ನಾವು ನೀವು ಎಲ್ಲರಿಲ್ಲಿ ಹತ್ತಿ ಜವನ ತೇರು… ಸಾವಿನೂರ ತಲುಪಿ ಮತ್ತೆ ಮರಳದಂಥ ಊರು…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಎಲ್ಲರೆಡೆಗು ಬರುವುದೊಮ್ಮೆ
ಮರೆಯದಂತೆ ಸಾವು
ಎಲ್ಲವನ್ನು ತೊರೆಸಿ ಕೊನೆಗೆ
ಬಿಡಿಸಿ ಭವದ ನೋವು
ನಾವು ನೀವು ಎಲ್ಲರಿಲ್ಲಿ
ಹತ್ತಿ ಜವನ ತೇರು
ಸಾವಿನೂರ ತಲುಪಿ ಮತ್ತೆ
ಮರಳದಂಥ ಊರು
ಬುವಿಗೆ ಬಂದ ನೆಪವಿದೇಕೊ
ಅರಿಯದಾಗಿ ನೊಂದೆ
ಸವಿಯ ಕಹಿಯನುಣ್ಣುತಿಲ್ಲೆ
ಬೇಗೆಯೊಳಗೆ ಬೆಂದೆ
ಹೆತ್ತ ಮಡಿಲ ಹೊತ್ತ ಮಣ್ಣ
ಋಣವ ತೀರಿಸುತ್ತ
ಸತ್ತ ಮೇಲು ನಾಲ್ಕು ಜನರು
ನೆನೆಯುವಂತೆ ಚಿತ್ತ
ಹುಟ್ಟಿದೊಡನೆ ಸಾವುಗತ್ತಿ
ತೂಗುತಿಹುದು ಮೇಲೆ
ಹುಟ್ಟು ಹಾಕಿ ತಟದ ಕಡೆಗೆ
ಬಿಡಿಸಿ ಭವದ ನಾಲೆ.
- ಚನ್ನಕೇಶವ ಜಿ ಲಾಳನಕಟ್ಟೆ – (ಕವಿಗಳು, ಲೇಖಕರು) ಬೆಂಗಳೂರು
