ತರಗತಿಯಲ್ಲಿ ಪಾಠ ಮಾಡುವಾಗ ವಿಷಯ ಬಂದಾಗ, ಮನೆಯಲ್ಲಿ ಅಡುಗೆ ಮಾಡುವಾಗ ಆಗಾಗ ತಲೆಯಲ್ಲಿ ಯೋಚನೆ ಸುಳಿಯುತ್ತದೆ. ಈ ರೊಟ್ಟಿ ಯಾಕೆ ಗುಂಡಗೇ ಇರುತ್ತದೆ. ಚೌಕಾಕಾರ, ತ್ರಿಕೋನಾಕಾರ ಯಾಕಿಲ್ಲ ಅಂತ. – ಸಿದ್ಧರಾಮ ಕೂಡ್ಲಿಗಿ, ತಪ್ಪದೆ ಮುಂದೆ ಓದಿ…
–
ತುಂಬಾ ಯೋಚಿಸಿದೆ. ಇದನ್ನು ಮೊದಲು ಆರಂಭಿಸಿದವರು ಅದು ಹೇಗೆ ಆರಂಭಿಸಿರಬಹುದು, ಕಂಡು ಹಿಡಿದವರು ಅದೆಷ್ಟೊಂದು ಮನಸಿಟ್ಟು ಇದನ್ನು ಸಿದ್ಧಪಡಿಸಿರಬಹುದು ಅಂತ. ನಿಜ ರೊಟ್ಟಿ ಮಾಡಲೂ ಅಲ್ಲೊಂದು ಕಲಾತ್ಮಕತೆ ಇದೆ, ಲಯ ಇದೆ. ಮನಸಿನ ಏಕಾಗ್ರತೆ ಇದೆ. ಅಡುಗೆ ಮಾಡುವ ಪ್ರೀತಿ ಇದೆ. ಇವಿಲ್ಲದೆ ಖಂಡಿತ ರೊಟ್ಟಿ ಆಗಲ್ಲ.
–
ಜೋಳವನ್ನು ಹಿಟ್ಟು ಮಾಡಬೇಕು, ಅದನ್ನು ನಾದಬೇಕು, ಗುಂಡಗೆ ಉರುಳೆ ಮಾಡಿಕೊಳ್ಳಬೇಕು, ನಂತರ ಕಟ್ಟಿಗೆಯ ಕೊಣಮಿಗೆಯಲ್ಲಿ ಉರುಳೆಯನ್ನು ಕೈಯಿಂದ ತಟ್ಟುತ್ತಾ ತಟ್ಟುತ್ತಾ ಗುಂಡಗೆ ಹರಡಿಕೊಳ್ಳುವ ಹಾಗೆ ಆಕಾರ ನೀಡಬೇಕು. ಹಿಟ್ಟು, ಪಳಗಿದವರ ಕೈಯಲ್ಲಿ ತಂತಾನೇ ಪ್ರೀತಿಯಿಂದ ಅರಳುತ್ತ, ಹಿಗ್ಗುತ್ತಾ ಹೋಗುತ್ತದೆ. ಕೈಗಳೂ ಲಯಬದ್ಧವಾಗಿಯೇ ತಟ್ಟುತ್ತಿರಬೇಕು. ಪಟ್ ಪಟ್ ಪಟಪಟಪಟಪಟ, ಪಟ್ ಪಟ್ ಅಂತ ನಾದ ಹೊರಡುವಂತೆ ತಟ್ಟಬೇಕು. ಕೊಣಮಿಗೆಯಲ್ಲಿ ಹರಡಿದ ಹಿಟ್ಟು ಎಲ್ಲೂ ಅಂಚು ಹರಿಯದಂತೆ ಗುಂಡಾಗಿ, ಸುಂದರವಾಗಿ ಹೂವಿನಂತೆ ಅರಳಿರಬೇಕು. ನಂತರ ಕಾಯ್ದ ಹಂಚಿನಲ್ಲಿ ಕೈಯಲ್ಲಿಯೇ ಮೃದುವಾಗಿ ಕೊಣಮಿಗೆಯಿಂದ ಎತ್ತಿ ಹಾಕಬೇಕು. ಹಂಚಿನಲ್ಲಿ ಹಾಕುವಾಗಲೂ ಎಚ್ಚರಿಕೆ, ಏಕಾಗ್ರತೆ, ತಾಳ್ಮೆ ಮುಖ್ಯ. ಬೇಕಾಬಿಟ್ಟಿ ಮಾಡುವಂತಿಲ್ಲ. ಎಶ್ಟು ಮನಸಿಟ್ಟು ರೊಟ್ಟಿ ತಟ್ಟುವರೋ ಅಷ್ಟು ಚಂದದ ರೊಟ್ಟಿ ಸಿದ್ಧಗೊಳ್ಳುತ್ತದೆ. ಹಂಚಿನಲ್ಲಿ ಹದವಾಗಿ ಬೇಯಿಸಿ, ಮೇಲೆ, ಕೆಳಗೆ ಬೇಯಿಸಿದನಂತರವೇ ರೊಟ್ಟಿ ಊಟ ಮಾಡಲು ಸಿದ್ಧ.
ಫೋಟೋ ಕೃಪೆ : google
–
ಎಲ್ಲ ಸರಿ ಮತ್ತೆ ಅಲ್ಲಿಗೇ ಬರುವೆ. ಈ ರೊಟ್ಟಿ ಯಾಕೆ ಗುಂಡಗೆ ಅಂತ. ಹಿಟ್ಟನ್ನು ಕೊಣಮಿಗೆಯಲ್ಲಿ ತಟ್ಟುವಾಗ ಕೈಯ ಲಯಕ್ಕೆ ತಕ್ಕಂತೆ ಅದೇ ರೀತಿ ಅದು ರೂಪುಗೊಂಡದ್ದಕ್ಕಾಗಿಯೇ ರೊಟ್ಟಿ ಗುಂಡಗೆ ಇದೆಯೋ ? ಕೈಯಲ್ಲಿ ಹಿಡಿಯಲು ಅನುಕೂಲವೆಂದು ಗುಂಡಗಿದೆಯೋ ? ಒಲೆಯ ಮೇಲೇರುವ ಹಂಚು ಗುಂಡಗಿರುವುದಕ್ಕೇ ಅದಕ್ಕೆ ತಕ್ಕಂತಿರಲಿ ಎಂದು ರೊಟ್ಟಿ ಗುಂಡಗೆ ಮಾಡಲಾಯಿತೋ ? ಅಂಗೈಯಲ್ಲಿ ಹಿಡಿದು ಊಟ ಮಾಡಲು ಅನುಕೂಲವೆಂದು ಗುಂಡಗಾಯಿತೋ ? ಅರೆ ತಟ್ಟೆಗಳೂ ಸಹ ಗುಂಡಗೇ ಇರುತ್ತವಲ್ಲವೆ ? ಅದಕ್ಕಾಗಿಯೇ ರೊಟ್ಟಿ ಗುಂಡಗಾಯಿತೋ ? ಭೂಮಿ ಗುಂಡಗೆ ಎಂದು ಅದನ್ನು ಸಂಕೇತವನ್ನಾಗಿಸಿ ಗುಂಡಗೆ ಮಾಡಲಾಯಿತೋ ? ಯೋಚಿಸಿದಂತೆಲ್ಲ ವಿಚಾರ ಲಹರಿ ಓಡುತ್ತಲೇ ಇರುತ್ತದೆ.
ಫೋಟೋ ಕೃಪೆ : deccan herald
ಏನೇ ಇರಲಿ ರೊಟ್ಟಿ ಸುಂದರವಾಗಿ ಗುಂಡಗೆ ತಲೆತಲಾಂತರದಿಂದಲೂ ಇದೆ. ಯಾವುದೇ ಕಾರಣಕ್ಕೂ ಇದುವರೆಗೂ ರೊಟ್ಟಿಯ ಆಕಾರವನ್ನು ಬದಲಾಯಿಸಲಾಗಿಲ್ಲ. (ಚಪಾತಿಯ ಆಕಾರ ಬದಲಾಗಿದೆ. ಅದನ್ನು ತ್ರಿಕೋನಾಕಾರವಾಗಿಯೂ ಮಾಡಲಾಗುವುದು) ಆದರೆ ರೊಟ್ಟಿ ಮಾತ್ರ ಹಿಂದೆ, ಈಗ, ಮುಂದೆಯೂ ಗುಂಡಾಗಿಯೇ ಇರುತ್ತದೆ. ಅದೇ ಅದರ ಸುಂದರತೆ. ಅಂಗೈಯಲ್ಲಿ ಪವಡಿಸುವ ಬಿಸಿಬಿಸಿ ಬಿಳಿಜೋಳದ ರೊಟ್ಟಿ, ಅದರಲ್ಲಿ ಬದನೆಕಾಯಿ ಪಲ್ಯ, ಶೇಂಗಾಪುಡಿ, ಮೊಸರು, ಆಹಾ ಯಾವ ಪುಣ್ಯಾತ್ಮರು ಈ ಹೊಂದಾಣಿಕೆಗಳನ್ನು ಮಾಡಿದರೋ ಅವರ ಹೊಟ್ಟಿ ತಣ್ಣಗಿರಲಿ.
–
ಅಂದಹಾಗೆ ಉತ್ತರಕರ್ನಾಟಕದ ಜನರಿಗೆ ರೊಟ್ಟಿ ಊಟದಷ್ಟು ಗಟ್ಟಿ ಯಾವುದೂ ಇಲ್ಲ. ರೊಟ್ಟಿ ಊಟದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಯಾಕೆಂದರೆ ಇದರಲ್ಲಿ ಯಾವುದೇ ರೀತಿಯ ಕೊಬ್ಬಿನಂಶವಿಲ್ಲ. ಎಷ್ಟು ಬೇಕಾದರೂ ರೊಟ್ಟಿ ತಿನ್ನಬಹುದು.
- ಸಿದ್ಧರಾಮ ಕೂಡ್ಲಿಗಿ