ಶಾಪ – ಚೇತನ ಭಾರ್ಗವ

ಇತರರಿಗೆ ಕೆಡಕನ್ನು ಬಯಸದೆ ಧರ್ಮ ಮಾರ್ಗದಲ್ಲಿ ನಡೆಯೋಣ, ಪ್ರಕೃತಿಗೆ ಪೂರಕವಾಗಿ ಬಾಳುತ್ತ ಶಾಪಗ್ರಸ್ಥರಾಗದೆ ಬದುಕನ್ನು ಸುಂದರವಾಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಚೇತನ ಭಾರ್ಗವ ಅವರ ಶಾಪ ವಿಮೋಚನೆ ಕುರಿತಾದ ಒಂದು ಅರ್ಥಪೂರ್ಣ ಬರಹವನ್ನು ತಪ್ಪದೆ ಮುಂದೆ ಓದಿ….

ಒಬ್ಬ ವ್ಯಕ್ತಿ ಅಥವಾ ಸಮಾಜಕ್ಕೆ ಧಕ್ಕೆ ಬರುವಂತಹ ಅಥವಾ ಅವರ ಏಳಿಗೆ ಯಶಸ್ಸಿಗೆ ವಿಘ್ನಗಳಾಗಿ ಕುಂದುಂಟಾಗುವಂತಹ ಸನ್ನಿವೇಶಗಳಾದಾಗ ಯಾರದೋ ಶಾಪ ತಟ್ಟಿರಬಹುದು ಎಂದುಕೊಳ್ಳುತ್ತೇವೆ. ಶಾಪಕ್ಕಿರುವ ಮಹತ್ವ ಅದರ ಮಹಿಮೆ ಅಗಾಧವಾದುದು. ನಮ್ಮೆಲ್ಲಾ ಪುರಾಣ ಇತಿಹಾಸವೆಲ್ಲಾ ವರ ಹಾಗೂ ಶಾಪದ ಸರಮಾಲೆಯ ಮೇಲೆಯೇ ನಿಂತಿದೆ . ನಮಗೆ ತಿಳಿದಿರುವ ಪುರಾಣದ ಘಟನೆಗಳೆಲ್ಲಾ ಶಾಪದ ಪರಿಣಾಮಗಳೇ ಆಗಿದೆ.

ಜಗದ ಮೂಲನಾದ ವಿಷ್ಣುವಿನ ದಶಾವತಾರಗಳು, ಸನಕ ಸನಂದಾದಿಗಳು ವೈಕುಂಠದ ದ್ವಾರಪಾಲಕರಾದ ಜಯ ವಿಜಯರಿಗೆ ನೀಡಿದ ಶಾಪದಿಂದಾಗಿದ್ದು. ಜಗನ್ನಿಯಾಮಕನಾದ ಭಗವಂತನ ಇಚ್ಛೆಯಂತೆಯೇ ಎಲ್ಲವೂ ನಡೆವುದಾದರೂ ಕಾರಣವಿಲ್ಲದೆ ಯಾವ ಘಟನೆಗಳೂ ನಡೆಯದಂತೆ ಶಾಪ ವರಗಳು ಉಪಕರಣಗಂತೆ ಈ ಲೀಲಾ ಲೋಕದಲ್ಲಿ ಬಳಸಲ್ಪಡುತ್ತದೆ. ಅದರಲ್ಲೂ ಶಾಪದ ವಿಚಾರ ಬಂದಾಗ ಹಲವು ಬಾರಿ ಮಹಾತ್ಮರೂ ಜ್ಞಾನಿಗಳೂ ಋಷಿಗಳೇ ಶಪಿಸುವ ಸಂದರ್ಭಗಳು ಸೃಷ್ಟಿಯಾಗಿ ಶಿಷ್ಟ ರಕ್ಷಣೆ ದುಷ್ಟರ ಶಿಕ್ಷೆಯೂ ಆಗಿ ಮುಂದಿನ ಘಟನಾವಳಿಗಳಿಗೆ ಕಾರಣವಾಗಿದೆ. ಸ್ವಾಭಾವಿಕವಾಗಿ ಮನೋನಿಯಂತ್ರಣ ಹೊಂದಿದದವರೂ ಕ್ರೋಧದಲ್ಲಿ ಶಪಿಸುವ ಘಟನೆಗಳನ್ನೂ ಕಾಣಬಹುದು. ನಂತರ ಆಲೋಕಿಸಿದಾಗ ತಮ್ಮ ನಿಯಂತ್ರಣ ಮೀರಿ ಅದಾವುದೋ ಶಕ್ತಿ ತಮ್ಮ ಬಾಯಿಂದ ಶಾಪದ ವಾಕ್ಯಗಳನ್ನು ಹೇಳಿಸಿದೆ ಎಂದು ಅರಿವು ಮೂಡಿ ಸರ್ವಶಕ್ತನ ಶರಣು ಹೋಗಿದ್ದನ್ನು ಕಾಣಬಹುದು. ಹೀಗೆ ಶಾಪದ ಆಳ ಅಗಾಧತೆ ಪರಿಣಾಮ ಋಷಿಗಳ ಅರಿವಿನ ನಿಲುಕಿಗೂ ಮೀರಿದ್ದು ಎನ್ನಬಹುದು.

ರಾಮಾಯಣ ಮಹಾಭಾರತಗಳಂತೂ ನಡೆದಿದ್ದೇ ಶಾಪಗಳ ಸಲುವಾಗಿ ಎನ್ನಬಹುದು. ದಶರಥ ಕೈಕೇಯಿಗೆ ನೀಡಿದ ಮೂರು ವರಗಳು ಆತನಿಗೆ ಶಾಪವಾಗಿ ಪರಿಣಮಿಸಿ ರಾಮನ ವನವಾಸಕ್ಕೆ ಕಾರಣವಾಗಿ ಮುಂದೆಲ್ಲ ಘಟನೆಗಳಿಗೂ ಕಾರಣವಾಗುತ್ತದೆ. ರಾವಣನಿಗಿದ್ದ ಶಾಪ ಆತನಿಗೆ ಮರಣ ತರುತ್ತದೆ. ರಾಮನಿಗೆ ಒದಗಿದ ಸೀತಾವಿಯೋಗವೂ ವಿಷ್ಣುವಿಗಿದ್ದ ಶಾಪದ ಫಲವೇ. ಅಹಲ್ಯೆಯ ಶಾಪ ವಿಮೋಚನೆಗೆ ಕೊನೆಗೆ ಕಾರಣವಾಗಿದ್ದೂ ರಾಮನ ವನವಾಸದ ದೆಸೆಯಿಂದ.. ಹೀಗೆ ಒಂದಕ್ಕೊಂದು ಕೊಂಡಿಯಂತೆ ಘಟನೆಗಳ ಬೆಸುಗೆಗೆ ಶಾಪಗಳೇ ಕಾರಣ ಮಹಾಭಾರತದ ಆದಿ ಹಾಗೂ ಅಂತ್ಯವೂ ಶಾಪ ಸೇಡಿನ ಫಲವೇ, ಪಾಂಡುವಿಗಿದ್ದ ಶಾಪ ಆತನ ಹಾಗೂ ಮಾದ್ರಿಯ ಸಹಗಮನಕ್ಕೆ ನಾಂದಿ ಹಾಡಿ ಪಾಂಡವರ ಕೌರವರ ದಾಯಾದಿ ದ್ವೇಷಕ್ಕೆ ಹಸ್ತಿನಾಪುರ ಸಾಕ್ಷಿಯಾಗುತ್ತದೆ. ಮುಂದೆ ಕುರುಕ್ಷೇತ್ರ ಯುದ್ಧವೇ ನಡೆದು ಕೌರವರು ಮಡಿದು ಗಾಂಧಾರಿಯಿಂದ ಕೃಷ್ಣ ಶಪಿಸಲ್ಪಟ್ಟು ಯಾದವರ ಕೊನೆಯಾಗುತ್ತದೆ. ಮುಂದೆ ಪರೀಕ್ಷಿತನ ಸಾವೂ ಶಾಪದ ಫಲವೇ… ಅಂತೂ ಇದಕ್ಕೆ ಕೊನೆ ಎಂದೂ ಕಾಣದು ಶಾಪದ ತಾಪ ನಾವು ಈ ಕಲಿಯುಗದಲ್ಲೂ ಕಾಣಬಹುದು.

ಮಾನವರಾಗಿ ಪ್ರಕೃತಿಯ ಜೊತೆಗೆ ಬಾಳದೆ ದುರಾಸೆಯಿಂದ ಅದರ ಮೇಲೆ ನಿರಂತರ ದೌರ್ಜನ್ಯ ಅತ್ಯಾಚಾರ ನಡೆಸಿದ್ದೆ ಈಗ ಶಾಪವಾಗಿ ಅತಿವೃಷ್ಟಿ ಅನಾವೃಷ್ಟಿ ಸುನಾಮಿಗಳಾಗಿ ಎರಗಿ ಮಾನವನಿಗೆ ಶಾಪವಾಗಿ ಪರಿಣಮಿಸುತ್ತಿದೆ . ಸಂಕಟಪಟ್ಟು ಕೆಡುಕಾಗುವಂತೆ ದೂಷಿಸಿದರೆ ಅದರ ಪಾಪ ಎಂದಿಗೂ ಬಿಡದು . ಯಾರೇ ಸಂಕಟಪಟ್ಟು ಇತ್ತ ಶಾಪ ಹುಸಿಯಾಗದು
ಆದ್ದರಿಂದ ಆದಷ್ಟು ಇತರರಿಗೆ ಕೆಡುಕಾಗದಂತೆ ಧರ್ಮಮಾರ್ಗದಲ್ಲಿ ನಡೆದು ಪ್ರಕೃತಿಗೆ ಪೂರಕವಾಗಿ ಬಾಳುತ್ತ ಶಾಪಗ್ರಸ್ಥರಾಗದೆ ಬದುಕು ಸಾಗಿಸುವುದು ಇಂದು ನಮಗಿರುವ ಬಹುಮುಖ್ಯ ಕರ್ತವ್ಯ.


  • ಚೇತನ ಭಾರ್ಗವ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW