ಕಡಲ ತೀರದ ಭಾರ್ಗವ : ಡಾ. ಕೆ ಶಿವರಾಮ ಕಾರಂತ

ಕಡಲತೀರದ ಭಾರ್ಗವ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಡಾ. ಕೆ ಶಿವರಾಮ ಕಾರಂತರು ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಪದವಿ ಸ್ನಾತಕೋತ್ತರ ಪದವಿ ಪಡೆಯದಿದ್ದರೂ 8 ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪಡೆದವರು. ಕಾರಂತರ ಕುರಿತು ಲೇಖಕಿ ಸುಜಾತಾ ರವೀಶ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಕಾದಂಬರಿ : ಉಕ್ಕಿದ ನೊರೆ
ಲೇಖಕರು : ಡಾ ಶಿವರಾಮ ಕಾರಂತ
ಪ್ರಕಾಶಕರು : ಎಸ್ ಬಿಎಸ್  ಪ್ರಕಾಶಕರು 
ಮೊದಲ ಮುದ್ರಣ : ೧೯೭೦

ಡಾ. ಕೆ ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨ ಸೆಪ್ಟೆಂಬರ್ ೧೨ ೧೯೯೭) ಕಡಲತೀರದ ಭಾರ್ಗವ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಇವರು ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರ ಎಂದರೆ ತಪ್ಪಾಗಲಾರದು. ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ ವೈಜ್ಞಾನಿಕ ಬರಹಗಾರ. ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳ ಪದವಿ ಸ್ನಾತಕೋತ್ತರ ಪದವಿ ಪಡೆಯದಿದ್ದರೂ 8 ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪಡೆದವರು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ ಇವರಿಗೆ ಸಂದ ಪುರಸ್ಕಾರಗಳಲ್ಲಿ ಮುಖ್ಯವಾದವು . ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಹಕ್ಕಿಗಳ ಕುರಿತು 1 ಪುಸ್ತಕ ಬರೆದಿದ್ದು ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಸಾಧನೆ. ಬರೀ ಬರವಣಿಗೆಯಲ್ಲಲ್ಲದೆ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ ಅನೇಕ ಪ್ರಯೋಗಗಳನ್ನು ಮಾಡಿದವರು. ಸಮಾಜ ಸುಧಾರಣೆಗೆ ಶ್ರಮಿಸಿದವರು. ಪರಿಸರ ಸಂರಕ್ಷಣೆಗೆ ಹೋರಾಡಿದ ಮಹಾನ್ ಹೋರಾಟಗಾರ .

ಅಸಾಂಪ್ರದಾಯಿಕ ಶೈಕ್ಷಣಿಕ ಕೇಂದ್ರ ಬಾಲವನ ಇದರ ಸೃಜನಾತ್ಮಕತೆಯ ಪ್ರತೀಕ . ತಮ್ಮ ಕೆಲವು ಕಾದಂಬರಿಗಳಿಗೆ ತಾವೇ ಮುಖಪುಟ ಚಿತ್ರಿಸಿದ ಕಲಾವಿದ. ಡೊಮಿಂಗೊ(೧೯೩೦) ಭೂತರಾಜ್ಯ (೧೯೩೧) ಎಂಬ ಮೂಕಿ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.

ಇವರ ಸಾಹಿತ್ಯಿಕ ಸೇವೆಯ ಕೃತಿಗಳು 2 ಕವನ ಸಂಕಲನ, ನಲವತ್ತು ಕಾದಂಬರಿಗಳು,೨೯ ನಾಟಕಗಳು, 4 ಸಣ್ಣ ಕಥಾ ಸಂಕಲನಗಳು, 6 ಹರಟೆ ವಿಡಂಬನೆ ಸಂಗ್ರಹಗಳು, 6 ಪ್ರವಾಸ ಕಥನಗಳು, 2 ಆತ್ಮಕಥನ, 1ಜೀವನ ಚರಿತ್ರೆ, 9 ಕಲಾ ಪ್ರಬಂಧ ಸಂಕಲನಗಳು, 7 ವೈಜ್ಞಾನಿಕ ಕೃತಿಗಳು, 3 ಸಂಪಾದನಾ ಗ್ರಂಥಗಳು, ಇತರೆ 7 ಕೃತಿಗಳು, ನಿಘಂಟು ಮತ್ತು 4 ವಿಶ್ವಕೋಶ ಸಂಪುಟಗಳು, ಹದಿನೈದು ಅನುವಾದಗಳು, ಮಕ್ಕಳ ಸಾಹಿತ್ಯ ಹತ್ತು ಪುಸ್ತಕಗಳು, ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ಹತ್ತು ಪುಸ್ತಕಗಳು, ಐಬಿಎಚ್ ಅವರಿಗಾಗಿ ಸುಮಾರು ೧೩೩ ಅನುವಾದಗಳು, ಇಕೋ ಅವರಿಗಾಗಿ ೪೨ ಸಂಪಾದಿತ ಕೃತಿಗಳು ಅಲ್ಲದೆ ಆಂಗ್ಲ ಭಾಷೆಯಲ್ಲಿ 5 ಕೃತಿಗಳು. ನಿಜಕ್ಕೂ ಇವರ ಸಾಧನೆಗಳು ಏಕವ್ಯಕ್ತಿಯಿಂದ ಸಾಧ್ಯವೇ ಎಂಬ ಅಚ್ಚರಿ ಮೂಡಿಸುತ್ತದೆ. ಕಾರಂತರು ವ್ಯಕ್ತಿಯಲ್ಲ ಸಂಸ್ಥೆ ಎಂಬ ನುಡಿಯನ್ನು ದೃಢೀಕರಿಸುತ್ತದೆ.

ಪ್ರಸ್ತುತದ “ಉಕ್ಕಿದ ನೊರೆ” ಕಾದಂಬರಿ ದಕ್ಷಿಣ ಕನ್ನಡ ಜಿಲ್ಲೆಯ ಬಾರಕೂರು ಬ್ರಹ್ಮಾವರ ಎಂಬ ಊರುಗಳ ಸುತ್ತಮುತ್ತ ೧೯೩೦ ರಿಂದ ೧೯೫೫ ರವರೆಗೆ ನಡೆದ ವಿದ್ಯಮಾನಗಳ ಕಥೆ. ಯಾವ ಊರಿನದೂ ಆಗಬಹುದು . ಇಲ್ಲಿ ಊರು ಪ್ರಾತಿನಿಧಿಕ ಅಷ್ಟೆ ನಾವು ಕಂಡಿರದ ಕಾಲಘಟ್ಟಗಳಲ್ಲಿನ ವಿದ್ಯಮಾನಗಳು ಅಂದಿನ ದಿನಗಳ ಬಗ್ಗೆ ನಮ್ಮ ತಿಳಿವನ್ನು ಹೆಚ್ಚಿಸುತ್ತದೆ ಅಂದಿನ ದಿನಗಳ ಬಗ್ಗೆ ಸ್ವಾತಂತ್ರ್ಯ ಚಳುವಳಿಯ ಕಾಲದ ಆ ದಿನಗಳಲ್ಲಿ ಏನೆಲ್ಲ ಒಳಿತು ಕೆಡಕುಗಳಾದವು ಎಂಬ ಬಗ್ಗೆ ಜಿಜ್ಞಾಸೆಯನ್ನು ಮೂಡಿಸುತ್ತದೆ.


ಬಾರಕೂರಿನ ಶೀನ ಶೆಟ್ಟರು ಋಣ ಸಾಲ ಎಂದರೆ ಮಾರು ದೂರ ಓಡುವವರು .ಒಮ್ಮೆ ಜಾತ್ರೆಗಾಗಿ ಬಟ್ಟೆ ಖರೀದಿಸಿ ಬಾಕಿ ಉಳಿಸಿದ್ದಕ್ಕೆ ಹಳವಳಗೊಳ್ಳುವವರು. ಅವರ ಭಾವಮೈದ ಬೆಂಗಳೂರಿನಲ್ಲಿ ಹೋಟೆಲ್ ಇಟ್ಟಿದ್ದ ಶಿವಯ್ಯ ಪುರಾಣಿಕ ಅಕ್ಕ ಮತ್ತು ಅವಳ ಮಕ್ಕಳಿಗೆ ಪ್ರೀತಿಯಿಂದ ಸಹಾಯ ಮಾಡಿದರೆ ಋಣಭಾರ ಎಂದುಕೊಳ್ಳುವವರು. ಮುಂದೆ ಎರಡನೇ ಮಗ ಮಾವನ ಬಳಿ ಓದಿ ಕಾಶಿಗೆ ಹೋಗಿ ಮತ್ತೂ ವಿದ್ಯಾವಂತನಾದರೂ ಹರುಷದೊಂದಿಗೆ ಬೇಗ ಕೆಲಸಕ್ಕೆ ಸೇರಿ ಮಾವನ ಹಣ ಹಿಂದಿರುಗಿಸು ಎನ್ನುವಂಥವರು. ಆಗಿನ ಕಾಲದ ಅನೇಕರ ಮನೋಭಾವವೇ ಹಾಗೇ. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎನ್ನುವ ಮಾತನ್ನು ಇವರ ಉದಾಹರಣೆ ಮೂಲಕ ತೋರಿಸಿದ್ದಾರೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಊರಿನ ಉಡಾಳ ಮೋನಪ್ಪ ಮುಂದಾಳತ್ವ ವಹಿಸಿದ್ದಾಗ ಮಗನಿಗೆ ಹೇಳುತ್ತಾರೆ “ಹೌದು ಮಗೂ ನಿನ್ನ ಗಾಂಧಿ ಬ್ರಿಟಿಷರನ್ನು ಓಡಿಸಿ ನಾಳೆ ಪಟ್ಟಕಟ್ಟುವುದು ಬಲ್ಲಾಡಿ ಮೋನಪ್ಪನಂಥವರಿಗೆ”. ಎಷ್ಟು ತಾರ್ಕಿಕ ನುಡಿಗಳು !ಪ್ರಸಕ್ತ ರಾಜಕೀಯದಲ್ಲಿ ಇರುವವರು ಹೆಚ್ಚಿನಂಶ ಅಂತಹವರೇ ಅಲ್ಲವೇ?

ಶೀನ ಭಟ್ಟರ ಮಗ ವಾಸು ಭಟ್ಟ ಉಪಾಧ್ಯಾಯ ವೃತ್ತಿಯಲ್ಲಿದ್ದುಕೊಂಡು ಊರುಮನೆ ತೋಟಗಳ ನಿಗಾವಹಿಸಿ ಊರಿನಲ್ಲಿ ಒಂದು ಕುಳ ಆದರೂ ಮುಂದೆ ಮೋನಪ್ಪನಂತಹ ರಾಜಕಾರಣಿಗಳ ಕುತಂತ್ರದಿಂದ ದೂರದೂರಿಗೆ ವರ್ಗವಾಗಿ ಕೆಲಸವನ್ನೇ ಬಿಡಬೇಕಾಗುತ್ತದೆ . ವ್ಯವಸ್ಥೆಯ ಕ್ರೂರ ನೇಣಿಗೆ ಬಲಿಯಾಗುವ ನಿರಪರಾಧಿಗಳ ದೃಷ್ಟಾಂತವಾಗುತ್ತಾನೆ. ಆದರೂ ಒಳ್ಳೆಯ ಕೆಲಸ ಮಾಡಿದರೂ ಕುತ್ಸಿತ ಜನರ ಕುಹಕಕ್ಕೆ ಎದುರುತ್ತರ ಕೊಡುತ್ತಾ ಸಮರ್ಥಿಸಿಕೊಳ್ಳುತ್ತಾನೆ.

ಊರು ಬಿಟ್ಟು ದೊಡ್ಡ ಊರಿನಲ್ಲಿ ಹೋಟೆಲಿಟ್ಟು ಉದ್ಧಾರವಾಗುವ ಶಿವಯ್ಯ ಪುರಾಣಿಕ ಹಾಗೂ ಅವನಿಂದಲೇ ಮುಂದೆ ಬರುವ ಶಂಭಯ್ಯ ವ್ಯವಸ್ಥೆ ಪರಿಸ್ಥಿತಿಗಳ ಲಾಭ ಪಡೆಯುವ ಚಾಣಾಕ್ಷರಾಗಿ ಪ್ರವಾಹದೊಂದಿಗೆ ಈಜುವ ಜಾಣತನ ಮೆರೆಯುತ್ತಾರೆ. ಶಿವಯ್ಯನ ಹೋಟೆಲಿನಲ್ಲಿ ಕೆಲಸ ಮಾಡುತ್ತಾ ಅವನಿಗೇ ಗೊತ್ತಾಗದ ಹಾಗೆ ಹಣ ಮಾಡಿಕೊಂಡು ನಂತರ ತಾನೇ ಸ್ವಂತ ಹೋಟೆಲ್ ಮಾಡುವ ಶಂಭಯ್ಯ ಮುಂದೆಯೂ ಪ್ರಗತಿ ಸಾಧಿಸುವ ಶಿವಯ್ಯನನ್ನು ಕಂಡು ತನ್ನ ಕಳ್ಳತನ ಅವನಿಗೇನೂ ಕೆಡುಕು ಮಾಡಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ಭಂಡ. ಶಿವಯ್ಯನಿಗೆ ತನ್ನ ಗೆಳೆಯ ಇನಾಸನ ತೋಟ ಖರೀದಿ ಮಾಡಿಸಿಕೊಟ್ಟು ಸ್ವಲ್ಪವಾದರೂ ಋಣ ತೀರಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.

ಊರಿಗೆ ದುಷ್ಟ ರೌಡಿ ಮೋನಪ್ಪ ಮೊದಲು ಊರಿನ ಗುಲಾಬಿ ಎಂಬ ವೇಷ್ಯೆಯ ಮಗಳೊಡನೆ ಸಂಬಂಧವಿಟ್ಟುಕೊಂಡಿರುತ್ತಾನೆ. ಯಾವುದೋ ಕೇಸಿನಲ್ಲಿ ಜೈಲಿಗೆ ಹೋಗಿ ಬರುವಷ್ಟರಲ್ಲಿ ಗುಲಾಬಿ ಶರಭಯ್ಯನ ಜೊತೆಯಲ್ಲಿ ಹೆಂಡತಿಯಂತೆ ಬಾಳುತ್ತಿರುತ್ತಾಳೆ. ನಂತರ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿ ಹೆಸರು ಮಾಡಿದರೂ ಮುಂದೆ ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ. ಆದರೂ ರಾಜಕೀಯದಲ್ಲಿ ಪೂರಾ ಮುಳುಗಿ ಪ್ರಭಾವಶಾಲಿಯಾಗಿ ಗುರುತಿಸಿಕೊಳ್ಳುತ್ತಾನೆ. ಇಂದಿನ ಅನೇಕ ರಾಜಕಾರಣಿಗಳ ಪ್ರತಿನಿಧಿಯಂತೆ ಗೋಚರವಾಗುತ್ತಾನೆ.

ಈ ಕಾದಂಬರಿಯ ಮುಖ್ಯ ಸ್ತ್ರೀ ಪಾತ್ರಗಳೆರಡೂ ವೇಶ್ಯೆಯರಾಗಿರುವುದು ಗಮನಾರ್ಹ. ಮೊದಲು ಮೋನಪ್ಪನ ಪ್ರೇಯಸಿಯಾಗಿದ್ದರೂ ನಂತರ ಶರಭಯ್ಯನ್ನು ನಂಬಿ ಅವನೊಂದಿಗೆ ಬಾಳುವ ಗುಲಾಬಿ ತನ್ನ ಮಗಳನ್ನು ತನ್ನ ಹಾಗಾಗಲು ಬಿಡದೆ ವಾಸುಭಟ್ಟನ ಸಹಾಯದಿಂದ ಸೂಕ್ತ ಗಂಡು ಹುಡುಕಿ ಮದುವೆ ಮಾಡುವುದು ಸಮಾಜಸೇವೆಯಲ್ಲಿ ಆಸಕ್ತಿ ಇರುವ ಲೇಖಕರ ಮನದ ಆಸೆಗೆ ಇಂಬು ಕೊಟ್ಟಂತೆ ತೋರುತ್ತದೆ. ಮೋನಪ್ಪನ ಬೆದರಿಕೆಗೆ ಜಗ್ಗದ, ಅರಬಳ್ಳಿ ಸ್ವಾಮಿಯವರ ಅನುಯಾಯಿಯಾಗಿರುವ ಗುಲಾಬಿ ತನ್ನ ಮಿತಿಯಲ್ಲಿಯೇ ಒಳ್ಳೆಯತನ ಮೆರೆಯುವ ಹೆಣ್ಣಾಗಿ ಚಿತ್ರಿತವಾಗಿರುವುದು ಇಲ್ಲಿ ವಿಶೇಷವಾಗಿ ಕಂಡುಬರುತ್ತದೆ.

ಮತ್ತೊಂದು ಸ್ತ್ರೀಪಾತ್ರ ಚನ್ನಕ್ಕ ಗಂಡನೊಂದಿಗೆ ಮುಂಬಯಿಗೆ ಹೋದರೂ ಮುಂದೆ ಒಬ್ಬ ಶೇಟ್ ನ ರಖಾವಾಗಿ ಅಪಾರ ಹಣ ಸಂಪಾದಿಸಿದಾಕೆ. ವರ್ಷಕ್ಕೊಮ್ಮೆ ಜಾತ್ರೆಗೆ ಬಂದಾಗ ಆಟ ಕಟ್ಟಿಸಿ ಊರಿಗೆ ಸಂತರ್ಪಣೆ ಮಾಡಿಸುವವಳು. ಊರಲ್ಲಿ ತೋಟ ಮನೆ ಮಾಡಿಕೊಂಡು ಬಡ್ಡಿಗೆ ಸಾಲಕೊಡುವ ಇವಳು ವಯಸ್ಸಾದ ಮೇಲೆ ಊರಿಗೆ ಹಿಂದಿರುಗುತ್ತಾಳೆ. ಇಷ್ಟರಲ್ಲಿ ಏನೂ ವಿಶೇಷವಿಲ್ಲ . ಆದರೆ ತನ್ನ ಊರಿಗೆ ನೆನಪಾಗಿರುವಂತೆ ಏನಾದರೂ ಕೊಡುಗೆ ಕೊಡಬೇಕೆಂದು ಕಲ್ಯಾಣ ಮಂದಿರ ಹಾಗೂ ಅದಕ್ಕೆ ತಕ್ಕ ಪಾತ್ರೆಪಡಗಗಳನ್ನು ದಾನವಾಗಿ ಕೊಡುವ ಅವಳ ವಿಶಾಲ ಮನೋಭಾವ ಮೆಚ್ಚತಕ್ಕದ್ದು. ಅವಳ ತಮ್ಮನ ವಾವೆಯ ವೆಂಕ ಅವಳ ಬಲಗೈ ಬಂಟ . ಅವನ ನಿಷ್ಠೆಯೂ ಸಹ ಶ್ಲಾಘನೀಯ.

ಮುಖ್ಯವಾಗಿ ಇಲ್ಲಿರುವುದು ಸ್ವಾತಂತ್ರ್ಯ ಹೋರಾಟದ ವಿಷಯ ಮತ್ತು ಎರಡನೇ ಮಹಾ ಯುದ್ಧದ ಪರಿಣಾಮಗಳು. ಲೆವಿ ಪದ್ದತಿಯಲ್ಲಿ ಬೆಳೆದವರಿಂದ ಅಕ್ಕಿ ಮುಟ್ಟುಗೋಲು ಹಾಕಿಕೊಳ್ಳುವುದು, ರೇಶನಿಂಗ್ ನಲ್ಲಿ ವಸ್ತುಗಳು ಕಾಳಸಂತೆಯಲ್ಲಿ ಬಿಕರಿಯಾಗುವುದು, ಮತ್ತು ಎಲ್ಲದಕ್ಕೂ ಅಭಾವ !ಕಡೆಗೆ ತೆಳ್ಳಗಿನ ಪಂಚೆ ಸಹ ಸಿಗದೆ ಪರದಾಡುವುದು. ಈ ವಿಷಯಗಳ ಬಗ್ಗೆ ಹೆಚ್ಚಿನ ಅನುಭವವಿರದ ನಮಗೆ ಹೊಸದಾಗಿ ಗೋಚರವಾಗುತ್ತದೆ. ಈ ಬಿರುಗಾಳಿಯಲ್ಲಿ ಹಾರಿಹೋದ ತರಗಲೆಗಳು ಕೆಲವಾದರೆ ಹೊಸ ನೆಲೆ ಬೆಲೆ ಕಂಡುಕೊಂಡು ಕಂಡವರ ಮನೆಗೆ ಬಿದ್ದ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಂಡವರು ಹಲವರು. ಕಾಲಚಕ್ರದ ಸುತ್ತಾಟದಲ್ಲಿ ಒಂದಷ್ಟು ಜನ ಮೇಲೇರಿದರೆ ಮತ್ತಷ್ಟು ಜನ ಕೆಳಗಿಳಿದರು. ಬೆಂದ ಮನೆಗೆ ಹಿರಿದದ್ದೇ ಲಾಭ .ಲೇಖಕರು ಮುನ್ನುಡಿಯಲ್ಲಿ ಹೇಳಿದ ಹಾಗೆ “ಜೀವನದಲ್ಲಿ ತೋರಿಕೆಯ ಯಶಸ್ಸಿಗೆ ದ್ರವ್ಯಾರ್ಜನೆಗಾಗಿ ಅಧಿಕಾರ ಲಾಲಸೆಗೆ ಜನಸಾಮಾನ್ಯರ ಮನಸ್ಸು ಯಾವ ತೆರನಲ್ಲಿ ಧಾವಿಸುತ್ತದೆ ಅದರಲ್ಲಿ ಯಶಸ್ಸು ಎಂಥವರದ್ದು, ಯಾವ ತೂಕಗಳು ಸಮಾಜದ ಸರಸ್ಸಿನ ತಳವನ್ನು ಸೇರಿ ಇದ್ದು ಕಾಣಿಸದಾಗುತ್ತದೆ .ಯಾವುವು ನೀರಮೇಲಿನ ಬುರುಗಿನಂತೆ ಮೇಲಕ್ಕೆ ಬರುತ್ತದೆ. ಅಂತಹ ಬುರುಗೇ ಎಂಥಾ ಮನ್ನಣೆ ಗಳಿಸುತ್ತದೆ” ಇದೇ ಕಥೆ .ಉಕ್ಕಿದ ನೊರೆ ಗಳು ಹೊಳೆಯುತ್ತವೆ ಮೇಲೆ ತೇಲುತ್ತವೆ ತೂಕದ ಗುಣಗಳು ಮುಳುಗುತ್ತವೆ. ಎಂಥಾ ವಿಪರ್ಯಾಸವಲ್ಲವೇ? ಈ ಸಾರ್ವಕಾಲಿಕ ಸತ್ಯದ ಅನಾವರಣ ಇಲ್ಲಿ ಆಗಿದೆ. ಲೇಖಕರ ಶೈಲಿಯಂತೂ ಅಪಾರ ವಿಸ್ತಾರದ ಶಾಂತ ಸಾಗರದ ಮೇಲ್ಮೈ ಯಂತೆ .ನಿರುದ್ವಿಗ್ನವಾಗಿ ನಿರ್ಭಾವುಕವಾಗಿ ಕಥೆಕಟ್ಟುವ ರೀತಿಯಂತೂ ಅನನ್ಯ ಅನುಪಮ. ಇಲ್ಲಿ ಎಲ್ಲವೂ ಮ್ಯಾಟರ್ ಆಫ್ ಫ್ಯಾಕ್ಟ್. ಯಾರದರ ಸ್ವಭಾವದ

ವೈಭವೀಕರಣವಾಗಿಲ್ಲ ಯಾರೊಬ್ಬರ ಗುಣದ ತುಚ್ಚೀಕರಣವಿಲ್ಲ. ಅತಿ ಭಾವುಕತೆ ಅಂತೂ ಹೆಸರಿಗೂ ಇಲ್ಲ .ಇಂತಹ ನಿಷ್ಪಕ್ಷಪಾತ ನಿರೂಪಣೆ ತೀರ್ಮಾನವನ್ನು ಓದುಗರಿಗೆ ಬಿಟ್ಟುಬಿಡುತ್ತದೆ. ಸಂದರ್ಭಗಳಂತೂ ಸಾರ್ವತ್ರಿಕ. ಪ್ರತಿ ಊರಿನಲ್ಲಿಯೂ ಶೀನ ಭಟ್ಟ, ವಾಸು ಭಟ್ಟ, ಶರಭಯ್ಯ, ಶಿವಯ್ಯ ಪುರಾಣಿಕ ರಿರುತ್ತಾರೆ. ಗುಲಾಬಿ ಚನ್ನಕ್ಕರಂತಹ ಹೆಣ್ಣುಗಳೂ ಇರುತ್ತಾರೆ. ಹಾಗೆಯೇ ಆ ಇಪ್ಪತ್ತೈದು ವರ್ಷಗಳ ಕಾಲಗತಿಯಲ್ಲಿ ಪರಿಸರ ಹೇಗೆ ಬಡವಾಗುತ್ತಿದೆ ಎಂಬುದನ್ನು ಮಾಯವಾಗುವ ದಣಪೆ ಗಳು ಅಗಲವಾಗುವ ವೈಯಕ್ತಿಕ ಆಸ್ತಿಗಳ ಉದಾಹರಣೆ, ಕಾಡುಗಳ ನಾಶ ಇದರ ಮೂಲಕ ಹೇಳಿರುವುದು ಲೇಖಕರ ಪ್ರಿಯವಾದ ಪರಿಸರ ಕಾಳಜಿಯ ಮಗ್ಗುಲನ್ನು ತೋರಿಸುತ್ತದೆ . ಇದು ನಿರಂತರ ಚಲನಶೀಲತೆಯ ಚರಿತ್ರೆಯ ಸರಿತೆಯ ಗತಿ . ಇಲ್ಲಿ ಆದಿ ಮುಖ್ಯವಲ್ಲ ಅಂತ್ಯ ನಿರ್ದಿಷ್ಟವಿಲ್ಲ. ಹೊಳೆಯ ಹರಿವು ಮಾತ್ರ ನೇರ ಚಿರಂತನ ಖಚಿತ. ಹಾಗಾಗಿಯೇ ಯಾವುದೇ ಘಟನೆಗಳ ಸಂಭವನೀಯತೆಯಲ್ಲಿ ಕೊನೆಯಾಗದ ಕಾದಂಬರಿ. ಮುಕ್ತಾಯವಾದ ಹಾಗೂ ಅಲ್ಲ ಇದೇ ಮುಕ್ತಾಯ ಮತ್ತೊಂದು ಆರಂಭವಾದರೂ ಆಗಬಹುದು . ಹೆಚ್ಚುಕಡಿಮೆ ಒಂದು ಶತಮಾನದ ಹಿಂದಿನ ಕಥೆ ಈಗಲೂ ಪ್ರಸ್ತುತವೆನಿಸುವುದು ಮಾನವ ಸ್ವಭಾವಗಳ ಅನಂತ ವೈಶಾಲ್ಯತೆಯ ವೈವಿಧ್ಯತೆಯ ನಿಯಮಿತ ನಿರ್ದಿಷ್ಟತೆಯ ದ್ಯೋತಕವೂ ಹೌದು. ಮೂಲಭೂತತೆಯ ಬುನಾದಿ ಪ್ರತಿಯೊಬ್ಬರಲ್ಲೂ ಒಂದೇ .ಹಾಗಾಗಿ ಇದು ನಮ್ಮ ನಿಮ್ಮದೂ ಕಥೆ. ಅವರದೂ ಇವರದೂ ವ್ಯಥೆ. ಪ್ರತಿ ಹಳ್ಳಿಯಲ್ಲೂ ನಡೆಯುವ ರಾಮಾಯಣವೇ ಮಹಾಭಾರತವೇ .

ಓದಲೇಬೇಕಾದ ಕಾದಂಬರಿ ಎಂದು ಮತ್ತೆ ಹೇಳಬೇಕೆ ? ಕಾರಂತರದು ನುಡಿಮುತ್ತುಗಳ ಮೂಲಕ ಮುಕ್ತಾಯ ಹೇಳುತ್ತೇನೆ .

“ಬದುಕಿನಲ್ಲಿ ಪರಮಾವಧಿ ತೃಪ್ತಿ ನೀಡುವುದು ತಾನು ಸರಿಯಾಗಿ ನಡೆದುಕೊಂಡಿದ್ದೇನೆ ಎಂಬ ಆತ್ಮವಿಶ್ವಾಸ”.

“ಇರುವಷ್ಟು ದಿನ ನಮಗೂ ಇತರರಿಗೂ ಹಿತವಾಗುವ ಹಾಗೆ ಬದುಕುವುದು; ಪರರಿಗೆ ಸುಖ ಕೊಡಲು ಆಗದಿದ್ದರೂ ದುಃಖ ಕೊಡದಿರುವುದು”.


  • ಸುಜಾತಾ ರವೀಶ್ – ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW