ತಪ್ಪು ಮಾಡೋದು ಸಹಜ, ತಿದ್ದಿ ನಡೆಯುವುದೇ ಮನುಜ…ಮನುಷ್ಯನಾದವನು ತನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ. ಪಶ್ಚಾತ್ತಾಪವಾದಾಗ ‘ನೀ ನನ್ನ ಮನ್ನಿಸು’, ‘ಕ್ಪಮಿಸು’ ಅಂತ ಕೇಳೋ ಆ ಒಂದು ಮಾತಿನಲ್ಲಿ ಎಂತಹ ಮೋಡಿ ಇದೆ ಎಂದು ಅಪರ್ಣಾದೇವಿ ಅವರು ಕ್ಷಮೆ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಾನವರಾದ ನಮಗೆ ದೈವವಿತ್ತ ಕೊಡುಗೆ ಮಾತನಾಡಲು ಬರುವುದು ಭಾವನೆಗಳನ್ನು ಬಾಯಿಬಿಟ್ಟು ವ್ಯಕ್ತಪಡಿಸಬಹುದು. ನವರಸಗಳನ್ನು ಅಭಿವ್ಯಕ್ತಗೊಳಿಸುವಂತಹ ವರ ಮನುಜರಿಗೆ ದೊರಕಿದೆ. ಇತರ ಜೀವಿಗಳಲ್ಲಿ ಇಂತಹ ಗುಣವನ್ನು ಕಾಣೆವು. ಅರಿಷಡ್ವರ್ಗಗಳು, ತಾಮಸ, ರಾಜಸ ಗುಣಗಳು, ಸರ್ವಗುಣಾವಗುಣಗಳು ಮನುಜ ಜನ್ಮಕ್ಕೆ ಬಂದಿವೆ. ಜೀವನ ಶುರುವಾದ ಕ್ಷಣದಿಂದ ಎಳೆವೆಯಲ್ಲಿ ಉತ್ತಮ ಸಂಸ್ಕಾರ ಬಿದ್ದರೆ ನಡವಳಿಕೆಯಲ್ಲಿ ಘನತೆ, ವಿನಮ್ರತೆ, ವಿವೇಕ, ಸನ್ನಡತೆಯ ಲಕ್ಷಣಗಳು ಮೂಡಿ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸುತ್ತವೆ. ತಪ್ಪು ಸರಿಗಳು, ಆಚಾರ, ಅನಾಚಾರದ ಬಗ್ಗೆ, ವಿಚಾರವಂತಿಕೆ ಬೆಳೆಯುತ್ತದೆ. ಆಗ ನಮ್ಮ ವರ್ತನೆಗಳ ಬಗ್ಗೆ ನಮಗೇ ಅರಿವಿದ್ದು ಮಾಡಬಾರದ ಕೆಲಸಗಳನ್ನು ಮಾಡಿದಾಗ, ಇತರರಿಗೆ ನಮ್ಮಿಂದ ತೊಂದರೆಯಾದಾಗ ಅಥವಾ ಗೊತ್ತಿಲ್ಲದೇ ಜರುಗುವ ಅವಘಡಗಳು, ಆಕಸ್ಮಿಕವಾಗಿ ಸಂಭವಿಸುವ ಅನೂಹ್ಯ ವ್ಯಸನ ಉಂಟು ಮಾಡುವ ಸಂಗತಿಗಳಿಗೆ ನಾವೇ ಹೊಣೆಗಾರರು ಎಂದಾಗ ಪರಿತಾಪದಿಂದ ಬೆಂದು, ಪಶ್ಚಾತ್ತಾಪ ಮೂಡಿ ತಪ್ಪಾಯ್ತು ಮನ್ನಿಸು ಅಥವಾ ಮನ್ನಿಸಿರಿ ಎಂದು ಹೇಳುತ್ತೇವೆ.
ಸಮಾಜದ ಪ್ರತಿ ವ್ಯವಹಾರಗಳನ್ನು ನಡೆಸುವಾಗ ಸಹವರ್ತಿಗಳ ಜೊತೆ ಭಾವನಾತ್ಮಕ ಜೀವಿಗಳಾದ ನಾವು, ನಮ್ಮ ತಪ್ಪು ಒಪ್ಪುಗಳಿಗೆ ‘ಕ್ಷಮಿಸಿ’ ಎಂಬ ಪದ ಬಳಕೆಯನ್ನು ಬಳಸಿ, ಸಮಾಧಾನ ಮಾಡಲು ಹೆಣಗುತ್ತೇವೆ. ಅಹಂಭಾವ, ದರ್ಪ, ಅವಿವೇಕದ ಗುಣಗಳು ಮನುಷ್ಯನೊಳಗೆ ಸೇರಿದಾಗ ತಮ್ಮ ನಡೆತೆಯೇ ಸರಿ, ನಾವು ಮಾಡೋದೇ ಪರಮಶ್ರೇಷ್ಠವೆಂಬ ಸಿದ್ಧಾಂತಕ್ಕೆ ಬದ್ಧರಾದರೆ “ನೀ ನನ್ನ ಮನ್ನಿಸು ” ಎಂಬ ಪದಗಳಿಗೆ ಅವರಲ್ಲಿ ಜಾಗವಿರೋದೇ ಇಲ್ಲ.. ಕ್ಷಮಿಸು, ಮನ್ನಿಸು ಎಂಬ ವ್ಯಕ್ತಿಗೆ ಸಮಾಜದಲ್ಲಿ ಮನ್ನಣೆಯಿದೆ. ಮುಂದೆ ತಪ್ಪು ತಿದ್ದಿಕೊಂಡು ಮುನ್ನಡೆಯುವ ಅವಕಾಶವಿದೆ. ಪಶ್ಚಾತ್ತಾಪವೇ ಪ್ರಾಯಶ್ಚಿತ್ತ ಎನ್ನುತ್ತಾರೆ.

ಫೋಟೋ ಕೃಪೆ : google
ಗೌತಮ ಬುದ್ಧ ಅಂಗುಲೀಮಾಲನಂತಹ ವಿಕೃತ ಕ್ರೌರ್ಯಮೆರೆಯುವ ವ್ಯಕ್ತಿಯನ್ನು ಕ್ಷಮಿಸಿ, ಸಾತ್ವಿಕ ಭಾವ ಬೆಳೆಸಿದರು. ಆತನಾದರೋ “ನೀ ನನ್ನ ಮನ್ನಿಸು” ಎಂಬ ಭಾವದಿಂದ ಶರಣಾಗತನಾದ. ಹಾಗೆ ಮನಸ್ಸಿನಿಂದ ಹುಟ್ಟಿ ಬಂದ ಕ್ಷಮೆ ಕೇಳುವ ಗುಣ ಎಲ್ಲರನ್ನೂ ಕರುಣೆ, ದಯೆ, ಮಮತೆಯಲ್ಲಿ ಮುಳುಗಿಸುವುದು. ಮತ್ತೆ ಆದದ್ದಾಯ್ತು ಮುಂದೆ ಹೀಗಾಗದಿರಲಿ ಎಂದು ಹೇಳುವಂತೆ ಮಾಡುವುದು.
ಹೆತ್ತವರ ಮಾತುಗಳನ್ನು ಧಿಕ್ಕರಿಸಿ ಎಡವಟ್ಟು ಮಾಡಿಕೊಂಡು ಬಂದು ಅಮ್ಮಾ ,ಅಪ್ಪಾ ತಪ್ಪಾಯ್ತು “ನೀ ನನ್ನ ಮನ್ನಿಸು” ಎಂದು ಮಕ್ಕಳು ಬಂದಾಗ ತಮ್ಮ ಕೋಪ ಬಿಟ್ಟು ಮಕ್ಕಳನ್ನು ಸಂತೈಸಿ ,ಮತ್ತೆ ಹಾಗಾಗದಂತೆ ಎಚ್ಚರಿಕೆ ನೀಡುವರು.
ಎಷ್ಟೋ ಪ್ರಸಂಗಗಳು ಸಂಬಂಧಗಳಲ್ಲಿ ಎಂದೆಂದೂ ಒಂದಾಗಲಾರರು ಎಂಬ ಸ್ಥಿತಿಗೆ ತಲುಪಿದವರು ಕೂಡ “ನೀ ನನ್ನ ಮನ್ನಿಸು” ಎಂದಾಗ ಮೋಡಿಗೆ ಒಳಗಾದವರಂತೆ ಮತ್ತೆ ಆಪ್ತವಾಗುವರು. ಪತಿ ಪತ್ನಿಯರಲ್ಲಿ ಅನೇಕ ತಪ್ಪು ತಿಳುವಳಿಕೆ,ಸಂಶಯ,ಅನುಮಾನ ಮೂಡಿದಾಗ ವಿಚ್ಛೇದನದವರೆಗೂ ಹೋಗಿ ಬಾಂಧವ್ಯ ಮುರಿದು ಬೀಳುವಂತಾಗುವುದು. ಅಂತಹ ಸಂಧರ್ಭದಲ್ಲಿ ಸರಿಯಾದ ತಿಳುವಳಿಕೆ ಮೂಡಿ ಒಬ್ಬರಾದರೂ” ನೀ ನನ್ನ ಮನ್ನಿಸು” ಅಂತ ಅಹಂ ಬಿಟ್ಟು ಹೇಳಿದರೆ,ಮನದ ಬಿರುಕು ಮುಚ್ಚಿ ಜೀವನ ಸರಿಹೋಗುವುದು. ಸಹೋದರ ಸಂಬಂಧಗಳು,ಸ್ನೇಹಿತರ ಒಡನಾಟ,ಅತ್ತೆ ಸೊಸೆಯರ ಬಾಂಧವ್ಯ ಎಲ್ಲವೂ ಅಷ್ಟೇ.. ಅಹಂಭಾವ, ತಪ್ಪುತಿಳುವಳಿಕೆ, ಮೂರನೇ ವ್ಯಕ್ತಿಗಳಿಂದ ಸಂಬಂಧ ಹಾಳು ಮಾಡುವಂತಹ ಹೇಳಿಕೆಗಳು, ಬಾಂಧವ್ಯವನ್ನು ಕೆಡಿಸುವುವು.ಸರಿಯಾದ ಗ್ರಹಿಕೆಯಿಂದ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು, ಅಹಂಭಾವ ಬಿಟ್ಟು”ನೀ ನನ್ನ ಮನ್ನಿಸು” ಎಂದಾಗ ಪ್ರೀತಿಯೊರತೆ ಮತ್ತೆ ಮೂಡಿ ಬದುಕು ಹಸನಾಗುವುದು.

ಫೋಟೋ ಕೃಪೆ : google
ಮನದೊಳಗೆ ಅರಿವಿನ ಬೆಳಕು ಸದಾ ಬೆಳಗುತಿದ್ದರೆ ತಪ್ಪು ಸರಿಗಳ ವ್ಯತ್ಯಾಸ ತಾನೇ ಕಾಣುವುದು. ಪ್ರತಿ ಕೆಲಸಗಳಿಗೆ ಕಾರಣಕರ್ತನಾದ ಭಗವಂತನಿಗೆ ನಮಸಿ ನಿತ್ಯ ಬೇಡುತ್ತೇವೆ, ಅಪರಾಧ ಸಹಸ್ರಾಣಿ ಕ್ರಿಯಂತೇ ಅಹರ್ನಿಶಂ ದಾಸೋಹಂ ಇತಿ ಮಾಮ್ ಬಧ್ವಾ ಕ್ಷಮಸ್ವ ನಿತ್ಯಂ ತ್ರಿವಿರಾಪರಾಧಾನ್ ” ಅಂತ.
ಹಗಲಿರುಳು ಸಹಸ್ರ ಅಪರಾಧಗಳು ನನ್ನಿಂದಾಗುತ್ತಿವೆ, ದಾಸನೆಂದು ತಿಳಿದು ನನ್ನ ತಪ್ಪುಗಳನ್ನು ಕ್ಷಮಿಸು ದೇವಾ. “ನೀ ನನ್ನ ಮನ್ನಿಸು” ಎಂದರ್ಥ. ಹಾಗಂತ ಮಾಡಬಾರದ ತಪ್ಪುಗಳಿಗೆ ಎಲ್ಲಿಯೂ ಕ್ಷಮೆ ಸಿಗಲಾರದು.
ಅಕ್ಷಮ್ಯ ಅಪರಾಧಗಳನ್ನು ಯಾರೂ ಮನ್ನಿಸಲಾರರು. ಹೃದಯವಂತಿಕೆ ಸಜ್ಜನಿಕೆ ಸಮಾಜದ ಹಲವು ನೀತಿ ನೇಮಗಳ ಕಟ್ಟಳೆಯ ಪರಿಧಿಯೂ ಇಲ್ಲಿದೆ. ಹೆತ್ತವರ ಮೇಲಿನ ದೌರ್ಜನ್ಯ, ಅಬಲೆಯರ ಮೇಲಿನ ಅಮಾನುಷ ಕೃತ್ಯಗಳನ್ನು ಎಸಗಿದವರನ್ನು ಮನ್ನಿಸಲು ಯಾರಿಗೆ ತಾನೇ ಮನ ಬಂದೀತು. ಮನದ ದೇಗುಲದಲ್ಲಿ ಸದ್ಭಾವಗಳ ಜ್ಯೋತಿ ಬೆಳಗಿಸಿ ಅರಿಯದೇ ಮಾಡಿದ ತಪ್ಪುಗಳನ್ನು ಮನ್ನಿಸಿ ಒಳ್ಳೆಯ ಮಾರ್ಗದಲ್ಲಿ ನಡೆಸು ಎಂದು ದೇವನಲ್ಲಿ ಬೇಡೋಣ.
- ಅಪರ್ಣಾದೇವಿ
