ಸೋಲು ಎಂಬುದು ಎಂದಿಗೂ ಅಂತ್ಯವಲ್ಲ, ಬದಲಿಗೆ ಅದೊಂದು ಅದ್ಭುತವಾದ ಆರಂಭ. ವಾಸ್ತವವಾಗಿ, ಸೋಲು ಎಂಬುದು ಯಶಸ್ಸಿನ ವಿರುದ್ಧ ಪದವಲ್ಲ, ಅದು ಯಶಸ್ಸಿನ ಒಂದು ಭಾಗ ಹಾಗೂ ಮೊದಲು ಮೆಟ್ಟಿಲು. ಯುವ ಲೇಖಕರಾದ ಜಿ.ಎಸ್.ಶರಣು ಅವರ ಉತ್ಸಾಹಭರಿತ ಲೇಖನವನ್ನು ತಪ್ಪದೆ ಮುಂದೆ ಓದಿ…
ಜೀವನದಲ್ಲಿ ನಾವು ಯಾವುದಾದರೂ ಕೆಲಸದಲ್ಲಿ ವಿಫಲರಾದಾಗ ಅಥವಾ ಅಂದುಕೊಂಡ ಫಲಿತಾಂಶ ಬರದಿದ್ದಾಗ, ತಕ್ಷಣವೇ ನಮ್ಮ ಮನಸ್ಸು “ಎಲ್ಲವೂ ಮುಗಿದು ಹೋಯಿತು” ಎಂದು ನಿರ್ಧರಿಸಿ ಬಿಡುತ್ತದೆ. ನಿರಾಶೆ, ನೋವು ಮತ್ತು ಅವಮಾನಗಳು ನಮ್ಮನ್ನು ಆವರಿಸುತ್ತವೆ. ಆದರೆ ಇತಿಹಾಸವನ್ನು ಮತ್ತು ಸಾಧಕರ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುವ ಸತ್ಯವೇನೆಂದರೆ, ಸೋಲು ಎಂಬುದು ಎಂದಿಗೂ ಅಂತ್ಯವಲ್ಲ, ಬದಲಿಗೆ ಅದೊಂದು ಅದ್ಭುತವಾದ ಆರಂಭ. ವಾಸ್ತವವಾಗಿ, ಸೋಲು ಎಂಬುದು ಯಶಸ್ಸಿನ ವಿರುದ್ಧ ಪದವಲ್ಲ, ಅದು ಯಶಸ್ಸಿನ ಒಂದು ಭಾಗ ಹಾಗೂ ಮೊದಲು ಮೆಟ್ಟಿಲು.

ಫೋಟೋ ಕೃಪೆ : ಅಂತರ್ಜಾಲ
ಸೋಲನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಒಂದು ಚಿಕ್ಕ ಮಗು ನಡೆಯಲು ಕಲಿಯುವಾಗ ನೂರಾರು ಬಾರಿ ಕೆಳಗೆ ಬೀಳುತ್ತದೆ. ಆದರೆ ಆ ಮಗು “ನಾನು ಬಿದ್ದೆ, ನನಗೆ ನಡೆಯಲು ಬರುವುದಿಲ್ಲ, ಇದೇ ನನ್ನ ಅಂತ್ಯ” ಎಂದುಕೊಂಡು ಪ್ರಯತ್ನ ನಿಲ್ಲಿಸುವುದಿಲ್ಲ. ಪ್ರತಿ ಬಾರಿ ಬಿದ್ದಾಗಲೂ ಅದು ಮತ್ತೆ ಎದ್ದು ನಿಲ್ಲುತ್ತದೆ. ಆ ಬೀಳುವಿಕೆಯೇ ಅದಕ್ಕೆ ಕಾಲುಗಳನ್ನು ಗಟ್ಟಿಯಾಗಿ ಊರುವುದು ಹೇಗೆ ಎಂದು ಕಲಿಸುತ್ತದೆ. ನಾವು ಬೆಳೆದಂತೆ ಈ ಸಹಜ ಗುಣವನ್ನು ಮರೆತುಬಿಡುತ್ತೇವೆ. ಒಂದು ಬಾರಿ ಬಿದ್ದ ತಕ್ಷಣ, ಸೋಲೊಪ್ಪಿಕೊಂಡು ಕೂತುಬಿಡುತ್ತೇವೆ. ನೆನಪಿಡಿ, ಸೋಲು ನಿಮಗೆ ನಿಮ್ಮ ದಾರಿಯನ್ನು ಬದಲಿಸಲು ಹೇಳುತ್ತಿದೆಯೇ ಹೊರತು, ನಿಮ್ಮ ಗುರಿಯನ್ನಲ್ಲ.
ನಾವು ಗೆದ್ದಾಗ ನಮಗೆ ಸಿಗುವುದು ಕೇವಲ ಆತ್ಮವಿಶ್ವಾಸ ಮತ್ತು ಜನರ ಚಪ್ಪಾಳೆ. ಆದರೆ ನಾವು ಸೋತಾಗ ಸಿಗುವುದು ಅನುಭವ ಮತ್ತು ಪಾಠ. ಗೆಲುವು ನಮಗೆ ಪ್ರಪಂಚವನ್ನು ಪರಿಚಯಿಸಿದರೆ, ಸೋಲು ನಮ್ಮನ್ನು ನಮಗೆ ಪರಿಚಯಿಸುತ್ತದೆ. ನಮ್ಮಲ್ಲಿ ಎಲ್ಲಿ ಲೋಪವಿದೆ? ನಾವು ಇನ್ನು ಎಲ್ಲೆಲ್ಲಿ ಸುಧಾರಣೆ ಮಾಡಿಕೊಳ್ಳಬೇಕು? ನಮ್ಮ ನಿಜವಾದ ಸಾಮರ್ಥ್ಯವೇನು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದು ಸೋತಾಗ ಮಾತ್ರ. ಆದ್ದರಿಂದ ಸೋಲು ಕಹಿಯಾಗಿದ್ದರೂ, ಅದು ನೀಡುವ ಪಾಠ ಅಮೂಲ್ಯವಾದದ್ದು. ಯಾರು ಸೋಲನ್ನು ಪಾಠವನ್ನಾಗಿ ಸ್ವೀಕರಿಸುತ್ತಾರೋ, ಅವರು ಮುಂದಿನ ಬಾರಿ ಹೆಚ್ಚು ಬುದ್ಧಿವಂತಿಕೆಯಿಂದ ಹೆಜ್ಜೆ ಇಡುತ್ತಾರೆ.

ಫೋಟೋ ಕೃಪೆ : ಅಂತರ್ಜಾಲ
ಹೆನ್ರಿ ಫೋರ್ಡ್ ಹೇಳುವಂತೆ, “ಸೋಲು ಎಂದರೆ ಮತ್ತೆ ಹೊಸದಾಗಿ ಆರಂಭಿಸುವ ಅವಕಾಶ, ಆದರೆ ಈ ಬಾರಿ ಹೆಚ್ಚು ಜಾಣತನದಿಂದ”. ನೀವು ಒಮ್ಮೆ ಸೋತಿದ್ದೀರಿ ಎಂದರೆ, ನೀವು ಶೂನ್ಯದಿಂದ ಆರಂಭಿಸುತ್ತಿಲ್ಲ ಎಂದರ್ಥ, ನೀವು ಅನುಭವದಿಂದ ಆರಂಭಿಸುತ್ತಿದ್ದೀರಿ ಎಂದರ್ಥ. ಆ ಅನುಭವವೇ ನಿಮ್ಮ ಮುಂದಿನ ಗೆಲುವಿನ ಬಂಡವಾಳ. ಕಲ್ಲಿದ್ದಲು ಕೂಡ ಅಪಾರವಾದ ಒತ್ತಡ ಮತ್ತು ಶಾಖವನ್ನು ತಡೆದುಕೊಂಡ ನಂತರವೇ ವಜ್ರವಾಗಿ ಬದಲಾಗುತ್ತದೆ. ಹಾಗೆಯೇ ಮನುಷ್ಯನ ವ್ಯಕ್ತಿತ್ವ ಕೂಡ ಸೋಲಿನ ಒಡೆತಗಳನ್ನು ತಡೆದುಕೊಂಡಾಗಲೇ ಗಟ್ಟಿಯಾಗುತ್ತದೆ ಮತ್ತು ಪ್ರಕಾಶಿಸುತ್ತದೆ.
ಅನೇಕರು ಸೋಲಿಗೆ ಹೆದರುವುದಿಲ್ಲ, ಆದರೆ “ಸೋತರೆ ಜನ ಏನಂತಾರೆ?” ಎಂಬ ಅವಮಾನಕ್ಕೆ ಹೆದರುತ್ತಾರೆ. ಆದರೆ ಜಗತ್ತು ಯಾವತ್ತೂ ಅಂತಿಮ ಫಲಿತಾಂಶವನ್ನು ಮಾತ್ರ ಗೌರವಿಸುತ್ತದೆ. ನೀವು ನೂರು ಬಾರಿ ಸೋತರೂ, ನೂರೊಂದನೇ ಬಾರಿ ಗೆದ್ದರೆ, ಆ ಹಿಂದಿನ ನೂರು ಸೋಲುಗಳು ಅನುಭವದ ಕಥೆಗಳಾಗಿ ಬದಲಾಗುತ್ತವೆ. ಹೀಗಾಗಿ ನೀವು ಸೋತಿದ್ದೀರಿ ಎಂದು ಸುಮ್ಮನೆ ಕೂರದೇ, ಗುರಿಯತ್ತ ಸಾಗಿ.
ಜೀವನದಲ್ಲಿ ನಿಜವಾದ ಸೋಲು ಎಂದರೆ ಕೆಳಗೆ ಬೀಳುವುದಲ್ಲ, ಬಿದ್ದ ಜಾಗದಲ್ಲೇ ಹಾಗೆಯೇ ಉಳಿದುಬಿಡುವುದು. ಎಲ್ಲಿಯವರೆಗೆ ನೀವು ಪ್ರಯತ್ನವನ್ನು ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೆ ನೀವು ಸೋತಿಲ್ಲ ಎಂದೇ ಅರ್ಥ. ಈ ಕ್ಷಣದ ಸೋಲು, ನಾಳೆಯ ದೊಡ್ಡ ಗೆಲುವಿಗೆ ಬರೆಯುತ್ತಿರುವ ಪೀಠಿಕೆ ಎಂದು ಭಾವಿಸಿ. ಎದೆಗುಂದಬೇಡಿ, ಏಕೆಂದರೆ ಇದು ಮುಗಿದ ಅಧ್ಯಾಯವಲ್ಲ, ಇದು ನಿಮ್ಮ ಗೆಲುವಿನ ಕಥೆಯ ಆರಂಭವಷ್ಟೇ.
- ಜಿ. ಎಸ್. ಶರಣು
