ಸಾಲಿಗುಡಿ ಪ್ರವೇಶಿಸುವ ಮುನ್ನ…

“ಸಾಲಿಗುಡಿ” ಯಲ್ಲಿ ಎಲ್ಲರಿಗಿಂತ ಭಿನ್ನವಾಗಿರುವ ಪ್ರಭಾ ಟೀಚರ್ ಬಗ್ಗೆ ಪ್ರಸ್ತಾಪಿಸುತ್ತ ಮಕ್ಕಳಿಗೆ ಇರುವ ಆಟಗಳ ಬಗೆಗಿನ ಕುತೂಹಲ ಗಮನಿಸಿ, ಆಡಿಸಿದ ಆಟ ‘ಸಮತೂಕದ ಆಟ’ ಆಡಿಸುತ್ತಾರೆ. ಈ ಆಟ ಎಲ್ಲ ಮಕ್ಕಳಿಗೂ ಇಷ್ಟವಾಗುತ್ತದೆ. ಪ್ರಬಂಧದಲ್ಲಿ ಆಟದ ಕುರಿತು ನಿರೂಪಿಸುವ ರೀತಿ ಸೊಗಸಾಗಿದೆ. ಭುವನೇಶ್ವರಿ ರು ಅಂಗಡಿ ಅವರ ಸಾಲಿಗುಡಿ ಕೃತಿಯ ಕುರಿತು ಡಾ. ನಿಂಗು ಸೊಲಗಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಸಾಲಿಗುಡಿ
ಕವಿಯತ್ರಿ : ಭುವನೇಶ್ವರಿ ರು ಅಂಗಡಿ
ಪ್ರಕಾರ : ಪ್ರಬಂಧಗಳು

ಉತ್ತರ ಕರ್ನಾಟಕದಲ್ಲಿ ಶಾಲೆಗಳನ್ನು “ಸಾಲಿಗುಡಿ” ಅಂತ ಕರೆಯುವುದು ಒಂದು ಕಾಲದ ವಾಡಿಕೆಯಾಗಿತ್ತು. ಏಕೆಂದರೆ ಆರಂಭಿಕವಾಗಿ ಶಾಲೆಗಳು ನಡೆಯುತ್ತಿದ್ದುದೇ ಗುಡಿಗಳಲ್ಲಿ. ನಂತರ ಶಾಲೆಗಳು ಸ್ವತಂತ್ರ ಕಟ್ಟಡಗಳನ್ನು ಹೊಂದಿದ ಮೇಲೂ ಕೆಲವರು ಶಾಲೆಯ ನೂತನ ಕಟ್ಟಡಗಳನ್ನು ತಮ್ಮ ರೂಢಿಗತ ಭಾಷೆಯಲ್ಲಿ “ಸಾಲಿಗುಡಿ” ಅಂತಾನೇ ಕರೆಯೋದು ಮುಂದುವರೆಸಿದರು. ಅಂತೆಯೇ ಓದಿಸೋ ಮಠಗಳೂ ಇದ್ದವು. ಈಗಲೂ ಅಂಥ ಹೆಸರುಳ್ಳ ಮನೆತನಗಳಿವೆ.

ವಾಸ್ತವವಾಗಿ ಶಾಲೆಗಳು ನಿಜ ಅರ್ಥದಲ್ಲಿ ಗುಡಿಗಳೇ ಆಗಬೇಕು, ಆದರೆ ಗಡಿಗಳಿರಬಾರದು. ಗುಡಿ, ಚರ್ಚು, ಮಸೀದಿಗಳು, ಮಠ ಮಾನ್ಯಗಳು ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರಗಳಾಗಿ ಸೌಹಾರ್ದತೆಯೊಂದಿಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಂಡು ಹೋಗುವ ಹೊಣೆಗಾರಿಕೆ ನಿಭಾಯಿಸುವಂತಾಗಬೇಕು. ಸಮುದಾಯವು ಈ ಧಾರ್ಮಿಕ ಕೇಂದ್ರಗಳಿಗೆ ಕೊಟ್ಟ ಮಾನ್ಯತೆಯನ್ನು ಈ ಶಾಲೆಗಳಿಗೂ ಕೊಡುವಂತಾಗುವ ಮೂಲಕ ಎಲ್ಲರಿಗೂ ಮುಕ್ತ ಅವಕಾಶವಿರುವ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ‍ಮರ್ಪಕವಾಗಿ ಅನುಷ್ಠಾನಗೊಳಿಸುವ, ಸೌಹಾರ್ದತೆ ಹಾಗೂ ಸಮನ್ವಯದ ನೆಲೆಗಳಾಗಬೇಕು. ಜ್ಞಾನ ದೇಗುಲಗಳಾಗಬೇಕು. ಅಂತೆಯೇ ಹಲವು ಶಾಲೆಗಳಲ್ಲಿ ಇಂಥ ಸದಾಶಯದೊಂದಿಗೆ ಪ್ರವೇಶ ದ್ವಾರದಲ್ಲಿ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಪ್ರೀತಿಯ ಆಹ್ವಾನವನ್ನು ನೀಡಿದ್ದಿದೆ.

ನನ್ನ ಆತ್ಮೀಯ ವೃತ್ತಿ ಬಂಧುಗಳಾದ ಲೇಖಕಿ ಭುವನಾ ಅಂಗಡಿಯವರು ಪ್ರಕಟಿಸುತ್ತಿರುವ ಈ “ಸಾಲಿಗುಡಿ” ಅನ್ನೋ ಕೃತಿ ಶಾಲೆ, ಮಕ್ಕಳು ಹಾಗೂ ಅವುಗಳ ಸುತ್ತಮುತ್ತ ಹರಡಿಕೊಂಡಿರುವ ವಿಷಯವಸ್ತುಗಳನ್ನು ಒಳಗೊಂಡ ಸರಳ ಪ್ರಬಂಧಗಳ ಕೃತಿ. ಪ್ರೌಢಶಾಲಾ ಶಿಕ್ಷಕಿಯಾಗಿ ಮಕ್ಕಳ ಸ್ನೇಹಿಯಾಗಿರುವ ಇವರು ಮಕ್ಕಳೊಂದಿಗೆ ಆಪ್ತವಾಗಿದ್ದು, ನಿರಂತರ ಒಡನಾಟದೊಂದಿಗೆ ಅವರ ಭಾವನೆಗಳನ್ನು ಅರಿತವರು. ಇತ್ತೀಚೆಗೆ “ಪಡಿಯಚ್ಚು” ಅನ್ನೋ ಇವರ ಪ್ರಬಂಧಗಳ ಸಂಕಲನ ಪ್ರಕಟಗೊಂಡಿದ್ದು, “ಕಪ್ಪೆಚಿಪ್ಪಿನೊಳಗಿನ ಮುತ್ತು” ಹಾಗೂ “ನೈದಿಲೆ ನಗು” ಎಂಬ ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ.

“ಸಾಲಿಗುಡಿ” ಯಲ್ಲಿ ಎಲ್ಲರಿಗಿಂತ ಭಿನ್ನವಾಗಿರುವ ಪ್ರಭಾ ಟೀಚರ್ ಬಗ್ಗೆ ಪ್ರಸ್ತಾಪಿಸುತ್ತ ಮಕ್ಕಳಿಗೆ ಇರುವ ಆಟಗಳ ಬಗೆಗಿನ ಕುತೂಹಲ ಗಮನಿಸಿ ಅದನ್ನು ಈಡೇರಿಸುವ ಉದ್ದೇಶದಿಂದ ಆಡಿಸಿದ ಆಟ ‘ಇಕ್ವಿಲಿಬ್ರಿಯಂ’ ಅಂದರೆ ‘ಸಮತೂಕದ ಆಟ’ ಆಡಿಸುತ್ತಾರೆ. ಈ ಆಟ ಎಲ್ಲ ಮಕ್ಕಳಿಗೂ ಇಷ್ಟವಾಗುತ್ತದೆ. ಪ್ರಬಂಧದಲ್ಲಿ ಆಟದ ಕುರಿತು ನಿರೂಪಿಸುವ ರೀತಿ ಸೊಗಸಾಗಿದೆ. ಇಲ್ಲಿ ಲೇಖಕಿಯ ಮಾತೊಂದು ಗಮನಿಸುವಂತಿದೆ. “ಹೀಗೆ ಶಾಲೆ ಎಂದರೆ ಮಕ್ಕಳು ಮತ್ತು ಶಿಕ್ಷಕರ ನಡುವೆ ಸಮತೋಲನ ಇರಲೇಬೇಕು” ಎಂಬುದು. ಸಮತೋಲನ ಕಾಪಾಡಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ವಿದ್ಯಾರ್ಥಿಗಳ ಜೊತೆಯಲ್ಲಿದ್ದುಕೊಂಡೇ ಸಮನ್ವಯ ಸಾಧಿಸಬೇಕು. ಮಕ್ಕಳಿಗೆ ಕಲಿಸಿ ಮಕ್ಕಳಿಂದ ತಾನೂ ಸದಾ ಕಲಿಯುವಂತಾಗಬೇಕು ಎನ್ನುತ್ತ ಆಟ ಆಗಲಿ ಪಾಠ ಆಗಲಿ ಪೂರ್ವಯೋಜನೆ ತುಂಬಾ ಮುಖ್ಯ ಎನ್ನುವ ಮೂಲಕ ಯೋಜನಾಬದ್ಧ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬುದನ್ನು ಸಾಧಿಸಲು ಪ್ರಯತ್ನಿಸಿದ್ದಾರೆ.
ಇನ್ನೊಂದು “ಘಾತಕರು” ಎಂಬ ಶೀರ್ಷಿಕೆಯ ಬರಹವೊಂದಿದೆ. ಈ ಶೀರ್ಷಿಕೆಯೇ ಆಘಾತವುಂಟು ಮಾಡುತ್ತದೆ. ಶಿಕ್ಷಕಿ ಜಾತೀಯ ನೆಲೆಗಟ್ಟಿನಲ್ಲಿ ಮಕ್ಕಳನ್ನು ನೋಡಿದ ಪರಿಣಾಮ ತನ್ನನ್ನು ಕೀಳಾಗಿ ನೋಡಿದರೆಂಬ ಭಾವದಿಂದ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿನಿಯ ಘಟನೆಯನ್ನು ವಾಸ್ತವ ಎಂಬಂತೆ ಚಿತ್ರಿಸಿರುವ ಲೇಖಕಿ, ಅದು ಕನಸೆಂಬುದರ ಅರಿವಾದಾಗ ಬೆಚ್ಚಿಬೀಳುತ್ತಾರೆ. ವಾಸ್ತವವಾಗಿ ನಿಜ ಜೀವನದಲ್ಲಿ ಇನ್ನೂ ಜಾತಿ ಧೋರಣೆಯನ್ನು ಅನುಸರಿಸುತ್ತಿರುವ ಶಿಕ್ಷಕರಿರುವುದನ್ನು ನೆನೆದು ನೊಂದುಕೊಳ್ಳುವ ಲೇಖಕಿ ಇಂಥ ಶಿಕ್ಷಕರೂ ಕೂಡ ಘಾತಕರು ಎಂಬ ನಿಟ್ಟುಸಿರಿನೊಂದಿಗೆ ನಿಷ್ಠುರ ಮಾತುಗಳನ್ನಾಡಿದ್ದಾರೆ.

ಮತ್ತೊಂದು ಪ್ರಬಂಧ “ಉಡಿಯಕ್ಕಿ ಹಾಕತಾರ ಸಾಲಿ ಬಿಡಿಸಿ ಕಳಸತಾರ” ಬಾಲ್ಯ ವಿವಾಹದ ಕುರಿತಿರುವ ಈ ಪ್ರಬಂಧದಲ್ಲಿ ಲೇಖಕಿ ಬಾಲ್ಯವಿವಾಹಕ್ಕೆ ಕಾರಣಗಳನ್ನು ಹುಡುಕುತ್ತ “ಅವರಜ್ಜಿ ಸಾಯೂದರೊಳಗ ನಾಲ್ಕ ಅಕ್ಕಿಕಾಳು ಹಾಕಬೇಕು ಅಂತ ಮನಸಿಗೆ ಹಚಗೊಂಡಾಳ, ಅದಕ್ಕ ಮದುವಿ ಮಾಡಾಕತ್ತೀವಿ” ಅಂತ ಸಬೂಬು ಹೇಳುವವರಿಗೆ ನೀವು ಈ ರೀತಿ ಮಾಡಿದರ ಅವಳ ತಲಿ ಮ್ಯಾಲಲ್ಲ ಬಾಯಾಗ ಅಕ್ಕಿಕಾಳು ಹಾಕಬೇಕಾಗತ್ತ ಜ್ವಾಕಿರ್ರಿ ! ಅನ್ನುವ ಎಚ್ಚರಿಕೆ ನೀಡುತ್ತಾರೆ. ಆಡಿಕೊಂಡು ಹಾಡಿಕೊಂಡು ಶಾಲೆಯಲ್ಲಿ ಪಾಠ ಕಲಿಯುತ್ತಿರುವ ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣ ಮೊದಲಿನಂತೆ ಉಳಿಯಲಾಲರು. ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಆಗುವ ಬದಲಾವಣೆಗಳು ಸಹಜ ಕ್ರಿಯೆ. ಆದರೆ ಕೆಲವು ಪಾಲಕರು ಅತಿಯಾದ ಕಟ್ಟಳೆಗಳನ್ನು ಹಾಕುವ ಮೂಲಕ ಮಾನಸಿಕವಾಗಿ ಮಕ್ಕಳು ಕುಗ್ಗುವಂತೆ ಮಾಡಿ, ಕಲಿಕೆಯಲ್ಲಿ ಮೊದಲಿನಂತೆ ಮುಕ್ತವಾಗಿ ತೊಡಗಿಕೊಳ್ಳದಂತೆ ಮಾಡಿ ಬಿಡುತ್ತಾರೆ. ಮೊದಲಿನ ಚಟುವಟಿಕೆ ಇಲ್ಲವಾಗಿ ಬಿಡುತ್ತದೆ. ಇಂಥ ಹದಿಹರೆಯದ ಹೆಣ್ಣು ಮಕ್ಕಳ ಪ್ರತಿನಿಧಿಯಾಗಿ ಭಾವನಾ ಎಂಬ ಹುಡುಗಿಯ ಘಟನೆಯನ್ನಿಟ್ಟುಕೊಂಡು “ಹೂವನ್ನು ಕತ್ತರಿಸಿದರೆ ಫಲ ಸಿಕ್ಕೀತಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ. ಹಕ್ಕಿಯಂತೆ ಹಾರಲು ಬಿಟ್ಟು ತಾರೆಗಳನ್ನು ಮುಟ್ಟುವ ಚೈತನ್ಯ ತುಂಬಿ ಏರಲು ಏಣಿಯಾಗೋಣ ಎಂಬ ಸಂದೇಶ ಸಾರುತ್ತಾರೆ. ಶಿಕ್ಷಕರು ಹುಡುಗಿಯರ ಸಂವೇದನೆ ಅರಿತು ನಡೆಯಬೇಕು. ಪರಸ್ಪರ ಸೌಹಾರ್ದತೆಯೊಂದಿಗೆ ಕೂಡಿ ಕಲಿಯುವ ಮತ್ತು ಕಾಲ ಕಳೆಯುವ ಅವಕಾಶವಿರಬೇಕು. ಶಿಕ್ಷಕ- ಶಿಕ್ಷಕಿಯರು ಮಾದರಿ ವ್ಯಕ್ತಿತ್ವದೊಂದಿಗೆ ಮಕ್ಕಳಿಗೆ ಸ್ಫೂರ್ತಿಯ ಚಿಲುಮೆಯಾಗಿರಬೇಕಾದ ಅಗತ್ಯವಿದೆ.

ಪ್ರೊಜೆಕ್ಟ್ ನ ಮಾದರಿಯೊಂದನ್ನು ಮಾಡಿಸುವ ಹಿನ್ನೆಲೆಯಲ್ಲಿ ಎರಡು ಸ್ತರದ ಕುಟುಂಬಗಳ ಮಕ್ಕಳ ಕಲಿಕೆ ಮತ್ತು ಕ್ರಿಯಾಶೀಲತೆಯನ್ನು ಮುಂದಿಟ್ಟುಕೊಂಡು ಚರ್ಚಿಸುತ್ತ, ಇದ್ದವರು ಮತ್ತು ಇಲ್ಲದವರು ಇಂಥ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ವಿಶ್ಲೇಷಿಸುತ್ತಾರೆ. ಮಕ್ಕಳಿಗೆ ಇದರಿಂದ ಏನು ಕಲಿಕೆಯಾಗಬೇಕಿತ್ತು ಅದನ್ನೇ ಮರೆತಂತಾಗಿದೆ. ವಯೋಮಾನ ಮೀರಿ ಪ್ರೊಜೆಕ್ಟ್ ಗಳನ್ನು ನೀಡುವ ಮೂಲಕ ಶಿಕ್ಷಕರೂ ಈ ಬಗ್ಗೆ ಹಳಿ ತಪ್ಪಿದ್ದಾರೆ ಎನ್ನುತ್ತಾರೆ. ಇಂಥ ಪ್ರೊಜೆಕ್ಟ್ ಕಾರ್ಯದಲ್ಲಿ ಶಿಕ್ಷಕರು ಮತ್ತು ಪಾಲಕರೇ ಮುಂದಾಗಿ ಮಾಡಿಕೊಡಬಾರದು. ಅನುಕೂಲಿಸುವವರಾಗಿ ಮಾರ್ಗದರ್ಶನ ನೀಡಬೇಕೆಂಬುದರ ವಾಸ್ತವತೆ ಅರಿಯಬೇಕು.

ಪ್ರಯಾಣಕ್ಕೆ ಹೊರಟು ಮಕ್ಕಳು ಬಸ್ ಹತ್ತಿದರೆ ಸಾಕು, ನೇರವಾಗಿ ಡ್ರೈವರ್ ಪಕ್ಕದ ಸೀಟಿನಲ್ಲಿ ಕೂಡಲು ಓಡಿ ಹೋಗುತ್ತಾರೆ. ಇದಕ್ಕೆ ಕಾರಣಗಳನ್ನು ಕೊಡುವ ಲೇಖಕಿ ಸಾಧ್ಯವಾದಷ್ಟು
ಮಕ್ಕಳನ್ನು ಮುಂದೆ ಕೂಡ್ರಿಸಿ ಮುಂದಿನ ಬದುಕಿನ ದಾರಿಯನ್ನು ಎಂಜಾಯ್ ಮಾಡಲು ಬಿಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸುತ್ತಾರೆ. ಕಲಿಕೆ ಎಂಬುದು ಅಭೂತಪೂರ್ವ ಅನುಭವವಾಗಿದ್ದು, ಅದು ಯಾವುದರಿಂದಲಾದರೂ, ಯಾವ ಸ್ಥಳದಿಂದಾದರೂ ಸಿಗಲಿ ಅದನ್ನು ದಕ್ಕಿಸಿಕೊಂಡು ಬೆಳೆವ ಹೆಚ್ಚುಗಾರಿಕೆ ಮಕ್ಕಳಲ್ಲಿ ಹುಟ್ಟುವಂತಾಗಬೇಕು ಎನ್ನುವ ಅವರು ಇದಕ್ಕಾಗಿ “ಇರಲಿ ಮಕ್ಕಳಿಗಾಗಿ ಮುಂದಿನ ಒಂದು ಸೀಟ್ ರಿಸರ್ವೇಶನ್” ಎನ್ನುತ್ತಾರೆ.

ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಕಾಲಘಟ್ಟದಲ್ಲಿ ಹೊಸ ಪಠ್ಯ ಪುಸ್ತಕಗಳನ್ನು ನೋಡುವುದೇ ಒಂದು ಸೌಭಾಗ್ಯ. ಮುಟ್ಟಿ ತೆರೆದು ಓದುವ ಅವಕಾಶ ಸಿಕ್ಕರೆ ಅವರಂತ ಭಾಗ್ಯವಂತರು ಬೇರೆ ಇಲ್ಲವೆಂದೇ ಹೇಳಬೇಕು. ಈ ಸಂದರ್ಭವನ್ನು ಅನುಭವಿಸಿರುವ ಲೇಖಕಿ ಭುವನಾ ಇಂದು ಉಚಿತ ಪಠ್ಯ ಪುಸ್ತಕ ನೀಡುತ್ತಿರುವುದನ್ನು, ಈ ಬಗ್ಗೆ ಪಾಲಕರು ಹಾಗೂ ಮಕ್ಕಳು ಇಟ್ಟುಕೊಂಡಿರುವ ಧೋರಣೆಯ ಕುರಿತು ವಿಶ್ಲೇಷಿಸುತ್ತ, ಪುಸ್ತಕಗಳ ಬಗೆಗಿನ ಮಹತ್ವ ಮತ್ತು ಜೀವನದಲ್ಲಿ ಅವುಗಳಿಗಿರುವ ಮೌಲ್ಯವನ್ನು “ಹಳೇ ಬುಕ್ಕು! ಹೊಸ ಲುಕ್ಕು…” ಪ್ರಬಂಧದಲ್ಲಿ ಕಟ್ಟಿಕೊಟ್ಟಿದ್ದು, ವ್ಯಥೆಯಾದ ನಮ್ಮ ಜೀವನದಲ್ಲೂ ಕಾಯ್ದಿಟ್ಟ ಪುಸ್ತಕಗಳು ನಮ್ಮ ಜೀವನದ ಕಥೆಯನ್ನೇ ಬದಲಿಸುತ್ತಿದ್ದವು ಎನ್ನುತ್ತಾರೆ. ಮಕ್ಕಳಲ್ಲಿ ಪುಸ್ತಕವನ್ನು ಪ್ರೀತಿಸುವ ಗುಣ ಬಾಲ್ಯದಿಂದಲೇ ಬೆಳೆಯಬೇಕು. ಶಿಕ್ಷಕರು ಇದಕ್ಕೆ ಮಾದರಿಯಾಗಿರಬೇಕು. “ಎಲ್ಲಿ ಹೋದವೋ ಆ ವಿಶ್ವಕೋಶಗಳು?…” ಎ‍ನ್ನುವ ಪ್ರಬಂಧದಲ್ಲಿ ಅಂಕಲಿಪಿಯನ್ನು ಆ ಕಾಲದ ವಿಶ್ವಕೋಶವೆಂದು ಪರಿಗಣಿಸುತ್ತಾರೆ.

“ಅಂದಿನ ಮೋಜು ಇಂದಿನ ಗಲೀಜು” ಅನ್ನೋ ಪ್ರಬಂಧದಲ್ಲಿ ಶಿಕ್ಷಕಿ ಭುವನಾ ಅವರು ಅರ್ಧರ್ಧ ಬಳಪ ತಿಂದಿರುವುದಾಗಿ ಹೇಳಿದ್ದಾರೆ. ಬಾಯುಗುಳು ಹಾಕಿ ಪಾಟಿ ಸ್ವಚ್ಛ ಮಾಡಿದ್ದನ್ನು ಸಂಭ್ರಮದಿಂದಲೇ ಹಂಚಿಕೊಂಡಿದ್ದಾರೆ. ಇದು ಅಂದಿನ ವಾಸ್ತವ. ನಾನು ಚಿಕ್ಕವನಿದ್ದಾಗ ಪಾಟಿ ಒರೆಸಲು ಉಗುಳು ಹಾಕುತ್ತಿದ್ದುದನ್ನು ನೋಡಿದ ನಮ್ಮ ದೊಡ್ಡಪ್ಪನಿಂದ ಹೊಡೆತ ತಿಂದು, ಪಾಟಿ ಒರೆಸಲು ಚಿಕ್ಕ ಬಾಟಲಿಯಲ್ಲಿ ನೀರು ತುಂಬಿಕೊಂಡು ಹೋಗಿ ಬ್ಯಾಗಲ್ಲೆಲ್ಲ ಚೆಲ್ಲಿಕೊಂಡು ರಾದ್ಧಾಂತ ಮಾಡಿದ್ದು ನೆನಪಾಯಿತು. ಇಂದು ಇಷ್ಟೆಲ್ಲ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿದರೂ ಇನ್ಫೆಕ್ಷನ್ ಆಗುತ್ತೆ ಅಂತ ಪರಸ್ಪರರಲ್ಲಿ ಅಫೆಕ್ಷನ್ ಕಡಿಮೆಯಾಗ್ತಿದೆ ಅಂತಿದ್ದಾರೆ.

ಮಕ್ಕಳು ಎಲ್ಲೆಂದರಲ್ಲಿ ಬರೆಯುವ ಅಭಿಲಾಷೆ ಮತ್ತು ಪಾಲಕರು ಕೈ ಹಿಡಿದು ತೀಡಿಸುವ ರೀತಿಯನ್ನು ವಿವರಿಸುತ್ತ “ಗೀಚಲು ಬಿಟ್ಟರೆ ತೋಚುವ ದಾರಿಗಳು ನೂರಾರು” ಎಂದು ಮಕ್ಕಳ ಗೀಚುವ ಹಂಬಲಕ್ಕೆ ಗದರಿಸಬೇಡಿ, ಅದರ ಕಲಿಕೆಯ ವಿಶ್ವಾಸವನ್ನು ಚಿಗುರಲ್ಲೇ ಚಿವುಟದಿರಿ ಎನ್ನುತ್ತಾರೆ. ಶಿಕ್ಷಕರ ವೃತ್ತಿ ಗೌರವಯುತವಾದುದಾಗಿದ್ದು, ಕೆಲವರು ಶಿಕ್ಷಕರನ್ನು ದೇವರಿಗೆ ಹೋಲಿಸುವುದನ್ನು ಕಂಡ ಲೇಖಕಿ “ನಾವಷ್ಟು ಯೋಗ್ಯರೆ?” ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗುತ್ತಾರೆ. ನಾವಷ್ಟು ಯೋಗ್ಯರೆ? ಎಂದು ಪ್ರಶ್ನಿಸಿಕೊಳ್ಳುತ್ತಾ, ಮಕ್ಕಳ ಮನಸ್ಥಿತಿ ಅರಿತು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರನ್ನು ದೇವರೆಂದು ಪರಿಗಣಿಸುವುದು ಮುಖ್ಯ ಎಂಬ ಭಾವಕ್ಕೆ ಬಂದು ನಿಲ್ಲುತ್ತಾರೆ.

ಶಿಕ್ಷಣದ ದೋಣಿ ನಡೆಸುವ ನಾವಿಕನಂತೆ ಮಾತನಾಡಿರುವ ಲೇಖಕಿ ಶಾಲಾ ಶಿಕ್ಷಣದಲ್ಲಿ ಬಳಸುವ ಕೋಲನ್ನು “ಕೋಲಲ್ಲ ಅದು ಹರಿಗೋಲು” ಎನ್ನುತ್ತಾರೆ. ಹರಿಗೋಲು ಬಿಟ್ಟರೆ ದೋಣಿ ಸಾಗದು, ಆದರೆ ಈ ಕೋಲು ಬಿಟ್ಟರೆ ಶಿಕ್ಷಣ ನಿಲ್ಲಲಾರದು. ಅಂಜಿ ಮಾಡುವುದಕ್ಕಿಂತ ಅರಿತು ಮಾಡುವ ಭಾವ ಹುಟ್ಟು ಹಾಕಬೇಕಾದ ಅಗತ್ಯವಿದೆ. ಶಿಕ್ಷಕರ ಕೈಲಿರುವ ಕೋಲಿನ ತುದಿ ಪ್ರೀತಿಯ ತುದಿಯಾದರೆ ಮಕ್ಕಳ ಕೈಗೆ ಹೋಗಿ ಮುತ್ತಿಡುವುದು ಕಾಳಜಿಯ ತುದಿ ಎಂದೋ, “ನಿಪುಣತನದಿಂದ ಕೋಲನ್ನು ಬಳಸಿದಾಗ ಮಾತ್ರ ಅದು ಕಲಿಕೆಗೆ ಊರುಗೋಲು ಆಗುತ್ತದೆ. ಇಲ್ಲವಾದರೆ ಕಲಿಕಾ ಸನ್ನಿವೇಶವನ್ನು ಕೊಲ್ಲುವ ಉರುಲಾಗುತ್ತದೆ” ಎಂಬ ಮಾತುಗಳಲ್ಲಿ ಅರ್ಥವಿದ್ದರೂ, ಒಳ್ಳೆಯ ಭಾವ ಇದ್ದರೂ ಶಿಕ್ಷೆಯನ್ನು ಬೆಂಬಲಿಸಲಾಗದು. ನಮ್ಮ ಓದಿನ ಕಾಲಘಟ್ಟದಲ್ಲಿ ಈ ಕೋಲಿಗೆ ಹೆದರಿಯೇ ಶಾಲೆ ಬಿಟ್ಟವರು ಹೆಚ್ಚು. ನಿರೀಕ್ಷಿತ ಕಲಿಕಾಫಲ ಮೂಡಿ ಬರದಿದ್ದಾಗ ನಮ್ಮನ್ನು ನಾವು ಪರಾಮರ್ಶೆ ಮಾಡಿಕೊಳ್ಳಬೇಕು. ಮಗುವಿನ ಮನೋಧೋರಣೆ ತಿದ್ದಲು ಮಗು ಸ್ನೇಹಿ ಮಾರ್ಗವೇ ಮುಖ್ಯ ಎನಿಸುತ್ತದೆ.

ಹೀಗೆ ಸಾಲಿಗುಡಿಯಲ್ಲಿನ ಪ್ರಬಂಧಗಳು ಸರಳ ಸುಂದರ ನಿರೂಪಣೆಯೊಂದಿಗೆ ಮೂಡಿ ಬಂದ ಪ್ರಬಂಧಗಳು. ಮಕ್ಕಳು ಹಾಗೂ ಮಕ್ಕಳ ಕಲಿಕೆಯ ಪರಿಸರ ಕುರಿತು ಹಲವು ನಿಟ್ಟಿನ ಚರ್ಚೆ ಹಾಗೂ ಸಂವಾದಕ್ಕೆ ಎಡೆ ಮಾಡಿಕೊಡುತ್ತವೆ. ಶ್ರೀಮತಿ ಭುವನಾ ಅಂಗಡಿಯವರಿಂದ ಶೈಕ್ಷಣಿಕ ಚಿಂತನೆಯ ಈ ನೆಲೆಯಲ್ಲಿ ಇನ್ನೂ ಹಲವು ಕೃತಿಗಳು ಮೂಡಿಬರಲಿ ಎಂದು ಹಾರೈಸುವೆ.


  • ಡಾ. ನಿಂಗು ಸೊಲಗಿ – ಸಾಹಿತಿಗಳು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW