ಪದ್ಮಶ್ರೀ ಡಾ.ಕಾಮಿನಿರಾವ್

ಕರುಳ ಕುಡಿ ಬೇಕೆನ್ನುವವರಿಗೆ ದಂಪತಿಗಳಲ್ಲಿರುವ ನ್ಯೂನತೆ, ಕೊರತೆ ಗಮನಿಸಿ ಫಲ ನೀಡುವ ಚಿಕಿತ್ಸೆ ನೀಡಿ ಸಂತಾನ ಪ್ರಾಪ್ತಿಗೆ ಅನುವು ಮಾಡಿ ಕೊಡುವಲ್ಲಿ ಯಶಸ್ವಿ ವೈದ್ಯೆ ಕಾಮಿನಿರಾವ್. ಅವರ ಸಾಧನೆಯ ಕುರಿತು ಶಿವಕುಮಾರ್ ಬಾಣಾವರ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ ….

ಕೂಸಿದ್ದ ಮನೆಗೆ ಬೀಸಣಿಗೆ ಯಾತಕ
ಕೂಸು ಕಂದಮ್ಮ ಒಳ – ಹೊರಗ
ಕೂಸು ಕಂದಮ್ಮ ಒಳ – ಹೊರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ!!

ಇದು ಚಿರಪರಿಚಿತ ಜಾನಪದ ಹಾಡು – ಮನೆಗೆ ಮಕ್ಕಳೇ ಮಾಣಿಕ್ಯ. ದಂಪತಿಗಳಿಗೆ ಮದುವೆಯಾದ ಒಂದೆರಡು ವರ್ಷಗಳಲ್ಲಿ ಮಗುವಾಗದಿದ್ದರೆ ಏನೋ ಚಡಪಡಿಕೆ, ತುಮುಲ , ಗೊಂದಲ, ಏನೋ ದೋಷ, ದುಃಖ ದುಮ್ಮಾನ, ಸಮಾಜದ ವ್ಯಂಗ್ಯದ ಮಾತು ಹೀಗೆಲ್ಲಾ ಆಗುವುದು ಸಹಜ. ಅಂತಹ ದಂಪತಿಗಳ ಪಾಲಿಗೆ ಡಾ.ಕಾಮಿನಿರಾವ್ ದೈವಾಂಶ ಸಂಭೂತರು. ಸಾಕ್ಷಾತ್ ದೇವರು.

ಕರುಳ ಕುಡಿ ಬೇಕೆನ್ನುವವರಿಗೆ ದಂಪತಿಗಳಲ್ಲಿರುವ ನ್ಯೂನತೆ, ಕೊರತೆ ಗಮನಿಸಿ ಫಲ ನೀಡುವ ಚಿಕಿತ್ಸೆ ನೀಡಿ ಸಂತಾನ ಪ್ರಾಪ್ತಿಗೆ ಅನುವು ಮಾಡಿ ಕೊಡುವಲ್ಲಿ ಯಶಸ್ವಿ ವೈದ್ಯೆ ಕಾಮಿನಿರಾವ್. ಹುಟ್ಟಿದ್ದು ಹೈದರಾಬಾದ್, ವಿದ್ಯಾಭ್ಯಾಸ ಬೆಂಗಳೂರಿನಲ್ಲಿ, ನಂತರ ಲಂಡನ್ ನಲ್ಲಿ ಉನ್ನತ ವೈದ್ಯಕೀಯ ವ್ಯಾಸಂಗ. ಸಂತಾನೋತ್ಪತ್ತಿ ಮತ್ತು ಸಂತಾನೋತ್ಪತ್ತಿ ಅಂತಹಸ್ರಾವ ವಿಜ್ಞಾನ ( Assisted Reproduction Reproductive Endocrinology) ದಲ್ಲಿ ಪರಿಣಿತಿ ಪಡೆದು ಭಾರತಕ್ಕೆ ಹಿಂತಿರುಗಿ ಲಕ್ಷಾಂತರ ದಂಪತಿಗಳ ಕೊರಗನ್ನು ನಿವಾರಿಸುವಲ್ಲಿ ತೊಡಗಿಸಿಕೊಂಡರು.

ಫೋಟೋ ಕೃಪೆ : google

ಆ ಕಾಲದಲ್ಲಿ ನೆರವಿನ ಸಂತಾನೋತ್ಪತ್ತಿ ಚಿಕಿತ್ಸೆಗೆ ಭಾರತದಲ್ಲಿ ಅಗತ್ಯ ಸೌಕರ್ಯದ ಕೊರತೆ, ಸೂಕ್ತ ತರಬೇತಿ ಪಡೆದ ತಂತ್ರಜ್ಞರ ಕೊರತೆ, ಆರ್ಥಿಕ ತೊಂದರೆ, ಸಂತಾನ ಹೀನತೆ ಸಮಸ್ಯೆಯುಳ್ಳ ದಂಪತಿಗಳ ಆರ್ಥಿಕ ಸಾಮರ್ಥ್ಯದ ಕೊರತೆ ಇಷ್ಟೆಲ್ಲಾ ಕೊರತೆಗಳ ನಡುವೆ ಧೃತಿಗೆಡದೇ “Bengaluru Assisted Conception Centre – BACC” ಎಂಬ ಸಂತಾನೋತ್ಪಾದನಾ ಕೇಂದ್ರ ಸ್ಥಾಪಿಸಿದರು. ವೈಜ್ಞಾನಿಕ ಮೌಲ್ಯಮಾಪನ, ಗರ್ಭಾಶಯ, ಗರ್ಭಧಾರಣೆ, ಅಂಡೋತ್ಪತ್ತಿ ಪ್ರೇರಣೆ, ಪ್ರಣಾಳೀಯ ಫಲಿಕರಣ ಪ್ರೇರಣೆ ಮುಂತಾದ ಸೌಲಭ್ಯಗಳನ್ನು ಆಳವಡಿಸಿ ಸೂಕ್ತ ಚಿಕಿತ್ಸೆ ನೀಡುತ್ತಾ ಅನೇಕ ದಂಪತಿಗಳ ಬಾಳು ಬೆಳಗಿದರು/ಬೆಳಗುತ್ತಿದ್ದಾರೆ. ಇಂಟ್ರಾ ಸೈಟೊ ಪ್ಲಾಸ್ಮಿಕ್ ಸ್ಪರ್ಮ್ ಇಂಜಕ್ಷನ್ ವಿಧಾನದಲ್ಲಿಯೂ ಮಗುವನ್ನು ಪಡೆಯುಬಹುದೆಂಬುದರಲ್ಲೂ ಯಶಸ್ವಿಯಾದರು. ನಂತರ ವೀರ್ಯ ಬ್ಯಾಂಕ್ ಸಹ ಸ್ಥಾಪಿಸಿದರು. ಸಂತಾನೋತ್ಪತ್ತಿ ಆರೋಗ್ಯಕ್ಕೆ ಅತ್ಯಗತ್ಯವಾದ
INTERNATIONAL INSTITUTE FOR TRAINING AND RESEARCH IN REPRODUCTIVE HEALTH ಸಂಶೋಧನಾ ಕೇಂದ್ರ ಸ್ಥಾಪಿಸಿ ಮತ್ತಷ್ಟು ಉನ್ನತ ಸಂಶೋಧನೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ.

ಮಗು ಗರ್ಭದಲ್ಲಿದ್ದಾಗಲೇ ಅನುವಂಶಿಕ ಕಾಯಿಲೆಗಳ ಸುಳಿವನ್ನು ಕಂಡು ಹಿಡಿದು ಆರೋಗ್ಯಕರ ಮಗುವಿನ ಜನನಕ್ಕೆ ಪ್ರಯತ್ನ ಪಟ್ಟಿದ್ದಾರೆ. ಯಶಸ್ಸು ಪಡೆದಿದ್ದಾರೆ. ಇವರ ಅಪ್ರತಿಮ ಸಾಧನೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಭಾರತ ಸರ್ಕಾರದ ಅತ್ಯುನ್ನತ ನಾಗರೀಕ ಸೇವಾಪ್ರಶಸ್ತಿ “ಪದ್ಮಶ್ರೀ ಪುರಸ್ಕಾರ” ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಜೀವಮಾನ ಸಾಧನೆಪ್ರಶಸ್ತಿಗಳು ಮುಖ್ಯವಾಗಿವೆ.

“ನಗುವ ಮಗುವ ಮಡಲಿಗಿಡುವ
ಡಾಕ್ಟರ್ ಪದ್ಮಶ್ರೀ ಕಾಮಿನಿ ರಾವ್”.


  • ಶಿವಕುಮಾರ್ ಬಾಣಾವರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading