ಕತೆಗಾರ ರಾಘವೇಂದ್ರ ಇನಾಮದಾರ್ ಅವರು ಒಬ್ಬ ಒಳ್ಳೆ ಕತೆಗಾರರು, ಲೇಖಕರು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಅವರು ಬರೆದ “ಪಾಯಸದ ಬಟ್ಟಲು” ಕತೆ ಮನಮುಟ್ಟುವುದರ ಜೊತೆಗೆ ಒಂದು ಸಣ್ಣಕತೆಯಲ್ಲಿ ಮನುಷ್ಯನ ಭಾವನೆ, ಪ್ರೀತಿ, ನೋವು, ಸಂಬಂಧಗಳ ಅರ್ಥ ಎಲ್ಲವನ್ನು ಚಂದವಾಗಿ ಪೋಣಿಸಿದ್ದಾರೆ, ಎಲ್ಲರಿಗೂ ಇಷ್ಟವಾಗುತ್ತದೆ, ತಪ್ಪದೆ ಓದಿ…
“ಅಪ್ಪಾ!! ಶಾವಿಗೆ ಪಾಯಿಸ ಬೇಕು ಅಂತ ಮೊನ್ನೆಯಿಂದ ಕೇಳ್ತಾ ಇದ್ದೆ ಅಲ್ವಾ.? ಇಲ್ನೋಡು ಇವತ್ತು ನಿಂಗೊಸ್ಕರ ನಾನೇ ಮಾಡಿ ತಂದಿದ್ದೇನೆ. ತಗೊ ಕುಡಿ..” ಎಂದು ಹೇಳಿ ಪಾಯಿಸದ ಬಟ್ಟಲನ್ನು ತಂದೆಯ ಪಕ್ಕದಲ್ಲಿ ಇಟ್ಟು ಹೊರಬಂದ ಆಕಾಶನ ಕಣ್ಣು ಒದ್ದೆಯಾಗಿದ್ದವು.
“ರೀ.. ಏನ್ರಿ ಮಾಡ್ತಿದೀರಾ..?? ಮಾವನಿಗೆ ಯಾಕ್ರೀ ಪಾಯಸ ಮಾಡಿ ಕೊಟ್ಟದ್ದು. ಅವರಿಗೆ ಶುಗರ್ ಇದೆ ಅಂತ ಗೊತ್ತಿಲ್ವಾ? ನಾಳೆ ಏನಾದರೂ ಹೆಚ್ಚು ಕಮ್ಮಿ ಆದರೆ ನಾವೇ ಹೆಣಗಾಡಬೇಕು. ನಾನಂತೂ ಈ ಬಾರಿ ಆಸ್ಪತ್ರೆ ಕಟ್ಟೆ ಹತ್ತೋಲ್ಲ. ನಿಮ್ಮ ತಮ್ಮನ ಹೆಂಡತಿಗೆ ಬರೋಕೆ ಹೇಳಿ..” ಅಂತ ಸಹನಾ ಭುಸುಗುಡೋಕೆ ಶುರುಮಾಡಿದಳು.
ಒಮ್ಮೊಮ್ಮೆ ಅವಳು ಹೀಗೆ ಹೇಳುವುದರಲ್ಲಿ ಏನು ತಪ್ಪಿಲ್ಲ ಅನಿಸುತ್ತೆ. ಅಪ್ಪ ಹಾಸಿಗೆ ಹಿಡಿದು ವರ್ಷಗಳೇ ಕಳೆದಿವೆ. ಕಾಲಿಗೆ ಗ್ಯಾಂಗ್ರಿನ ಆಗಿ ಬಿದ್ದವರು ಓಡಾಡುವ ಚೈತನ್ಯವನ್ನೇ ಕಳೆದುಕೊಂಡಿದ್ದಾರೆ. ದೊಡ್ಡ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸೋಣ ಅಂದ್ರೆ ಅದೂ ನನ್ನಿಂದ ಆಗ್ತಿಲ್ಲ. ಇಂಥಹ ದೊಡ್ಡ ಶಹರಿನಲ್ಲಿ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿಕೊಳ್ಳೋದೇ ಕಷ್ಟ. ತಮ್ಮನದ್ದು ಅವನದ್ದೇ ಆದ ತಾಪತ್ರಯ. ನಮ್ಮಂತಹ ಬಡವರಿಗೆ ಇಂತಹ ದೊಡ್ಡ ಖಾಯಿಲೆಗಳು ಬರಬಾರದು. ಛೇ! ಯಾರಿಗೆ ಬೇಕು ಇಂತಹ ಜೀವನ..?? ಎಂದು ಬೇಸರದಲ್ಲಿ ಕುಳಿತವನಿಗೆ, “ರೀ.. ರೀ” ಎಂಬ ಹೆಂಡತಿಯ ಕೂಗು ಅವನನ್ನು ಮತ್ತೆ ವಾತ್ಸವಕ್ಕೆ ಬರುವಂತೆ ಮಾಡಿತು.

ಫೋಟೋ ಕೃಪೆ : vegrecipesofkarnataka
“ಲೇ ಸ್ವಲ್ಪ ಮೆತ್ತಗೆ ಮಾತಾಡೆ ಅಪ್ಪನಿಗೆ ಕೇಳಿ ನೊಂದುಕೊಂಡಾರು.”
“ಕೇಳಿಸಿದರೆ ಕೇಳಿಸಲಿ ಬಿಡಿ, ನನಗೂ ಸಾಕಾಗಿ ಹೋಗಿದೆ. ಎಷ್ಟು ಅಂತ ಮಾಡೋದು. ನೀವೋ ಒಂದು ಬೆಳೆಗ್ಗೆ ಆಟೋ ತಗೊಂಡು ಹೋದವರು ಬರೋದು ರಾತ್ರಿ ಹನ್ನೆರಡು ಗಂಟೆ ಅಲ್ಲಿಯವರೆಗೆ ನಾನೇ ನಿಮ್ಮಪ್ಪನ ಚಾಕರಿ ಮಾಡ್ಬೇಕು. ಅವರದ್ದೋ ಮಲಗಿದಲ್ಲೇ ಎಲ್ಲಾ ಆಗುತ್ತೆ. ಅದನ್ನು ಸ್ವಚ್ಛ ಮಾಡಿ ಮಾಡಿ ನನಗಂತೂ ಊಟಾನೇ ಕಟ್ಟಿಹೋಗಿದೆ. ಇಂತಹ ಬದುಕು ಯಾಕಾದ್ರೂ ಬೇಕೋ..?” ಅಂತ ಗೋಣಗುತ್ತಲೇ ಇದ್ದ ಹೆಂಡತಿಗೆ ಉತ್ತರಿಸದೇ ಆಟೋ ತೆಗೆದು ಹೊರಟೆ ಬಿಟ್ಟ ಆಕಾಶ.
ಆಟೋ ಹತ್ತಿ ಕುಳಿತವನಿಗೆ ನೂರೆಂಟು ನೆನಪುಗಳು ಬೆನ್ನು ಹತ್ತಿದವು. ತನ್ನ ಮದುವೆಯಾಗಿ ಒಂದೇ ವರ್ಷದಲ್ಲಿ ಅಪ್ಪ ಹಾಸಿಗೆ ಹಿಡಿದು ಬಿಟ್ಟಿದ್ದು. ಇದರಿಂದಾಗಿ ಅಪ್ಪನ ಗೂಡಂಗಡಿಯಿಂದ ಬರುತ್ತಿದ್ದ ಅಲ್ಪ ಸ್ವಲ್ಪ ಆದಾಯ ಕೂಡ ನಿಂತು ಹೋಗಿ, ಆಸ್ಪತ್ರೆ ಖರ್ಚು ಭರಿಸಲು ತಾನು ಸಾಲಗಾರನಾಗಿದ್ದು, ಅದೇ ಸಂದರ್ಭದಲ್ಲಿ ಸಹನಾ ಗರ್ಭಿಣಿ ಅಂತ ತಿಳಿದು ಆ ಖರ್ಚುನ್ನು ನಿಭಾಯಿಸಲು ಸಾಧ್ಯವಿಲ್ಲದೇ ಅವಳಿಗೆ ಈಗ ಮಗುವಿನ ವಿಚಾರ ಬೇಡ ಎಂದು ಹೇಳಿ ಮಗು ತೆಗೆಸಿದ್ದು. ಹೀಗೆ ಒಂದೊಂದೇ ಘಟನೆಗಳು ಆಕಾಶನ ಮನಸ್ಸಿನ್ನು ಹಿಂಡ ತೊಡಗಿದವು. ಸಹನಾ ಕೂಡ ಇಷ್ಟು ವರ್ಷ ತಾನು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದವಳು ಈಗೀಗ ಎದುರು ಮಾತನಾಡುತ್ತಿದ್ದಾಳೆ. ಪಾಪ ಅವಳಾದ್ರೂ ಏನು ಮಾಡೋಕೆ ಸಾಧ್ಯ. ಇಷ್ಟು ವರ್ಷ ಸ್ವಲ್ಪವೂ ಬೇಸರಿಸದೇ ಅಪ್ಪನ ಕಾಳಜಿ ಮಾಡಿದ್ದಾಳೆ ಈಗ ಅವಳಿಗೂ ರೋಸಿ ಹೋಗಿದೆ ಅನಿಸುತ್ತೆ. ಒಂದ್ಕಡೆ ಆಕಾಶನ ಮನಸ್ಸು ಹೇಳುತ್ತಲಿತ್ತು.
” ಏಯ್ ಆಟೋ!! ರಾಜಾಜಿನಗರ ಫಿಫ್ತ ಬ್ಲಾಕ್ ಬರ್ತಿಯೇನಪ್ಪಾ..?” ಅಂತ ಗಿರಾಕಿ ಕೇಳಿದೊಡನೆ ವಾಸ್ತವಕ್ಕೆ ಬಂದು, ಆ ವ್ಯಕ್ತಿಯನ್ನು ಕರೆದುಕೊಂಡು ಹೊರಟವನು ತನ್ನ ದಿನನಿತ್ಯದ ಕಾರ್ಯದಲ್ಲಿ ತೊಡಗಿದ.

ಫೋಟೋ ಕೃಪೆ : archanaskitchen
ಮಧ್ಯಾಹ್ನದ ಸಮಯದಲ್ಲಿ ಸಹನಾ ಫೋನ್ ಬಂದದ್ದು ನೋಡಿ, ತನ್ನ ಈ ದಿನದ ನಿರ್ಧಾರಕ್ಕೆ ಉತ್ತರ ದೊರೆಯಿತು ಎಂದುಕೊಂಡು ಫೋನ್ ರಿಸೀವ್ ಮಾಡಿದ.
“ಹಲೋ!! ಮಾವ ತೀರಿ ಕೊಂಡಿದ್ದಾರೆ ಕಣ್ರೀ ಬೇಗ ಬನ್ನಿ…” ಅಂತ ಹೆಂಡತಿ ಅಳುತ್ತಲೇ ಹೇಳಿದನ್ನು ಕೇಳಿ, ಅಕಾಶನಿಗೆ ಮನಸ್ಸಿನಲ್ಲಿ ಅದೇನೋ ಸಂಕಟ ಶುರುವಾಯಿತು. ಕಾರಣ ಈ ಸುದ್ದಿ ಬರುತ್ತೆ ಅಂತ ಅವನಿಗೆ ಮೊದಲೇ ತಿಳಿದಿತ್ತು.
ಓಡೋಡಿ ಬಂದ ಆಕಾಶ, ಅಪ್ಪನ ಬಳಿ ಬಂದು, ತಾನು ಇಂದು ಬೆಳಗ್ಗೆ ಪಾಯಸದಲ್ಲಿ ವಿಷ ಬೆರೆಸಿ, ಅಪ್ಪನ ಸಾವನ್ನು ಬಯಸಿದ ಪಾಪ ಕೃತ್ಯ ನೆನೆದು, ತಪ್ಪಿತಸ್ಥ ಭಾವನೆಯಿಂದ ಬಿಕ್ಕಿ ಬಿಕ್ಕಿ ಅಳತೊಡಗಿದ. ಆಗ ಪಕ್ಕದಲ್ಲಿದ್ದ ಸಹನಾ…” ರೀ ಇವತ್ತು ಬೆಳಗ್ಗೆ ನೀವು ಮಾಡಿ ಕೊಟ್ಟ ಪಾಯಸ ಮಾವ ಸ್ವಲ್ಪನೂ ಕುಡಿಯಲಿಲ್ಲ. ನಾನು ಉಪ್ಪಿಟ್ಟು ಮಾಡಿ ಕೊಟ್ಟೆ ಅದನ್ನು ಕೋಪದಿಂದ ತಿನ್ನಲಿಲ್ಲ. ನಾನು ಕೂಡ ಇವತ್ತು ಸ್ವಲ್ಪ ಜೋರಾಗಿಯೇ ಮಾತನಾಡಿದೆ ದಯವಿಟ್ಟು ನನ್ನನ್ನು ಕ್ಷಮಿಸಿ” ಅಂತ ಹೇಳಿ ದುಃಖಿಸುತ್ತಿದ್ದಾಗ ಅಕಾಶನಿಗೆ ಮಾತೇ ಬರದೇ ಹೋಯಿತು. ಅಕಾಶನಿಗೆ ಪಾಯಸದ ಬಟ್ಟಲು ಇವನನ್ನು ನೋಡಿ ನಗುತ್ತಿರುವಂತೆ ಭಾಸವಾಯಿತು.
- ರಾಘವೇಂದ್ರ ಇನಾಮದಾರ, ವಿಮರ್ಶಕರು, ಕತೆಗಾರರು, ಲೇಖಕರು (ಹುಬ್ಬಳ್ಳಿ).
