬಿಟ್ಟವು. ‘ಈ ಪೆನ್ ಈಗ ಸಿಗುತ್ತದೆಯೇ?’ ಎಂದು ನಾನು ಕೇಳಿದಾಗ ‘ಇಲ್ಲ ಸರ್. ಸಂತೂರ್ ಸೋಪಿನೊಂದಿಗೆ ಉಚಿತವಾಗಿ ಬಂದಿದ್ದು ಇದು’ ಎಂದಳಾಕೆ.
ತೊಂಬತ್ತರ ದಶಕದಲ್ಲಿ ಈ ರೆನಾಲ್ಡ್ಸ್ ಪೆನ್ ನನ್ನ ಬದುಕಿನೊಂದಿಗೆ ಗಾಢವಾಗಿ ತಳುಕು ಹಾಕಿಕೊಂಡುಬಿಟ್ಟಿತ್ತು. ಆ ಕಾಲಕ್ಕೆ ಮೂರು ರೂಪಾಯಿಗೆ ಒಂದರಂತೆ ಸಿಗುತ್ತಿದ್ದ ಈ ಪೆನ್ನನ್ನು ಐದರ ಒಂದು ಪ್ಯಾಕಿನಂತೆ ಒಟ್ಟಾಗಿಯೂ ಖರೀದಿಸಬಹುದಾಗಿತ್ತು. ನೀಲಿ, ಕಪ್ಪು, ಕೆಂಪು, ಹಸಿರು ಹೀಗೆ ನಾಲ್ಕು ಬಣ್ಣದ ರೀಫಿಲ್ಗಳು ಲಭ್ಯವಿದ್ದು, ಪೆನ್ನಿನ ಕ್ಯಾಪಿನಿಂದಲೇ ಅದರ ಬಣ್ಣವನ್ನು ಗುರುತಿಸಬಹುದಾಗಿತ್ತು. ನಾನು ನೀಲಿ ಬಣ್ಣದ ರೀಫಿಲ್ ಗಳನ್ನು ಬಳಸುತ್ತಿದ್ದೆನಾದರೂ ಹೆಚ್ಚಾಗಿ ಇಷ್ಟಪಡುತ್ತಿದ್ದುದು ಕಪ್ಪು ರೀಫಿಲ್ ನ್ನು. ಹಾಗೆಯೇ ತುಸು ದಪ್ಪವಾಗಿ ಬರೆಯುವ ಮತ್ತು ತೆಳವಾಗಿ ಬರೆಯುವ ಎರಡು ಬಗೆಯ ರೀಫಿಲ್ ಗಳು ಲಭ್ಯವಿದ್ದವು. ಅವೆರಡರಲ್ಲಿ ತೆಳುವಾಗಿ ಬರೆಯುವ ರೀಪಿಲ್ಲೇ ನನಗೆ ಅಚ್ಚುಮೆಚ್ಚು.

ನಾನು ಶರ್ಟಿನ ಜೇಬಿನಲ್ಲಿ ಸದಾ ಒಂದು ರೆನಾಲ್ಡ್ಸ್ ಪೆನ್ನನ್ನು ಸಿಕ್ಕಿಸಿಕೊಂಡಿರುತ್ತಿದ್ದೆ. ಒಮ್ಮೊಮ್ಮೆ ಬೇರೆ ಬೇರೆ ಬಣ್ಣದ ಎರಡೆರಡು ಪೆನ್ನುಗಳನ್ನು ಸಿಕ್ಕಿಸಿಕೊಂಡಿರುತ್ತಿದ್ದೆ. ಏಕೆಂದರೆ ಗೆಝೆಟೆಡ್ ಆಫೀಸರ್ ಗಳು ಹಸಿರು ಬಣ್ಣದಲ್ಲಿ ಸಹಿ ಮಾಡಲು ಅವಕಾಶವಿದ್ದುದರಿಂದ ಆ ಬಣ್ಣದ ಪೆನ್ನಿನಲ್ಲಿ ಸಹಿ ಹಾಕಲು ನನಗೆ ಇಷ್ಟವಾಗುತ್ತಿತ್ತು. ಕೆಲವರು ‘ಜೇಬಿನಲ್ಲಿ ರೆನಾಲ್ಡ್ಸ್ ಪೆನ್ ಇಟ್ಟುಕೊಳ್ಳುವವನು’ ಎಂತಲೇ ನನ್ನನ್ನು ಗುರುತಿಸುತ್ತಿದ್ದರು. ಆ ಕಾಲದಲ್ಲಿ ಪತ್ರಿಕೆಗೆ ಲೇಖನಗಳನ್ನು ಕೈಬರಹದಲ್ಲೇ ಬರೆದು ಕಳುಹಿಸಬೇಕಾಗಿದ್ದುದರಿಂದ ಅವೆಲ್ಲವನ್ನೂ ರೆನಾಲ್ಡ್ಸ್ ಪೆನ್ನಿನಲ್ಲೇ ಬರೆಯುತ್ತಿದ್ದುದು. ಸುಮಾರು ಹತ್ತು ಪುಟಗಳಷ್ಟು ಬರೆಯುವಷ್ಟರಲ್ಲಿ ಹೆಬ್ಬೆರಳು ಮತ್ತು ತೋರುಬೆರಳುಗಳಲ್ಲಿ ಗುಂಡಿ ಮೂಡಿಬಿಡುತ್ತಿದ್ದವು. ಹಾಗೆಯೇ ನಾನು ಎಂ ಡಿ ಪದವಿಯ ಥಿಯರಿ ಪರೀಕ್ಷೆಯನ್ನು ಬರೆದುದು ಕೂಡಾ ರೆನಾಲ್ಡ್ಸ್ ಪೆನ್ನಿನಿಂದಲೇ.
ಆಗಷ್ಟೇ ಕಲಬುರ್ಗಿ ನಗರಕ್ಕೆ ತೆರಳಿದ್ದ ನನಗೆ ಅಲ್ಲಿಯ ಹೊಸ ಪರಿಸರ, ಉದ್ಯೋಗ, ಸ್ನೇಹಿತರುಗಳಂತೆಯೇ ಈ ರೆನಾಲ್ಡ್ಸ್ ಪೆನ್ನು ಕೂಡಾ ನನ್ನ ಬದುಕಿನಲ್ಲಿ ಹಾಸುಹೊಕ್ಕಾಗಿಬಿಟ್ಟಿತ್ತು. ಈಗ ಮೆಡಿಕಲ್ ರೆಪ್ರೆಸೆಂಟೇಟಿವ್ ಗಳು, ವಿದ್ಯಾರ್ಥಿಗಳು…. ಹೀಗೆ ಅವರಿವರು ಕೊಟ್ಟ ಹಲವಾರು ಬಗೆಯ ಪೆನ್ನುಗಳು ನನ್ನ ಬಳಿ ಇವೆ. ಆದರೆ ಬರೆಯಲು ನಾನು ಹೆಚ್ಚಾಗಿ ಬಳಸುವುದು ಪಾರ್ಕರ್ ಪೆನ್ನನ್ನೇ. ಹಾಗಾಗಿಯೇ ಅವತ್ತಿನ ರೆನಾಲ್ಡ್ಸ್ ಪೆನ್ನಿನಂತೆ ಇವತ್ತು ಈ ಪಾರ್ಕರ್ ಪೆನ್ ನನ್ನ ಶರ್ಟಿನ ಜೇಬಿನಲ್ಲಿ ಸ್ಥಾನ ಗಿಟ್ಟಿಸಿಕೊಂಡುಬಿಟ್ಟಿದೆ. ಆದರೆ ಆ ಕಾಲದ ರೆನಾಲ್ಡ್ಸ್ ಪೆನ್ನಿನಂಥ ಆಪ್ತ ಭಾವವನ್ನು ನೀಡಲು ಈ ಯಾವ ಪೆನ್ನುಗಳಿಗೂ ಸಾಧ್ಯವಾಗಿಲ್ಲ. ರೆನಾಲ್ಡ್ಸ್ ಪೆನ್ನಿನೊಂದಿಗಿನ ನನ್ನ ನಂಟನ್ನು ಹೇಳುತ್ತಿದ್ದಂತೆಯೇ ‘ನೀವೇ ಇಟ್ಟುಕೊಂಡುಬಿಡಿ ಸರ್’ ಎಂದಳು ಆ ನನ್ನ ವಿದ್ಯಾರ್ಥಿನಿ ಪ್ರೀತಿಯಿಂದ. ನಯವಾಗಿಯೇ ಬೇಡವೆಂದು ಹೇಳಿ ಆ ಪೆನ್ನನ್ನು ಆಕೆಗೊಪ್ಪಿಸಿದೆ.
- ಕೆ ಬಿ ರಂಗಸ್ವಾಮಿ
