ಶಿಂಬುಲಾಕ್ ಹಿಮಲೋಕದಲ್ಲಿ ಜಾರಾಟ

ಸ್ಕೀ ಆಟಗಾರರ ಸ್ವರ್ಗ ಅಲ್ಮಾಟಿಯ ʻಶಿಂಬುಲಾಕ್ ಸ್ಕೀ ರಿಸಾರ್ಟ್‌ʼ ʻಝೈಲೆಸ್ಕಿ ಅಲಾಟೌʼ ಪರ್ವತ ಶ್ರೇಣಿಯಲ್ಲಿರುವ ʻಮೆಡಿಯುʻ ಕಣಿವೆ ಪ್ರದೇಶದಲ್ಲಿದೆ ʻಶಿಂಬುಲಾಕ್ ಸ್ಕೀ ರಿಸಾರ್ಟ್‌ʼ. ಇದು ಮಧ್ಯ ಏಷ್ಯದ ಅತ್ಯಂತ ದೊಡ್ಡ ಸ್ಕೀ ರೆಸಾರ್ಟ್‌ ಅಂತೆ. ಲೇಖಕಿ ಗೀತಾ ಕುಂದಾಪುರ ಅವರು ಆ ಸ್ಥಳಕ್ಕೆ ಭೇಟಿ ನೀಡಿ ಅನುಭವಿಸಿದ ಕ್ಷಣಗಳನ್ನು ತಮ್ಮ ಪ್ರವಾಸ ಕಥನದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ವರ್ಷದ ಹೆಚ್ಚಿನ ದಿನಗಳು ಹಿಮದ ಹೊದಿಕೆ ಹೊದ್ದುಕೊಂಡಿರುತ್ತದೆ, ಸ್ಕೀ ಆಟಗಾರರ ಸ್ವರ್ಗವಿದು, ಹಿಮದ ಬಿಳಿ ಸ್ವರ್ಗವನ್ನು ಕಣ್ತುಂಬಿಸಿಕೊಳ್ಳಲು ಬರುವ ಪ್ರವಾಸಿಗರ ದಂಡೇ ಇಲ್ಲಿದೆ, ಅದೇ ಅಲ್ಮಾಟಿಯ ʻಶಿಂಬುಲಾಕ್ ಸ್ಕೀ ರಿಸಾರ್ಟ್‌ʼ ʻಝೈಲೆಸ್ಕಿ ಅಲಾಟೌʼ ಪರ್ವತ ಶ್ರೇಣಿಯಲ್ಲಿರುವ ʻಮೆಡಿಯುʻ ಕಣಿವೆ ಪ್ರದೇಶದಲ್ಲಿದೆ ʻಶಿಂಬುಲಾಕ್ ಸ್ಕೀ ರಿಸಾರ್ಟ್‌ʼ, ʻಅಲ್ಮಾಟಿʼಯಿಂದ ಕೇವಲ 25 ಕಿಮಿ ದೂರದಲ್ಲಿದೆ. ಅಲ್ಮಾಟಿಯ ಬಗ್ಗೆ ಹೇಳಬೇಕೆಂದರೆ ಇದು ಕಝಕಿಸ್ತಾನದ ಆಗ್ನೇಯ ದಿಕ್ಕಿನಲ್ಲಿದೆ, ಇದು ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ. ಕಝಕಿಸ್ತಾನ ಮಧ್ಯ ಏಷ್ಯದಲ್ಲಿರುವ ದೇಶ, 1991ರ ವರೆಗೆ USSRನ ಭಾಗವಾಗಿದ್ದು ನಂತರ ಸ್ವತಂತ್ರವಾಯಿತು, ಆರ್ಥಿಕವಾಗಿ ಸಾಕಷ್ಟು ಮುಂದುವರಿದಿದೆ. ಅಲ್ಮಾಟಿಯ ಸರೋವರ, ಕಣಿವೆ ಪ್ರದೇಶ, ಮಂಜಿನ ಬೆಟ್ಟಗಳು, ಜಲಪಾತಗಳು ವಿದೇಶಿ ಪ್ರವಾಸಿಗರಿಗೆ ಸದಾ ಆಕರ್ಷಣೆಯಾಗಿದೆ.

ಸಮುದ್ರ ಮಟ್ಟದಿಂದ ಸುಮಾರು 2,200 ಮೀಟರ್‌ಗೂ ಅಧಿಕ ಎತ್ತರದಲ್ಲಿದೆ ಶಿಂಬುಲಾಕ್ ಸ್ಕೀ ರಿಸಾರ್ಟ್‌, ಇದು ಮಧ್ಯ ಏಷ್ಯದ ಅತ್ಯಂತ ದೊಡ್ಡ ಸ್ಕೀ ರೆಸಾರ್ಟ್‌ ಅಂತೆ. ಒಂದು ಕಾಲದಲ್ಲಿ ಅಂದರೆ 1,940ರ ವರೆಗೂ ಪ್ರವಾಸಿಗರಿಗೆ, ಆಟಗಾರರಿಗೆ ಅಪರಿಚಿತವಾಗಿತ್ತು ಈ ಪ್ರದೇಶ. ಮಂಜು ಮುಸುಕಿದ ಈ ಪ್ರದೇಶ ಅನಾವರಣಗೊಳ್ಳುತ್ತಿದ್ದಂತೆ ಸ್ಕೀ ಆಟಗಾರರು ಲಗ್ಗೆ ಇಡತೊಡಗಿದರು. ಮೊದಲು ಇಲ್ಲಿಗೆ ಆಟಗಾರರು ಸ್ಕೀ ಮಾಡಿಕೊಂಡೇ ಬರಬೇಕಿತ್ತು. ಜಾಗವು ಪ್ರಸಿದ್ದಿಗೆ ಬರುತ್ತಿದ್ದಂತೆ ಕಾರಿನ ದಾರಿ, ಕೇಬಲ್‌ ಕಾರ್ ವ್ಯವಸ್ಥೆ ಮಾಡಲಾಯಿತು, ದಾರಿ ಸುಗಮವಾಗುತ್ತಿದ್ದಂತೆ ಪ್ರವಾಸಿಗರು ಹಿಮದ ಸೌಂದರ್ಯವನ್ನು ಸವಿಯಲು ಬರತೊಡಗಿದರು. ಕೇಬಲ್‌ ಕಾರ್ ಮೆಡಿಯೂ ಸಿಟಿಯಿಂದ ಶುರುವಾಗುತ್ತದೆ, ಅಲ್ಲಿಂದ ಸುಮಾರು 4.5 ಕಿಮಿ ಕೇಬಲ್‌ ಕಾರಿನಲ್ಲಿ ಸಾಗಬೇಕು, ಇದಕ್ಕೆ ಸುಮಾರು 20 ನಿಮಿಷ ಬೇಕು, ವಿಶ್ವದ ಅತ್ಯಂತ ಉದ್ದದ ಕೇಬಲ್‌ ಕಾರಿನ ದಾರಿಯಲ್ಲೊಂದು ಎನ್ನಬಹುದು. ಕೇಬಲ್‌ ಕಾರಿನಿಂದ ಕಾಣುವ ಹೊರಗಿನ ನೋಟವೂ ಅದ್ಭುತವೇ, ಸ್ಟೇಡಿಯಂ, ಬೆಟ್ಟ, ಗುಡ್ಡಗಳು, ಪೈನ್‌, ನೀರಿನ ಝರಿ, ಪರ್ಚ್‌ ಮರಗಳ ಸಾಲು, ಹುಲ್ಲುಗಾವಲು, ಹುಲ್ಲು ಮೇಯುತ್ತಿರುವ ಕುದುರೆ, ಆಡುಗಳು, ಹಿಮ ಆವೃತ ಭಂಡೆಗಳು.

ಶಿಂಬುಲಾಕ್‌ ಸ್ಕೀ ರೆಸಾರ್ಟ್‌ ನಲ್ಲಿ ಒಟ್ಟು ಮೂರು ʻಸ್ಟೇಶನ್ʼ ಇದೆ, ಮೂರು ಸ್ಟೇಶನ್ನಿಗೆ ಒಟ್ಟಿಗೆ ಟಿಕೆಟ್‌ ತೆಗೆದುಕೊಳ್ಳಬೇಕು. ಮೊದಲ ಸ್ಟೇಶನ್‌ ಸುಮಾರು 2,260ಮೀಟರ್‌ ಎತ್ತರದಲ್ಲಿದೆ. ಇಲ್ಲಿ ಹೋಟೇಲುಗಳು, ಬಾರ್‌ ಅಂಡ್‌ ರೆಸ್ಟೋರೆಂಟುಗಳಿವೆ, ಎಲ್ಲವೂ ಮರದಿಂದಲೇ ಕಟ್ಟಿರುವುದಾಗಿದೆ, ಸ್ಕೀ ಆಟದ ವಸ್ತುಗಳನ್ನು ಮಾರುವ/ಬಾಡಿಗೆ ಕೊಡುವ ಅಂಗಡಿಗಳೂ ಇವೆ. ಇಲ್ಲಿನ ಹೋಟೆಲುಗಳಲ್ಲಿ ರಾತ್ರಿ ತಂಗುವುದು ಒಂದು ಅದ್ಭುತ ಅನುಭವ, ರಾತ್ರಿ ಮಿಣಿ, ಮಿಣಿ ಬೆಳಕಿದ್ದರೆ ಬೆಳಗಾಗುತ್ತಿದ್ದಂತೆ ಸುತ್ತಲೂ ಹಿಮ ಮುಸುಕಿದ ಪರ್ವತಗಳ ಶ್ರೇಣಿ, ಹಿಮದ ಮಳೆಯನ್ನು ನೋಡುವ ಖುಷಿ ನಮ್ಮದಾಗುತ್ತದೆ, ಸೂರ್ಯನ ಕಿರಣಗಳು ಹಿಮವನ್ನು ಸೋಕಿದಾಗ ಮತ್ತೊಂದು ನೋಟ, ಒಟ್ಟಿನಲ್ಲಿ ಎಲ್ಲೆಲ್ಲೂ ಹಿಮದ ರಾಶಿ. ಇದರ ಮಧ್ಯೆ ʻನಿಮ್ಮ ಫೋಟೋ ತೆಗೆದುಕೊಡುತ್ತೇನೆʼ ಎಂದು ಓಡಿ ಬರುವ ಫೋಟೋಗ್ರಾಫರುಗಳು, ಸೆಲ್ಫಿ ತೆಗೆದುಕೊಳ್ಳುವ ಪ್ರವಾಸಿಗರು. ಇಲ್ಲಿನ ಸ್ಥಳೀಯ ಉಡುಗೆ ತೊಟ್ಟೂ ಫೋಟೋ ತೆಗೆಸಿಕೊಳ್ಳಬಹುದು. ಮಕ್ಕಳಿಗೆ ವಿಶೇಷವಾಗಿ ಸ್ಕೀ ಆಟ ಕಲಿಸುವ ಶಾಲೆ ಇದೆ ಇಲ್ಲಿ.

ಎರಡನೆಯ ಮತ್ತು ಮೂರನೆಯ ʻಸ್ಟೇಶನ್‌ʼಗೆ ಮಾತ್ರ ಕೇಬಲ್‌ ಕಾರಿನ ಮೂಲಕವೇ ಬರಬೇಕು, ಇಲ್ಲಾ ಸ್ಕೀ ಮಾಡಿಕೊಂಡು ಹೋಗಬಹುದು. ಎರಡನೆಯ ಸ್ಟೇಶನ್‌ 2,630 ಮೀಟರ್‌ ಎತ್ತರದಲ್ಲಿದೆ, ಮೂರನೆಯದು 3,200 ಮೀಟರ್‌ ಎತ್ತರದಲ್ಲಿದೆ. ಇಲ್ಲಿ ಎಲ್ಲೆಲ್ಲೂ ರಾಶಿ, ರಾಶಿ ಹಿಮ, ಅಲ್ಕದೆ ಕ್ಷಣ, ಕ್ಷಣಕ್ಕೂ ಬದಲಾಗುವ ಹವಾಮಾನ. ಬಿಸಿಲಿದೆ ಎಂದುಕೊಂಡು ಖುಷಿ ಪಡುವಾಗ ಐದೇ ನಿಮಿಷದಲ್ಲಿ ಬಿಸಿಲನ್ನು ಓಡಿಸುವ ಕುಳಿರ್ಗಾಳಿ. ನವೆಂಬರ್‌ನಿಂದ ಎಪ್ರಿಲ್‌ವರೆಗೆ ಚಳಿಗಾಲ, ನಾವು ಪ್ರವಾಸ ಮಾಡಿದ್ದು ಎಪ್ರಿಲ್‌ ತಿಂಗಳಲ್ಲಿ, ಚಳಿಯ ತೀವೃತೆ ಕಡಿಮೆಯಾಗಿದ್ದರೂ ಥರ್ಮಲ್‌ ಬಟ್ಟೆ, ಗ್ಲೌಸ್‌, ಉಣ್ಣೆಯ ಟೋಪಿ ಬೇಕೇ ಬೇಕು. ಬೆಸಿಗೆಯಲ್ಲಿ ಇಲ್ಲಿನ ತಾಪಾನ 20ಡಿಗ್ರಿಯಿದ್ದರೆ, ಚಳಿಗಾಲದಲ್ಲಿ ಮೈನಸ್‌ 10 ಡಿಗ್ರಿಗೆ ತಿರುಗುತ್ತದೆ.
ಶಿಂಬುಲಾಕ್ ಸ್ಕೀ ರಿಸಾರ್ಟ್‌ ಸ್ಕೀ, ಸ್ನೋ ಬೋರ್ಡಿಂಗ್, ಹಿಮ ಜಾರುಬಂಡಿ‌ ಮುಂತಾದ ಹಿಮದ ಕ್ರೀಡೆಗೆ ಹೆಸರುವಾಸಿಯಾಗಿದೆ, ಪ್ಯಾರಾ ಗ್ಲೈಡಿಂಗ್‌, ಕುದುರೆ ಸವಾರಿ, ಝಿಪ್ಲೈನ್ ಸಹ ಮಾಡಬಹುದು, ಎಲ್ಲದಕ್ಕೂ ಅನುಕೂಲಕರ ಹವಾಮಾನ ಬೇಕು. ಸ್ನೋ ಬೋರ್ಡ್‌ ಆಟಗಾರರಿಗೆ ಪ್ರತ್ಯೇಕವಾಗಿ ಸ್ನೋ ಪಾರ್ಕ್‌ ಇದೆಯಂತೆ. 1,961ರಿಂದ ಹಲವಾರು ಹಿಮದ ಆಟದ ಸ್ಪರ್ಧೆಗಳು ನಡೆಯುತ್ತಿದಿಲ್ಲಿ. 2,011ರಲ್ಲಿ ವಿಂಟರ್‌ ಏಷ್ಯನ್‌ ಗೇಮ್ಸ್‌, 2,014ರಲ್ಲಿ ವಿಂಟರ್‌ ಒಲಿಂಪಿಕ್ಸ್‌ ಸಹ ನಡೆಯಿತಿಲ್ಲಿ.


  • ಗೀತಾ ಕುಂದಾಪುರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW