ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಅಜೀರ್ಣ, ಹೊಟ್ಟೆನೋವು ಕಂಡುಬಂದಲ್ಲಿ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ. ತಪ್ಪದೆ ಮುಂದೆ ಓದಿ ಸೌಮ್ಯ ಸನತ್ ಅವರು ಬರೆದಿರುವ ಮಜ್ಜಿಗೆ ಕುರಿತಾದ ಲೇಖನ…
‘ತಂಕ್ರ ಜಾಕ್ರಸ್ತ ದುರ್ಲಭಂ’ ಮಜ್ಜಿಗೆ ದೇವಲೋಕದ ದೇವೇಂದ್ರನಿಗೂ ಕೂಡ ದುರ್ಲಭವಾಗಿತ್ತಂತೆ. ಈ ಉಕ್ತಿಯೇ ಮಜ್ಜಿಗೆಯ ಪ್ರಾಧಾನ್ಯತೆಯನ್ನು ಸಾರಿ ಹೇಳುತ್ತದೆ. ಮಜ್ಜಿಗೆಯನ್ನು ಮೊಸರು ಮತ್ತು ತಣ್ಣೀರನ್ನು ಒಟ್ಟಾಗಿ ಬಳಸಿ ಕಡೆದು ತಯಾರಿಸಲಾಗುತ್ತದೆ. ಇದನ್ನು ಹಾಗೆಯೇ ಅಥವಾ ವಿವಿಧ ಸಂಬಾರ ಪದಾರ್ಥಗಳಿಂದ ರುಚಿಗೊಳಿಸಿ ಸೇವಿಸಬಹುದು.
ಸಾಂಪ್ರದಾಯಿಕ ಅಥವ ಮನೆಯಲ್ಲಿ ತಯಾರಿಸಲಾದ ಮಜ್ಜಿಗೆಯಲ್ಲಿ ಪ್ರೋಬಯಾಟಿಕ್ ಸೂಕ್ಷ್ಮಜೀವಿಗಳಿರುವ ಕಾರಣ ಅದು ನಮ್ಮ ದೇಹಕ್ಕೆ ಒಳ್ಳೆಯ ಆಹಾರ ಪದಾರ್ಥವಾಗಿದೆ. ಹೊಟ್ಟೆ ಮತ್ತು ಚರ್ಮಕ್ಕೆ ತಂಪನ್ನುಂಟುಮಾಡುತ್ತದೆ. ಮೊಸರನ್ನು ಕಡೆದು ಮಜ್ಜಿಗೆ ಮಾಡುವುದರಿಂದ ಹಾಲು ಅಥವಾ ಮೊಸರಿನಲ್ಲಿ ಇರುವಷ್ಟು ಕೊಬ್ಬಿನ ಅಂಶ ಇದರಲ್ಲಿರುವುದಿಲ್ಲ. ಮಜ್ಜಿಗೆ ದೇಹದ ರೋಗ ತಡೆಗಟ್ಟಲು ಬೇಕಾಗುವ ಶಕ್ತಿಯನ್ನು ಕೊಡುತ್ತದೆ. ಭಾರತದಲ್ಲಿ ಬೆಣ್ಣೆ ತಯಾರಿಸಿದ ಬಳಿಕ ಉಳಿಯುವಂತಹ ಬಿಳಿ ದ್ರವಕ್ಕೆ “ಮಜ್ಜಿಗೆ”ಯೆಂದು ಕರೆಯುವರು.
ಫೋಟೋ ಕೃಪೆ : google
ನುಡಿಮುತ್ತುಗಳಲ್ಲಿ ನಮ್ಮ ಮಜ್ಜಿಗೆ :
- ಅಸಲು ಇಲ್ಲದೆ ಬಡ್ಡಿ ಇಲ್ಲ, ಮೊಸರು ಇಲ್ಲದೆ ಮಜ್ಜಿಗೆ ಇಲ್ಲ.
- ಈಚಲುಮರದ ಕೆಳಗೆ ಮಜ್ಜಿಗೆ ಕುಡಿದರೆ ನಾಚಿಗೆಗೇಡಾಗದೇ?
- ತಾನು ಹೋದರೆ ಮಜ್ಜಿಗಿಲ್ಲ, ಮೊಸರಿಗೆ ಚೀಟು’
- ಪಾದ್ಯಕ್ಕೆ ನೀರು ಇಲ್ಲ, ಊಟಕ್ಕೆ ಮಜ್ಜಿಗೆ ಎಲ್ಲಿ?’,
- ‘ಮಜ್ಜಿಗೆಗೆ ಹೋದವನಿಗೆ ಎಮ್ಮೆ ಕ್ರಯವು ಯಾಕೆ?
- ಮಜ್ಜಿಗೆಗೆ ತಕ್ಕ ರಾಮಾಯಣ ಹೇಳಿದ
- ಅತ್ತೇಮನೆಗೆ ಮಜ್ಜಿಗೆನೀರು, ತವರುಮನೆಗೆ ಹಾಲು ಮೊಸರು
- ಬಸವಾ! ಎಂದರೆ ಪಾಪ! ಸೊಸೆಗೆ ಮಜ್ಜಿಗೆ ನೀರು ತಾ!
ಫೋಟೋ ಕೃಪೆ : google
ಸರ್ವ ಕಾಲಕ್ಕೂ ನಾವು ತಿಳಿದಿರಲೇಬೇಕಾದ ಮಜ್ಜಿಗೆಯ ಉಪಯೋಗಗಳು ಹಲವಾರು :
ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಾಸಿತವಾಗುತ್ತದೆ. ಅಜೀರ್ಣ, ಹೊಟ್ಟೆನೋವು ಕಂಡುಬಂದಲ್ಲಿ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಮನೆಯಲ್ಲಿ ಹಬ್ಬಹರಿದಿನಗಳ ಸಂದರ್ಭದಲ್ಲಿ, ಯಾವುದೋ ಸಮಾರಂಭಕ್ಕೆ ಹೋಗಿ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ. ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿದರೆ ಇನ್ನಷ್ಟು ರುಚಿ ಕೊಡುತ್ತದೆ ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ತಯಾರಿಸುವ ಪದಾರ್ಥಗಳು ಪರಿಣಾಮಕಾರಿಯಾಗಿರುತ್ತವೆ. ಆದರೆ, ಅವುಗಳ ನಿಜವಾದ ಉಪಯೋಗ ನಮಗೆ ತಿಳಿದಿರುವುದಿಲ್ಲ. ಅಂತಹವುಗಳಲ್ಲಿ ಮಜ್ಜಿಗೆಯೂ ಒಂದು. ಹಾಲಿನ ಉಪ ಉತ್ಪನ್ನವಾದ ಮಜ್ಜಿಗೆ ನಿಜವಾಗಿಯೂ ಆರೋಗ್ಯವರ್ಧಕ ಮಜ್ಜಿಗೆಯನ್ನು ನಿತ್ಯ ಇದನ್ನು ಸೇವಿಸುವುದರಿಂದ ಹಲವು ಅನುಕೂಲಗಳಿವೆ.
1. ಮಜ್ಜಿಗೆಯಲ್ಲಿರುವ ಎಲೆಕ್ಟ್ರೋಲೈಟ್ಸ್ ಮತ್ತು ಅತಿಯಾದ ದ್ರವಾಂಶ ನಿಮ್ಮ ದೇಹ ನಿರ್ಜಲೀಕರಣಗೊಳ್ಳುವುದನ್ನ ತಡೆಯುತ್ತದೆ.
2. ಹೆಚ್ಚು ಎಣ್ಣೆ, ಮಸಾಲೆ ಪದಾರ್ಥಗಳನ್ನ ತಿಂದ ಬಳಿಕ ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆ ಹಗುರವಾಗಿ ಬಹಿರ್ದೆಸೆಗೆ ಅನುಕೂಲವಾಗುತ್ತೆ.
3. ಎಲ್ಲಕ್ಕಿಂತ ಪ್ರಮುಖವಾದ ಅಂಶವೆಂದರೆ ಆಸಿಡಿಟಿಯಿಂದ ಬಳಲುತ್ತಿರುವವರಿಗೆ ಮಜ್ಜಿಗೆ ರಾಮಬಾಣ.
4. ವಿಟಮಿನ್ ಬಿ 12 ಯತೇಚ್ಛವಾಗಿ ಒಳಗೊಂಡಿರುವ ಮಜ್ಜಿಗೆಯಿಂದ ಅನೀಮಿಯಾ, ಖಿನ್ನತೆ ದೂರವಾಗುತ್ತೆ.
5. ಮಜ್ಜಿಗೆಯಲ್ಲಿರುವ ಆಸಿಡ್, ಜರ್ಮ್ಸ್ ಮತ್ತು ಬ್ಯಾಕ್ಟೀರಿಯಾಗಳನ್ನ ಕೊಲ್ಲುತ್ತದೆ.ಹೊಟ್ಟೆಯನ್ನುಶುದ್ಧೀಕರಿಸಿಜೀರ್ಣಶಕ್ತಿವೃದ್ಧಿಸುತ್ತದೆ.ಬಿಸಿಲಿಂದ ಏರಿದ ದೇಹದ ಬಿಸಿಯನ್ನು ತಗ್ಗಿಸುತ್ತದೆ.
6. ದೇಹಕ್ಕೆ ಬೇಕಾದ ಕ್ಯಾಲ್ಶಿಯಂ, ವಿಟಮಿನ್, ಪ್ರೊಟೀನ್ ಗಳನ್ನು ಮಜ್ಜಿಗೆ ನೀಡುತ್ತದೆ.ಕ್ಯಾನ್ಸರ್ ತಡೆ, ಕೊಲೆಸ್ಟ್ರಾಲ್ ಕಡಿಮೆ ಹಾಗೂ ರಕ್ತದೊತ್ತಡ ನಿಯಂತ್ರಿಸಲು ಮಜ್ಜಿಗೆ ರಾಮಬಾಣವಾಗಿದೆ.
ಅತಿಯಾದರೆ ಅಮೃತವೂ ವಿಷ” ಅಂತೆಯೇ ಮಜ್ಜಿಗೆಯ ಗುಣ ದೋಷಗಳನ್ನು ತಿಳಿದು, ನಮ್ಮ ನಮ್ಮ ದೇಹ ಪ್ರಕೃತಿಗೆ, ಋತುವಿಗೆ, ಜೀರ್ಣ ಶಕ್ತಿಗೆ ಅಡ್ಡಿಯಾಗದ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕರ ಪ್ರಯತ್ನಿಸೋಣ ಅಲ್ಲವೆ?.
- ಸೌಮ್ಯ ಸನತ್