ಸ್ವಾತಿ ಗಿರಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದಾಳಾ?…ಗಿರಿ ಅವಳ ಕನಸಲ್ಲಿ ಬಂದು ಹೋಗುತ್ತಿದ್ದ. ಸ್ವಾತಿ ಆ ಕನಸ್ಸಿನಿಂದ ಹೊರಗೆ ಬರಲು ಇಷ್ಟ ಪಡುತ್ತಿರಲಿಲ್ಲ. ಕನಸ್ಸಲ್ಲಿ ನಡೆದ ಪ್ರೇಮ ಕತೆಯೇ? ಅಥವಾ ಅದು ವಾಸ್ತವವೇ ?..ವಿಮಲಾ ಪದಮಗೊಂಡ ಅವರ ಶೂಲಿನ್ ಸಣ್ಣಕತೆಯನ್ನು ತಪ್ಪದೆ ಓದಿ…
ನಾಲ್ಕೈದು ದಿನದಿಂದ ಬಿಡದೇ ಸುರಿಯುತ್ತಿರುವ ಮಳೆ, ಗಿಡಗಳೂ ಕೂಡ ಮಳೆ-ಚಳಿಯಿಂದ ಹೊಟ್ಟೆಯೊಳಗೆ ಕೈಕಾಲುಗಳನ್ನು ಎಳೆದುಕೊಂಡು ನಿಂತಿವೆ. ಸುಯ್ಯನೆ ಬೀಸುವ ಗಾಳಿಯನ್ನು ಒಮ್ಮೆ ಉಸಿರೊಳಗೆ ಎಳೆದಾಗ ಥೇಟ್ ಫ್ರೀಡ್ಜ್ ಗಾಳಿ ಮೂಗಿನೊಳಗೆ ಇಳಿದಂತೆ. ಭೂಮಿ ತಾಯಿ ನದಿಯೊಳಗೆ ಮಿಂದೆದ್ದಂತೆ ಅವಳ ದೇಹವಿಡೀ ಒದ್ದೆಯಾಗಿದೆ ಒಂದು ವಾರದಿಂದ, ಮೈ ಅರಳಿಸಿ ತನ್ನ ಅಂಗಕ್ಕೆ ತುಸು ಕಾವು ಕೊಡುವ ತರಾತುರಿಯಲ್ಲಿ ನಿಂತಿದ್ದಾಳೆ ಆದರೆ ಸೋಂಬೇರಿ ಸೂರ್ಯ ಇನ್ನೂ ಆಕಳಿಸುತ್ತಾ ಕಾಲ ಕಳೆಯುತ್ತಿದ್ದಾನೆ ತನ್ನ ಮನೆಯೊಳಗೆ.
“ಥತ್ …!! ಈ ದರಿದ್ರ ರೋಡುಗಳ ರಿಪೇರಿ ಇದೇ ಟೈಮಲ್ಲಿ ಶುರು ಮಾಡ್ಕೊಂಡಿದಾರೆ, ಅಕ್ಕಪಕ್ಕದ ದಾರಿಗಳೆಲ್ಲ ಕೆಸರಿನಲ್ಲೇ ಒದ್ದಾಡುತ್ತಿದಾವೆ”. “..ಎಂಥ ಕರ್ಮ ಇದು..”!!
“ಕಾಲೇಜು ಬಂಕ್ ಮಾಡುವ ಹಾಗಿಲ್ಲ, ಸ್ಕೂಟಿ ಅಂತು ಈ ಕೆಸರಿನ ಹಾದಿಗಳನ್ನು ನೋಡಿ ಹೊರಗೆ ಬರಲು ತಯಾರಿಲ್ಲ ಚೂರು , ಎಷ್ಟೇ ರಮಿಸಿದರೂ, ಅದಕ್ಕೂ ಕೊಬ್ಬು ಬಂದಿದೆ ಇತ್ತೀಚಿಗೆ ನನ್ನ ತರ…”!!
“ಇಷ್ಟು ಬೇಗ ಅಪ್ಪನಿಗೆ ಎಬ್ಬಿಸಿ ಕಾರಲ್ಲಿ ಡ್ರಾಪ್ ಕೊಡು ಅಂತ ಹೇಳೋಕು ಮನಸಿಲ್ಲ..”!
“ಮೇನ್ ರೋಡವರೆಗೆ ನಡ್ಕೊಂಡು ಹೋಗಿ ಅಲ್ಲಿಂದ ಏನಾದ್ರೂ ಆಟೋ ಸಿಕ್ರೆ ತೆಪ್ಪಗೆ ಹೋಗೊದು ಬಿಟ್ಟು ಬೇರೆ ದಾರಿ ಇಲ್ಲ ನಂಗೆ..”!.
“ಈ ಕೆಂಪು ಮಣ್ಣು, ಅಲ್ಲಲ್ಲಿ ಕೆಸರಿನ ನೀರು ತುಂಬಿಕೊಂಡಿರೊ ಗುಂಡಿಗಳು ನೋಡಿದ್ರೆ ಯಾರೋ ಚಹಾ ಮಾಡಿ ಟ್ಯಾಂಕಿನಿಂದ ಸುರುವಿ ಹೋದಂತೆ ಇದೆ ಅಲ್ಲ…”!!
“ಥೂ ..! ಇಂಥ ಕೆಸರಲ್ಲಿ ಹರಸಾಹಸ ಮಾಡಿ ಹೋಗುವಾಗ್ಲೂ ನಂಗೆ ಚಹಾ ನೆನಪಾಗುತ್ತಲಾ, ನನ್ನ ಮಂಡೇಲಿ ಅದೇ ತುಂಬ್ಕೊಂಡಿದೆ…! ಕ್ಯಾಂಪಸ್ ಗೆ ಹೋದ್ಮೇಲೆ ಕ್ಯಾಂಟೀನಿನಲ್ಲಿ ಮೊದಲು ಎರಡು ಕಪ್ ಚಹಾ ಕುಡಿದೇ ಕ್ಲಾಸಿಗೆ ರಾಯಲ್ ಎಂಟ್ರಿ ಕೊಡಬೇಕು..ಆಗ ಜೀವಕ್ಕ ಸಮಾಧಾನಪ್ಪ , ಇಷ್ಟು ಸಾಹಸ ಮಾಡಿ ಕಾಲೇಜಿಗೆ ಹೋದಾಗ..”!!
“ಉಫ್ …!! ಇನ್ನೂ ಎಷ್ಟೊತ್ತು ನಿಲ್ಬೇಕು ಆಟೋಗಾಗಿ , ಇಲ್ಲಿ ಮೇನರೋಡಲ್ಲಿ ಗಾಡಿ ಸಿಗ್ತವೆ ಅಂದ್ರೆ ಒಂದೂ ಬರ್ತಿಲ್ಲ ಅಲ ಬಡ್ಡೇತಾವು…!! ಎಲ್ಲಾ ಮಳೇಲಿ ಕೊಚ್ಕೊಂಡು ಹೋದಾ ಹೆಂಗೇ..”!!
“ಹೇ….!!
ಎಷ್ಟೊತ್ತಿಂದ ಕಾಯ್ತಾ ನಿಂತಿಯಾ ಇಲ್ಲೇ “? ಜಿಟಿಜಿಟಿ ಮಳೆ, ಅದರಲ್ಲಿ ಈ ಮೇನ್ ರೋಡ್ ಕೂಡ ದುರಸ್ತಿ ಕಾಮಗಾರಿ ನಡೀತಿದೆ ಅಲ್ಲಿ ಮುಂದೆ , ಫೋರ್ ವ್ಹೀಲರ್ ಹೋಗೋದು ಡೌಟು ಇಲ್ಲಿಂದ, ಕಾಲೇಜಿಗೇ ಅಲ್ವಾ ಹೋಗೋದು , ಬೈಕ್ ಹತ್ತು ಡ್ರಾಪ್ ಮಾಡ್ತಿನಿ..”!!
“ಬೇಡ ಬೇಡ ನಾನು ವೇಟ್ ಮಾಡಿ ಹೋಗ್ತಿನಿ ,ತೊಂದ್ರೆ ಇಲ್ಲ ಇನ್ನೂ ಟೈಮಿದೆ… ನೀವು ಹೊರಡಿ ಗಿರಿ” .
“ಇದು ಯಾಕೋ ಓವರ್ ಆಯ್ತು ಅಲ, ಇಷ್ಟು ವರ್ಷ ನೋಡ್ತಿದಿಯಾ ನನ್ನ, ಇಬ್ಬರ ಮನೆಗಳೂ ಹತ್ತೀರದಲ್ಲೇ ಇವೆ, ಇಬ್ಬರ ಮನೆಯವರೂ ಪರಿಚಯ ಪರಸ್ಪರ, ಇಷ್ಟಿದ್ರೂ ಸ್ಟ್ರೇಂಜರ್ ತರ ನೋಡ್ತಿ ಅಲ ನನ್ನ…ನಂಬಿಕೆ ಇದ್ರೆ ಗಾಡಿ ಹತ್ತು…”!!
“..ಛೇ ಛೇ ನಂಬಿಕೆ ಮಾತಲ್ಲ ಗಿರಿ, ನಿಮ್ಮ ಆಫೀಸಿಗೆ ಲೇಟ್ ಆಗ್ಬೋದು ಅದ್ಕೆ ತೊಂದ್ರೆ ಯಾಕೆ ಅಂತ ಹೇಳ್ದೆ ಅಷ್ಟೇ, ಬರ್ತಿನಿ ನಡೀರಿ..”!!
“ಬೇಗ ಹತ್ತು ಮಾರಾಯ್ತಿ, ನಮ್ದು CBI ಡಿಪಾರ್ಟ್ಮೆಂಟ್, ತಡವಾದ್ರೆ ಮತ್ತೆ ಸ್ವಲ್ಪ ಕಿರಿಕ್ ಮಾಡ್ತಾರೆ, ಅದರಲ್ಲಿ ನಾನಿನ್ನು ಹೊಸಬ.., ಈ ಮಳೆಯಿಂದಾಗಿ ಕಾರ್ ಬಿಟ್ಟು ಬೈಕ್ ತಗೊಂಡು ಬಂದೆ..”!!
“ಓಹ್…ಗೊತ್ತು ನಡೀರಿ..ನೀವು , ನಿಮ್ಮ CBI..”!!
“ರೋಡ್ ಚೆನ್ನಾಗಿಲ್ಲ ಸರಿಯಾಗಿ , ಗಟ್ಟಿಯಾಗಿ ಹಿಡ್ಕೊಂಡು ಕೂಡು, ತೊಂದ್ರೆ ಇಲ್ಲ ಅಂದ್ರೆ ನಂಗೆ ಹಿಡ್ಕೊ , ಬೇಡ ಅಂದ್ರೆ ಬೈಕಿಗೆ ಹಿಡ್ಕೊ… ಒಟ್ನಲ್ಲಿ ಹಿಡ್ಕೊಂಡು ಕೂಡಮ್ಮ..ಹಹಹ…”!!
“ಗೊತ್ತು ನಂಗೆ, ಮುಂದೆ ನೀವು ಸರಿಯಾಗಿ ಬೈಕ್ ಓಡ್ಸಿ , ನಾನು ಸರಿಯಾಗೇ ಕೂತಿನಿ…ಬಂದ್ಬಿಟ್ರು ಹೇಳೋಕೆ..”!!
“ಓಕ್ಕೇsss…. ಹೆಣ್ಮಕ್ಕಳ ಜೊತೆ ವಾದ ಮಾಡ್ಬಾರ್ದು ಅಲ್ವಾ ಜಾಸ್ತಿ..”?
“ಹಾಗೇನಿಲ್ಲ ಗಿರಿ..”!
“….ಇವನನ್ನು ದೂರದಿಂದ ನೋಡೋದು, ಸ್ಮೈಲ್ ಕೊಡೋದು , ಮನೆ ಹತ್ರ ಸಿಕ್ಕಾಗ ಹೈ, ಬೈ ಅಂತ ಮಾತಾಡ್ತಿದ್ದೋಳು ಇವತ್ತು ಮೊದಲ ಸಲ ಇವನ ಜೊತೆ , ಬೈಕ್ ಮೇಲೆ ಹೋಗ್ತಾ ಇದಿನಿ…ಯಾಕೋ ತುಂಬಾ ವರ್ಷದ ಸಲುಗೆ ಅನಿಸ್ತಿದೆ ಇವನ ಭುಜದ ಮೇಲೆ ಕೈ ಇಟ್ಟಾಗಿಂದ… ದೂರ ದೂರದಿಂದ ಮಾತಾಡ್ತಿದ್ದೋರು ತುಂಬಾನೇ ಹತ್ತಿರವಾಗಿ ಇಬ್ಬರ ಮನಸ್ಸಿನಾಳದ ಮಾತುಗಳನ್ನು ವಿನಿಮಯ ಮಾಡಿಕೊಂಡಂಥ ಫೀಲ್. ತುಂಬಾ ಜನ ಮೇಲ್ ಫ್ರೇಂಡ್ಸ್ ಜೊತೆಗೆ ಅಡ್ಡಾಡಿದ್ದೀನಿ ಬೈಕ್ ಮೇಲೆ ಆದ್ರೆ ಯಾವತ್ತೂ ಹೀಗಾಗೇ ಇಲ್ವಲ್ಲ, ಯಾಕೋ ಎದೆ ಬಡಿತ ಚೂರು ಕೇಳಿಸುವ ರೀತಿ ಚುರುಕಾಗಿ ಬಡಿದುಕೊಳ್ಳುತ್ತಿದೆ. ಇವನ ಪರ್ಫ್ಯೂಮ್ ಸುಗಂಧ ಮೂಗಿಗೆ ತಾಗಿದ್ರು ಹೃದಯದೊಳಗೆ ಸಂಚರಿಸಿದಂತೆ ಆಗ್ತಿದೆ. ಇವ್ನನ್ನು ದೂರದಿಂದ ನೋಡಿದಾಗೆಲ್ಲ ಕಣ್ಣಿಗೆ ಇಂಥ ಆಕರ್ಷಣೆ ಯಾವತ್ತೂ ಆಗಿಲ್ಲ ಆದರೆ ಇವತ್ತು ನನ್ನ ಹೃದಯಕ್ಕೆ..!?
ಹೃದಯಕ್ಕೇ ಕಣ್ಣು ಬಂದಂತಾಗಿ ಇವನನ್ನು ನೋಡ್ತಿವೆ…! ಇವನ ಸ್ಕೈ ಬ್ಲೂ ಕಲರ್ ಫಾರ್ಮಲ್ ಶರ್ಟ್, ಗ್ರೇ ಕಲರ್ ಪ್ಯಾಂಟ್, ಇವನ ನಿಟಾದ ಹೇರ್ ಕಟಿಂಗ್, ಜಿಮ್ಮಲಿ ವರ್ಕೌಟ್ ಮಾಡುವ ಎರಡೂ ಬಾಹುಗಳು. ಮಾತಾಡುವಾಗ ತುಟಿ ಮೇಲೆ ಬೀರುವ ಮುಗುಳ್ನಗೆ, ಕಣ್ಣುಗಳಿಗೆ ನೇರವಾಗಿ ಗುರಿ ಇಟ್ಟು ಸಂವಹನ ನಡೆಸುವ ಇವ್ನ ಮಾತಿನ ಆಕರ್ಷಣೆ. ಮಕ್ಕಳ ಹಾಗೆ ನೇರವಾಗಿ ಹೃದಯದಿಂದಲೇ ಹೊರಹೊಮ್ಮುವ ಒಲುಮೆಯ ನುಡಿಗಳು.. ಇವನ ಸಾಮಿಪ್ಯದ ಸ್ಪರ್ಷ ಸುಮಾರು ವರ್ಷಗಳ ಸ್ಪರ್ಶದಂತೆ ಅನುಭವ ಆಗ್ತಿದೆ…! ಇಲ್ಲಿಯವರೆಗೆ ಯಾವುದೇ ಹುಡುಗ ನನಗಿಷ್ಟು , ನನ್ನೊಳಗೆ ಡಿಸ್ಟರ್ಬ್ ಮಾಡಿಲ್ಲ…ಅವನಿಗೂ ಹೀಗೇ ಆಗ್ತಿದೇಯೋ ಅಥವಾ ನನಗೊಬ್ಬಳಿಗೆ ಮಾತ್ರ..”!!
“ಮತ್ತೆ …!
ಓದು ಹೇಗ್ ನಡದಿದೆ ಸ್ವಾತಿ..!! MBA ಮುಗಿಸಿ ಮುಂದೆ ಏನ್ ಮಾಡುವ ಪ್ಲಾನ್..?
“ಹ್ಞಾಂ ಗಿರಿ….”!
“ಇವನ ಬಾಯಲ್ಲಿ ‘ಸ್ವಾತಿ’ ಅಂತ ಕೇಳಿ ನನ್ ಕಿವಿ ತಕ್ಷಣ ಚುರುಕಾಯ್ತು…! ನಂಗ್ಯಾಕೊ, ಯಾವ್ದೋ ರೋಗ ಬಂದಂಗಾಗ್ತಿದೆ ಅಲ ಸಡನ್ನಾಗಿ”.
“..ಎಕ್ಸಾಂ ಮುಗಿದ್ಮೇಲೆ ಡಿಸೈಡ್ ಮಾಡ್ತಿನಿ , ಈಗಿನ್ನೂ ಯೋಚ್ನೆ ಮಾಡಿಲ್ಲ..”!
“ಏಯ್…..!! ಸೋಂಬೇರಿ …ಎದ್ದೇಳೆ.!
ರಜೆ ಇದ್ರೆ ಸಾಕು ಮನೆ ತುಂಬಾ, ಎಲ್ಲಾ ರೂಮಗಳಲ್ಲಿ ಗೊರಕೆ ಶಬ್ದ , ಗಂಟೆ ಹತ್ತಾಗಿದೆ…! ನಂಗೆ ಸಂಡೆ, ಮಂಡೆ ಎಲ್ಲಾ ಒಂದೇ ತರ … ನೀವು ಅಪ್ಪ ಮಕ್ಳು ಮಾತ್ರ ಗುಡ್ಡಾ ಕಡದು ಹಾಕದಂಗೆ ಎದ್ದೇಳೋದೆ ಇಲ್ಲ ನಾನು ಎಬ್ಸೋವರ್ಗೂ. ನಾನು ತಿಂಡಿ ಮಾಡ್ತಿದಿನಿ ಮರ್ಯಾದೆಯಿಂದ ಎದ್ದು ಸ್ನಾನಾ ಮಾಡಿ ಎಲ್ರೂ….”!
“ಥೂ….ಅಮ್ಮನ ಕೂಗಾಟ ಕಿವಿಯೊಳಗೆ ಇಳೀತಿದ್ದ ಹಾಗೇ ಒಂದು ಕಣ್ಣು ತೆರೆದು ಅವಳನ್ನು ನೋಡಿ…ಐದು ಸೆಕೆಂಡ್ ಆದ್ಮೇಲೆ ನಂಗರಿವಾಯ್ತು ‘ಇಷ್ಟೊತ್ತು ನಾನು ಕಂಡಿದ್ದು ಕನಸು ಅಂತ’..”!
“ಹೇ ಏನಮ್ಮಾ ನೀನು… ಕನಸುಗಳಿಗೂ ನೆಮ್ಮದಿಯಾಗಿರೋಕ್ ಬಿಡಲ್ಲ ಅಲ ನೀನು…ಹೋಗಮ್ಮ ನೀನೂ…ಏನೋ ಹೊಸ ಕನಸು ಬೀಳ್ತಿತ್ತು ಇವತ್ತು…ನಿನ್ ತಿಂಡಿ ನೀನೇ ತಿನ್ಕೋ ಹೋಗು…”!!
“ಇವರಿಗೆ ಒಂದೂ ಕೆಲ್ಸಾ ಮಾಡೋಕ ಬರಲ್ಲ, ಎಲ್ಲಾ ತಯಾರಿ ಮಾಡಿ ಕೊಟ್ರೂ ಕೊಬ್ಬು ಇವ್ರಿಗೆ…ನಾನು ಒಂದ್ವಾರ ಟ್ರಿಪ್ಪಿಗೋ ಎಲ್ಲೋ ಹೋಗ್ಬೇಕು ಫ್ರೆಂಡ್ಸ್ ಜೊತೆ. ಆವಾಗ ಗೊತ್ತಾಗುತ್ತೆ ಅಪ್ಪ ಮಕ್ಳಿಗೆ ಅಮ್ಮನ ಬೆಲೆ…”!
“..ಬೆಳಿಗ್ಗೆ ಎದ್ದಾಗಿಂದ ಮನಸ್ಸು ಪೂರ್ತಿಯಾಗಿ ಚಂಚಲ, ಇಡೀ ದಿನ ನಾನು ನಾನಾಗೇ ಇಲ್ಲ ಇಂದು. ಪೊರೆ ಕಳಚಿ ಮರುಹುಟ್ಟು ಪಡೆದಂತಾಗಿದೆ ಮನಸ್ಸಿಗೆ. ಹೊಸದಾಗಿ ಏನೋನೋ ಅನುಭವ. ಏನೇನೋ ಹೊಸ ಭಾವನೆಗಳು ‘ಹೆಣ್ಣು ಮೊದಲ ಬಾರಿ ಮೈನೆರೆದು ತನ್ನನ್ನು ನೋಡಿ ತಾನೇ ನಾಚಿಕೊಂಡಂತೆ, ತನ್ನೊಳಗೇ ಹೊಸದಾದ ಲೋಕವೊಂದು ಸೃಷ್ಟಿಯಾದಂತ ಅನುಭವ”.
“ಅಲ್ಲಾ…ಒಬ್ಬ ಹುಡುಗ ನನ್ನ ಕನಸಲ್ಲಿ ಬಂದು, ಪ್ರೇಮ ನಿವೇದನೆ ಮಾಡದೆ, ನಂಗೆ ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಕ್ಕೆ ನನ್ನಲ್ಲಿ ಪ್ರೇಮದ ಭಾವ ಹುಟ್ಟಿಕೊಂಡಿದೆ ಅಂದ್ರೆ ನಂಗೇನು ಹುಚ್ಚು ಹಿಡಿತಿದೇಯಾ ಅಥವಾ ನಾನೇ ತೀರಾ ಈ ಕನಸಿನ ಕಲ್ಪನೆ ಲೋಕದೊಳಗೆ ಮುಳುಗಿ, ಅತೀಯಾಗಿ ಯೋಚ್ನೆ ಮಾಡ್ತಿದೀನಾ!!?”
‘ಗಿರಿ’ ಪದದ ಅರ್ಥ, ‘CBI’ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ… ಗೂಗಲ್ನಲ್ಲಿ ನೋಡ್ತಾನೇ ಇದಿನಿ ಮಧ್ಯಾಹ್ನಯಿಂದ. ಕನಸಲ್ಲಿ ಏನೇನಾಯ್ತೋ ಅದೆಲ್ಲವನ್ನೂ ಮತ್ತೆ ಗಿರಿಯನ್ನು ಪದೆ ಪದೆ ಉದ್ದೇಶಪೂರ್ವಕವಾಗಿ ಕಣ್ಣೆದುರು ಸೃಷ್ಟಿಸಿಕೊಳ್ತಾ ಇದಿನಿ.!! ಒಮ್ಮೆ ಆಶ್ಚರ್ಯ, ಒಮ್ಮೆ ಕುತೂಹಲ-ಪ್ರೇಮ ಹೇಗೆ ಹುಟ್ಟಿಕೊಳ್ಳುತ್ತೆ ಎನ್ನುವ ಬಗ್ಗೆ, ಮತ್ತೊಮ್ಮೆ ಕನಸಲ್ಲಿ ನನಗಾದ ಅನುಭವವನ್ನು ವಾಸ್ತವದಲ್ಲಿ ನವಿರಾದ ಒಲವಿನ ಭಾವನೆಗಳನ್ನು ಅನುಭವಿಸುವ ಹುಚ್ಚು ಸಾಹಸ…!? ಹೌದು ಸಾsssಹಸಾನೇ.!! ನನ್ನೆದೆಯೊಳಗೆ ಇದೇ ಮೊದಲ ಸಲಾ ಪ್ರೀತಿ ಇಣುಕಿ ಇಣುಕಿ ನನ್ನ ಮನಸ್ಸಿಗೆ ತಿವಿಯುತ್ತಿದೆ.
“ಈ ಡಿಸ್ಟರ್ಬ್ ಹಿತ ಅಥವಾ ಅಹಿತ ಅಂತ ವಿಂಗಡಿಸಿ ನಾನು ನಾರ್ಮಲ್ ಆಗಲೂ ಮನಸ್ಸೊಪ್ಪುತ್ತಿಲ್ಲ ಯಾಕೋ…!! ಇವತ್ತು ಮುಗುಳ್ನಗೇನೆ ತುಂಬಿದೆ ನನ್ ಮುಖದ ಮೇಲೆ. ಆ ಕನಸಿನ ಭ್ರಮೆಯಿಂದ ಏಕೋ ಎಚ್ಚರವಾಗಲು ಮನಸೇ ಒಪ್ತಿಲ್ಲ!!”.
“ಸ್ವಾತಿ…ಇನ್ನೂ ಸ್ವಲ್ಪ ಅನ್ನ ತಿನ್ನು, ಹಪ್ಪಳ ಇಟ್ಟಿನಿ ನಿನ್ನೆದುರೇ…,! ದಿನಾ ಸಂಜೆ ಏನಾದ್ರೂ ಸ್ನ್ಯಾಕ್ಸ್ ತಿನ್ನೋಳು ಅಡುಗೆ ಮನೆಗ್ ಬಂದು..ಇವತ್ತೇನು ರೂಮ್ ಬಿಟ್ಟು ಜಾಸ್ತಿ ಹೊರಗೂ ಬಂದಿಲ್ಲ, ಜಾಸ್ತಿ ತಿಂದೂ ಇಲ್ಲ ಮಧ್ಯಾಹ್ನ . ಬೆಳಿಗ್ಗೆ ನಿದ್ದೆ ಹಾಳಾಗಿದ್ಕೆ ಬೇಜಾರಾ?”
“ಬೇಜಾರೇನಿಲ್ಲಮ್ಮ, ಸುಮ್ನೆ ರೆಸ್ಟ್ ಮಾಡ್ತಿದಿನಿ. ಮನೇಲಿದ್ದೇ ಅಲ್ವಾ ಬೆಳಿಗ್ಗೆಯಿಂದ ಅದಕ್ಕೆ ಹಸಿವಾಗಿಲ್ಲ ಜಾಸ್ತಿ” …ಹ್ಮಾ ಆದ್ರೂ ಕೊಪಾ ಇದೆ ಸ್ವಲ್ಪ, ನೀನು ಸ್ವಲ್ಪ ತಡವಾಗಿ ಎಬ್ಬಿಸ್ಬೇಕಿತ್ತು ಅಂತ..!!
” ಸರಿ ಊಟ ಮಾಡಿ ,ಹಾಲು ಕುಡಿದು ಮಲ್ಕೋ… ನಾನು ಮತ್ತೊಮ್ಮೆ ನಿಂಗ್ ಡಿಸ್ಟರ್ಬ್ ಮಾಡಲ್ಲ ಕಣಮ್ಮಿ…ಯಾವಾಗಾದ್ರೂ ಎದ್ದೇಳು ನಂಗೇನು.!!”
“ಹಂಗಾ…!! ನೋಡ್ತಿನಿ, ಈಗ ಹೇಳಿದ್ದು ಮಾತು ಎಷ್ಟು ದಿನ ಫಾಲೋ ಮಾಡ್ತಾಳೆ ನನ್ನಮ್ಮ ಅಂತ…! ಏನಪ್ಪಾ ನೀವೂ ನಂಬ್ತೀರಾ ಈ ಅಮ್ಮ – ಡುಮ್ಮಾ ಹೇಳೋದನ್ನ?”