ಕೋಟಿಕೋಟಿ ಹಣ ಹೊಂದಿರುವುದೇ ಬದುಕಲ್ಲ, ಸುತ್ತಲಿನ ಒತ್ತಡ ನಿರ್ವಹಣೆಯು ಸುಲಭವಲ್ಲ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ದುಡುಕದಿರು ಮನವೆ ದುಡುಕದಿರು
ಯೋಚಿಸಿ ಮನದೊಳಗೇ ಕೊರಗದಿರು
ಎಲ್ಲವೂ ಇದ್ದು ಇಲ್ಲದಂತೆ ಆಗದಿರು
ಸಮಸ್ಯೆಗಳ ಆಯುಷ್ಯ ಕಡಿಮೆ ಅರಿತಿರು
ಪರಿಹರಿಸಲಾರದ ಸಮಸ್ಯೆ ಇಲ್ಲವೇ ಇಲ್ಲ
ವಿಧಾಯ ಹೇಳಬೇಕು ನಾವು ಸಮಸ್ಯೆಗಳಿಗೆ
ತಡೆಯಲಾರದಂತ ಒತ್ತಡಗಳಿಗೆ ಮಣಿದು
ಅಂತ್ಯ ಹಾಡಬಾರದು ಸುಂದರ ಬದುಕಿಗೆ
ಸಾವಿರ ಕನಸುಗಳಹೊತ್ತು ಸಾಗುವವರಿಗೂ
ಕವಿಯುವುದು ಒಮ್ಮೊಮ್ಮೆ ಶೂನ್ಯತೆಯ ಭಾವ
ಅರೆಕ್ಷಣವೂ ತಡೆದುಕೊಳ್ಳಲಾಗದು ನೋವ
ತತ್ತರಿಸಿ ಹೋಗುವುದು ಒತ್ತಡದಿ ಪುಟ್ಟ ಜೀವ
ಕಷ್ಟದ ಸಂದರ್ಭಗಳು ಎದುರಾಗಿರುತ್ತವೆ ಹಲವು
ಆ ಕ್ಷಣವನ್ನು ಗೆದ್ದರಷ್ಟೇ ಬದುಕಿನ ಗೆಲುವು
ಚಿಂತಿಸದೆ ಮಂಥಿಸಿದಾಗಲೇ ಇಲ್ಲಿ ನಲಿವು
ಆಗಬೇಕು ಒತ್ತಡದ ಅಳಿವು ನಮ್ಮ ಉಳಿವು
ಕೋಟಿಕೋಟಿ ಹಣ ಹೊಂದಿರುವುದೇ ಬದುಕಲ್ಲ
ಸುತ್ತಲಿನ ಒತ್ತಡ ನಿರ್ವಹಣೆಯು ಸುಲಭವಲ್ಲ
ಎಲ್ಲವನ್ನೂ ಮೆಟ್ಟಿ ಮುಂದೆ ನಿಲ್ಲಲೇ ಬೇಕಿಲ್ಲಿ
ಮಾನಸಿಕ ಆರೋಗ್ಯಕ್ಕೆ ಒತ್ತು ಕೊಡಬೇಕಿಲ್ಲಿ
ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ
ಜೀವ ಜೀವನಕ್ಕಿಂತ ಆದ್ಯತೆ ಬೇರೆ ಏನಿಲ್ಲ
ಗೊತ್ತೇ ಆಗದಂತೆ ಅದಾಗದೆ ಬರಬೇಕು ಸಾವು
ನಾವು ಕೊಡಬಾರದು ದೇಹಕ್ಕೆ ಬಾಹ್ಯನೋವು
- ನಾಗರಾಜ ಜಿ. ಎನ್. ಬಾಡ, ಕುಮಟ.
