ತಂಬಾಕು ಸೊಪ್ಪು ಕೊಳೆಯಿಸಿ, ಒಣಗಿಸಿ, ಪುಡಿ ಮಾಡಿ, ವಿವಿಧ ಸುವಾಸನೆ ಸೇರಿಸಿ ನಶ್ಯಪುಡಿಯನ್ನು ಆಕರ್ಷಕ ಡಬ್ಬಿಗಳಲ್ಲಿ ಗಾಳಿಯಾಡದಂತೆ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ, ಅರುಣ್ ಪ್ರಸಾದ್ ಅವರು ನಶ್ಯದ ಕುರಿತು ರೋಚಕ ಕತೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮೂಗಿದ್ದವರಿಗೆ ಮಾತ್ರ ಶೀಥ ಅಂದಾಗ ನಾವು ಮೂಗು ಮುರಿಯುವಂತಿಲ್ಲ ಯಾಕೆಂದರೆ ಎಲ್ಲರಿಗೂ ಮೂಗಿದೆ!.
ವರ್ಷಕ್ಕೆರೆಡು ಸಾರಿ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ನನಗೆ ತಂಡಿ ಶೀಥ ಆಗಿ ಮೂಗು ಕಟ್ಟುತ್ತದೆ. ಕೆಮ್ಮು, ಜ್ವರ ಕೂಡ ಆಗ ವೈದ್ಯರ ಮಾತ್ರೆ. ಶಿವಮೊಗ್ಗದ ಧನ್ವಂತರಿ ಶಾಪಿನಿಂದ ಶ್ವಾಷಾಮೃತ ಸಿರಪ್, ಅಂಗಡಿಯಿಂದ ವಿಕ್ಸ್ ಮತ್ತು ವಿಶೇಷವಾಗಿ ತರಿಸುವುದು ನಶ್ಯ ಪುಡಿ.
ತಂಡಿ ಶೀಥದ ಕನಿಷ್ಟ 7 ರಿಂದ 10 ದಿನದಲ್ಲಿ ನನಗೆ ಹೆಚ್ಚು ರಿಲೀಪ್ ಸಿಗುವುದು. ಈ ನಶ್ಯ ಪುಡಿ ಎ೦ಬ ತಂಬಾಕು ರಹಿತ ಹೊಗೆಸೊಪ್ಪು ಪುಡಿಯಲ್ಲಿ. ನಾವು ಸಣ್ಣವರಿದ್ದಾಗ ನಮ್ಮ ಮನೆ ಸುತ್ತಲಿನ ನನ್ನ ತಾಯಿಯ ಗೆಳತಿಯರಾದ ಬಾಯಮ್ಮ೦ದಿರು ಮತ್ತು ಬೂಬಮ್ಮ೦ದಿರು ಎಲ್ಲರೂ ನಶ್ಯ ಪ್ರಿಯರು. ನಮ್ಮಮ್ಮನ ಪ್ರೀತಿಯ ಸಣ್ಣ ಮಗನಾದ ನನ್ನನ್ನು ಎತ್ತಾಡುವವರೇ ಅವರೆಲ್ಲ ಹಾಗಾಗಿ ನನಗೆ ನಶ್ಯ ಬಾಲ್ಯದಿಂದಲೇ ಸುಪರಿಚಿತ.
ಫೋಟೋ ಕೃಪೆ : BBC
ಆಗ ಉತ್ಕೃಷ್ಟ ನಶ್ಯ ಪುಡಿಗಳು ಕಾರ್ಕಳದಲ್ಲಿ ತಯಾರಾಗುತ್ತಿತ್ತು ಅಲ್ಲಿಂದ ತಂದು ಮಾರಾಟ ಮಾಡುವ ಅಂಗಡಿಗಳಲ್ಲಿ ನಶ್ಯ ತೂಕ ತೊಲದಲ್ಲಿ ತೂಕಾ ಮಾಡುವ ಬಂಗಾರ ಅಳತೆ ಮಾಡುವಂತ ಸಣ್ಣ ತಕ್ಕಡಿಗಳು ಇರುತ್ತಿತ್ತು. 70 ರ ದಶಕದಲ್ಲಿ ಆನಂದಪುರಂನ ನಶ್ಯ ಪ್ರಿಯರ ಪೆವರಿಟ್ ಅಂಗಡಿ ಕೇರಳದ ಕಾಸರಗೋಡು ಮೂಲದ ಜಲಕೃಷ್ಣಣ್ಣರ ಕೃಷ್ಣಾ ಸ್ಟೋರ್ ಮಾತ್ರ ಆಗಿತ್ತು. ಅವರ ಸಂಬಂಧಿ ಕೊರಗಣ್ಣ ನಶ್ಯ ತೂಕ ಮಾಡಿ ಆಗಿನ ಸಿಗರೇಟು ಪ್ಯಾಕಿನ ಒಳಗಿನ ಬೆಳ್ಳಿಯಂತ ಹೊಳೆಯುವ ಬ್ಯಾಗಡಿಯ ಪೇಪರ್ ನಲ್ಲಿ ಹಾಕಿ ಪೊಟ್ಟಣ ಕಟ್ಟಿ ಬಿಳಿದಾರದಲ್ಲಿ ಕಟ್ಟಿ ಬಂಗಾರದಂತ ನಶ್ಯ ಪುಡಿ ಆರೋಮ ಗಾಳಿಯಲ್ಲಿ ಕರಗದಂತೆ ಜೋಪಾನ ಮಾಡುತ್ತಿದ್ದರು. ಅಂಗಡಿ ಮಾಲೀಕರೂ ನಶ್ಯ ಪ್ರಿಯರಾದ್ಧರಿಂದ ಈ ಅಂಗಡಿ ನಶ್ಯ ಸ್ಥಳಿಯ ನಶ್ಯ ಪ್ರಿಯರ ಅಂಗಡಿ ಆಗಿತ್ತು.
ಆಗಿನ ಸ್ಥಳಿಯ ಪ್ರಸಿದ್ಧ ಶ್ಯಾನುಬೋಗರಾಗಿದ್ದ ನಮ್ಮ ಊರಿನ ಪ್ರಖ್ಯಾತ ಬುದ್ದಿವಂತರೆಂದು ಹೆಸರುಗಳಿಸಿದ್ದ ಗುಂಡಾಜೋಯಿಸರು ನಶ್ಯಾ ಬಳಸುವ ಪ್ರತಿಷ್ಠಿತರಾಗಿದ್ದರು. ಅವರ ಬೆಳ್ಳಿಯ ನಶ್ಯ ಕರಿಡಿಗೆ ಅವರ ಜುಬ್ಬದ ಸೈಡಿನ ಜೇಬಿಂದ ತೆಗೆದು ಅದರ ಮುಚ್ಚುಳದ ಮೇಲೆ ತೋರು ಬೆರಳಿಂದ ಸಣ್ಣಗೆ ಪ್ರೀತಿಯಿ೦ದ ತಟ್ಟುತ್ತಿದ್ದರು ನಂತರ ಗಂಭೀರವಾಗಿ ಮುಚ್ಚುಳ ತೆಗೆದು, ತಮ್ಮ ಹೆಬ್ಬೆರಳು ಮತ್ತು ಮಧ್ಯ ಬೆರಳು ಬಳಸಿ ಅವರ ಬ್ರಾಂಡಿನ ನಶ್ಯ ಪುಡಿಯ ಚಿಟಿಕೆ ಹೂವಿನಂತೆ ಎತ್ತಿ ಅವರ ಮೂಗಿನ ಹೊಳ್ಳೆಗೆ ಏರಿಸಿ ನಿಧಾನ ಉಸಿರೆಳೆದು ಗಂಭೀರವಾಗಿ ಸುತ್ತಲೂ ನೋಡಿ ಇದಕ್ಕಾಗಿಯೇ ಮೀಸಲಿಟ್ಟ ಬಟ್ಟೆಯಿಂದ ಕೈ ಬೆರಳು, ಮೂಗು ಒರೆಸಿ ನಶ್ಯ ಕರಡಿ ಜೇಬಿಗೆ ಸುರಕ್ಷಿತವಾಗಿ ಸೇರಿಸಿದ ಮೇಲೆಯೇ ಅವರ ಘನ ಗಾಂಭೀರ್ಯ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು.
ಉತ್ತರ ಮತ್ತು ದಕ್ಷಿಣ ಅಮೇರಿಕಾದ ಮೂಲ ನಿವಾಸಿಗಳಾದ ಇಂಡಿಯನ್ನರು ಈ ನಶ್ಯ ಪುಡಿ ಬಳಸುವ ಮೂಲ ಅನ್ನಲಾಗುತ್ತದೆ. 1493 ರಲ್ಲಿ ಕೊಲಂಬಸ್ ಎರಡನೇ ಸಮುದ್ರಯಾನದಲ್ಲಿ ಲೆಸ್ಸರ್ ಆಂಟಲೀಸ್ ನ ಟೈನೋ ಮತ್ತು ಕ್ಯಾರೀಜ್ ಜನರ ನಶ್ಯ ಬಳಕೆ ಬಗ್ಗೆ ಮೊದಲಿಗೆ ದಾಖಲಿಸಿದ್ದಾರೆ.
ಫೋಟೋ ಕೃಪೆ : google
17ನೇ ಶತಮಾನದಲ್ಲಿ ಪೋಪ್ ಅರ್ಬನ್ VIII ಚರ್ಚ್ ನಲ್ಲಿ ನಶ್ಯ ಬಳಕೆ ನಿಷೇಧಿಸುತ್ತಾರೆ. 18ನೇ ಶತಮಾನದಲ್ಲಿನ ಪೋಪ್ ಬೆನಡಿಕ್ಟ್ XIII ಈ ನಿಷೇಧ ತೆರವು ಮಾಡುತ್ತಾರೆ. ಇದಕ್ಕೆ ಕಾರಣ ಸ್ವತಃ ಬೆನಡಿಕ್ಟ್ XIII ಸ್ವತಃ ನಶ್ಯ ಪ್ರಿಯರು.
ನಶ್ಯ ಸೇವನೆ ಸಮಾಜದ ಪ್ರತಿಷ್ಠಿತರ ಮತ್ತು ಗಣ್ಯರ ಹವ್ಯಾಸ ಎಂಬತ್ತಾಗಿರಲು ಕಾರಣ ಇದು ಹೊಗೆ ರಹಿತ ತಂಬಾಕು ಆಗಿತ್ತು ಮತ್ತು ವಿದೇಶದಲ್ಲಿ ಪುರಷರಲ್ಲಿ ಇದರ ಬಳಕೆ ಹೆಚ್ಚು.
ವಿದೇಶದಲ್ಲಿ 31% ನಶ್ಯ ಪ್ರಿಯರಂತೆ, ಶೇಕಡಾ 75% ರಷ್ಟು ಪುಟ್ ಬಾಲ್ ಆಟಗಾರರು ಈಗಲೂ ನಶ್ಯ ಜಗಿಯುತ್ತಾರಂತೆ. ಅಂದರೆ ಹಲ್ಲಿನ ಒಸಡುಗಳಿಗೆ ತಿಕ್ಕುತ್ತಾರೆ. ಇದರಿಂದ ಬಾಯಿಯಲ್ಲಿ ಹೆಚ್ಚು ಲಾಲಾರಸ ಉತ್ಪಾದನೆಯಿಂದ ಅವರಿಗೆ ಆಟದಲ್ಲಿ ಹೆಚ್ಚಿನ ಉತ್ಸಾಹ ದೊರೆಯುತ್ತದೆಂಬ ನಂಬಿಕೆ ಇದೆ.
16ನೇ ಶತಮಾನದ ಮಧ್ಯದಲ್ಲಿ ಲಿಸ್ಬನ್ ದೇಶದ ಫ್ರೆಂಚ್ ರಾಯಬಾರಿ ಜೀನ್ ನಿಕೋಟ್ ನಶ್ಯ ತಲೆನೋವು, ಶೀಥಕ್ಕೆ ರಾಮಬಾಣ ಎಂಬ ಹೇಳಿಕೆ ಯುರೋಪಿನಲ್ಲಿ ನಶ್ಯ ಬಳಕೆ ಹೆಚ್ಚಲು ಕಾರಣ ಎನ್ನುತ್ತಾರೆ. ತಂಬಾಕು ಸೊಪ್ಪು ಕೊಳೆ ಬರೆಸಿ ಒಣಗಿಸಿ ಪುಡಿ ಮಾಡಿ ವಿವಿಧ ಸುವಾಸನೆ ಸೇರಿಸಿ ಆಕರ್ಷಕ ಡಬ್ಬಿಗಳಲ್ಲಿ ಗಾಳಿಯಾಡದಂತೆ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ, ನಶ್ಯಯದಲ್ಲಿ ನಿಕೋಟಿನ್ ಇರುವುದರಿಂದ ಇದರ ದೀರ್ಘಾವಧಿ ಬಳಕೆಯಿಂದ ಇದು ಹೃದಯ ಮತ್ತು ರಕ್ತನಾಳದಲ್ಲಿ ಹಾಗು ನರ ಸಂಬಂಧಿ ಕಾಯಿಲೆಗೆ ಕಾರಣ ಆಗುತ್ತದೆಂಬ ಸಂಶೋಧನೆಗಳಿದ್ದರೂ ಧೂಮಪಾನದಷ್ಟು ದುಷ್ಪರಿಣಾಮ ಇಲ್ಲ.
ರಿಗ್ ಗಳಲ್ಲಿ ಧೂಮಪಾನ ಮಾಡುವುದು (ಬೆಂಕಿಯ ಕಿಡಿಯಿಂದ ಪೆಟ್ರೋಲ್ ದಹಿಸುವುದರಿಂದ) ನಿಶೇಧವಿರುವುದರಿಂದ ಅಲ್ಲಿ ನಶ್ಯ ಬಳಕೆ ಜಾಸ್ತಿ. ದೇವಾಲಯಗಳ ಅರ್ಚಕರು ದೇವಾಲಯದ ಒಳಗೆ ನಶ್ಯ ಬಳಸುವುದಕ್ಕೆ ಯಾವುದೇ ತಡೆ ಇಲ್ಲ.
ನಮ್ಮ ಹಳ್ಳಿಗಳಲ್ಲಿ, ಕರಾವಳಿಗಳಲ್ಲಿ ಮಹಿಳೆಯರು ಹೆಚ್ಚು ನಶ್ಯ ಬಳಸುತ್ತಾರೆ, ಈಗಿನ ಗುಟ್ಕಾ ಕಾಲದಲ್ಲಿ ನಶ್ಯ ಬಳಕೆ ಮತ್ತು ಮಾರಾಟ ಕಡಿಮೆ ಅನ್ನಿಸುತ್ತದೆ.
- ಅರುಣ್ ಪ್ರಸಾದ್