‘ಸಾಧ್ಯ ಅಸಾಧ್ಯಗಳ ನಡುವೆ’ ಕಾದಂಬರಿ ಪರಿಚಯ



ಇಂದಿನ ಯುವ ಪೀಳಿಗೆ ಜೀವನದಲ್ಲಿನ ಹತಾಶೆಯಿಂದ ದುಶ್ಚಟಗಳತ್ತ ವಾಲುತ್ತಿದ್ದಾರೆ.ಈ ಹಾದಿಯಲ್ಲಿ ಸಾಗಿದವಳು ಪ್ರಕೃತಿ ಎನ್ನುವ ಪಾತ್ರದಾರಿ ಕೂಡಾ ಒಬ್ಬಳು. ಆಕೆ ಈ ದುಶ್ಚಟದಿಂದ ಹೊರಕ್ಕೆ ಬರುತ್ತಾಳಾ ಅಥವಾ ಇಲ್ಲ? ಎನ್ನುವ ರೋಚಕ ಕಾದಂಬರಿಯನ್ನು ಪ್ರಮೋದ್ ಕರಣಂ ಅವರು ಬರೆದಿದ್ದಾರೆ. ಪ್ರತಿಯೊಬ್ಬ ಮನೆಯ ಪುಸ್ತಕ ಮಳಿಗೆಯಲ್ಲಿ ಇರಬೇಕಾದಂತಹ ಪುಸ್ತಕ ಇದು.ಓದಿ…

ಪುಸ್ತಕ : ‘ಸಾಧ್ಯ ಅಸಾಧ್ಯಗಳ ನಡುವೆ’ 
ಲೇಖಕರು : ಪ್ರಮೋದ್ ಕರಣಂ
ಪ್ರಕಾಶಕರು : ಶಾಶ್ವತ ಪಬ್ಲಿಕೇಶನ್
ಬೆಲೆ : ರೂ  ೧೮೦ -೦೦ ಅಂಚೆ ವೆಚ್ಚ ಉಚಿತ
ದೊರೆಯುವ ಸ್ಥಳ : ೯೭೪೩೨೨೪೮೯೨ ಗೆ ವಾಟ್ಸಪ್ಪ್ ಮಾಡಿ ಮನೆ ಬಾಗಿಲಿಗೆ  ಪಡೆಯಿರಿ.

ಲೇಖಕರ ಚೊಚ್ಚಲ ಕಾದಂಬರಿ ಇದಾಗಿದ್ದು,  ದಿನಾಂಕ ಡಿಸೆಂಬರ್ ೧೭,೨೦೨೦ರಂದು ಕಲ್ಬುರ್ಗಿಯಲ್ಲಿ ಈ ಭಾಗದ ಖ್ಯಾತ ಸಾಹಿತಿಗಳಾಗಿರುವ ಪ್ರೊಫೆಸರ್ ವಸಂತ ಕುಷ್ಟಗಿ ರವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು.

ಪ್ರೊಫೆಸರ್ ವಸಂತ ಕುಷ್ಟಗಿಯವರು “ನಾನು ಓದಿದ ಕಾದಂಬರಿಗಳಲ್ಲಿ ತ ರಾ ಸು ರವರ ‘ಮಸಣದ ಹೂವು’ ಕಾದಂಬರಿ ನನಗೆ ತುಂಬ ಇಷ್ಟವಾಗಿದ್ದು, ಅದರ ನಂತರ ಇದೇ ಕಾದಂಬರಿ ನನಗೆ ತುಂಬ ಇಷ್ಟವಾಗಿದೆ ” ಎಂಬ ಮೆಚ್ಚುಗೆಯ ನುಡಿಗಳೊಂದಿಗೆ  ಹಾರೈಸಿರುತ್ತಾರೆ.

ಈಗಿನ ಯುವ ಪೀಳಿಗೆ ಮತ್ತು ಅದರಲ್ಲಿಯೂ ಹೆಣ್ಣುಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಮಾಜ ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದೆ ಎನ್ನುವ ಎಂದು ಯೋಚಿಸುವಂತೆ ಮಾಡಿದೆ. ಇಂದಿನ ತಲೆಮಾರಿನ ಯುವಕ-ಯುವತಿಯರ ಬದುಕಿನ ಚಿತ್ರಣವನ್ನು ಆಪ್ತಶೈಲಿಯಲ್ಲಿ ತೆರೆದಿಡುವ ಲೇಖಕರು ತಾವು ಕಂಡ ಚಿತ್ರಗಳನ್ನೇ ಕಾದಂಬರಿ ರೂಪದಲ್ಲಿ ಕಟ್ಟಿ ಕೊಟ್ಟಿರುವುದರಿಂದ, ಕಾದಂಬರಿಯನ್ನು ನೈಜ್ಯವಾಗಿಸುವಲ್ಲಿ ಗೆದ್ದಿದ್ದಾರೆ ಮತ್ತು ಓದುವಾಗ ನಮ್ಮ ಸುತ್ತಲಲ್ಲೇ ನಡೆಯುವಂತೆ ಭಾಸವಾಗುತ್ತದೆ.

ಹೊಸಪೇಟೆ ಹಾಗೂ ಕಲ್ಬುರ್ಗಿಯಲ್ಲಿ ಕೌಟುಂಬಿಕ ಕಟ್ಟುಪಾಡುಗಳ ನಡುವೆ ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ, ನೌಕರಿಗಾಗಿ ಬೆಂಗಳೂರಿಗೆ ಬಂದಾಗ, ಅಲ್ಲಿನ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಯುವಕರೊಂದಿಗೆ ಯಾವುದೇ ಮುಚ್ಚುಮರೆ, ಸಂಕೋಚ ಹಾಗೂ ಹಿಂಜರಿಕೆಯಿಲ್ಲದೆ ಮುಕ್ತವಾಗಿ ಸಿಗರೇಟು ಸೇದುವುದನ್ನು ನೋಡಿ ದಂಗಾಗುವ ಲೇಖಕರು, ಅದೇ ಕಥಾವಸ್ತುವಾಗಿ ಈ ಕಾದಂಬರಿಯಲ್ಲಿ ನಿಲ್ಲುತ್ತದೆ ಎಂದು ಲೇಖಕರು ತಮ್ಮ ಅನುಭವದ ಮಾತನ್ನು ಹಂಚಿಕೊಂಡಿದ್ದಾರೆ.

ಹಾಗೂ ಲೇಖಕರು ಹೇಳುವಂತೆ “ಯತ್ರ ನಾರ್ಯಸ್ತು ಪೂಜ್ಯಂತೆ  ರಮಂತೆ ತತ್ರ ದೇವತಃ ” ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ.
ಕೆಟ್ಟ ಮಗನನ್ನು ನೋಡಿದ್ದೇವೆ…
ಕೆಟ್ಟ ಮಗಳನ್ನು ನೋಡಿದ್ದೇವೆ…
ಕೆಟ್ಟ ತಂದೆನು ನೋಡಿದ್ದೇವೆ…



ಆದರೆ
ಕೆಟ್ಟ ತಾಯಿ ಇರುವುದು ಅಸಾಧ್ಯದ ಮಾತು ಎಂದುಕೊಳ್ಳುತ್ತಿರುವಾಗಲೇ, ಈಗಿನ ತಲೆಮಾರಿನ ಯುವತಿಯರು ದುಶ್ಚಟಗಳಿಗೆ ಬಲಿಯಾಗಿರುವುದನ್ನು ಹಾಗೂ ಬಲಿಯಾಗುತ್ತಿರುವುದನ್ನು ನೋಡಿದರೆ, ಮುಂದೆ ಇವರೇ ತಾಯಂದಿರಾದಾಗ, ಭವಿಷ್ಯದಲ್ಲಿ ಆ  ಅಸಾಧ್ಯದ ಮಾತು ಸಾಧ್ಯವಾಗಿ, ಕೆಟ್ಟ ತಾಯಿಯನ್ನು ನೋಡುವ, ಕೆಟ್ಟ ದಿನಗಳು ಬರಬಹುದೇ? ಎಂಬ ಆಲೋಚನೆ ಈ ಕಾದಂಬರಿ ಓದಿದ ನಂತರ ಖಂಡಿತಾ ಬರುತ್ತದೆ.

ವಿದೇಶಿ ಸಂಸ್ಕೃತಿಯ ನುಂಗುತ್ತಾ,  ನಮ್ಮ ಸಂಸ್ಕೃತಿಯ ಮೇಲೆ ಬಿರುಗಾಳಿಯೆಬ್ಬಿಸಿ ನಮ್ಮತನವನ್ನು ನಿಧಾನವಾಗಿ  ಸರ್ವನಾಶ ಮಾಡುತ್ತಿದ್ದೇವೆಯೇ? ಎನ್ನುವ ಪ್ರಶ್ನೆ ಕೂಡ ಕೃತಿಯನ್ನು ಓದುವಾಗ ನಮ್ಮನ್ನು  ಕಾಡದೇ ಇರದು. ಇನ್ನು ಈ ಕಾದಂಬರಿಯ ಬಗ್ಗೆ ಹೇಳುವುದಾದರೆ,  ಕಥಾ ನಾಯಕ ಗಣೇಶ್ ದುಶ್ಚಟಗಳಿಗೆ ಬಲಿಯಾಗಿರುವ ಪ್ರಕೃತಿ ಎಂಬ ಯುವತಿಯನ್ನು ಭೇಟಿಯಾಗುತ್ತಾನೆ.  ಆಕೆ ಡ್ರಗ್ಸ್ ಎನ್ನುವ ದುಶ್ಚಟ ವ್ಯಸನಿಯಾಗಿರುತ್ತಾಳೆ. ಜೊತೆಗೆ ಆಕೆಯ ಸಹೋದ್ಯೋಗಿ ರುಚಿ ಎನ್ನುವ ಯುವತಿಯು ಕೂಡಾ ಡ್ರಗ್ಸ್ ವ್ಯಸನಿಯಾಗಿರುತ್ತಾಳೆ.

ಜೀವನದಲ್ಲಿನ ಹತಾಶೆಯ, ಮತ್ತು ಕನಸ್ಸುಗಳಿಗೆ ಮನೆಯವರ ಅಡ್ಡಿ, ಈ ದುಶ್ಚಟ ವ್ಯಸನಕ್ಕೆ ಕಾರಣವಾಗಿರುತ್ತದೆ. ಮುಂದೆ ಈ ಪ್ರಕೃತಿ  ಡ್ರಗ್ಸ್ ವ್ಯಸನದಿಂದ ದೂರ ಸರಿಯುತ್ತಾಳಾ? ಅವಳ ಕನಸುಗಳು ನನಸಾಗುತ್ತವೆಯೇ?  ಹಾಗೂ ರುಚಿಗೆ ಏನಾಗುತ್ತದೆ?  ಬದುಕಿನ ಸಾಧ್ಯ- ಅಸಾಧ್ಯ ಗಳ ನಡುವಿನ ಪೈಪೋಟಿಯಲ್ಲಿ ಸಾಧ್ಯತೆ ಕಡೆಗೆ ಹೆಜ್ಜೆ ಊರುವ ಗಣೇಶನ ಪ್ರಯತ್ನ ಸಫಲವಾಗುವುದೇ? ಇವರೆಲ್ಲರ ಬದುಕು ಯಾವ ತಿರುವು ಪಡೆಯುತ್ತದೆ ಎನ್ನುವುದು ಕತೆಯ ಅಂತರಾಳ.

ಒಂದೇ ದಿನದಲ್ಲಿ ಓದಬಹುದಾದ ಉತ್ತಮ ಪರಿಕಲ್ಪನೆಯ ಕೃತಿಯೇ ಇದಾಗಿದ್ದು ಸಾಮಾಜಿಕ ಪಿಡುಗನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆದಿರುವ ಲೇಖಕರ ಪ್ರಯತ್ನ ಮೆಚ್ಚುಗೆಯಾಗುತ್ತದೆ. ಪ್ರತಿಯೊಬ್ಬರು ಓದಿ ಸಂಗ್ರಹಿಸಿಟ್ಟು ಕೊಳ್ಳಬೇಕಾದಂತಹ ಕಾದಂಬರಿ ಇದಾಗಿದೆ.


  •  ರಾಜಶ್ರೀ ಆರ್
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW