‘ಸಂಜೆ ಮಲ್ಲಿಗೆ’ ಪುಸ್ತಕ ಪರಿಚಯ

ಆಶಾ ಮಯ್ಯರವರ ತೃತೀಯ ಕವನಸಂಕಲನ ಹಾಗೂ ಐದನೆಯ ಕೃತಿ “ಸಂಜೆ ಮಲ್ಲಿಗೆ” ಕವನ ಸಂಕಲನದ ಶೀರ್ಷಿಕೆಯೇ ಬಹಳ ಸರಳ ಹಾಗೂ ಅತ್ಯಾಕರ್ಷಕ. ಹರಿನರಸಿಂಹ ಉಪಾಧ್ಯಾಯ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ: ಸಂಜೆ ಮಲ್ಲಿಗೆ ( ಕವನ ಸಂಕಲನ)
ಕವಯಿತ್ರಿ: ಆಶಾ ಮಯ್ಯ

“ಶಬ್ದಾರ್ಥೌ ಸಹಿತಂ ಕಾವ್ಯಂ” ಎಂಬ ಭಾಮಹನ ಕಾವ್ಯಸೂತ್ರವನ್ನು ಕವಿಯು ತನ್ನ ರಚನೆಯಲ್ಲಿ ಬಳಸಿಕೊಂಡಾಗ ಮಾತ್ರ ಆ ಕಾವ್ಯ ಉತ್ಕೃಷ್ಟವಾಗಲು ಸಾಧ್ಯ. ಒಂದು ಕಾವ್ಯದಲ್ಲಿ ಶಬ್ದ ಮತ್ತು ಅರ್ಥಗಳ ಸಾಮರಸ್ಯವಿರಬೇಕು. ಇಲ್ಲದಿದ್ದಲ್ಲಿ ಸ್ವಾರಸ್ಯರಹಿತವಾಗಿ ನೀರಸವಾಗುತ್ತದೆ. ಕೇವಲ ಶಬ್ದಗಳ ಸರಮಾಲೆಯನ್ನು ಹೆಣೆದ ಮಾತ್ರಕ್ಕೆ ಅದು ಕಾವ್ಯವಾಗಲಾರದು, ಕಾವ್ಯಾಸಕ್ತರನ್ನು ತಣಿಸಲಾರದು.

ಶ್ರೀಮತಿ ಆಶಾ ಮಯ್ಯರವರ ತೃತೀಯ ಕವನಸಂಕಲನ ಹಾಗೂ ಐದನೆಯ ಕೃತಿ “ಸಂಜೆ ಮಲ್ಲಿಗೆ” ಕವನ ಸಂಕಲನದ ಶೀರ್ಷಿಕೆಯೇ ಬಹಳ ಸರಳ ಹಾಗೂ ಅತ್ಯಾಕರ್ಷಕ. ಹೇಗೆ ಮುಸ್ಸಂಜೆಯ ರಮಣೀಯ ದೃಶ್ಯ ನೋಡುವ ಕಣ್ಣುಗಳನ್ನು ತಣಿಸುವುದೋ, ಬೀಸುವ ತಂಗಾಳಿ ಮೈಗೆ ಹಾಯೆನ್ನಿಸುವುದೋ, ಹಾಗೆ ಸಂಜೆ ಹೊತ್ತಿನಲ್ಲಿ ಅರಳುವ ಸಂಜೆ ಮಲ್ಲಿಗೆ ಕೂಡ ಪುಷ್ಪಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತದೆ. ಹಾಗೆಯೇ ಈ ಕೃತಿ ಕೂಡಾ ಓದುಗರ ಹೃನ್ಮನವನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ಒಳಗಿನ ಪುಟಗಳನ್ನು ತಿರುವಿದಾಗ…. ಮೊದಲಿಗೆ ವಾಗ್ದೇವಿ, ರಾಮ, ಕೃಷ್ಣರನ್ನೊಳಗೊಂಡ ಕವನಗಳು ನಮ್ಮನ್ನು ಭಕ್ತಿ ಸಾಗರದಲ್ಲಿ ತೇಲಿಸಿಬಿಡುತ್ತವೆ. ಜೊತೆಗೆ ಸದಾ ಜೊತೆಗಿದ್ದು ಸಲಹು ಎಂಬ ಬಿನ್ನಹವು, ಭಗವಂತನೇ ಸರ್ವಶಕ್ತ ಎಂಬುದನ್ನೂ ಸ್ಪಷ್ಟಪಡಿಸುತ್ತದೆ.. ಹನಿಸು ಕರುಣೆಯ ಜಲವ ಎಂಬ ರಚನೆಯಲ್ಲಿ…

ಅತಿಯಾದ ಆಸೆಗಳು ಎನಗಿಲ್ಲ ಹಂಸಿನಿಯೆ
ಹಿತವಾದ ಕವನಗಳ ಬರೆಯಿಸಮ್ಮ|

ಎಂದು ಕವಯಿತ್ರಿ ಶಾರದಾ ಮಾತೆಯಲ್ಲಿ ಕೇಳಿಕೊಳ್ಳುವಾಗ, ಆಸೆಗಳ ಮಿತಿಯನ್ನು ಕೂಡಾ ನಿವೇದಿಸಿಕೊಂಡಿರುವುದನ್ನು ಕಾಣಬಹುದು

ಹೋಗದಿರು ನೀ ತೊರೆದು ಬಾಗುವೆನು ನಿನ್ನಡಿಗೆ
ಅಳಿಸು ನನ್ನೊಳಗಿರುವ ಮೌಢ್ಯವನ್ನು|

ಎಂದು ಚರಣ ಕಮಲಗಳಲ್ಲಿ ಬೇಡುವ ಸಾಲು ಅರ್ಥಪೂರ್ಣವೂ, ಔಚಿತ್ಯವೂ ಆಗಿವೆ.

ಕನ್ನಡಿಗರಾಗಿ ಕನ್ನಡದ ಕಂಪನ್ನು ಕವನದ ಮೂಲಕ ಹರಿಸದಿದ್ದರೆ ಹೇಗೆ.. ಕನ್ನಡದ ಘಮಲು ಕವನವು ಕನ್ನಡದ ಮಾಧುರ್ಯತೆಯನ್ನು ಉಣಬಡಿಸುತ್ತದೆ..

ಅವಳೆಂಬ ಬೆಳಕು ಕವನ ಇಲ್ಲಿ ವಿಶೇಷವಾಗಿ ಗೋಚರಿಸುತ್ತದೆ.

ಅವಳೆಂಬ ಬೆಳಕಿನಲಿ ಅನುದಿನವು ಬೆಳಗುವೆನು
ಅವಳಲ್ಲವೇ ಎನ್ನ ಮನೆ ಮನದ ದೀಪ |
ಅವಳನ್ನು ಅನುಸರಿಸಿ ಸಾಗಿರುವೆ ಬಲು ದೂರ
ಅವಳಿಲ್ಲವೆಂದಾಗ ಬದುಕೊಂದು ಕೂಪ ||

ಇಲ್ಲಿ ಅವಳು ಎಂದರೆ ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಉತ್ತರ ಮಾತ್ರ ಸರಳ ಹಾಗೂ ಸುಂದರ. ಅವಳು ಅಂದರೆ ಹೆಣ್ಣು.. ತಾಯಿ, ಮಡದಿ, ಮಗಳು ಈ ಮೂವರಲ್ಲಿ ಯಾರಾದರೂ ಆಗಿರಲು ಸಾಧ್ಯ. ಯಾರ ಭಾವ ಎಂತಿದೆಯೋ ಅಂತೆ ಹೊಂದುವ ಸುಂದರ ಭಾವಾಭಿವ್ಯಕ್ತಿ ಎಂದರೆ ತಪ್ಪಲ್ಲ.

ಸತ್ಯ-ಮಿಥ್ಯ ಕವನದಲ್ಲಿ ನಾವು ಸುಮ್ಮನಿದ್ದ ಮಾತ್ರಕ್ಕೆ ಹೇಡಿಗಳು ಎಂದು ಭಾವಿಸದಿರಿ, ನಿಮ್ಮ ಕೊಂಕು ನುಡಿಗಳಿಗೆ ಎಂದೂ ಮನ್ನಣೆ ದೊರೆಯುವುದಿಲ್ಲ. ಚುಚ್ಚಿ ಮಾತಾಡುವುದರಿಂದ ಗೆದ್ದೆ ಎಂದು ತಿಳಿಯಬೇಡಿ ಎಂದು ಕುಹಕಿಗಳನ್ನು ತಿವಿದಂತಿದೆ..

ಅವ್ವನಿಲ್ಲದ ತವರು ಕವನದಲ್ಲಿ..
ತವರೀನ ಮನೆಯಾಗ ಕಳೆಯಿಲ್ಲ ಬೆಳಕಿಲ್ಲ
ಸೂತಕದ ಛಾಯೆ ತುಂಬೈತೆ/ ಮನದಾಗ
ಕತ್ತಲೆಯ ತುಂಬಿ ತುಳುಕೈತೆ//

ಹೌದಲ್ಲವೇ, ಅಮ್ಮ ಎಂಬ ದೇವತೆ ಇಲ್ಲದಿದ್ದ ಮೇಲೆ ತವರಿನ ಮನೆಗೆ ಕಳೆ ಹೇಗೆ ಬರಲು ಸಾಧ್ಯ. ಏನೋ ಕಳೆದುಕೊಂಡ ಅನುಭವ.

ಕವನ ಸಂಕಲನದ ಶೀರ್ಷಿಕೆ ಗೀತೆ ಸಂಜೆ ಮಲ್ಲಿಗೆ ಓದುಗರ ಮನದಲ್ಲಿ ಹೊಸಭಾವ ಮೂಡಿಸುತ್ತದೆ. ತಿಂಗಳಿನ ಬೆಳಕಿನಲಿ ತಾನು ಇದ್ದೇನೆ ಎಂಬ ಸುಳಿವು ಕೊಡುತ್ತಾ, ಹಾಗೆ ಬಂದು ಹೂವಿನ ಮೈ ಸವರಿ ಹೀಗೆ ಮುಂದೆ ಸಾಗುವ ಪವನನ ಗೆಳೆತನವನ್ನು ಮಾಡುತ್ತಿದೆ ಎಂಬ ಮೇಲ್ನೋಟದ ವರ್ಣನೆಗಿಂತಲೂ ಒಳಗಿನ ಮರ್ಮ ಏನು ಎಂಬುದನ್ನು ಇಲ್ಲಿ ಕಂಡುಕೊಳ್ಳಬೇಕಿದೆ.

ಇವಿಷ್ಟೇ ಅಲ್ಲದೆ ಇನ್ನೂ ಹಲವಾರು ವೈವಿಧ್ಯಮಯ ರಚನೆಗಳನ್ನು ನಾವಿಲ್ಲಿ ಓದಿ ಆಸ್ವಾದಿಸಬಹುದು. ಇಲ್ಲಿರುವ ಒಟ್ಟು 75 ಕವನಗಳೂ ಸುಂದರವಾಗಿ ಮೂಡಿ ಬಂದಿದ್ದು ಓದುಗರನ್ನು ತಣಿಸುವುದರಲ್ಲಿ ಸಂದೇಹವಿಲ್ಲ.

ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಕನ್ನಡ ಓದುಗರಿಗೆ ಒಂದು ಸುಂದರ ಕೊಡುಗೆಯಾಗಿ ಸಂಜೆ ಮಲ್ಲಿಗೆ ಕವನ ಸಂಕಲನ ಹೊಮ್ಮಿ ಬಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ಕೃತಿಯು ಕವಯಿತ್ರಿ ಆಶಾ ಮಯ್ಯರಿಗೆ ಯಶಸ್ಸನ್ನು ತಂದು ಕೊಡಲಿ ಎಂದು ಹಾರೈಸುತ್ತೇನೆ.


  • ಹರಿನರಸಿಂಹ ಉಪಾಧ್ಯಾಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW