ಮೊದಲು ನಾನು ಮಾಡೆಲ್ ಆಗುತ್ತೇನೆ ಎನ್ನುವ ಯೋಚ್ನೆನೂ ಇರಲಿಲ್ಲ, ಆದರೆ ಮುಂದೆ Savvy Mrs India ದಲ್ಲಿ ಒಂದು ಪುಟ್ಟ ಕಿರೀಟ ಮುಡಿಗೇರಿದಾಗ ಅದೊಂದು ಅನೂಹ್ಯ ಅನುಭವ. – ಧಾರಿಣಿ ಮಾಯಾ, ಮುಂದೆ ಓದಿ…
ಕಾಲ.. ಹರಿವ ನೀರಿನಂತೆ ನಾನಾಗ ಡಿಗ್ರಿ ಓದುತ್ತಿದ್ದ ಸಮಯ. ನಾವೆಲ್ಲಾ ಸಹಪಾಠಿಗಳು ಮೈಸೂರಿನ CAVA instituteಗೆ ಹೋಗಿದ್ದೆವು. ಅಲ್ಲಿನ ವಿದ್ಯಾರ್ಥಿಗಳು, ಫೋಟೋಗ್ರಫಿ, ಚಿತ್ರಕಲೆ, ಶಿಲ್ಪಕಲೆಗಳನ್ನು ಮಾಡುತ್ತಿದ್ದದ್ದನ್ನು ನೋಡಿ ನಾನು ಮಾರು ಹೋದೆ. ಹೀಗೆ ಎಲ್ಲಾ ವಿಭಾಗಗಳನ್ನೂ ನಾವೆಲ್ಲಾ ಸಹಪಾಠಿಗಳು ನೋಡುತ್ತಾ ಹೋಗುತ್ತಿದ್ದಾಗ, ಆ ಕಾಲೇಜಿನ ವಿದ್ಯಾರ್ಥಿಯೊಬ್ಬರು ನನ್ನ ಬಳಿ ಬಂದು, ‘ನಿಮ್ಮನ್ನು ನಮ್ಮ photography department HOD ಕರೆಯುತ್ತಿದ್ದಾರೆ’ ಎಂದರು. ನಾನು ಅವರೊಡನೆ ಅಲ್ಲಿಗೆ ಹೋದೆ. ಆ ಕೋಣೆಯಲ್ಲಿ ಹೆಚ್ಚು ಬೆಳಕಿಲ್ಲದೆ ಸ್ವಲ್ಪ ಮಸುಕಾಗಿತ್ತು. ಅಲ್ಲೊಬ್ಬರು ಮೇಡಮ್ ಮತ್ತು ಅವರ ವಿದ್ಯಾರ್ಥಿಗಳೆಲ್ಲರೂ ಏನೋ ಗಂಭೀರ ಸಮಾಲೋಚನೆಯಲ್ಲಿದ್ದರು.
ನನ್ನನ್ನು ನೋಡಿ ಆ HOD, ‘ನೀನು ನಮ್ಮ photography division ಗೆ ಕೆಲ ಹೊತ್ತು model ಆಗುತ್ತೀಯಾ..’ ಎಂದು ಕೇಳಿದರು. ಅವರ ಅನಿರೀಕ್ಷಿತ ಪ್ರಶ್ನೆಯಿಂದ ನಾನು ಆವಾಕ್ಕಾದೆ. ಏನು ಹೇಳಲೂ ತೋಚದೆ, ಸ್ವಲ್ಪ ಭಯವೂ ಇದ್ದುದರಿಂದ, ‘sorry, ಸಮಯದ ಅಭಾವ, ನಾವೆಲ್ಲಾ ಈಗ ಹೊರಡಬೇಕಿದೆ’ ಎಂದು ಹೇಳಿ ಹೇಗೋ ತಪ್ಪಿಸಿಕೊಂಡೆ. ನಾವೆಲ್ಲಾ ಸಹಪಾಠಿಗಳು ಹಿಂತಿರುಗಿ ಬಸ್ಸಿನಲ್ಲಿ ಬರುತ್ತಿದ್ದಾಗ, ಒಬ್ಬ CAVA ವಿದ್ಯಾರ್ಥಿ ನನಗೆ ಗೊತ್ತಿಲ್ಲದೆಯೇ ನನ್ನ ಚಿತ್ರವನ್ನು free hand pencil sketch ಮಾಡಿ ನನಗೆ ತೋರಿಸಿದನು.
ಅಷ್ಟೇ ಅಲ್ಲದೆ, ಅಲ್ಲಿನ ವಿದ್ಯಾರ್ಥಿಯೊಬ್ಬರು ನನ್ನ ಮುಖಚರ್ಯೆಯ ಶಿಲ್ಪಾಕೃತಿಯನ್ನೂ ಮಾಡಿದ್ದರು ಎಂದು ನಂತರ ನನ್ನ ಸ್ನೇಹಿತರು ಮರುದಿನ ನನಗೆ ತಿಳಿಸಿದರು. ಸಾಧಾರಣ ರೂಪದವಳಾದ ನಾನು ಅಯ್ಯೋ, ಈ ಮುಖದಲ್ಲಿ ಅಂಥಾದ್ದೇನಿದೆ ಎಂದು ಒಂದು ರೀತಿ ಕಸಿವಿಸಿಯಾದದ್ದಂತೂ ಖರೆ.
ಇದೆಲ್ಲವೂ ಕಳೆದು ಹಲವಾರು ವರ್ಷಗಳ ನಂತರ ಮುಂಬೈನ Savvy Mrs India ವೇದಿಕೆಯಲ್ಲಿ ಮಾಡಲ್ ಆಗಿ ಒಂದು ವಿಭಾಗದಲ್ಲಿ ಒಂದು ಸುಂದರ ಪುಟ್ಟ ಕಿರೀಟವನ್ನು ಮುಡಿಗೇರಿಸಿಕೊಂಡದ್ದು ಒಂದು ಅನೂಹ್ಯ ಅನುಭವ.
ಇದೂ ಕೂಡ ಕಳೆದು ಕೆಲವು ವರ್ಷಗಳಾಗಿ ಇದೀಗ ಎರಡು ಮೂರು ಸುತ್ತು ಏರಿಸಿಕೊಂಡಿರುವ ನನ್ನನ್ನು ನೋಡಿದರೆ ಯಾರಾದರೂ ಹೌಹಾರಿಯಾರು. ಇರಲಿ ಬಿಡಿ. ಎಲ್ಲಕ್ಕೂ ಒಂದು ಕಾಲ ಅಂತ ಇರುತ್ತೇ ಅಲ್ವಾ. ಹಾಗೇ ಒಂದು ಸುಮಧುರ ನೆನಪು…
- ಧಾರಿಣಿ ಮಾಯಾ, Savvy Mrs India ಸ್ಪರ್ಧಿ, ಲೇಖಕಿ, ರೂಪದರ್ಶಿ.
