ಕಲ್ಪನಾ ಲೋಕದಲ್ಲಿ ಸವಿ ಸವಿ ನೆನಪು

ಕಲ್ಪನಾಲೋಕದಲ್ಲಿದ್ದ ವ್ಯಕ್ತಿಯ ನೈಜ ಅಂತರಂಗದ ಅನಾವರಣವಾದಾಗ ‌ವೈರುಧ್ಯಗಳ ಅನುಭವವೇ ಹೆಚ್ಚಾಗಿರುತ್ತದೆ. ನಿಮ್ಮ‌ಕಲ್ಪನೆಗೆ ತೀರ ವಿರುದ್ಧವಾದ ಅನುಭವ ಅಥವಾ ಕಲ್ಪನೆಗೂ ಮೀರಿದ ದಿವ್ಯಾನುಭವ ನೀಡುತ್ತದೆ, ಲೇಖಕ ಹಿರಿಯೂರು ಪ್ರಕಾಶ್ ಅವರ ಅನುಭವದ ಮಾತು ‘ಕೆಲವೊಂದು ಸಂಬಂಧಗಳು ಕಲ್ಪನೆಯಲ್ಲೇ ಉಳಿದರೆ “ಸವಿ‌” ಹೆಚ್ಚಾ?..ತಪ್ಪದೆ ಮುಂದೆ ಓದಿ…

ಹೀಗೇ ಒಬ್ಬರು ತಮ್ಮ‌ ಬರಹಗಳ ಮೂಲಕ ಮೂರ್ನಾಲ್ಕು ವರ್ಷಗಳ ಹಿಂದೆ ಪರಿಚಯವಾದರು. ಅವರೂ ಸಹಾ ತಮ್ಮ ಅದ್ಭುತ ಬರಹಗಳ‌ ಮೂಲಕ, ಅನೇಕಾನೇಕ ವಿಚಾರಗಳ ಪ್ರಸ್ತುತಿಗಳ ಮೂಲಕ ಜಾಲತಾಣಗಳಲ್ಲಿ ಇಂದಿಗೂ ಹಿಂದೆಂದಿಗಿಂತ ಹೆಚ್ಚು ಕ್ರಿಯಾಶೀಲವಾಗಿದ್ದವರೇ.

ಬಹುತೇಕ ವಿಚಾರಗಳಲ್ಲಿ ಸಮಾನ ಮನಸ್ಕತೆ ಎಂಬುದು ಇದ್ದಾಗ ಅಂತಹಾ ಪರಿಚಯಗಳು ಸಹಜವಾಗಿ ಅತ್ಮೀಯತೆಯ ಭಾವವನ್ನು ನಿಮ್ಮೊಳಗೆ ಅನಾಮತ್ತು ಸೃಜಿಸಬಲ್ಲವು. ಇಲ್ಲೂ ಹಾಗೆಯೇ ಆಯ್ತು. ಅವರ ಪ್ರತೀ ಬರಹ, ಶೈಲಿ, ವಿಚಾರ ಧಾರೆ , ಆಲೋಚನಾ ವಿಧಾನ, ನೇರವಾಗಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದ ರೀತಿ ಈ ಎಲ್ಲವೂ ಇಷ್ಟವಾಗಿ ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದೆ. ಜೊತೆಗೆ ಮೂರ್ನಾಲ್ಕು ವರ್ಷಗಳಲ್ಲಿ ಒಂದೆರಡು ಬಾರಿ ಮಾತನಾಡಿ ಅವರ ಬರಹದ ಶೈಲಿ‌, ನಿರೂಪಣೆ ಎಲ್ಲದರ ಬಗೆಗೂ ಮುಕ್ತವಾಗಿ ಮೆಚ್ಚಿಕೊಂಡು ವೈಯಕ್ತಿಕವಾಗಿ ಅಭಿನಂದಿಸಿದ್ದೆ. ಆದರೆ ಅವರನ್ನೆಂದೂ‌ ನೇರವಾಗಿ ನೋಡಿರರಲಿಲ್ಲ…. ಭೇಟಿಯಾಗಿರಲಿಲ್ಲ.

ಒಟ್ಟಾರೆ ನನ್ನ ಕಲ್ಪನೆಯಲ್ಲಿ‌ ಅವರ‌ ಕುರಿತಾಗಿ ನನ್ನದೇ ಆದ ಏನೋ ಮಧುರ ಭಾವನೆ, ಏನೋ‌ ಕಂಡ ಕಲ್ಪನೆ , ಅವ್ಯಕ್ತ ನಿರೀಕ್ಷೆ ಹಾಗೂ ಒಂದು ಊಹಾತ್ಮಕ ಚಿತ್ರವಂತೂ‌ ಇತ್ತು !!

ರೈಟ್….

ಸುಮಾರು ನಾಲ್ಕುವರೆ ವರ್ಷಗಳ ನಂತರ ಇತ್ತೀಚೆಗೆ ಅವರನ್ನೊಮ್ಮೆ‌ ನೇರವಾಗಿ ಭೇಟಿಯಾಗುವ ಸಂಧರ್ಭವೂ ಅತ್ಯಂತ ಆಕಸ್ಮಿಕವಾಗಿ ಬಂತು. ನಾನು ಯಾವುದೋ ಸಂಧರ್ಭದಲ್ಲಿ ಇನ್ನಾರನ್ನೋ ಭೇಟಿಯಾಗಲು ಹೋಗಿದ್ದ ತಾಣದಲ್ಲೇ ಇವರನ್ನೂ ಕಂಡು ಅತೀವ ಅಚ್ಚರಿಯ ಜೊತೆ ಸಕತ್ ಖುಷಿಯೂ ಆಯ್ತು, ನಾಲ್ಕೈದು‌ ವರ್ಷಗಳಿಂದ ಕೇವಲ ಬರಹಗಳಲ್ಲಿ ಕಂಡು, ಎರಡು ಬಾರಿ ಫೋನ್ ನಲ್ಲಿ‌ ಮಾತನಾಡಿ‌ ಆ ಆಧಾರದಲ್ಲಿ ಇವರು ಹೀಗಿದ್ದಿರಬಹುದೆಂಬ ನನ್ನದೇ ಆದ ಒಂದು ಕಲ್ಪನೆಯಲ್ಲಿ ಬೆಳೆದಿದ್ದ ವ್ಯಕ್ತಿ, ಅನಿರೀಕ್ಷಿತವಾಗಿ ಎದುರಿಗೆ ನಿಂತಾಗ ನನಗೆ ಸಹಜವಾಗಿಯೇ ಸಂತಸವೂ ಆಗಿತ್ತು.

ಆದರೆ… ಅಲ್ಲಿ ಭೇರಿಯಾದಾಗ ಆಗಿದ್ದೇ ಬೇರೆ !! ಕೇವಲ ಕೃತಕ‌ನಗೆಯ ವಿನಿಮಯದ ಜೊತೆಗೆ ಔಪಚಾರಿಕವಾಗಿ ಎರಡು ಮಾತುಗಳನ್ನು ಆಡಿದ್ದು‌ ಬಿಟ್ಟರೆ, ಅವರ ಬರಹಗಳಲ್ಲಿದ್ದ ಆತ್ಮೀಯತೆ ಅಥವಾ ಮಾತುಗಳಲ್ಲಿ ತೋರಿದ್ದ ಆಪ್ಯಾಯತೆ ಅದಾವುದರ ಕಿಂಚಿತ್ ಸುಳಿವೂ ಅವರ ವರ್ತನೆಯಲ್ಲಿ ಕಾಣಲಿಲ್ಲ. ಅವರ ಬಗ್ಗೆ ನನ್ನೊಳಗಿದ್ದ ಮಧುರ ಕಲ್ಪನೆಯೆಲ್ಲವೂ ಅಲ್ಲಿ ವಿಲೋಮದಂತಾಗಿತ್ತು. ಹಾಗೆ ನೋಡಿದರೆ ಅಲ್ಲಿ ಅವರೇನೂ ಅಂತಹಾ ಬಿಜ಼ಿಯಿದ್ದಂತಾಗಲೀ ಅಥವಾ ನನಗೆ ಸ್ವಲ್ಪ ಸಮಯ ಕೊಟ್ಟು ಮಾತನಾಡದೇ ಇರುವಂತಹ ಒತ್ತಡದಲ್ಲಿದ್ದಂತಾಗಲೀ ಕಾಣಲಿಲ್ಲ. ! ನಾನು‌ ಅವರನ್ನು ನೋಡಿದಾಗ ಉಂಟಾದ ಕುತೂಹಲಕ್ಕೆ ಹೋಲಿಸಿದಲ್ಲಿ, ಆ‌ ವ್ಯಕ್ತಿಯಲ್ಲಿ ಆ ಮಟ್ಟದ ಕುತೂಹಲವಿರಲಿ, ಅವರ ವರ್ತನೆಯಲ್ಲಿ ಅದೇ ತರಹದ ಭಾವನೆಯ ಒಂದಂಶವೂ ಪ್ರತಿಫಲಿಸದೇ ಹೋಗಿತ್ತು.! ಅಂದರೆ ನನ್ನ ಕಲ್ಪನೆಯ ಆ ವ್ಯಕ್ತಿಯ ಮುಂದೆ ನೈಜವಾದ ಅದೇ ವ್ಯಕ್ತಿ ಸಂಪೂರ್ಣವಾಗಿ ವಿರುದ್ಧವಾಗಿ ಕಂಡಿದ್ದರು.!ಅಥವಾ ‌ಅವರಂದು‌ಕೊಂಡ ಅವರ ಕಲ್ಪನೆಗೆ ತಕ್ಕ ಹಾಗೆ ನಾನಿಲ್ಲವೆಂಬ ಅಂಶವೂ ಈ ವರ್ತನೆಗೆ ಕಾರಣವಿದ್ದಿರಬಹುದೇನೋ… ಹೀಗೆ ಎರಡೂ ಕಡೆಯವರಿಂದಲೂ ಅನಿಸಲು ಸಾಧ್ಯ .

ಈ ರೀತಿಯ ಭಾವನೆಗಳು ಅನುಭಗಳೂ ಸಾಮಾನ್ಯವಾಗಿ ಎಲ್ಲರಿಗೂ ಆಗಿದ್ದಿರಬಹುದು . ಕೆಲವೊಮ್ಮೆ ನಿಮ್ಮ‌ ಕಲ್ಪನೆಗೂ ಮೀರಿದ ಪಾಸಿಟಿವ್ ವ್ಯಕ್ತಿತ್ವ ಅಥವಾ ಕಲ್ಪನೆಗೂ ಮಿಗಿಲಾದ ಸದ್ವರ್ತನೆ ಅವರದ್ದಾಗಿರಬಹುದು.

ಫೋಟೋ ಕೃಪೆ : ಅಂತರ್ಜಾಲ

ಈ ಹಿನ್ನೆಲೆಯಲ್ಲಿ ಬಹಳಷ್ಟು ಸಾರಿ ನನಗನಿಸಿದ್ದು… ಕೆಲವು‌ ವ್ಯಕ್ತಿತ್ವಗಳು , ವಸ್ತುಗಳು, ತಾಣಗಳು ನಮ್ಮ ನಮ್ಮ ಕಲ್ಪನೆಯಲ್ಲೇ ಸುಂದರವಾಗಿ ಆಪ್ಯಾಯವಾಗಿರುತ್ತವೆ. ಆದರೆ ಅವುಗಳ‌ ಬಳಿ ಹೋದಾಗ ಅದು ನಮ್ಮ‌ ಕಲ್ಪನೆಯ‌ ವಿರುದ್ಧವಾಗಿ ಕಣ್ಣಿಗೆ ಕಾಣಬಹುದು ಅಥವಾ ಮನಸಿಗೆ‌ ಹಾಗನಿಸಬಹುದು.

ಹೀಗಾಗಲು ಬಹುಶಃ ಒಬ್ಬರ ಮೇಲಿಟ್ಟಿರಬಹುದಾದ ಅತಿಯಾದ ನಿರೀಕ್ಷೆ, ಕಾತರ, ಕುತೂಹಲ ಹಾಗೂ ನಮ್ಮದೇ ಆದ ಭಾವನಾಲೋಕದಲ್ಲಿ ನಾವೇ ಕಟ್ಟಿಕೊಂಡ ಭ್ರಮಾತ್ಮಕ ಚಿತ್ರಣ ಬಹುಮಟ್ಟಿಗೆ ಕಾರಣ.

ಅಸಲು, ಮುಖತಃ ನೋಡದೇ ಪರಿಚಯವಾದವರ ಕುರಿತಾಗಿ ಅವರ ಮಾತು, ಕತೆ, ಬರಹ ಹಾಗೂ ನಮ್ಮವೇ ಅನಿಸಿಕೆಗಳ ಆಧಾರಗಳಲ್ಲಿ ಅವರ ಒಟ್ಟು ವ್ಯಕ್ತಿತ್ವ ಅಥವಾ ಅವರು ನೋಡಲು ಹೀಗಿದ್ದಿರ ಬಹುದೆಂದು ಇಡಿಯಾಗಿ ಕಲ್ಪಿಸಿಕೊಳ್ಳುವುದು ತಪ್ಪಾ ಅಥವಾ ನಮ್ಮ ಕಲ್ಪನೆಯಂತೆಯೇ ಅವರಿರಬೇಕೆಂದು ನಿರೀಕ್ಷಿಸುವುದು ತಪ್ಪಾ ? ಇಲ್ಲವೇ ತಮ್ಮ ಮಾತು‌, ಕತೆ ,ಕವನಗಳಲ್ಲಿರುವ ಹೂರಣದ ಪ್ರೇರಣಾತ್ಮಕ ಅಂಶಗಳಲ್ಲಿ ಯಾವುವೂ ಅವರ ನೈಜ ನಡವಳಿಕೆಯಲ್ಲಿಲ್ಲದ ಅವರ ತಪ್ಪಾ..??

ಟೋಟಲ್ ಕನ್ ಫ಼್ಯೂಷನ್ನು‌!!

ಈ ಫ಼ೀಲಿಂಗುಗಳಿಂದಾಗಿಯೇ , ಸಾಕಷ್ಟು ಬಾರಿ ಕೆಲವು ವ್ಯಕ್ತಿಗಳು ನಮ್ಮ‌ ಕಲ್ಪನೆಯಲ್ಲೇ ಹೆಚ್ಚು ಸುಂದರವಾಗಿ ಆಕರ್ಷಕವಾಗಿ ಮನದಲ್ಲಿ ನೆಲೆಯೂರಿರುತ್ತಾರೆಂದು ಅನಿಸುವುದು. ಬಹುಶಃ ಅವರನ್ನು ನೇರವಾಗಿ ಭೇಟಿ ಮಾಡದೇ ಅಲ್ಲಿಯವರೆಗಿದ್ದ ಕಲ್ಪನಾ ಲೋಕದಲ್ಲಿಯೇ ಅವರನ್ನು ಹಾಗೇ ಬಿಟ್ಟಿದ್ದರೆ ಅವರ ವ್ಯಕ್ತಿತ್ವದ ಸೌಂದರ್ಯವೆಂಬುದು ಗಟ್ಟಿಯಾದ ಸವಿಪಾಕದಂತೆ ಹಾಗೆಯೇ ನಮ್ಮೊಳಗೆ ಉಳಿದಿರುತ್ತಿತ್ತೇನೋ…!!

ಸೋ….. ಹೀಗನಿಸಿದಾಗ ಕೆಲವರನ್ನು ನಮ್ಮ ನಮ್ಮ ಕಲ್ಪನೆಯಲ್ಲೇ ಜೀವಿಸಲು ಬಿಡುವುದು ಒಳ್ಳೆಯದೇನೋ…ಹಾಗಿದ್ದಾಗ ಯಾವುದೇ ಭ್ರಮನಿರಸನವಾಗಲೀ, ಪಶ್ಚಾತ್ತಾಪವಾಗಲೀ ಅಥವಾ ನಮ್ಮ ಬಗ್ಗೆ ನಮಗೆ ಬೇಸರವಾಗುವುದಾಗಲೀ ಇರದು….!! ಏಕೆಂದರೆ ನಮ್ಮ ಸುಂದರ ಕಲ್ಪನೆಯಲ್ಲಿ ಅವರ‌ ನೈಜ ಅಂತರಾಳದ ಪರಿಚಯವೂ ಆಗದು …ನಿರಾಶೆಯೂ ಆಗದು.

ಫೋಟೋ ಕೃಪೆ : ಅಂತರ್ಜಾಲ

* ಮರೆಯುವ ಮುನ್ನ *

ಸುಂದರವಾದ ಕನಸು‌, ಕಲ್ಪನೆ, ಭ್ರಮೆ, ನಿರೀಕ್ಷೆ, ಊಹೆ. ಈ ಅಂತರ್ಗತವಾದ ಮಧುರ ಭಾವನೆಗಳಿಗೆ ನಾವ್ಯಾರೂ ಕಂದಾಯ‌ ಕಟ್ಟಬೇಕಿಲ್ಲ. ಅವುಗಳೆಲ್ಲವೂ ನಮ್ಮ ನಿಯಂತ್ರಣದಲ್ಲಿ‌ಯೇ, ನಮ್ಮ‌ ನಮ್ಮ ಆಸೆ, ಆಕಾಂಕ್ಷೆ, ಆಶಯಗಳಿಗನುಗುಣವಾಗಿ ನವಿರಾಗಿ‌ ನಾಟ್ಯವಾಡುತ್ತಲೇ ನಮ್ಮೊಳಗೆ ಒಂದು ತೆರನಾದ ಪುಳಕವನ್ನುಂಟು ಮಾಡಬಲ್ಲವು, ಕೌತುಕವನ್ನು‌ ಕಟ್ಟಿಕೊಡಬಲ್ಲವು ಹಾಗೂ ನಿರೀಕ್ಷೆಗಳ ಮೂಟೆಯನ್ನೂ ಹೊರಿಸಬಲ್ಲವು‌.

ಅದಕ್ಕೆ ವಿರುದ್ಧವಾಗಿ ಕಲ್ಪನಾಲೋಕದಲ್ಲಿದ್ದ ವ್ಯಕ್ತಿಯ ನೈಜ ಅಂತರಂಗದ ಅನಾವರಣವಾದಾಗ ‌ವೈರುಧ್ಯಗಳ ಅನುಭವವೇ ಹೆಚ್ಚು. ಒಂದೋ ನಿಮ್ಮ‌ಕಲ್ಪನೆಗೆ ತೀರ ವಿರುದ್ಧವಾದ ಅನುಭವ ಅಥವಾ ಕಲ್ಪನೆಗೂ ಮೀರಿದ ದಿವ್ಯಾನುಭವ . ಇವೆರಡರ ನಡುವಿನ ಯಥಾಸ್ಥಿತಿ ಅಂದರೆ ನಿಮ್ಮ ಕಲ್ಪನೆಗನುಸಾರವಾಗಿಯೇ ಸಿಗುವ ಅನುಭವ ಬಹುಮೌಲ್ಯಯುತವಾದದ್ದು…. ಆದರೆ ಅಪರೂಪದ್ದು !!

ಲಾಸ್ಟ್ ಪಂಚ್ 

ವಾಸ್ತವ ಜಗತ್ತಿಗೆ‌ ಮಿತಿಗಳಿವೆ….ಆದರೆ ಕಲ್ಪನಾ ಲೋಕಕ್ಕೆ ಯಾವುದೇ ಎಲ್ಲೆಗಳಿಲ್ಲ…..!

ಪ್ರೀತಿಯಿಂದ….


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW