ಸಾತೊಡ್ಡಿ ಜಲಪಾತ ರಮಣೀಯತೆ

ಉತ್ತರ ಕರ್ನಾಟಕದ ಪ್ರಸಿದ್ಧ ಜಲಪಾತಗಳ ಪಟ್ಟಿಯಲ್ಲಿ ಬರುವ ಮತ್ತೊಂದು ಹೆಸರು ಸಾತೊಡ್ಡಿ ಜಲಪಾತ. ಎತ್ತರದಿಂದ ಕ್ಷೀರಧಾರೆಯಂತೆ ಧುಮಕುವ ನೀರನ್ನು ನೋಡಲು ಎರಡು ಕಣ್ಣು ಸಾಲದು. ಶಕುಂತಲಾ ಸವಿ ಅವರ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ… 


ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಸುಮಾರು 22 ಕಿಲೋಮೀಟರ್‌ ದೂರದಲ್ಲಿದೆ ಸಾತೊಡ್ಡಿ ಜಲಪಾತ . ಕಿರಿದಾದ ದಾರಿ, ತಿರುವುಗಳಿಂದ ಕೂಡಿದ ಘಾಟ್‌, ಕಲ್ಲು ಮಣ್ಣುಗಳಿಂದ ಕೂಡಿದ ಕಚ್ಚಾ ರಸ್ತೆಯಾಗಿದ್ದರೂ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯ ಸವಿಯುತ್ತ ಹೋದಂತೆ ಪ್ರಯಾಣ ಮಜವಾಗಿರುತ್ತದೆ. ಎಲ್ಲ ಅಡೆತಡೆ ದಾಟಿಕೊಂಡು ಜಲಪಾತದ ಹತ್ತಿರ ಹೋಗಲು ಸುಮಾರು 5 ಕಿಲೋಮೀಟರ್‌ ಕಾಲ್ನಡಿಗೆಗೆ ತಯಾರಾಗಿರಬೇಕು. ನಯನ ಮನೋಹರ ,ಅದ್ಭುತ, ಪ್ರಕೃತಿ ವಿಸ್ಮಯ ನೋಡಲು ಹೋಗುತ್ತಿದ್ದೀರಿ ಇಷ್ಟಾದರೂ ಕಷ್ಟ ಬೇಡವೇ ?

ಹಾಗೆ ಕಾಲ್ದಾರಿ ಸವೆಸಿ ಮುಂದೆ ಹೋಗುತ್ತಿದ್ದಂತೆ ಬಂತು ನೋಡಿ ಹಲವು ಅನಾಮಿಕ ಹರಿ-ತೊರೆಗಳಿಂದ ನಿರ್ಮಿತವಾದ ರೋಮಾಂಚನಗೊಳಿಸುವ ಚೀತೋಹಾರಿ ಸಾತೊಡ್ಡಿ ಜಲಪಾತ. ಸುತ್ತಲೂ ಹಸಿರು ಗುಡ್ಡ, ದೊಡ್ಡ ದೊಡ್ಡ ಕಲ್ಲು ಬಂಡೆಗಳು, ಆ ಬಂಡೆಗಳ ನಡುವೆ ಬಳಕುತ್ತಾ ಹರಿವ ನೀರು ನೋಡುತ್ತಾ ಇದ್ದರೇ ಹಾಲಿವುಡ್‌ನ ಚಲನಚಿತ್ರದ ಸೆಟ್ಟನ್ನು ಪ್ರವೇಶಿಸಿದ ಅನುಭವ. ವಾಸ್ತವಕ್ಕೆ ಬನ್ನಿ ಇದು ನಮ್ಮ ಕರ್ನಾಟಕದ ಹೆಮ್ಮೆಯ ಗರಿ ನಿಸರ್ಗದ ಕೊಡುಗೆ ಸಾತೊಡ್ಡಿ ಜಲಪಾತ.

ಹಾಲಿನಂತೆ ಬಿಳುಪಾದ ನೀರು 15 ಮೀಟರ್‌ ಮೇಲಿನಿಂದ ಧುಮುಕುತ್ತಿದ್ದರೂ ಧ್ವನಿ ಅಷ್ಟಾಗಿ ಕೇಳಿಸುವುದಿಲ್ಲ . ಯಾಕೆಂದರೆ ಜಲಪಾತದಿಂದ ಇನ್ನೂ ಸಾಕಷ್ಟು ದೂರವಿದ್ದೀರಿ. ಆದರೆ ಹತ್ತಿರಕ್ಕೆ ಹೋಗಬೇಕೆ ಹಾಗಾದರೆ ಮರದ ದಿಮ್ಮಿಗಳನ್ನು ಹತ್ತಿ, ಅಲ್ಲಲ್ಲಿ ನಿಂತ ನೀರಿನಲ್ಲಿ ಸೊಂಟದಷ್ಟು ಮುಳುಗಿ ಅಷ್ಟೇನೂ ಅಪಾಯಕಾರಿ ಅಲ್ಲದ ದೊಡ್ಡ ಕಲ್ಲು ಬಂಡೆಗಳನ್ನು ಹತ್ತಿ ಮೇಲೆ ಹೋಗುತ್ತಿದಂತೆಯೇ ತುಂತುರು ಹನಿಗಳಿಂದ, ಕಿವಿ ಕೊರೆಯುವ ಭೋರ್ಗರೆತದಿಂದ ಸ್ವಾಗತಿಸುವ ಆಹಾ! ಅಬ್ಬಾ! ರುದ್ರ ರಮಣೀಯ ಸಾತೊಡ್ಡಿ ಜಲಪಾತ, ಮೇಲಿಂದ ಧುಮುಕಿ ಕೊಡಸಳ್ಳಿ ಡ್ಯಾಮ್‌ ಮೂಲಕ ನೀರು ಕಾಳಿ ನದಿಯಾಗಿ ಹರಿಯುತ್ತಾಳೆ.

ವೇಗವಾಗಿ ಧುಮುಕುವ ನೀರಿನಡಿಯಲ್ಲಿ ನಿಲ್ಲುವದು ಕಷ್ಟ . ಸಣ್ಣ ಹನಿ ಬಿದ್ದರೂ ಸೂಜಿ ಚುಚ್ಚಿದಂತೆ ಅನುಭವವಾಗುತ್ತದೆ. ಆದರೂ ಅದರ ಅಡಿಯಲ್ಲಿ ನಿಂತು ಸ್ವಲ್ಪಾದರೂ ತೋಯಿಸಿಕೊಂಡರೆ ಸಾರ್ಥಕತೆ. ನೋಡುತ್ತಾ ನಿಂತರೆ ಸಮಯದ ಪರಿವೆ ಇರುವದಿಲ್ಲ. ಕೆಳಿಗಿಳಿದು ಬರುವಾಗ ಮತ್ತೆ ಬಂಡೆ ಜಿಗಿದು, ನೀರು ದಾಟಿ ನಮ್ಮ ಜಾಗ ತಲುಪಬೇಕು. ಒಟ್ಟಿನಲ್ಲಿ ಪ್ರಕೃತಿ ಸೌಂದರ್ಯ, ಹಸಿರಿನ ಸಿರಿ, ಸ್ವಲ್ಪ ಸಾಹಸ, ಬೆಟ್ಟದಷ್ಟು ಸಾರ್ಥಕತೆಯನ್ನೊಳಗೊಂಡಿರುವ ಸಾತೊಡ್ಡಿ ಜಲಪಾತ ನೋಡಲೇಬೇಕು ಎನಿಸುವ ಪ್ರಕೃತಿ ವಿಸ್ಮಯ.
ಶಿವರಾಜ್ ಕುಮಾರ್,ಪ್ರೇಮ, ರಮೇಶ್ ಅರವಿಂದ್ ಅಭಿನಯದ ನಮ್ಮೂರ ಮಂದಾರ ಹೂವೆ ಫಿಲ್ಮ್ ಶೂಟಿಂಗ್ ಪ್ಲೇಸ್ ಇದು.


  • ಶಕುಂತಲಾ ಸವಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW