“ಸಿಂಹದ ಹಾದಿ” ಟೆಲಿಚಿತ್ರವು ನೈಜ ಘಟನೆಗಳ ಆಧಾರವಾಗಿದ್ದು ವಿಷ್ಣುದಾದಾ ಅವರ ಅಭಿಮಾನಿಯಾದ ಶ್ರೀಯುತ ವೀರಕಪುತ್ರ ಶ್ರೀನಿವಾಸ್ ಅವರ ನಿರ್ಮಾಣದ ಹಾಗೂ ಶ್ರೀ ಶಶಿ ರಾಜ್ ದೊರೆ ಅವರ ನೈಪುಣ್ಯತೆಯ ನಿರ್ದೇಶನದಲ್ಲಿ ತೆರೆ ಕಾಣಲು ಸಾಜ್ಜಾಗಿದೆ. ಡಾ. ವಿಷ್ಣುವರ್ಧನ ಅವರ 59 ವರುಷದಲ್ಲಿ ಅವರ ಜೀವನದ ಕೊನೆಯ ಪಯಣದ ನಂತರ ವಿಷ್ಣುದಾದ ಅವರು ಸಮಾಜಕ್ಕೆ ಅದೆಷ್ಟೋ ಸೇವೆಯನ್ನು ಮಾಡಿದ್ದಾರೆ ಎಂಬ ವಿಷಯಗಳು ತಿಳಿದುಬಂದವು. ಹೆಚ್. ವಿ ಮೀನ ಅವರು “ಸಿಂಹದ ಹಾದಿ” ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಟೆಲಿಚಿತ್ರ : “ಸಿಂಹದ ಹಾದಿ”
ನಿರ್ಮಾಪಕರು : ಶ್ರೀ ವೀರಕಪುತ್ರ ಎಂ. ಶ್ರೀನಿವಾಸ್
ನಿರ್ದೇಶಕರು : ಶ್ರೀ ಶಶಿ ರಾಜ್ ದೊರೆ
ತಾರಂಗಣದಲ್ಲಿ : ಸಾಯಿ ಜ್ಯೋತಿ, ಸವಿತಕ್ಕ, ಪಲ್ಲವಿ ರಾವ್, ಸಂಶಿಕ, ಪ್ರಕೃತಿ
ಛಾಯಾಗ್ರಹಣ : ಕಿರಣ್
ಸಂಕಲನ : ಗೋವಿಂದ್ ವಿಷ್ಣು
ಸಂಗೀತ : ಸಂದೇಶ್ ಬಾಬು, ಧನಂಜಯ ವರ್ಮ, ಶಿವ ಪ್ರಸಾದ್
ಭಗವದ್ಗೀತೆಯ ಶ್ಲೋಕದಲ್ಲಿ ಶ್ರೀ ಕೃಷ್ಣನು ಹೇಳಿರುವಂತೆ….
ನಾವು ನಮ್ಮ ಸಂಪಾದನೆಯಲ್ಲಿ ಒಂದು ಭಾಗವನ್ನು ಸರಿಯಾದ ಸಮಯಕ್ಕೆ ಸೂಕ್ತವಾದ ಸ್ಥಳದಲ್ಲಿ ಯೋಗ್ಯವಾದವರಿಗೆ ಹೃದಯಪೂರಕವಾಗಿ ಅರ್ಪಿಸಿದರೆ ನಮಲ್ಲಿ ಸೇವಾ ಮನೋಭಾವವು ಬೆಳೆಯುವುದಲ್ಲದೆ ನಮ್ಮ ಹೃದಯ ವೈಶಾಲ್ಯತೆಯು ವಿಸ್ತಾರಗೊಳ್ಳುತ್ತದೆ.
ಶ್ರೀ ಕೃಷ್ಣನ ನುಡಿಗಳು ಎಷ್ಟು ಸತ್ಯ ಎನ್ನುವುದಕ್ಕೆ ಕನ್ನಡ ನಾಡಿನ ಶ್ರೇಷ್ಠ ನಟರಾದ ಸಾಕ್ಷಾತ್ ಶ್ರೀ ಡಾ. ವಿಷ್ಣುವರ್ಧನ ಅವರ ಜೀವನದ ಹಾದಿ. ಸಾಹಸ ಸಿಂಹನೆಂದೇ ಪ್ರಸಿದ್ಧಿ ಪಡೆದ ನಟ ಡಾ. ವಿಷ್ಣುವರ್ಧನ ಅವರು ಸರಳತೆಯಲ್ಲಿ ಮೆರೆದವರು. ಗಾಂಭೀರ್ಯದ ಪಕ್ವತೆಯ ಭಾವನೆಗಳನ್ನು ಹೊಂದಿದ್ದು, ತಮ್ಮ ನೋವನ್ನು ನಗುಮುಖದ ಹಿಂದೆ ಬಚ್ಚಿಟ್ಟು, ತಾವಾಡುವ ಮಾತುಗಳಲ್ಲಿ ಗಟ್ಟಿತನವನ್ನು ಬೆಳೆಸಿಕೊಂಡು ಹೃದಯ ವೈಶಾಲ್ಯತೆ ಇಂದ ಮೆರೆದ ಓರ್ವ ಮೇರು ನಟನಾಗಿ ಕನ್ನಡಿಗರ ಹೃದಯವನ್ನು ಗೆದ್ದವರು ಡಾ. ವಿಷ್ಣುವರ್ಧನ ಅವರು ಎಲ್ಲರ ವಿಷ್ಣುದಾದ ಎಂದೇ ಆತ್ಮೀಯರು.

ಡಾ. ವಿಷ್ಣುವರ್ಧನ ಅವರ 59 ವರುಷದಲ್ಲಿ ಅವರ ಜೀವನದ ಕೊನೆಯ ಪಯಣದ ನಂತರ ವಿಷ್ಣುದಾದ ಅವರು ಸಮಾಜಕ್ಕೆ ಅದೆಷ್ಟೋ ಸೇವೆಯನ್ನು ಮಾಡಿದ್ದಾರೆ ಎಂಬ ವಿಷಯಗಳು ತಿಳಿದುಬಂದವು. “ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು” ಎಂಬ ಗಾದೆಗೆ ಸಾಕ್ಷಿಯಂತೆ ವಿಷ್ಣುದಾದಾ ಅವರು ಬದುಕಿದ್ದಾಗ ಅನೇಕರಿಗೆ ಸಹಾಯವನ್ನು ಮಾಡುತ್ತಿದ್ದರು. ಇವರ ದಾನ ಧರ್ಮಗಳ ಕಾರ್ಯಗಳು ಯಾವುದೇ ಪ್ರಚಾರಗೋಳಗಾಗದೆ ನಿರಂತರವಾಗಿ ಜರುಗುತ್ತಿದ್ದವು. ತಾನು ದಾನ ಮಾಡಿದ್ದನ್ನು ಯಾರಿಗೂ ಹೇಳಬಾರದೆಂದು ತಮ್ಮ ಧರ್ಮ ಪತ್ನಿಯವರಾದ ಭಾರತೀಯವರಿಂದ ಭಾಷೆ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಮಾನವೀಯತೆಯ ಮೂರ್ತಿ ಆಗಿದ್ದ ವಿಷ್ಣುವರ್ಧನ್ ಅವರ ಸಹಾಯವನ್ನು ಪಡೆದ,ವಿಷ್ಣುವರ್ಧನ್ ಅವರನ್ನು ದೇವರಂತೆ ಪೂಜಿಸುವ ಅನೇಕ ಅಭಿಮಾನಿಗಳು ಇಂದಿಗೂ ಉಂಟು. ಡಾ. ವಿಷ್ಣುವರ್ಧನ ಅವರ ಅಭಿಮಾನಿಗಳ ಸೇನೆಯು ಇಂದಿಗೂ ವಿಷ್ಣುದಾದ ಅವರ ಹೆಸರಿನಲ್ಲಿ ಅನೇಕ ಸಮಾಜಸೇವೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇಂತಹ ಅಭಿಮಾನಿಗಳಲ್ಲಿ ಒಬ್ಬರಾದ ಶ್ರೀ ಶಶಿ ರಾಜ್ ದೊರೆ ಅವರು ಸ್ವತಃ ನಟರಾಗಿದ್ದು, ನಿರ್ದೇಶಕರಾಗಿ, ವಿಷ್ಣುದಾದಾ ಅವರನ್ನು ದೇವರಂತೆ ಪೂಜಿಸುವ ಅಭಿಮಾನಿಗಳ ಜೀವನದ ನೈಜ ಕಥೆಗಳ ಆಧಾರಿತವಾದ “ಸಿಂಹದ ಹಾದಿ” ಎಂಬ ಟೆಲಿಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಟೆಲಿಚಿತ್ರವು ಶೀಘ್ರದಲ್ಲಿಯೇ ತೆರೆಯ ಮೇಲೆ ಬಿಡುಗಡೆಗೊಳ್ಳಲಿದೆ.

ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ “ಸಿಂಹದ ಹಾದಿ” ಟೆಲಿಚಿತ್ರವು ನೈಜ ಘಟನೆಗಳ ಆಧಾರವಾಗಿದ್ದು ವಿಷ್ಣುದಾದಾ ಅವರ ಅಭಿಮಾನಿಯಾದ ಶ್ರೀಯುತ ವೀರಕಪುತ್ರ ಶ್ರೀನಿವಾಸ್ ಅವರ ನಿರ್ಮಾಣದ ಹಾಗೂ ಶ್ರೀ ಶಶಿ ರಾಜ್ ದೊರೆ ಅವರ ನೈಪುಣ್ಯತೆಯ ನಿರ್ದೇಶನದಲ್ಲಿ ತೆರೆ ಕಾಣಲು ಸಾಜ್ಜಾಗಿದೆ. ಒಂದು ವಿಭಿನ್ನ ವಿಶೇಷತೆಯ ಸಾರವುಳ್ಳ ಈ ಚಿತ್ರವು ಅನೇಕ ರಾಷ್ಟ್ರಗಳಲ್ಲಿ ಚಿತ್ರೀಕರಣವಾಗಿದ್ದು, ಸುಂದರವಾದ ನಿಸರ್ಗದ ದೃಶ್ಯಗಳಿಂದ ಕೂಡಿದೆ. ಚಿತ್ರದ ಕಥಾ ನಾಯಕಿ ಪ್ರಾಥನಾಳ ಜೀವನದ ದೃಷ್ಟಿ ಕೋಣವೇ ಬದಲಾಗಿಬಿಡಲು ಕಾರಣ ವಿಷ್ಣುದಾದ ಅವರ ಜೀವನ ಮೌಲ್ಯಗಳು. ತಮ್ಮ ಜೀವನದಲ್ಲಿ ಆದಂತಹ ಅನೇಕ ಅವಮಾನಗಳನ್ನು ಸಹಿಸಿ, ತಮ್ಮ ನೋವನ್ನೆಲ್ಲಾ ಮರೆತು ಯಾವುದೇ ಅಪೇಕ್ಷೆ ಇಲ್ಲದೇ ಇತರರ ಜೀವನದಲ್ಲಿ ಜ್ಯೋತಿ ಅದವರು ವಿಷ್ಣುದಾದಾ ಅವರು ಅನೇಕ ಅಭಿಮಾನಿಗಳಿಗೆ ಜೀವನವನ್ನು ಕಟ್ಟಿಕೊಟ್ಟಂತವರು.

ವಿಷ್ಣುವರ್ಧನ್ ಅವರ ನಡೆ ನುಡಿಗಳಿಗೆ ಪ್ರಭಾವಿತನಾದ ನಂಜಿಯ ಮಗ ಯೋಧನಾಗಿ ದೇಶಸೇವೆಯನ್ನು ಮಾಡುತ್ತಾ ದೇಶಕ್ಕೆ ತನ್ನನ್ನು ತಾನೇ ಅರ್ಪಿಸಿಕೊಳ್ಳುತ್ತಾನೆ. ಮೃತ ಯೋಧನ ತಾಯಿ ನಂಜಿಯ ಮೂಕ ರೋಧನೆಯು ಕರುಳು ಕಿತ್ತು ಬರುವಂತೆ ಮಾಡುತ್ತದೆ. ಆಶ್ಚರ್ಯವೆಂದರೆ ನಂಜಿಯ ಆರಾಧ್ಯ ದೇವ “ವಿಷ್ಣುದಾದಾ” ಅವರು. ಯುದ್ಧದಲ್ಲಿ ಮಗನನ್ನು ಕಳೆದುಕೊಂಡ ನಂಜಿಯ ಪಾತ್ರದಲ್ಲಿ ಸವಿತಕ್ಕರವರ ನಟನೆ ನಿಜಕ್ಕೂ ಶ್ಲಾಘನೀಯ.
ಹೆಣ್ಣುಮಕ್ಕಳು ಸಮಾಜದಲ್ಲಿ ಸ್ವತಃ ಸಂಬಂಧಿಕರಿಂದ ಅನುಭವಿಸುವ ಕೆಲವೊಂದು ನೋವುಗಳ ಒಂದು ಭಾಗವನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಇಂತಹ ನೋವಿನಿಂದ ಆ ಹೆಣ್ಣುಮಕ್ಕಳು ಹೊರಬರಲು ಪಡುವ ಯಾತನೆಯ ಅಭಿನಯ ನಮ್ಮನ್ನು ಭಾವುಕರಾಗಿಸಿಬಿಡುತ್ತದೆ. ವಿಷ್ಣುದಾದಾ ಅವರ ಸಹಾಯದಿಂದ ಹೆಣ್ಣುಮಕ್ಕಳ ಜೀವನವು ಯಾವರೀತಿಯಲ್ಲಿ ಬದಲಾಯಿತು! ಎಂಬುದನ್ನು ತಿಳಿಯಲು “ಸಿಂಹದ ಹಾದಿ” ಟೆಲಿಚಿತ್ರವನ್ನು ಎಲ್ಲರೂ ನೋಡಲೇ ಬೇಕು. ಮಂಗಳಮುಖಿಯರು ಅನುಭವಿಸುವ ತಾರತಮ್ಯದ ಒಂದು ದೃಶ್ಯ ನೋಟವು ಎಲ್ಲರ ಹೃದಯವನ್ನು ಕಲಕುತ್ತದೆ.
ಚಿತ್ರದ ನಾಯಕಿಯಾಗಿ ಸಾಯಿ ಜ್ಯೋತಿ ಅವರು ಹಾಗೂ “ಸವಿತಕ್ಕ” ಎಂದೇ ಹೆಸರುಪಡೆದ ಗಾಯಕಿ ಶ್ರೀಮತಿ ಸವಿತ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಟೆಲಿಚಿತ್ರದ ಅದ್ಭುತವಾದ ಛಾಯಾಗ್ರಹಣ ಹಾಗೂ ಪ್ರಕೃತಿಯ ಸೊಬಗು ನೋಡಲು ರಮಣೀಯವಾಗಿದೆ. ಗೀತ ದೃಶ್ಯಗಳು ಸುಂದರವಾಗಿವೆ. ನಿರ್ದೇಶಕರ ಶ್ರೀ ಶಶಿ ರಾಜ್ ದೊರೆಯವರು ಟೆಲಿಚಿತ್ರದ ಮೂಲಕ ತಮ್ಮ ನಿರ್ದೇಶನದ ವಿಶಿಷ್ಟ ಶೈಲಿಯ ಛಾಪನ್ನು ಮೂಡಿಸಿದ್ದಾರೆ.

ಡಾ ವಿಷ್ಣುವರ್ಧನ್ ಅವರ ಅಭಿಮಾನಿ ಶ್ರೀ ಶಶಿ ರಾಜ್ ದೊರೆ ಅವರು ಈಗಾಗಲೇ ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ ಹಾಗೂ ಇವರು ಕಳೆದ ವರುಷ ನಿರ್ದೇಶಿಸಿದ “ಅನುಭವ ” ಕಿರುಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಪಡೆದಿದೆ ಹಾಗೂ “ಸಿಂಹದ ಹಾದಿ” ಕಿರುಚಿತ್ರವು Roshani International Film Festival ಜನವರಿ 2024ಕ್ಕೆ ಆಯ್ಕೆ ಗೊಂಡಿದೆ. ಇವರ ನಿರ್ದೇಶನ ಶೈಲಿಯು ವಿಭಿನ್ನವಾಗಿದ್ದು ಇಂತಹ ಉದಯೋನ್ಮುಖ ಯುವ ಕಲಾವಿದರು ಕನ್ನಡ ಚಿತ್ರರಂಗಕ್ಕೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ ಹಾಗೂ ನಮ್ಮ ಕನ್ನಡ ಚಿತ್ರರಂಗಕ್ಕೆ ಬೇಕಾಗಿದ್ದಾರೆ. ಇಂತಹ ಆಸಕ್ತ ಕಲಾವಿದರು, ನಿರ್ದೇಶಕರು, ನಿರ್ಮಾಪಕರಿಗೆ ನಾವೆಲ್ಲರೂ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡಬೇಕಾಗಿದೆ.
ಶ್ರೀ ವೀರಕಪುತ್ರ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಸಿದ್ಧಗೊಂಡಿರುವ ಈ “ಸಿಂಹದ ಹಾದಿ” ಟೆಲಿಚಿತ್ರದ ನಿರ್ದೇಶಕರಾದ ಶ್ರೀ ಶಶಿ ರಾಜ್ ದೊರೆ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ ” ಸಿಂಹದ ಹಾದಿ ” ಟೆಲಿಚಿತ್ರವು ತೆರೆಯ ಮೇಲೆ ಬಿಡುಗಡೆಗೊಂಡು ಯಶಸ್ಸಿನ ಹಾದಿಯನ್ನು ಹಿಡಿಯಲಿ ಎಂದು ಶುಭಹಾರೈಸುತ್ತೇನೆ.
- ಹೆಚ್. ವಿ ಮೀನ – ಬೆಂಗಳೂರು.
