ಮುತ್ತುಗ ಸೊಪ್ಪಿನ ರಸವನ್ನು ಕಿವಿಯಲ್ಲಿ ಬಿಡುವುದರಿಂದ ಕಿವಿಯಲ್ಲಿ ಹುಳು ಸೇರಿಕೊಂಡರೆ ಹೊರಗೆ ಬರುತ್ತದೆ, ಮುತ್ತುಗ ಗಿಡದ ಮಹತ್ವದ ಕುರಿತು ನಾಟಿವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಸಿಗೆಯ ಗದ್ದೆ ಕೊಯ್ಲಿನ ಸಮಯದಲ್ಲಿ ಅನತಿ ದೂರದಲ್ಲಿ ಕಣ್ಣು ಹಾಯಿಸಿದ್ದರು ಗಿಡದ ತುಂಬಾ ಬಿಟ್ಟ ಕೆಂಪು ಬಣ್ಣದ ಮುತ್ತುಗದ ಗಿಡ ನೋಡಲು ತುಂಬಾ ಸುಂದರ. ಬತ್ತದ ರಾಶಿ ಪೂಜೆಯಲ್ಲಿ ಈ ಹೂವೇ ಶ್ರೇಷ್ಠ.
ಬೇಸಿಗೆಯಲ್ಲಿ ಈ ಹೂವು ಬಿಟ್ಟಷ್ಟು ಸಮೃದ್ಧ ಮಳೆ ಎಂದು ಪ್ರತೀತಿ ಇದೆ. ಹೋಮದಲ್ಲಿ ಸಮೀದವಾಗಿ ಉಪಯೋಗಿಸುವ ಚಂದ್ರನ ಪ್ರತೀಕವಾದ ಈ ಮರ ಪೂಜ್ಯನೀಯ. ಹಿಂದೆಲ್ಲಾ ದೇವಸ್ಥಾನ ಮತ್ತು ಮದುವೆಗಳಲ್ಲಿ ಊಟದ ಎಲೆಗಾಗಿ ಕಡ್ಡಿಯಲ್ಲಿ ನೈದ ಪತ್ರಾವಳಿ ನೋಡುವುದೇ ಒಂದು ಚೆಂದ.
ವರದಹಳ್ಳಿಯಲ್ಲಿ ಪೇರಿಸಿಟ್ಟ ಎಲೆಗಳನ್ನು ಕುತೂಹಲದಿಂದ ನೋಡಿದ ನೆನಪು ಇನ್ನೂ ಮಾಸಿಲ್ಲ. ಉಪನಯನದಲ್ಲಿ ವಟುಗಳಿಗೆ ಪಲಾಶದ ಕಡ್ಡಿ ಉಪಯೋಗಿಸುತ್ತಾರೆ, ಇದನ್ನು ಬ್ರಹ್ಮ ವೃಕ್ಷ ಎಂದು ಕರೆಯುತ್ತಾರೆ.
ಇದರಲ್ಲಿ ಮೂರು ವಿಧ ಹೂ ಬಿಟ್ಟಾಗ ಮಾತ್ರ ಪತ್ತೆ ಹಚ್ಚಬಹುದು ಬಿಳಿ, ಕೆಂಪು, ಹಳದಿ. ಬಿಳಿ ತುಂಬಾ ಅಪರೂಪ ಉತ್ತಮ ಔಷಧೀಯ ಗುಣವನ್ನು ಹೊಂದಿರುವ ಸಸ್ಯ. ಇದರ ಎಲೆ ತೊಗಟೆ, ಹೂವು, ಬೀಜ, ಬೇರು ಮತ್ತು ಮರದಲ್ಲಿ ಸ್ರವಿಸುವ ಅಂಟು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.
1) ಕಿವಿಯಲ್ಲಿ ಹುಳು ಸೇರಿಕೊಂಡರೆ ಏಳೆಯ ಸೊಪ್ಪಿನ ರಸ ಬಿಡುವುದರಿಂದ ಹೊರಗೆ ಬರುತ್ತದೆ.
2) ತಾಜಾ ಎಲೆಗಳನ್ನು ನೀರಿನಲ್ಲಿ ಅರೆದು ಸೋಸಿ ದಿನಕ್ಕೆ ಅರ್ಧ ಕಪ್ಪಿನಂತೆ ಮೂರು ದಿನ ಕೊಡುವುದರಿಂದ ಜ್ವರದ ತಾಪ ಕಡಿಮೆಯಾಗುತ್ತದೆ.
3) ಬೀಜವನ್ನು ಅರೆದು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಕ್ರಿಮಿಗಳು ನಾಶವಾಗುತ್ತದೆ.
4) ಬೇರನ್ನು ಒಣಗಿಸಿ ಪುಡಿಮಾಡಿ ನಶ್ಯ ಏರಿಸುವುದರಿಂದ ಅಪಸ್ಮಾರ ಗುಣವಾಗುತ್ತದೆ.
5) ತೊಗಟೆಯ ಕಷಾಯ ಮಾಡಿ ತೆಂಗಿನ ಹಾಲಿನೊಂದಿಗೆ ಸೇವಿಸುವುದರಿಂದ ಉದರ ಶೂಲೆ ಗುಣವಾಗುತ್ತದೆ.
6) ಇದರ ಅಂಟು ದಾಲ್ಚಿನಿ ಜಾಯಿಕಾಯಿ ಸೇರಿಸಿ ಗಸಗಸೆ ಹಾಕಿ ಪಾಯಸ ಮಾಡಿ ಸೇವಿಸುವುದರಿಂದ ಅತಿಸಾರ ಗುಣವಾಗುತ್ತದೆ.
7) ಇದರ ಅಂಟನ್ನು ಚೇಳು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ.
8) ಮುತ್ತುಗದ ಬೇರಿನ ಬೂದಿಯನ್ನು ದಿನಕ್ಕೊಮ್ಮೆ 4 ದಿನ ಸೇವಿಸಿ ನಂತರ ಭೇದಿಯಾಗಲು ಹರಳೆಣ್ಣೆ ಕುಡಿಯುವುದರಿಂದ ಜಂತು ಹುಳುಗಳು ನಾಶವಾಗುತ್ತದೆ.
9) ಹೊಸ ಮಡಿಕೆಯಲ್ಲಿ ಮುತ್ತುಗದ ಹೂವು ಹಾಕಿ ಒಂದು ಕಪ್ ನೀರು ಹಾಕಿ ಮುಚ್ಚಿಟ್ಟು ರಾತ್ರಿ ಇಬ್ಬನಿಯಲ್ಲಿ ಇಡಬೇಕು. ಬೆಳಿಗ್ಗೆ ಕಿವುಚಿ ರಸ ತೆಗೆದು ಕಲ್ಲು ಸಕ್ಕರೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಪಾಂಡುರೋಗ ಗುಣವಾಗುತ್ತದೆ.
10) ಹೂವನ್ನು ಕಷಾಯ ಮಾಡಿ ಕಲ್ಲು ಸಕ್ಕರೆ ಸೇರಿಸಿ ಸೇವಿಸುವುದರಿಂದ ಮೂತ್ರ ವಿಸರ್ಜನೆ ಸುಲಭವಾಗುತ್ತದೆ .
11) ಮುತ್ತುಕದ ಬೀಜವನ್ನು ನಿಂಬೆರಸದಲ್ಲಿ ತೈಯ್ದು ಹಚ್ಚುವುದರಿಂದ ಮಕ್ಕಳ ತದ್ದು ಗುಣವಾಗುತ್ತದೆ.
12) ಬೀಜದ ಪುಡಿ ಮತ್ತು ನೆಲ್ಲಿ ಪುಡಿ ಸೇರಿಸಿ ಸೇವಿಸುವುದರಿಂದ ಕಣ್ಣಿಗೆ ಒಳ್ಳೆಯದು.
13) ಶುದ್ಧ ಮಾಡಿದ ಮುತ್ತುಗದ ಬೀಜ ಸೈಂದ ಲವಣ ಶುದ್ಧಗೊಳಿಸಿದ ಇಂಗು ಇವುಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಉತ್ತರಣೆ ಸೊಪ್ಪಿನ ರಸದಲ್ಲಿ 16 ದಿನ ಭಾವನೆ ಕೊಟ್ಟು ಉಪಯೋಗಿಸಿದ ಔಷಧಿ ಉದರದ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುತ್ತದೆ.
14) ಚಕ್ಕೆಯ ಪುಡಿ, ಅಂಕೋಲೆ ಚಕ್ಕೆ ಪುಡಿ, ಅಮೃತ ಸತ್ವ, ಮದ್ದರಸ, ಮದ್ದಾಲೆ ರಸದಲ್ಲಿ ಹದಿನಾರು ಬಾರಿ ಭಾವನೆ ಕೊಟ್ಟು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಥೈರಾಯ್ಡ್ ಗುಣವಾಗುತ್ತದೆ .
- ಸುಮನಾ ಮಳಲಗದ್ದೆ – ನಾಟಿ ವೈದ್ಯರು